ಸಚಿನ್ ಬನ್ಸಾಲ್ ಮತ್ತು ಬಿನ್ನಿ ಬನ್ಸಾಲ್ ಹೆಸರನ್ನು ಕೆಲವರು ಕೇಳಿರಬಹುದು. ಆದರೆ, ಇವರು ಸ್ಥಾಪಿಸಿದ್ದ ಫ್ಲಿಪ್ಕಾರ್ಟ್ ಹೆಸರು ಬಹುತೇಕ ಯುವಕರಲ್ಲಿ ಜನಜನಿತವಾದ ಹೆಸರು. ಇವರಿಬ್ಬರು ಸಹೋದರರಲ್ಲ, ಬದಲಾಗಿ ಸ್ನೇಹಿತರು. ಐಐಟಿಯಲ್ಲಿ ಇಬ್ಬರೂ ಸಹಪಾಠಿಗಳು. 2007ರಲ್ಲಿ ಇವರು ಫ್ಲಿಪ್ಕಾರ್ಟ್ ಎಂಬ ಆನ್ಲೈನ್ ಪ್ಲಾಟ್ಫಾರ್ಮ್ ಅನ್ನು ಆರಂಭಿಸಿದರು. ಆದರೆ, ಇಬ್ಬರೂ ಕೂಡ ತಾವು ಆರಂಭಿಸಿದ ಸಂಸ್ಥೆಯಿಂದ ನಿರ್ಗಮಿಸಿದ್ದಾರೆ. ಅಮೆರಿಕದ ವಾಲ್ಮಾರ್ಟ್ ಎಂಬ ದೈತ್ಯ ರೀಟೇಲ್ ಮಳಿಗೆ ಸಂಸ್ಥೆ ಫ್ಲಿಪ್ಕಾರ್ಟ್ ಅನ್ನು 2018ರಲ್ಲಿ ಖರೀದಿಸಿದ ಬಳಿಕ ಸಚಿನ್ ಬನ್ಸಾಲ್ ಮತ್ತು ಬಿನ್ನಿ ಬನ್ಸಾಲ್ ಇಬ್ಬರೂ ನಿರ್ಗಮಿಸಿದ್ದಾರೆ. ಸಚಿನ್ ಬನ್ಸಾಲ್ 2018ರಲ್ಲೇ ತಮ್ಮ ಪಾಲನ್ನು ಸಂಪೂರ್ಣವಾಗಿ ಮಾರಿ ಹೋಗಿದ್ದಾರೆ. ನವಿ ಗ್ರೂಪ್ ಎಂಬ ಫೈನಾನ್ಷಿಯಲ್ ಸರ್ವಿಸಸ್ ಕಂಪನಿಯ ಮ್ಯಾನೇಜಿಂಗ್ ಡೈರೆಕ್ಟರ್ ಆಗಿದ್ದಾರೆ. ಇದೀಗ ಬಿನ್ನಿ ಬನ್ಸಾಲ್ ಕೂಡ ತಮ್ಮ ಪಾಲಿನ ಷೇರನ್ನು ಪೂರ್ಣವಾಗಿ ಮಾರಿದ್ದಾರೆ. ಅವರೂ ಕೂಡ ಆಪ್ಡೋರ್ (OppDoor) ಎಂಬ ಹೊಸ ಸ್ಟಾರ್ಟಪ್ ಆರಂಭಿಸಿದ್ದಾರೆ.
ಬಿನ್ನಿ ಬನ್ಸಾಲ್ ಐಐಟಿ ಎಂಜಿನಿಯರ್. ಓದಿನ ಬಳಿಕ ಅವರು ಗೂಗಲ್ನಲ್ಲಿ ಕೆಲಸಕ್ಕೆ ಸೇರಲು ಎರಡು ಬಾರಿ ಮಾಡಿದ ಯತ್ನ ವಿಫಲವಾಗಿತ್ತು. ಇವರ ಅರ್ಜಿ ಎರಡೂ ಬಾರಿಯೂ ತಿರಸ್ಕೃತವಾಗಿತ್ತು.
ಇದನ್ನೂ ಓದಿ: Richest: ಇಲಾನ್ ಮಸ್ಕ್ರನ್ನು ಮೀರಿಸಿದ ಬರ್ನಾರ್ಡ್ ಆರ್ನಾಲ್ಟ್; ಕುತೂಹಲ ಮೂಡಿಸಿದ ಶ್ರೀಮಂತಿಕೆ ರೇಸ್
ಬಿನ್ನಿ ಬನ್ಸಾಲ್ ತಮ್ಮ ಐಐಟಿ ಸಹಪಾಠಿ ಹಾಗೂ ಸ್ನೇಹಿತ ಸಚಿನ್ ಬನ್ಸಾಲ್ ಜೊತೆ ಸೇರಿ 2007ರಲ್ಲಿ ಫ್ಲಿಪ್ಕಾರ್ಟ್ ಶುರು ಮಾಡಿದರು. ಮೊದಲಿಗೆ ಅದರ ಬಿಸಿನೆಸ್ ಆನ್ಲೈನ್ ಬುಕ್ ಸ್ಟೋರ್ ಆಗಿ ಮಾತ್ರವೇ ಇತ್ತು. ಬೆಂಗಳೂರಿನ ಕೋರಮಂಗಲದ ಅಪಾರ್ಟ್ಮೆಂಟ್ವೊಂದನ್ನು ಬಾಡಿಗೆಗೆ ಪಡೆದು ಅವರು ಫ್ಲಿಪ್ಕಾರ್ಟ್ ಆರಂಭಿಸಿದ್ದರು. ಆರಂಭಿಕ ಬಂಡವಾಳ ಕೇವಲ 2.71 ಲಕ್ಷ ರೂ ಮಾತ್ರವೇ.
ಇವತ್ತು ಫ್ಲಿಪ್ಕಾರ್ಟ್ 37 ಬಿಲಿಯನ್ ಡಾಲರ್ ಮೌಲ್ಯದ ಕಂಪನಿಯಾಗಿದೆ. ಅಂದರೆ 30,000 ಕೋಟಿ ರೂಗೂ ಹೆಚ್ಚು ಮೌಲ್ಯದ ಕಂಪನಿಯಾಗಿದೆ. ಅಮೇಜಾನ್ನಂತಹ ಜಾಗತಿಕ ಇಕಾಮರ್ಸ್ ದೈತ್ಯ ಸಂಸ್ಥೆಗೆ ತೀವ್ರ ಪೈಪೋಟಿ ನೀಡುವ ಮಟ್ಟಕ್ಕೆ ಅದು ಬೆಳೆದಿದೆ. ಇದರ ಶ್ರೇಯಸ್ಸು ಸಚಿನ್ ಬನ್ಸಾಲ್ ಮತ್ತು ಬಿನ್ನಿ ಬನ್ಸಾಲ್ ಅವರಿಗೆ ಸೇರಬೇಕು.
ಬಿನ್ನಿ ಬನ್ಸಾಲ್ ಇವತ್ತು 10,000 ಕೋಟಿ ರೂಗೂ ಹೆಚ್ಚು ಮೌಲ್ಯದ ಆಸ್ತಿಯ ಒಡೆಯರಾಗಿದ್ದಾರೆ. ಭಾರತದ ಅತ್ಯಂತ ಕಿರಿಯ ಶ್ರೀಮಂತರ ಪೈಕಿ ಅವರೊಬ್ಬರೆನಿಸಿದ್ದಾರೆ.
ಇದನ್ನೂ ಓದಿ: Sunny Leone: ಮಾಜಿ ನೀಲಿಚಿತ್ರತಾರೆ ಸನ್ನಿ ಲಿಯೋನೆ ಹೊಸ ಬಿಸಿನೆಸ್; ಚಿಕಲೋಕ ಆರಂಭ
ಫ್ಲಿಪ್ಕಾರ್ಟ್ ಬಿಟ್ಟು ಅವರು ಆರಂಭಿಸಿರುವ OppDoor ಎಂಬುದು ಇಕಾಮರ್ಸ್ ಬ್ರ್ಯಾಂಡ್ಗಳ ಬಿಸಿನೆಸ್ ಬೆಳೆಸಲು ಸಹಾಯ ಮಾಡುವ ಕಂಪನಿಯಾಗಿದೆ. ಸಿಂಗಾಪುರದಲ್ಲಿ ಇದರ ಮುಖ್ಯ ಕಚೇರಿ ಇದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ