ಬೆಂಗಳೂರು: ಬಹುನಿರೀಕ್ಷಿತ 2023-24ನೇ ಸಾಲಿನ ಕೇಂದ್ರ ಬಜೆಟ್ (Union Budget 2023) ಮಂಡನೆಯಾಗಿದೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇಂದು(ಫೆಬ್ರವರಿ 01) ಬಜೆಟ್ ಮಂಡಿಸಿದ್ದಾರೆ. ಕೇಂದ್ರ ಬಜೆಟ್ ಮಂಡನೆ ಬಗ್ಗೆ ನಾಳೆ (ಫೆಬ್ರವರಿ 02) ಬೆಳಗ್ಗೆ 11 ಗಂಟೆಗೆ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸುದ್ದಿಗೋಷ್ಠಿ ಕರೆದಿದ್ದು, ಬಜೆಟ್‌ನಲ್ಲಿ ಕರ್ನಾಟಕಕ್ಕೆ ಸಿಕ್ಕಿರುವ ಕೊಡುಗೆ ಬಗ್ಗೆ ವಿವರಿಸಲಿದ್ದಾರೆ.
ಬಸವರಾಜ ಬೊಮ್ಮಾಯಿ ಅವರು ಇಂದು(ಫೆಬ್ರವರಿ 01) ಜಿಲ್ಲಾ ಪ್ರವಾಸದಲ್ಲಿರುವ ಕಾರಣ ನಾಳೆ ಬೆಳಗ್ಗೆ ಸುದ್ದಿಗೊಷ್ಠಿ ನಡೆಸಿ ಕೇಂದ್ರದ ಬಜೆಟ್ ಬಗ್ಗೆ ಪ್ರತಿಕ್ರಿಯೆ ನೀಡಲಿದ್ದಾರೆ. ಕೇಂದ್ರದ ಬಜೆಟ್ ನಲ್ಲಿ ರಾಜ್ಯಕ್ಕೆ ಏನೆಲ್ಲ ಕೊಡುಗೆ ಸಿಕ್ಕಿದೆ ಎಂಬುದರ ಬಗ್ಗೆ ಮಾಹಿತಿ ನೀಡಲಿದ್ದಾರೆ.
ಕರುನಾಡು ಎಲೆಕ್ಷನ್ ರಣೋತ್ಸಾಹದಲ್ಲಿ ಇರೋವಾಗಲೇ ಪ್ರಧಾನಿ ಮೋದಿ ಸರ್ಕಾರ ಬಂಪರ್ ಗಿಫ್ಟ್ ನೀಡಿದೆ. ರಾಜ್ಯದ ಜನರ ದಾಹ ನೀಗಿಸಲು.. ಅನ್ನದಾತರ ಬದುಕು ಹಸನು ಮಾಡಲು ಕೇಂದ್ರ ಸರ್ಕಾರ ಮಹತ್ವದ ಘೊಷಣೆ ಮಾಡಿದೆ. ನೀರಾವರಿ ಉದ್ದೇಶಕ್ಕಾಗಿ ಜಾರಿಗೊಳಿಸಿರೋ ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ಮೀಸಲಿಡೋದಾಗಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಹತ್ವದ ಘೋಷಣೆ ಮಾಡಿದ್ದಾರೆ.
ಇನ್ನು ಈ ಕೇಂದ್ರ ಬಜೆಟ್ ಬಗ್ಗೆ ರಾಜ್ಯದ ನಾಯಕರು ತಮ್ಮದೇ ಅಭಿಪ್ರಾಯಗಳನ್ನು ತಿಳಿಸಿದ್ದಾರೆ. ಬಿಜೆಪಿ ನಾಯಕರು ತಮ್ಮ ಸರ್ಕಾರದ ಬಜೆಟ್ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ರೆ, ವಿರೋಧ ಪಕ್ಷಗಳ ನಾಯಕರು ಕಟುವಾಗಿ ಟೀಕಿಸಿದ್ದಾರೆ. ಅದರಲ್ಲೂ ಸಿದ್ದರಾಮಯ್ಯ ಅಂಕಿ-ಅಂಶಗಳೊಂದಿಗೆ ಈ ಬಾರಿ ಕೇಂದ್ರ ಬಜೆಟ್ನ್ನು ಟೀಕಿಸಿದ್ದಾರೆ.
ಮನ್ರೇಗಾ ಯೋಜನೆಗೂ ಕೇಂದ್ರಸರ್ಕಾರ ಹೆಚ್ಚಿನ ಅನುದಾನ ನೀಡಿಲ್ಲ. ಕೇಂದ್ರ ಬಜೆಟ್ ಕನ್ನಡಿ ಒಳಗಿನ ಗಂಟು. ಕೃಷಿ, ನೀರಾವರಿ, ಗ್ರಾಮೀಣಾಭಿವೃದ್ಧಿ, ಕೈಗಾರಿಕೆ ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆಗೆ ಬಜೆಟ್‌ನಲ್ಲಿ ಯಾವುದೇ ಒತ್ತು ನೀಡಿಲ್ಲ. ಸುಮಾರು 3.5 ಲಕ್ಷ ಕೋಟಿ ಆದಾಯ ಕರ್ನಾಟಕದಿಂದ ಹೋಗುತ್ತೆ. ದೇಶದಲ್ಲಿ ತೆರಿಗೆ ಪಾವತಿಯಲ್ಲಿ ಕರ್ನಾಟಕ ರಾಜ್ಯ 3ನೇ ಸ್ಥಾನದಲ್ಲಿದೆ. ಕರ್ನಾಟಕಕ್ಕೆ ಸೆಸ್, ಸರ್ ಚಾರ್ಜ್‌ನಲ್ಲಿ ಪಾಲು ಇಲ್ಲ. ಈ ಬಗ್ಗೆ ರಾಜ್ಯ ಪ್ರತಿನಿಧಿಸುವ ಬಿಜೆಪಿ ಸಂಸದರು ಪ್ರಶ್ನೆ ಮಾಡುತ್ತಿಲ್ಲ ಎಂದು ಕಿಡಿಕಾರಿದ್ದಾರೆ.
ಬಜೆಟ್ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
Published On - 7:20 pm, Wed, 1 February 23