ಖಾನ್ ಮಾರ್ಕೆಟ್ ಭಾರತದ ಅತ್ಯಂತ ದುಬಾರಿ ರೀಟೇಲ್ ಮಾರುಕಟ್ಟೆ; ಬೇರೆ ಕಡೆ ಹೇಗೆ?

|

Updated on: Nov 23, 2023 | 6:38 PM

Most Expensive Retail Markets: ನವದೆಹಲಿಯ ಎರಡು ಮಾರ್ಕೆಟ್​ಗಳು ಭಾರತದ ಅತ್ಯಂತ ದುಬಾರಿ ಮಾರುಕಟ್ಟೆಗಳೆನಿಸಿವೆ. ಖಾನ್ ಮಾರ್ಕೆಟ್​ನಲ್ಲಿ ಕಮರ್ಷಿಯಲ್ ಬಾಡಿ ಪ್ರತೀ ಚದರ ಅಡಿಗೆ ತಿಂಗಳಿಗೆ 1,500 ರೂಗೂ ಹೆಚ್ಚಿದೆ. ಕನೋಟ್ ಪ್ಲೇಸ್ ಕೂಡ ದುಬಾರಿಯಾಗಿದೆ. ಬೆಂಗಳೂರಿನ ಅಗ್ರಗಣ್ಯ ಹೈಸ್ಟ್ರೀಟ್​ಗಳ ಪಟ್ಟಿಯಲ್ಲಿರುವ ಬೆಂಗಳೂರಿನ ಚರ್ಚ್ ಸ್ಟ್ರೀಟ್ ಮೊದಲಾದ ಮಾರುಕಟ್ಟೆಗಳು ದುಬಾರಿ ಮಾರುಕಟ್ಟೆಗಳ ಪಟ್ಟಿಯಲ್ಲಿ ಇಲ್ಲ.

ಖಾನ್ ಮಾರ್ಕೆಟ್ ಭಾರತದ ಅತ್ಯಂತ ದುಬಾರಿ ರೀಟೇಲ್ ಮಾರುಕಟ್ಟೆ; ಬೇರೆ ಕಡೆ ಹೇಗೆ?
ಖಾನ್ ಮಾರ್ಕೆಟ್
Follow us on

ನವದೆಹಲಿ, ನವೆಂಬರ್ 23: ಏಷ್ಯಾ ಪೆಸಿಫಿಕ್ ಪ್ರದೇಶಗಳಲ್ಲಿರುವ (APAC) 51 ಅತ್ಯಂತ ದುಬಾರಿ ರೀಟೇಲ್ ಮಾರುಕಟ್ಟೆಗಳಲ್ಲಿ ಭಾರತದ 16 ಸ್ಥಳಗಳಿವೆ. ಕುಶ್​ಮ್ಯಾನ್ ಅಂಡ್ ವೇಕ್​ಫೀಲ್ಡ್ (Cushman & Wakefield) ಎಂಬ ರಿಯಲ್ ಎಸ್ಟೇಟ್ ಕನ್ಸಲ್ಟೆನ್ಸಿ ಸಂಸ್ಥೆ ಇತ್ತೀಚೆಗೆ ಬಿಡುಗಡೆ ಮಾಡಿದ ವರದಿ ಪ್ರಕಾರ ದೆಹಲಿಯ ಖಾನ್ ಮಾರ್ಕೆಟ್ (Khan Market) ಭಾರತದ ಅತ್ಯಂತ ದುಬಾರಿ ಮಾರುಕಟ್ಟೆ ಎಂದು ಖ್ಯಾತಿ ಗಳಿಸಿದೆ. ಏಷ್ಯಾ ಪೆಸಿಫಿಕ್ ಅಥವಾ ಎಪಿಎಸಿ ಪ್ರದೇಶದಲ್ಲಿ ಖಾನ್ ಮಾರ್ಕೆಟ್ 22ನೇ ಸ್ಥಾನ ಗಳಿಸಿದೆ. ಕಳೆದ ವರ್ಷವೂ ಕೂಡ ಖಾನ್ ಮಾರ್ಕೆಟ್ ಭಾರತದ ಅತ್ಯಂತ ದುಬಾರಿ ಮಾರ್ಕೆಟ್ ಎನಿಸಿತ್ತು. ಆದರೆ, ಕುಶ್ಮ್ಯಾನ್ ಪಟ್ಟಿಯಲ್ಲಿ 2022ರಲ್ಲಿ 21ನೇ ಸ್ಥಾನದಲ್ಲಿದ್ದ ಅದು ಈ ವರ್ಷ ಒಂದು ಸ್ಥಾನ ಕುಸಿದಿದೆ. ಚೆನ್ನೈನ ಅಣ್ಣಾ ನಗರದಲ್ಲಿರುವ ಸೆಕೆಂಡ್ ಅವೆನ್ಯೂ ರಸ್ತೆ ಅತ್ಯಂತ ಅಗ್ಗದ ಮಾರುಕಟ್ಟೆ ಸ್ಥಳ ಎಂಬ ಗೌರವಕ್ಕೆ ಪಾತ್ರವಾಗಿದೆ.

ದುಬಾರಿ ಮಾರುಕಟ್ಟೆ ಎಂದರೆ ಹೇಗೆ?

ವಾಣಿಜ್ಯ ಕಟ್ಟಡಗಳು ಹೆಚ್ಚಿರುವ ಒಂದು ರಸ್ತೆಯನ್ನು ಹೈ ಸ್ಟ್ರೀಟ್ ಎಂದು ಕರೆಯಲಾಗುತ್ತದೆ. ಬೆಂಗಳೂರಿನ ಅವೆನ್ಯೂ ರಸ್ತೆ, ಚರ್ಚ್ ಸ್ಟ್ರೀಟ್, ಎಂಜಿ ರಸ್ತೆ ಇತ್ಯಾದಿಗಳು ಇದಕ್ಕೆ ಉದಾಹರಣೆ. ಇಂತಹ ಮಾರುಕಟ್ಟೆ ರಸ್ತೆಗಳಲ್ಲಿ ಮಳಿಗೆಗಳಿಗೆ ಬಾಡಿಗೆ ಎಷ್ಟು ಎಂಬುದರ ಮೇಲೆ ಆ ಮಾರುಕಟ್ಟೆ ಎಷ್ಟು ದುಬಾರಿ ಎಂದು ಅಳೆಯಲಾಗುತ್ತದೆ.

ದೆಹಲಿಯ ಖಾನ್ ಮಾರುಕಟ್ಟೆಯಲ್ಲಿ ಶಾಪ್ ಅನ್ನು ಬಾಡಿಗೆ ಪಡೆಯಲು ಒಂದು ಚದರಡಿ ಸ್ಥಳಕ್ಕೆ ತಿಂಗಳಿಗೆ 1,506 ರೂ ದರ ಇದೆ. ಅಂದರೆ, ಖಾನ್ ಮಾರ್ಕೆಟ್​ನಲ್ಲಿ 20X30 ಅಳತೆಯ ಒಂದು ಜಾಗಕ್ಕೆ ನೀವು ತಿಂಗಳಿಗೆ 9 ಲಕ್ಷ ರೂ ಬಾಡಿಗೆ ತೆರಬೇಕಾಗುತ್ತದೆ. ಅಷ್ಟು ದುಬಾರಿಯಾಗಿದೆ ಅಲ್ಲಿನ ಸ್ಥಳ.

ಇದನ್ನೂ ಓದಿ: ಓಪನ್​ಎಐ ರಾದ್ದಾಂತ; ಸ್ಯಾಮ್ ಆಲ್ಟ್​ಮ್ಯಾನ್ ಮರಳುತ್ತಿದ್ದಂತೆಯೇ, ಹಳೆಯ ಬೋರ್ಡ್ ಸದಸ್ಯರ ಉಚ್ಛಾಟನೆ

ಭಾರತದ 5 ಅತಿದುಬಾರಿ ಹೈಸ್ಟ್ರೀಟ್ ರಸ್ತೆಗಳು ಹಾಗೂ ಎಪಿಎಸಿಯ ಸ್ಥಾನಗಳು

  1. ಖಾನ್ ಮಾರುಕಟ್ಟೆ, ನವದೆಹಲಿ (22ನೇ ಸ್ಥಾನ)
  2. ಕನಾಟ್ ಪ್ಲೇಸ್, ನವದೆಹಲಿ (30ನೇ ಸ್ಥಾನ)
  3. ಗ್ಯಾಲರಿಯಾ ಮಾರ್ಕೆಟ್, ಗುರುಗ್ರಾಮ್ (31ನೇ ಸ್ಥಾನ)
  4. ಲಿಂಕಿಂಗ್ ರೋಡ್, ಮುಂಬೈ (33ನೇ ಸ್ಥಾನ)
  5. ಪಾರ್ಕ್ ಸ್ಟ್ರೀಟ್, ಕೋಲ್ಕತಾ (37ನೇ ಸ್ಥಾನ)

ಆದರೆ, ಹೈದರಾಬಾದ್​ನ ಪ್ರತಿಷ್ಠಿತ ಪ್ರದೇಶವಾದ ಬಂಜಾರ ಹಿಲ್ಸ್​ನಲ್ಲಿ ಬಾಡಿಗೆ ದರ ಕಳೆದ ವರ್ಷಕ್ಕಿಂತ ಶೇ. 40ರಷ್ಟು ಹೆಚ್ಚಾಗಿದೆ. ಆದರೂ ಕೂಡ ಭಾರತದ ಅತ್ಯಂತ ದುಬಾರಿ ಹೈಸ್ಟ್ರೀಟ್​ಗಳಲ್ಲಿ ಬಂಜಾರ ಹಿಲ್ಸ್ ಇಲ್ಲ. ಬೆಂಗಳೂರಿನ ನಾಲ್ಕು ರಸ್ತೆಗಳು ಭಾರತದ ಅತಿದೊಡ್ಡ 10 ಅತಿದೊಡ್ಡ ಹೈಸ್ಟ್ರೀಟ್​ಗಳ ಪಟ್ಟಿಯಲ್ಲಿ ಸೇರಿದ್ದರೂ ಕೂಡ ದುಬಾರಿ ಮಾರುಕಟ್ಟೆಗಳ ಪಟ್ಟಿಯಲ್ಲಿ ಇಲ್ಲದಿರುವುದೂ ಕೂಡ ಗಮನಾರ್ಹ.

ಅತ್ಯಂತ ಅಗ್ಗದ ಹೈಸ್ಟ್ರೀಟ್​ಗಳು

  • ಅಣ್ಣಾನಗರ್ ಸೆಕೆಂಡ್ ಅವೆನ್ಯೂ, ಚೆನ್ನೈ (ಪ್ರತೀ ಚದರಡಿಗೆ ತಿಂಗಳಿಗೆ 152.6 ರೂ ಬಾಡಿಗೆ)
  • ಪಾಂಡಿ ಬಜಾರ್, ಚೆನ್ನೈ (166.6 ರೂ)

ಇದನ್ನೂ ಓದಿ: ಡಿಸೆಂಬರ್​ನಲ್ಲಿ ಬ್ಯಾಂಕುಗಳಿಗೆ 18 ದಿನ ರಜೆ; ಕರ್ನಾಟಕದಲ್ಲಿ ಯಾವ್ಯಾವತ್ತು ರಜೆ? 6 ದಿನ ಬ್ಯಾಂಕ್ ಮುಷ್ಕರದ ಬರೆ

ವಿಶ್ವದ ದುಬಾರಿ ಮಾರ್ಕೆಟ್​ಗಳು

  1. ಅಮೆರಿಕದ ನ್ಯೂಯಾರ್ಕ್​ನ ಫಿಫ್ತ್ ಅವೆನ್ಯೂ
  2. ಇಟಲಿಯ ಮಿಲನ್ ನಗರದಲ್ಲಿರುವ ವಿಯಾ ಮಾಂಟೆನಾಪೋಲಿಯೋನ್
  3. ಹಾಂಕಾಂಗ್​ನ ಟ್ಸಿಮ್ ಶಾ ಟ್ಸುಯ್

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ