ಒಂದು ತಿಂಗಳಲ್ಲಿ 2,070 ಕೋಟಿ, ಒಂದು ದಿನದಲ್ಲಿ 75 ಕೋಟಿ ಯುಪಿಐ ವಹಿವಾಟುಗಳು; ಇದು ಹೊಸ ದಾಖಲೆ
UPI transaction records: ಭಾರತದ ಡಿಜಿಟಲ್ ಪೇಮೆಂಟ್ ಟ್ರಾನ್ಸಾಕ್ಷನ್ಗಳಲ್ಲಿ ಯುಪಿಐ ಪಾಲು ಶೇ. 84ಕ್ಕಿಂತಲೂ ಹೆಚ್ಚು ಇದೆ. ಅಕ್ಟೋಬರ್ ತಿಂಗಳಲ್ಲಿ 2,070 ಕೋಟಿ ಯುಪಿಐ ಟ್ರಾನ್ಸಾಕ್ಷನ್ಗಳಾಗಿವೆ. ಅಕ್ಟೋಬರ್ 18ರಂದು ಒಂದೇ ದಿನ 75 ಕೋಟಿ ಯುಪಿಐ ಟ್ರಾನ್ಸಾಕ್ಷನ್ಗಳಾಗಿವೆ. ಸಣ್ಣ ಮೊತ್ತದ ಟ್ರಾನ್ಸಾಕ್ಷನ್ಗಳಿಗೆ ಯುಪಿಐ ಬಳಕೆ ಅತಿಹೆಚ್ಚು ಇದೆ. ಆದರೆ ದೊಡ್ಡ ಮೊತ್ತದ ಟ್ರಾನ್ಸಾಕ್ಷನ್ಗಳಿಗೆ ಆರ್ಟಿಜಿಎಸ್ ಬಳಸಲಾಗುತ್ತದೆ.

ನವದೆಹಲಿ, ನವೆಂಬರ್ 2: ಭಾರತದ ವಿನೂತನ ಪೇಮೆಂಟ್ ಸಿಸ್ಟಂ ಎನಿಸಿರುವ ಯುಪಿಐ (UPI) ಬಳಕೆ ದಿನದಿಂದ ದಿನಕ್ಕೆ ವ್ಯಾಪಕಗೊಳ್ಳುತ್ತಿದೆ. ಹಲವು ಹೊಸ ದಾಖಲೆಗಳನ್ನು ಬರೆಯುತ್ತಿದೆ. ಕಳೆದ ತಿಂಗಳು (ಅಕ್ಟೋಬರ್) 2,070 ಕೋಟಿ ಸಂಖ್ಯೆಯಷ್ಟು ಯುಪಿಐ ವಹಿವಾಟುಗಳು ದಾಖಲಾಗಿವೆ. ಒಂದು ತಿಂಗಳಲ್ಲಿ 2,000 ಕೋಟಿ ಯುಪಿಐ ವಹಿವಾಟು ದಾಖಲಾಗಿರುವುದು ಇದು ಎರಡನೇ ಬಾರಿ. ಆಗಸ್ಟ್ನಲ್ಲಿ 2,001 ಕೋಟಿಯಷ್ಟು ಯುಪಿಐ ಟ್ರಾನ್ಸಾಕ್ಷನ್ಗಳು ನಡೆದಿದ್ದವು. ಸೆಪ್ಟೆಂಬರ್ ತಿಂಗಳಲ್ಲಿ 1,963 ಕೋಟಿ ಟ್ರಾನ್ಸಾಕ್ಷನ್ಗಳಾಗಿವೆ. ಈಗ ಅಕ್ಟೋಬರ್ನಲ್ಲಿ 2,070 ಕೋಟಿ ಯುಪಿಐ ವಹಿವಾಟುಗಳು ಆಗಿರುವುದು ಹೊಸ ದಾಖಲೆ ಎನಿಸಿದೆ.
ಒಂದು ದಿನದ ಗರಿಷ್ಠ ಯುಪಿಐ ವಹಿವಾಟು
ಅಕ್ಟೋಬರ್ ತಿಂಗಳಲ್ಲಿ ನಡೆದ 2,070 ಟ್ರಾನ್ಸಾಕ್ಷನ್ಗಳಿಂದ 27.28 ಲಕ್ಷ ಕೋಟಿ ರೂ ಮೌಲ್ಯದ ಹಣದ ವಹಿವಾಟು ನಡೆದಿದೆ. ಇದೂ ಕೂಡ ದಾಖಲೆ ಎನಿಸಿದೆ. ಆಗಸ್ಟ್ನಲ್ಲಿ 24.85 ಲಕ್ಷ ಕೋಟಿ ರೂ, ಸೆಪ್ಟೆಂಬರ್ನಲ್ಲಿ 24.90 ಲಕ್ಷ ಕೋಟಿ ರೂ ಮೌಲ್ಯದ ಯುಪಿಐ ವಹಿವಾಟುಗಳು ನಡೆದಿದ್ದವು.
ಇದನ್ನೂ ಓದಿ: ಅಕ್ಟೋಬರ್ನಲ್ಲಿ 1.96 ಲಕ್ಷ ಕೋಟಿ ರೂ ಜಿಎಸ್ಟಿ ಸಂಗ್ರಹ; ರೀಫಂಡ್ಗಳಲ್ಲಿ ಶೇ. 39ರಷ್ಟು ಏರಿಕೆ
ಆಗಸ್ಟ್ 18ರಂದು ಒಂದೇ ದಿನ 75 ಕೋಟಿಗೂ ಅಧಿಕ ಯುಪಿಐ ಟ್ರಾನ್ಸಾಕ್ಷನ್ಗಳು ನಡೆದಿವೆ. ಎನ್ಪಿಸಿಐ ದತ್ತಾಂಶದ ಪ್ರಕಾರ ಆ ದಿನ 75.43 ಕೋಟಿ ಟ್ರಾನ್ಸಾಕ್ಷನ್ಗಳು ನಡೆದಿರುವುದು ದಾಖಲಾಗಿದೆ. ಇದೂವರೆಗೆ ಯಾವುದೇ ದಿನ ಇಷ್ಟೊಂದು ಸಂಖ್ಯೆಯಲ್ಲಿ ಟ್ರಾನ್ಸಾಕ್ಷನ್ ನಡೆದಿರುವುದು ಇಲ್ಲ.
ಡಿಜಿಟಲ್ ಪೇಮೆಂಟ್ಗಳಲ್ಲಿ ಯುಪಿಐ ಕಿಂಗ್
ಭಾರತದಲ್ಲಿ ಬಳಕೆಯಲ್ಲಿರುವ ಡಿಜಿಟಲ್ ಪೇಮೆಂಟ್ ಸಿಸ್ಟಂಗಳ ಪೈಕಿ ಯುಪಿಐ ಕಿಂಗ್ ಎನಿಸಿದೆ. ಶೇ. 84.4ರಷ್ಟು ಡಿಜಿಟಲ್ ಪೇಮೆಂಟ್ಗಳು ಯುಪಿಐನಿಂದ ಆಗುತ್ತಿವೆ. ನೆಫ್ಟ್ ಟ್ರಾನ್ಸ್ಫರ್ ಶೇ. 3.9, ಐಎಂಪಿಎಸ್ ಟ್ರಾನ್ಸ್ಫರ್ ಶೇ 2.1ರಷ್ಟು ಆಗಿರುವುದು ದಾಖಲಾಗಿದೆ. ಟ್ರಾನ್ಸಾಕ್ಷನ್ ಸಂಖ್ಯೆಯಲ್ಲಿ ಯುಪಿಐ ಪ್ರಾಬಲ್ಯ ಅಬಾಧಿತವಾಗಿದೆ. ಆದರೆ, ಡಿಜಿಟಲ್ ಪೇಮೆಂಟ್ ಮೌಲ್ಯದಲ್ಲಿ ಯುಪಿಐ ಪಾಲು ಶೇ. 9 ಮಾತ್ರವೇ. ಆರ್ಟಿಜಿಎಸ್ ಸಿಸ್ಟಂ ಶೇ. 69ರಷ್ಟು ಮೌಲ್ಯದ ವಹಿವಾಟುಗಳನ್ನು ಮಾಡಲು ಬಳಕೆಯಾಗಿದೆ.
ಇದನ್ನೂ ಓದಿ: ಒಂದೂವರೆ ಲಕ್ಷಕ್ಕಿಂತ ಹೆಚ್ಚು ಸಂಬಳ; ಸೇವಿಂಗ್ಸ್ ಶೂನ್ಯ; ಇವತ್ತಿನ ಸುಖ ಮುಖ್ಯವೋ, ಭವಿಷ್ಯದ ಸುಖ ಮುಖ್ಯವೋ? ನೀವೇನಂತೀರಿ?
ಸಣ್ಣ ಮೌಲ್ಯದ ವಹಿವಾಟುಗಳಿಗೆ ಯುಪಿಐ ಹೆಚ್ಚು ಬಳಕೆಯಲ್ಲಿದೆ. ಯುಪಿಐ ವಹಿವಾಟಿಗೆ ದೈನಿಂದಿನ ಮಿತಿ ಮತ್ತಿತರ ನಿರ್ಬಂಧಗಳಿರುವುದರ ಹಿನ್ನೆಲೆಯಲ್ಲಿ ಅಧಿಕ ಮೊತ್ತದ ಟ್ರಾನ್ಸಾಕ್ಷನ್ಗಳಿಗೆ ಯುಪಿಐ ಅನ್ನು ಬಳಕೆ ಮಾಡಲಾಗುವುದಿಲ್ಲ. 2 ಲಕ್ಷ ರೂಗೂ ಅಧಿಕ ಮೊತ್ತದ ಹಣ ಕಳುಹಿಸಲು ಆರ್ಟಿಜಿಎಸ್ ಅನ್ನೇ ಹೆಚ್ಚಾಗಿ ಬಳಸಲಾಗುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




