
ನವದೆಹಲಿ, ನವೆಂಬರ್ 3: ನೀವು ಅಡುಗೆ ಎಣ್ಣೆಯ (cooking oil) ಪ್ಯಾಕ್ಗಳನ್ನು ಗಮನಿಸಿ ನೋಡಿ… ನೋಡಲು ಅರ್ಧ ಲೀಟರ್ ಪ್ಯಾಕ್ ಅಥವಾ ಒಂದು ಲೀಟರ್ ಪ್ಯಾಕ್ಗಳಂತೆ ಕಾಣುತ್ತವೆ. ನೀವು ಅರ್ಧ ಲೀಟರ್ ಪ್ಯಾಕ್ ಎಂದುಕೊಂಡಿದ್ದರೆ ಅದರ ತೂಕ 350 ಗ್ರಾಮ್ನಿಂದ ಹಿಡಿದು 450 ಗ್ರಾಮ್ ಇರಬಹುದು. ಒಂದು ಲೀಟರ್ ಪ್ಯಾಕ್ ಎಂದುಕೊಂಡಿದ್ದು ವಾಸ್ತವವಾಗಿ 750 ಗ್ರಾಮ್ನಿಂದ 950 ಗ್ರಾಮ್ವರೆಗೂ ವ್ಯತ್ಯಾಸಗಳಿರುತ್ತವೆ. ಪ್ಯಾಕೆಟ್ನಲ್ಲಿ ತೂಕವನ್ನು ಬರೆದಿರುತ್ತರಾದರೂ ಹೆಚ್ಚಿನ ಗ್ರಾಹಕರು ಒಂದು ಲೀಟರ್ ಎಣ್ಣೆ ಎಂದು ಭಾವಿಸಿ ಹಣ ತೆರುವುದುಂಟು.
ಅಡುಗೆ ಎಣ್ಣೆ ಉದ್ಯಮಗಳು ಹೆಚ್ಚಿನ ಲಾಭ ಪಡೆಯಲು ತೂಕ ಕಡಿಮೆ ಮಾಡುವುದುಂಟು. ಇದು ವಿವಿಧ ಕಂಪನಿಗಳ ನಡುವೆ ಬೆಲೆ ಇಳಿಕೆ ಸಮರದ ನೆವದಲ್ಲಿ ತೂಕ ಇಳಿಕೆ ಪೈಪೋಟಿ ಏರ್ಪಡುವಂತಾಗಿದೆ. 810 ಗ್ರಾಮ್ ತೂಕ ಇರುವ ಎಣ್ಣೆ ಪ್ಯಾಕೆಟ್ ಬೆಲೆ 900 ಗ್ರಾಮ್ ತೂಕದ ಪ್ಯಾಕ್ಗಿಂತ ಕಡಿಮೆ ಇರುತ್ತದೆ. ಆದರೆ, ಜನರಿಗೆ ಎರಡೂ ಕೂಡ ಒಂದು ಲೀಟರ್ ಪ್ಯಾಕ್ನಂತೆಯೇ ಭಾಸವಾಗುತ್ತದೆ. ಗ್ರಾಹಕ ಸಹಜವಾಗಿ ಬೆಲೆ ಕಡಿಮೆ ಇರುವ 810 ಗ್ರಾಮ್ ತೂಕದ ಪ್ಯಾಕ್ ಅನ್ನೇ ಖರೀದಿಸುವ ಅವಕಾಶ ಹೆಚ್ಚಿರುತ್ತದೆ.
ಇದನ್ನೂ ಓದಿ: ಮತ್ತಷ್ಟು ಗಣಿಗಾರಿಕೆಯಿಂದ ಭಾರತಕ್ಕೆ ತಗ್ಗುತ್ತೆ 100 ಬಿಲಿಯನ್ ಡಾಲರ್ ಹೊರೆ: ಸಿಎಸ್ಇಪಿ ವರದಿ
ತೂಕ ಲೆಕ್ಕದಲ್ಲಿ ಪ್ಯಾಕ್ಗಳನ್ನು ಮಾಡಿ ಗ್ರಾಹಕರನ್ನು ಯಾಮಾರಿಸುವ ಕೆಲಸಕ್ಕೆ ಕಡಿವಾಣ ಹಾಕಬೇಕು. ಕಂಪನಿಗಳು ಲೀಟರ್ ಲೆಕ್ಕದಲ್ಲಿ ಎಣ್ಣೆಗಳನ್ನು ಪ್ಯಾಕ್ ಮಾಡುವಂತೆ ನಿಯಮ ಮಾಡಬೇಕು ಎಂದು ಈ ಉದ್ಯಮದ ಸಂಘಟನೆಯಾದ ಸಾಲ್ವೆಂಟ್ ಎಕ್ಸ್ಟ್ರಾಕ್ಟರ್ಸ್ ಅಸೋಸಿಯೇಶನ್ (SEA- Solvent Extracters Association) ಇತ್ತೀಚೆಗೆ ಸರ್ಕಾರಕ್ಕೆ ಪತ್ರ ಬರೆದು ಆಗ್ರಹ ಮಾಡಿದೆ.
‘800 ಗ್ರಾಮ್, 810 ಗ್ರಾಮ್, 870 ಗ್ರಾಮ್ ಹೀಗೆ ಏಕರೀತಿಯಲ್ಲಿಲ್ಲದ (Non standardized) ಎಣ್ಣೆ ಪ್ಯಾಕ್ಗಳ ಸಂಖ್ಯೆ ಹೆಚ್ಚುತ್ತಿದೆ. ಇದರಿಂದ ಗ್ರಾಹಕರಿಗೆ ಗೊಂದಲ ಆಗುತ್ತಿದೆ. ನೋಡಲು ಒಂದೇ ರೀತಿ ಕಾಣುವುದರಿಂದ ಗ್ರಾಹಕರು ಮೋಸ ಹೋಗಬಹುದು. ಬೆಲೆ ಹೋಲಿಕೆ ಸರಿಯಾಗಿ ಮಾಡಲು ವಿಫಲರಾಗಬಹುದು’ ಎಂದು ಎಸ್ಇಎ ತನ್ನ ಪತ್ರದಲ್ಲಿ ಅಭಿಪ್ರಾಯಪಟ್ಟಿದೆ.
ಇದನ್ನೂ ಓದಿ: ಒಂದು ತಿಂಗಳಲ್ಲಿ 2,070 ಕೋಟಿ, ಒಂದು ದಿನದಲ್ಲಿ 75 ಕೋಟಿ ಯುಪಿಐ ವಹಿವಾಟುಗಳು; ಇದು ಹೊಸ ದಾಖಲೆ
ಬೇರೆ ಬೇರೆ ತೂಕ ಇದ್ದರೂ ಎಣ್ಣೆ ಪ್ಯಾಕೆಟ್ಗಳು ನೋಡಲು ಒಂದು ಲೀಟರ್ ಪ್ಯಾಕ್ನಂತೆ ಕಾಣುತ್ತವೆ. ಹೀಗಾಗಿ, ಗ್ರಾಹಕರು ಮೋಸ ಹೋಗಬಹುದು. ಆದ್ದರಿಂದ ಅಡುಗೆ ಎಣ್ಣೆಯನ್ನು ಲೀಟರ್ ಲೆಕ್ಕದಲ್ಲಿ ಪ್ಯಾಕ್ ಮಾಡುವುದನ್ನು ಸರ್ಕಾರ ಕಡ್ಡಾಯಗೊಳಿಸಲಿ ಎಂದು ಎಡಬ್ಲ್ಯುಎಲ್ ಅಗ್ರಿ ಬ್ಯುಸಿನೆಸ್ ಲಿಮಿಟೆಡ್ ಸಂಸ್ಥೆಯ ಸಿಇಒ ಅಂಶು ಮಾಲಿಕ್ ಒತ್ತಾಯಿಸಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ