ನೈರೋಬಿ, ನವೆಂಬರ್ 22: ಗೌತಮ್ ಅದಾನಿ ವಿರುದ್ಧ ಅಮೆರಿಕದಲ್ಲಿ ಲಂಚ ಆರೋಪ ದಾಖಲಾಗುತ್ತಿದ್ದಂತೆಯೇ ಕೀನ್ಯಾ ಸರ್ಕಾರ ಅದಾನಿ ಗ್ರೂಪ್ಗೆ ನೀಡಿದ್ದ ವಿಮಾನ ನಿಲ್ದಾಣ ಅಭಿವೃದ್ಧಿ ಯೋಜನೆಯ ಗುತ್ತಿಗೆಯನ್ನು ರದ್ದು ಮಾಡಿದೆ. ಹಾಗೆಯೇ, ಪವರ್ ಟ್ರಾನ್ಸ್ಮಿಶನ್ ಲೈನ್ಗಳನ್ನು ನಿರ್ಮಿಸುವ 736 ಮಿಲಿಯನ್ ಡಾಲರ್ ಒಪ್ಪಂದವನ್ನೂ ರದ್ದುಗೊಳಿಸಲಾಗಿದೆ ಎಂದು ಕೀನಾ ಅಧ್ಯಕ್ಷ ವಿಲಿಯಮ್ ರುಟೋ ತಿಳಿಸಿದ್ದಾರೆ.
ಅದಾನಿ ಗ್ರೂಪ್ಗೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಯೋಜನೆಯ ಗುತ್ತಿಗೆಯನ್ನು ನೀಡಿದ್ದನ್ನು ವಿರೋಧಿಸಿ ಕೀನಾದಲ್ಲಿ ಜನರಿಂದ ತೀವ್ರ ಪ್ರತಿಭಟನೆಗಳು ಕೆಲ ಕಾಲದಿಂದ ನಡೆಯುತ್ತಿವೆ. ಇದು ಕೀನ್ಯಾ ಸರ್ಕಾರಕ್ಕೆ ತಲೆನೋವಾಗಿತ್ತು. ಇದೀಗ ಅಮೆರಿಕದಲ್ಲಿ ಅದಾನಿ ಗ್ರೂಪ್ ವಿರುದ್ಧ ವಿವಾದ ಭುಗಿಲೇಳುತ್ತಲೇ ಕೀನ್ಯಾ ಸರ್ಕಾರ ಕ್ಷಿಪ್ರವಾಗಿ ಕ್ರಮ ತೆಗೆದುಕೊಂಡಿದೆ.
ನೈರೋಬಿಯ ಜೋಮೋ ಕೀನ್ಯಾಟ್ಟ ಇಂಟರ್ನ್ಆಷನಲ್ ಏರ್ಪೋರ್ಟ್ ಅನ್ನು ಅಭಿವೃದ್ಧಿಗೊಳಿಸಿ ನಿರ್ವಹಣೆ ಮಾಡಲು ಅದಾನಿ ಗ್ರೂಪ್ ಜೊತೆ 2.5 ಬಿಲಿಯನ್ ಡಾಲರ್ ಮೊತ್ತದ ಒಪ್ಪಂದಕ್ಕೆ ಕೀನ್ಯಾ ಸರ್ಕಾರ ನಿರ್ಧರಿಸಿತ್ತು. ಈ ಒಪ್ಪಂದದ ಪ್ರಕಾರ ಏರ್ಪೋರ್ಟ್ ಅನ್ನು ಅಭಿವೃದ್ಧಿಗೊಳಿಸಬೇಕು. ಹೊಸ ರನ್ವೇ ಮತ್ತು ಟರ್ಮಿನಲ್ ಅನ್ನು ನಿರ್ಮಿಸಬೇಕು. ಇದಕ್ಕೆ ಬದಲಾಗಿ 30 ವರ್ಷ ಕಾಲ ಈ ಏರ್ಪೋರ್ಟ್ ಅನ್ನು ಅದಾನಿ ಗ್ರೂಪ್ ನಿರ್ವಹಣೆ ಮಾಡಬೇಕಿತ್ತು.
ಇದನ್ನೂ ಓದಿ: ಗೌತಮ್ ಅದಾನಿ ವಿರುದ್ಧ ನಡೆಯುತ್ತಿದೆಯಾ ಷಡ್ಯಂತ್ರ? ಅಮೆರಿಕದಲ್ಲಿ ಕೇಸ್ ದಾಖಲಾಗುವುದರ ಹಿಂದಿನ ಮರ್ಮ ಬೇರೆಯೇ ಇದೆಯಾ?
ಈ ಒಪ್ಪಂದದಿಂದಾಗಿ ಏರ್ಪೋರ್ಟ್ ಅನ್ನು ಅದಾನಿ ವಶಕ್ಕೆ ಒಪ್ಪಿಸಲಾಗುತ್ತಿದೆ. ಸ್ಥಳೀಯರಿಗೆ ಕೆಲಸ ಸಿಗದೇ ಭಾರತದಿಂದ ಜನರನ್ನು ಕರೆಸಲಾಗುತ್ತದೆ ಎಂಬಂತಹ ಆರೋಪಗಳು ಕೇಳಿಬಂದು ಜನರು ಪ್ರತಿಭಟನೆ ನಡೆಸುತ್ತಿದ್ದರು. ಇನ್ನು, ಪವರ್ ಟ್ರಾನ್ಸ್ಮಿಶನ್ ಲೈನ್ಗಳನ್ನು ನಿರ್ಮಿಸಲು ಕಳೆದ ತಿಂಗಳು ಕೀನ್ಯಾದ ಇಂಧನ ಸಚಿವಾಲಯವು ಅದಾನಿ ಗ್ರೂಪ್ ಜೊತೆ ಒಪ್ಪಂದ ಮಾಡಿಕೊಂಡಿತ್ತು. ಇದೂ ಕೂಡ 30 ವರ್ಷದ ಅವಧಿಗೆ ಮಾಡಿಕೊಂಡ ಗುತ್ತಿಗೆಯಾಗಿತ್ತು. ಈಗ ಈ ಎರಡೂ ಯೋಜನೆಗಳನ್ನು ಕೀನ್ಯಾ ಸರ್ಕಾರ ರದ್ದು ಮಾಡಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ