ಅಕ್ಟೋಬರ್ನಲ್ಲಿ 1.96 ಲಕ್ಷ ಕೋಟಿ ರೂ ಜಿಎಸ್ಟಿ ಸಂಗ್ರಹ; ರೀಫಂಡ್ಗಳಲ್ಲಿ ಶೇ. 39ರಷ್ಟು ಏರಿಕೆ
GST collections of Rs 1,95,936 crores in October 2025: ಭಾರತದಲ್ಲಿ ಸರಕು ಮತ್ತು ಸೇವಾ ತೆರಿಗೆ ಸಂಗ್ರಹ ಅಕ್ಟೋಬರ್ ತಿಂಗಳಲ್ಲಿ 1,95,936 ಕೋಟಿ ರೂ ಇದೆ. ಕಳೆದ ಬಾರಿಗಿಂತ ಈ ಸಲ ಶೇ. 4.6 ರಷ್ಟು ಹೆಚ್ಚು ಟ್ಯಾಕ್ಸ್ ಕಲೆಕ್ಷನ್ ಆಗಿದೆ. ಆದರೆ, ರೀಫಂಡ್ ಪ್ರಮಾಣ ಶೇ. 39ರಷ್ಟು ಹೆಚ್ಚಾಗಿದೆ. ಇದರಿಂದಾಗಿ ನಿವ್ವಳ ಜಿಎಸ್ಟಿ ಸಂಗ್ರಹದಲ್ಲಿ ಏರಿಕೆ ಆಗಿರುವುದು ಶೇ. 1ಕ್ಕಿಂತಲೂ ಕಡಿಮೆ ಎನ್ನಲಾಗಿದೆ.

ನವದೆಹಲಿ, ನವೆಂಬರ್ 2: ಅಕ್ಟೋಬರ್ ತಿಂಗಳ ಜಿಎಸ್ಟಿ ಸಂಗ್ರಹ (Gross GST collections) ಶೇ. 4.6ರಷ್ಟು ಹೆಚ್ಚಿದೆ. ಹಿಂದಿನ ತಿಂಗಳಾದ ಸೆಪ್ಟೆಂಬರ್ನಲ್ಲಿ ಸರ್ಕಾರಕ್ಕೆ 1,87,346 ಕೋಟಿ ರೂ ಜಿಎಸ್ಟಿ ಸಿಕ್ಕಿತ್ತು. ಅಕ್ಟೋಬರ್ ತಿಂಗಳಲ್ಲಿ ಇದು 1,95,936 ಕೋಟಿ ರೂಗೆ ಏರಿದೆ. ಸರ್ಕಾರ ಬಿಡುಗಡೆ ಮಾಡಿದ ಅಧಿಕೃತ ದತ್ತಾಂಶದ ಪ್ರಕಾರ ದೇಶೀಯವಾಗಿ ಸಂಗ್ರಹವಾದ ಆದಾಯ (domestic gst revenue) ಶೇ. 2ರಷ್ಟು ಹೆಚ್ಚಾದರೆ, ಆಮದುಗಳಿಂದ ಬರುವ ತೆರಿಗೆ ಆದಾಯದಲ್ಲಿ (tax from imports) ಶೇ. 12.84ರಷ್ಟು ಏರಿದೆ.
ಈ ಬಾರಿ ಜಿಎಸ್ಟಿ ರೀಫಂಡ್ಗಳು 26,934 ಕೋಟಿ ರೂನಷ್ಟಿದೆ. ಕಳೆದ ತಿಂಗಳಿಗೆ ಹೋಲಿಸಿದರೆ ರೀಫಂಡ್ ಶೇ. 39.6ರಷ್ಟು ಏರಿದೆ. ದೇಶೀಯವಾಗಿ ಸಂಗ್ರಹವಾದ ತೆರಿಗೆ ಆದಾಯ 1.45 ಲಕ್ಷ ಕೋಟಿ ರೂ, ಆಮದುಗಳ ತೆರಿಗೆಗಳಿಂದ ಬಂದ ಆದಾಯ 50,884 ಕೋಟಿ ರೂ ಇದೆ. ಈ ಒಟ್ಟು ತೆರಿಗೆ ಸಂಗ್ರಹದಿಂದ 26,934 ಕೋಟಿ ರೂ ರೀಫಂಡ್ಗಳನ್ನು ಕಳೆದು ಉಳಿಯುವ ನಿವ್ವಳ ಜಿಎಸ್ಟಿ ಆದಾಯ 1.69 ಲಕ್ಷ ಕೋಟಿ ರೂನಷ್ಟು ಇದೆ. ಈ ನಿವ್ವಳ ಆದಾಯದಲ್ಲಿ ಏರಿಕೆ ಆಗಿರುವುದು 0.6 ಪ್ರತಿಶತ ಮಾತ್ರವೇ.
ಇದನ್ನೂ ಓದಿ: ಆಧಾರ್ನಿಂದ ಬ್ಯಾಂಕ್ ವಹಿವಾಟು ವರೆಗೆ: ಗಮನಿಸಿ, ಈ 7 ನಿಯಮಗಳು ಇಂದಿನಿಂದ ಬದಲಾಗಿವೆ
2025ರ ಏಪ್ರಿಲ್ನಿಂದ ಅಕ್ಟೋಬರ್ವರೆಗಿನ ಏಳು ತಿಂಗಳ ಅವಧಿಯಲ್ಲಿ ಜಿಎಸ್ಟಿ ಆದಾಯ 13.89 ಲಕ್ಷ ಕೋಟಿ ರೂ ಸಿಕ್ಕಿದೆ. ಕಳೆದ ವರ್ಷದಲ್ಲಿ ಇದೇ ಅವಧಿಯಲ್ಲಿ 12.74 ಲಕ್ಷ ಕೋಟಿ ರೂ ತೆರಿಗೆ ಆದಾಯ ಸಿಕ್ಕಿತ್ತು. ಈ ಬಾರಿ ಇದರಲ್ಲಿ ಶೇ 9ರಷ್ಟು ಹೆಚ್ಚಳ ಆಗಿದೆ.
ಹೆಚ್ಚು ತೆರಿಗೆ ಸಂಗ್ರಹ ಜಿಎಸ್ಟಿ ಕಡಿತದ ಪರಿಣಾಮವಾ?
ಸರ್ಕಾರ ಇತ್ತೀಚೆಗೆ ಜಿಎಸ್ಟಿ ದರಗಳನ್ನು ಕಡಿಮೆ ಮಾಡಿದ್ದು ಒಟ್ಟಾರೆ ವಹಿವಾಟುಗಳನ್ನು ಹೆಚ್ಚಿಸಿ, ಜಿಎಸ್ಟಿ ಸಂಗ್ರಹ ಏರುವಂತೆ ಮಾಡಲು ಸಹಾಯವಾಗುವಂತೆ ಮಾಡುತ್ತದೆ ಎಂದು ಹಲವರು ನಿರೀಕ್ಷಿಸಿದ್ದರು. ಅದರಂತೆ ಈ ಬಾರಿ ಹೆಚ್ಚು ತೆರಿಗೆ ಸಂಗ್ರಹವಾಗಿದೆ. ಕೆಪಿಎಂಜಿ ಸಂಸ್ಥೆಯ ಪರೋಕ್ಷ ತೆರಿಗೆ ವಿಭಾಗದ ಮುಖ್ಯಸ್ಥ ಅಭಿಷೇಕ್ ಜೈನ್ ಕೂಡ ಈ ಅನಿಸಿಕೆಯನ್ನು ಪುಷ್ಟೀಕರಿಸಿದ್ದಾರೆ.
ಇದನ್ನೂ ಓದಿ: ಸಾಲ ಬಳಸಿ ಸಾಹುಕಾರರಾದವರಿದ್ದಾರೆ… ಒಳ್ಳೆ ಸಾಲ, ಕೆಟ್ಟ ಸಾಲ ಮಧ್ಯೆ ವ್ಯತ್ಯಾಸ ತಿಳಿದಿರಿ…
ಪ್ರಬಲ ಹಬ್ಬದ ಸೀಸನ್, ಅಧಿಕ ಬೇಡಿಕೆ ಮತ್ತು ಹೊಸ ಟ್ಯಾಕ್ಸ್ ರಚನೆಯನ್ನು ಉದ್ಯಮಗಳು ಅಳವಡಿಸಿಕೊಂಡಿದ್ದರಿಂದ ಜಿಎಸ್ಟಿ ಸಂಗ್ರಹ ಏರಲು ಕಾರಣವಾಗಿರಬಹುದು. ಅನುಭೋಗ ಮತ್ತು ಅನುಸರಣೆ ಎರಡೂ ಒಂದೇ ದಿಕ್ಕಿನಲ್ಲಿ ಸಾಗುತ್ತಿರುವುದನ್ನು ಇದು ತೋರಿಸುತ್ತದೆ ಎಂದು ಅಭಿಷೇಕ್ ಜೈನ್ ಹೇಳುತ್ತಾರೆ.
ಡುಲೋಯಿಟ್ ಇಂಡಿಯಾದ (Deloitte India) ಪಾರ್ಟ್ನರ್ ಮಹೇಶ್ ಜೈಸಿಂಗ್ ಕೂಡ ಈ ಅನಿಸಿಕೆಯನ್ನು ಪುನರುಚ್ಚರಿಸಿದ್ದಾರೆ. ಜಿಎಸ್ಟಿ ಟ್ಯಾಕ್ಸ್ ವ್ಯವಸ್ಥೆಯಲ್ಲಿ ಸುಧಾರಣೆ ತಂದಿದ್ದರ ಫಲ ಇದು ಎಂದಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




