High Streets: ಬೆಂಗಳೂರೇ ಬೆಸ್ಟ್..! ಭಾರತದ ಟಾಪ್-10 ಹೈ ಸ್ಟ್ರೀಟ್ಗಳಲ್ಲಿ ಎಂಜಿ ರೋಡ್ ಸೇರಿ ಬೆಂಗಳೂರಿನ 4 ರಸ್ತೆಗಳು; ಏನಿದು ಹೈ ಸ್ಟ್ರೀಟ್ ಎಂದರೆ?
Knight Frank Survey of 30 Indian High Streets: ಭಾರತದ 10 ಪ್ರಮುಖ ಹೈ ಸ್ಟ್ರೀಟ್ಗಳಲ್ಲಿ ಬೆಂಗಳೂರಿನ ರಸ್ತೆಗಳೇ ಅಧಿಕ ಸಂಖ್ಯೆಯಲ್ಲಿ ಇವೆ ಎನ್ನುವಂತಹ ಒಂದು ಸಮೀಕ್ಷೆ ವರದಿಯಾಗಿದೆ. ನೈಟ್ ಫ್ರ್ಯಾಂಕ್ ಎಂಬ ರಿಯಲ್ ಎಸ್ಟೇಟ್ ಕನ್ಸಲ್ಟೆನ್ಸಿ ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲಿ ಟಾಪ್-10 ಹೈಸ್ಟ್ರೀಟ್ಗಳಲ್ಲಿ ಬೆಂಗಳೂರಿನ 4 ರಸ್ತೆಗಳಿವೆ.
ನವದೆಹಲಿ: ಬೆಂಗಳೂರು ನಾನಾ ಕಾರಣಗಳಿಗೆ ಭಾರತಕ್ಕೆ ಹೆಮ್ಮೆ ಮೂಡಿಸುವ ನಗರ. ಅಮೆರಿಕದ ಸಿಲಿಕಾನ್ ವ್ಯಾಲಿಯಂತೆ ಭಾರತಕ್ಕೆ ಬೆಂಗಳೂರು ಸಿಲಿಕಾನ್ ಸಿಟಿ ಎನಿಸಿದೆ. ಅದಕ್ಕೆ ಮುನ್ನ ಪೆನ್ಷನರ್ಸ್ ಪ್ಯಾರಡೈಸ್ ಎಂದು ಹೆಸರು ಪಡೆದಿತ್ತು. ಪ್ರತೀ ಏರಿಯಾದಲ್ಲೂ ಪಾರ್ಕ್ಗಳ ಸ್ಥಾಪನೆಯಾಗಿ, ಉದ್ಯಾನಗರಿ ಎಂದು ಫೇಮಸ್ ಆಯಿತು. ಅನೇಕ ಪ್ರಮುಖ ಉದ್ಯಮಗಳು ಬೆಂಗಳೂರಿನಲ್ಲೇ ಸ್ಥಾಪನೆಯಾಗಿವೆ. ಬಿಎಚ್ಇಎಲ್, ಬಿಇಎಲ್, ಬಿಇಎಂಎಲ್, ಎನ್ಜಿಇಎಫ್, ಮೈಕೋ, ಎಚ್ಎಎಲ್ ಇತ್ಯಾದಿ ಕೈಗಾರಿಕೆಗಳಿಗೆ ಬೆಂಗಳೂರೇ ತವರೂರಾಗಿದ್ದು. ಈಗ ಪಬ್, ಮಾಲ್ಗಳ ದೊಡ್ಡ ಪಟ್ಟಿಯೇ ಬೆಂಗಳೂರಲ್ಲಿ ಇವೆ. ಉದ್ಯಮ ವ್ಯವಹಾರಕ್ಕೆ ಹೇಳಿ ಮಾಡಿಸಿದ ಸ್ಥಳವಾಗಿದೆ ಬೆಂಗಳೂರು. ಓಲಾ, ಫ್ಲಿಪ್ಕಾರ್ಟ್ ಇತ್ಯಾದಿ ಅಸಂಖ್ಯಾತ ಸ್ಟಾರ್ಟಪ್ಗಳು, ಯೂನಿಕಾರ್ನ್ಗಳಿಗೆ ಬೆಂಗಳೂರು ಮೂಲವಾಗಿದೆ. ಈಗ ಭಾರತದ 10 ಪ್ರಮುಖ ಹೈ ಸ್ಟ್ರೀಟ್ಗಳಲ್ಲಿ (High Streets) ಬೆಂಗಳೂರಿನ ರಸ್ತೆಗಳೇ ಅಧಿಕ ಸಂಖ್ಯೆಯಲ್ಲಿ ಇವೆ ಎನ್ನುವಂತಹ ಒಂದು ಸಮೀಕ್ಷೆ ವರದಿಯಾಗಿದೆ. ನೈಟ್ ಫ್ರ್ಯಾಂಕ್ (Knight Frank) ಎಂಬ ರಿಯಲ್ ಎಸ್ಟೇಟ್ ಕನ್ಸಲ್ಟೆನ್ಸಿ ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲಿ ಟಾಪ್-10 ಹೈಸ್ಟ್ರೀಟ್ಗಳಲ್ಲಿ ಬೆಂಗಳೂರಿನ 4 ರಸ್ತೆಗಳಿವೆ.
ಭಾರತದ ಟಾಪ್-10 ಹೈ ಸ್ಟ್ರೀಟ್ಗಳು
ನೈಟ್ ಫ್ರ್ಯಾಂಕ್ ಬಿಡುಗಡೆ ಮಾಡಿದ ಅಗ್ರ-10 ಹೈ ಸ್ಟ್ರೀಟ್ಗಳಲ್ಲಿ ಬೆಂಗಳೂರೊಂದರ 4 ರಸ್ತೆಗಳೇ ಇವೆ. ಎಂಜಿ ರಸ್ತೆ ಅಗ್ರಸ್ಥಾನದಲ್ಲಿದೆ. ಕಮರ್ಷಿಯಲ್ ಸ್ಟ್ರೀಟ್, ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್ಗಳು ಕ್ರಮವಾಗಿ 7, 9 ಮತ್ತು 10ನೇ ಸ್ಥಾನದಲ್ಲಿವೆ. ಈ 10 ಹೈ ಸ್ಟ್ರೀಟ್ಗಳ ಪಟ್ಟಿ ಈ ಕೆಳಕಂಡಂತಿದೆ:
- ಮಹಾತ್ಮ ಗಾಂಧಿ ರಸ್ತೆ (ಎಂಜಿ ರೋಡ್): ಬೆಂಗಳೂರು
- ಸೋಮಾಜಿಗುಡ: ಹೈದರಾಬಾದ್
- ಲಿಂಕಿಂಗ್ ರೋಡ್: ಮುಂಬೈ
- ಸೌತ್ ಎಕ್ಸ್ಟೆನ್ಷನ್ 1 ಮತ್ತು 2ನೇ ಭಾಗ: ದೆಹಲಿ
- ಪಾರ್ಕ್ ಸ್ಟ್ರೀಟ್ ಮತ್ತು ಕಾಮಾಕ್ ಸ್ಟ್ರೀಟ್: ಕೋಲ್ಕತಾ
- ಅಣ್ಣಾ ನಗರ್: ಚೆನ್ನೈ
- ಕಮರ್ಷಿಯಲ್ ಸ್ಟ್ರೀಟ್: ಬೆಂಗಳೂರು
- ಸೆಕ್ಟರ್ 18 ಮಾರ್ಕೆಟ್: ನೋಯ್ಡಾ
- ಬ್ರಿಗೇಡ್ ರೋಡ್: ಬೆಂಗಳೂರು
- ಚರ್ಚ್ ಸ್ಟ್ರೀಟ್: ಬೆಂಗಳೂರು
ಮೇಲಿನ ಪಟ್ಟಿಯಲ್ಲಿ ಬೆಂಗಳೂರು ಬಿಟ್ಟರೆ ಬೇರೆ ಯಾವ ನಗರವೂ ಒಂದಕ್ಕಿಂತ ಹೆಚ್ಚು ಸ್ಟ್ರೀಟ್ಗಳನ್ನು ಹೊಂದಿಲ್ಲ. ಹೀಗಾಗಿ, ಬೆಂಗಳೂರು ಎಲ್ಲ ನಗರಕ್ಕಿಂತ ಸ್ಪಷ್ಟ ಮುಂಚೂಣಿಯಲ್ಲಿದೆ.
ಹೈ ಸ್ಟ್ರೀಟ್ ಎಂದರೇನು?
ಹೈ ಸ್ಟ್ರೀಟ್ ಎಂದರೆ ಒಂದು ನಗರದ ಮುಖ್ಯ ಬೀದಿ ಹಾಗು ವಾಣಿಜ್ಯ ಸ್ಥಳವಾಗಿರಬೇಕು. ನಗರದ ಹೃದಯಭಾಗದಲ್ಲಿದ್ದು, ಈ ರಸ್ತೆಯಲ್ಲಿ ವೈವಿಧ್ಯಮಯ ರೀಟೇಲ್ ಶಾಪ್ಗಳು, ರೆಸ್ಟೋರೆಂಟ್ಗಳು, ಥಿಯೇಟರ್, ಕೆಫೆ ಇತ್ಯಾದಿ ಕಮರ್ಷಿಯಲ್ ಮತ್ತು ರೀಟೇಲ್ ಮಾರುಕಟ್ಟೆಗಳಿರಬೇಕು. ನಮ್ಮ ಎಂಜಿ ರಸ್ತೆ, ಕಮರ್ಷಿಯಲ್ ರಸ್ತೆಗಳಿಗೆ ಹೋದರೆ ಏನುಂಟು, ಏನಿಲ್ಲ? ಯಾರಿಗಾದರೂ ಏನಾದರೂ ಶಾಪಿಂಗ್ ಮಾಡಬೇಕೆಂದರೆ ಈ ರಸ್ತೆಗಳಲ್ಲಿ ನಾನಾ ಆಯ್ಕೆಗಳು ಸಿಗುತ್ತವೆ.
ಇದನ್ನೂ ಓದಿ: Go First: ಗೋ ಫಸ್ಟ್ ವಿಮಾನಗಳನ್ನು ಪಡೆಯಲು ಟಾಟಾ, ಇಂಡಿಗೋ ಮುಂದು; ಲೀಸಿಂಗ್ ಕಂಪನಿಗಳ ಜೊತೆ ಮಾತುಕತೆ
ಯಾವ ಹೈಸ್ಟ್ರೀಟ್ಗಳಲ್ಲಿ ಮಾರುಕಟ್ಟೆ ಪ್ರದೇಶಗಳು ಸುಲಭವಾಗಿ ಕಣ್ಣಿಗೆ ನಿಲುಕುವಂತಿರಬೇಕು. ಅಂಥ ಹೈಸ್ಟ್ರೀಟ್ಗಳಿಗೆ ಪಟ್ಟಿಯಲ್ಲಿ ಮೇಲಿನ ಸ್ಥಾನ ಕೊಡಲಾಗಿದೆ. ನೈಟ್ ಫ್ರಾಂಕ್ ಸಂಸ್ಥೆ ಭಾರತದಲ್ಲಿ ಇಂಥ 30 ಹೈಸ್ಟ್ರೀಟ್ಗಳ ಸಮೀಕ್ಷೆ ನಡೆಸಿ ಟಾಪ್-10 ಪಟ್ಟಿ ಮಾಡಿದೆ. ಆದರೆ, ಜನರು ಒಂದು ರಸ್ತೆಗೆ ಹೋಗಿ ಅತಿಹೆಚ್ಚು ಶಾಪಿಂಗ್ ಅಥವಾ ವೆಚ್ಚ ಮಾಡುವುದು ಎಂದರೆ ಅದು ಅಹ್ಮದಾಬಾದ್ನ ಎಸ್ಜಿ ಹೈವೇ ಅಂತೆ.