ಓಪನ್ಎಐ ರಾದ್ದಾಂತ; ಸ್ಯಾಮ್ ಆಲ್ಟ್ಮ್ಯಾನ್ ಮರಳುತ್ತಿದ್ದಂತೆಯೇ, ಹಳೆಯ ಬೋರ್ಡ್ ಸದಸ್ಯರ ಉಚ್ಛಾಟನೆ
OpenAI Development: ಓಪನ್ಎಐನ ಮಂಡಳಿಯಲ್ಲಿ ನಾಲ್ವರು ಸದಸ್ಯರಿದ್ದರು. ಅವರ ಪೈಕಿ ಆ್ಯಡಂ ಡೀಎಂಜೆಲೋ ಹೊರತುಪಡಿಸಿ ಉಳಿದ ಮೂವರನ್ನು ವಜಾಗೊಳಿಸಲಾಗಿದೆ. ಈ ಮೂವರ ಬದಲು ಇಬ್ಬರು ಹೊಸ ಸದಸ್ಯರನ್ನು ನೇಮಕ ಮಾಡಲಾಗಿದೆ. ಹಾಗೆಯೇ, ಕಂಪನಿಯ ಮಂಡಳಿಗೆ ಇನ್ನೂ 6 ಮಂದಿ ಹೆಚ್ಚುವರಿ ಸದಸ್ಯರನ್ನು ಸೇರಿಸಿಕೊಂಡು ವಿಸ್ತರಿಸುವ ಸಾಧ್ಯತೆ ಇದೆ.
ಕ್ಯಾಲಿಫೋರ್ನಿಯಾ, ನವೆಂಬರ್ 23: ಜಗತ್ತಿಗೆ ಚ್ಯಾಟ್ಜಿಪಿಟಿ (ChatGPT) ಕೊಟ್ಟು ಕೃತಕ ಬುದ್ಧಿಮತ್ತೆಯ (Artificial Intelligence) ಅಗಾಧ ಸಾಧ್ಯತೆಯ ಕಿರುಪರಿಚಯ ಮಾಡಿಸಿದ್ದ ಓಪನ್ಎಐ ಸಂಸ್ಥೆಯಲ್ಲಿನ ಬೆಳವಣಿಗೆಗಳು ಎಲ್ಲರನ್ನೂ ಅಚ್ಚರಿಗೊಳಿಸುತ್ತಿವೆ. ಓಪನನ್ಎಐನ (OpenAI) ಸಿಇಒ ಸ್ಯಾಮ್ ಆಲ್ಟ್ಮ್ಯಾನ್ (Sam Altman) ಅವರನ್ನು ಕಳೆದ ವಾರ ದಿಢೀರ್ ಉಚ್ಚಾಟನೆ ಮಾಡಲಾಗಿತ್ತು. ಇದೀಗ ಅವರು ಮರಳಿ ಬಂದಿದ್ದು, ತನ್ನನ್ನು ಉಚ್ಚಾಟಿಸಿದ ಬೋರ್ಡ್ ಸದಸ್ಯರನ್ನೇ ಮನೆಗೆ ಕಳುಹಿಸಿದ್ದಾರೆ. ಮೈಕ್ರೋಸಾಫ್ಟ್ ಬೆಂಬಲ, ಉದ್ಯೋಗಿಗಳ ಬೆಂಬಲದಿಂದ ಸ್ಯಾಮ್ ಅಲ್ಟ್ಮ್ಯಾನ್ ಈಗ ಸಿಇಒ ಆಗಿ ಓಪನ್ಎಐನ ಚುಕ್ಕಾಣಿಯನ್ನು ಮರಳಿ ಹಿಡಿದಿದ್ದು, ಹೊಸ ಬೋರ್ಡ್ ಸದಸ್ಯರನ್ನು ಸೇರಿಸಿಕೊಂಡಿದ್ದಾರೆ.
ಓಪನ್ಎಐನ ಮಂಡಳಿಯಲ್ಲಿ ನಾಲ್ವರು ಸದಸ್ಯರಿದ್ದರು. ಅವರ ಪೈಕಿ ಆ್ಯಡಂ ಡೀಎಂಜೆಲೋ (Adam D’Angelo) ಹೊರತುಪಡಿಸಿ ಉಳಿದ ಮೂವರನ್ನು ವಜಾಗೊಳಿಸಲಾಗಿದೆ. ಈ ಮೂವರ ಬದಲು ಇಬ್ಬರು ಹೊಸ ಸದಸ್ಯರನ್ನು ನೇಮಕ ಮಾಡಲಾಗಿದೆ. ಹಾಗೆಯೇ, ಕಂಪನಿಯ ಮಂಡಳಿಗೆ ಇನ್ನೂ 6 ಮಂದಿ ಹೆಚ್ಚುವರಿ ಸದಸ್ಯರನ್ನು ಸೇರಿಸಿಕೊಂಡು ವಿಸ್ತರಿಸುವ ಸಾಧ್ಯತೆ ಇದೆ.
ನಿರ್ಗಮಿಸಿದ ಓಪನ್ಎಐ ಬೋರ್ಡ್ ಸದಸ್ಯರು
ಹೆಲೆನ್ ಟೋನರ್: ಇವರು ಜಾರ್ಜ್ಟೌನ್ ಯೂನಿವರ್ಸಿಟಿಯ ಸೆಂಟರ್ ಫಾರ್ ಸೆಕ್ಯೂರಿಟಿ ಅಂಡ್ ಎಮರ್ಜಿಂಗ್ ಟೆಕ್ನಾಲಜಿ ವಿಭಾಗದ ಸಂಶೋಧಕಿ ಮತ್ತು ನಿರ್ದೇಶಕಿ. ಓಪನ್ಎಐ ಸಂಸ್ಥೆ ಚ್ಯಾಟ್ಜಿಪಿಟಿ ಬಿಡುಗಡೆ ಮಾಡಿದ್ದನ್ನು ಇವರು ಬಲವಾಗಿ ವಿರೋಧಿಸಿದ್ದರು. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನವನ್ನು ಸುರಕ್ಷಿತವಾಗಿ ಅಭಿವೃದ್ಧಿಪಡಿಸುವ ಕಾರ್ಯಕ್ಕೆ ಇದು ಅಡ್ಡಿ ಆಗುತ್ತದೆ ಎಂಬುದು ಇವರ ವಾದ.
ಇದನ್ನೂ ಓದಿ: OpenAI ಸಿಇಒ ಆಗಿ ಮರಳಿ ಬರಲಿದ್ದಾರೆ ಸ್ಯಾಮ್ ಆಲ್ಟ್‌ಮನ್
ತಾಶಾ ಮೆಕಾಲೀ: ಜಿಯೋಸಿಮ್ ಸಿಸ್ಟಮ್ಸ್ನ (Geosim Systems) ಮಾಜಿ ಸಿಇಒ ಆಗಿರುವ ತಾಶಾ ಮೆಕಾಲೀ ಅವರು ರಾಂಡ್ ಕಾರ್ಪೊರೇಶನ್ (Rand Corporation) ಸಂಸ್ಥೆಯಲ್ಲಿ ಹಿರಿಯ ವಿಜ್ಞಾನಿಯಾಗಿದ್ದಾರೆ. ನಟ ಹಾಗು ನಿರ್ದೇಶಕ ಜೋಸೆಫ್ ಗಾರ್ಡಾನ್ ಲೆವಿಟ್ ಅವರ ಪತ್ನಿಯೂ ಹೌದು.
ಇಲ್ಯಾ ಸುಟ್ಸ್ಕೆವೆರ್: ಓಪನ್ಎಐನ ಸಹ-ಸಂಸ್ಥಾಪಕರಲ್ಲಿ ಇಲ್ಯಾ ಸುಟ್ಸ್ಕೆವೆರ್ (Ilya Sutskever) ಕೂಡ ಒಬ್ಬರು. ಸಂಸ್ಥೆಯ ಚೀಫ್ ಸೈಂಟಿಸ್ಟ್ ಆಗಿದ್ದವರು. ಎಐ, ನ್ಯೂರಲ್ ನೆಟ್ವರ್ಕ್ಸ್, ಜೆನರೇಟಿವ್ ಎಐ ವಿಷಯಗಳಲ್ಲಿ ಸಾಕಷ್ಟು ಸಂಶೋದನಾ ವರದಿಗಳನ್ನು ಬರೆದಿದ್ದಾರೆ. ಸ್ಯಾಮ್ ಆಲ್ಟ್ಮ್ಯಾನ್ ಅವರ ಉಚ್ಚಾಟನೆಗೆ ಇವರೂ ಒಂದು ಹಂತದಲ್ಲಿ ಬೆಂಬಲ ನೀಡಿದ್ದರೆನ್ನಲಾಗಿದೆ. ಆದರೆ, ಆಲ್ಟ್ಮ್ಯಾನ್ ಮರಳಬೇಕೆಂದು ಸಹಿಹಾಕಿದವರಲ್ಲಿ ಇವರೂ ಒಬ್ಬರಾಗಿದ್ದು ಅಚ್ಚರಿ ತಂದಿದೆ. ಆದರೆ, ಸ್ಯಾಮ್ ಆಲ್ಟ್ಮ್ಯಾನ್ ಅವರು ಮರಳಿ ಬಂದ ಬಳಿಕ ಇಲ್ಯಾ ಅವರನ್ನು ಇಟ್ಟುಕೊಳ್ಳಲಿಲ್ಲ.
ಓಪನ್ಎಐ ಬೋರ್ಡ್ಗೆ ಬಂದ ಹೊಸ ಸದಸ್ಯರು
ಬ್ರೆಟ್ ಚೇರ್: ಸೇಲ್ಸ್ಫೋರ್ಸ್ನ ಮಾಜಿ ಸಿಇಒ ಆದ ಇವರು ಈ ಹಿಂದೆ ಟ್ವಿಟ್ಟರ್, ಶಾಪಿಫೈನ ಬೋರ್ಡ್ನಲ್ಲಿ ಇದ್ದವರು. ಅಚ್ಚರಿ ಎಂದರೆ ಆರು ತಿಂಗಳ ಹಿಂದೆ ಇವರು ತಮ್ಮದೇ ಎಐ ಸಂಸ್ಥೆಯನ್ನು ಹುಟ್ಟುಹಾಕಿದ್ದರು. ಇದೀಗ ಓಪನ್ಎಐ ತೆಕ್ಕೆಗೆ ಬಂದಿರುವ ಇವರು ತಮ್ಮ ಕಂಪನಿಯನ್ನು ಅಲ್ಲಿಗೇ ನಿಲ್ಲಿಸುತ್ತಾರಾ ಅಥವಾ ಓಪನ್ಎಐಗೆ ವಿಲೀನಗೊಳಿಸುತ್ತಾರಾ ಗೊತ್ತಿಲ್ಲ.
ಇದನ್ನೂ ಓದಿ: ಮಿರಾ ಮುರಾಟಿಯೋ ಮೀರಾ ಮೂರ್ತಿಯೋ? ಓಪನ್ ಎಐ ನೂತನ ಸಿಇಒ ಭಾರತೀಯ ಮೂಲದವರೆಂದು ಪುಕಾರು; ಇದು ನಿಜವಾ?
ಲ್ಯಾರಿ ಸಮರ್ಸ್: ಇವರು ಬಿಲ್ ಕ್ಲಿಂಟನ್ ಅಧ್ಯಕ್ಷ ಅವಧಿಯಲ್ಲಿ ಹಣಕಾಸು ಇಲಾಖೆಯ ಕಾರ್ಯದರ್ಶಿಯಾಗಿದ್ದರು. ಆರ್ಥಿಕ ತಜ್ಞರೂ ಆಗಿರುವ ಇವರು ರಾಜಕೀಯವಾಗಿ ಸಾಕಷ್ಟು ಸಂಪರ್ಕ ಇಟ್ಟುಕೊಂಡಿರುವುದು ಓಪನ್ಎಐಗೆ ಅನುಕೂಲವಾಗಬಹುದು.
ಆ್ಯಡಂ ಡೀ ಏಂಜೆಲೋ: ಹಿಂದಿನ ಓಪನ್ಎಐ ಬೋರ್ಡ್ ಸದಸ್ಯರ ಪೈಕಿ ಸ್ಥಾನ ಉಳಿಸಿಕೊಂಡಿದ್ದು ಇವರೊಬ್ಬರೆಯೇ. ಕೋರಾ ಪ್ಲಾಟ್ಫಾರ್ಮ್ನ (Quora) ಸಿಇಒ ಆಗಿರುವ ಡಿ ಏಂಜೆಲೋ ಅವರು ಸ್ಯಾಮ್ ಮರಳಿ ಬರಲು ಸಾಧ್ಯವಾಗಿಸಿದವರಲ್ಲಿ ಒಬ್ಬರು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ