AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜೇನುತುಪ್ಪಗೆ ದೊಡ್ಡ ಬೇಡಿಕೆ; ಜೇನುಸಾಕಣೆಗೆ ಕೇಂದ್ರದಿಂದ ಉತ್ತೇಜನ; ‘ಸಿಹಿ ಕ್ರಾಂತಿ’ ಹಾದಿಯಲ್ಲಿ ಭಾರತ

National Beekeeping and Honey Mission (NBHM): ಜೇನುಕೃಷಿಯಿಂದ ಈಗ ಕೃಷಿ ಕ್ಷೇತ್ರದಲ್ಲಿ ಹಲವು ರೀತಿಯ ಪ್ರಯೋಜನೆಗಳು ಆಗುತ್ತಿವೆ. ಜೇನುಸಾಕಣೆಯಿಂದ ರೈತರ ಬೆಳೆಗಳ ಇಳುವರಿ ಹೆಚ್ಚುತ್ತಿದೆ. ಇದು ಉಪಕಸುಬು ಮಾತ್ರವಲ್ಲ, ಹಲವರಿಗೆ ಪ್ರಧಾನ ಕಸುಬೇ ಆಗಿದೆ. ಜಮೀನು ಇಲ್ಲದ ಜನರೂ ಕೂಡ ಜೇನುಸಾಕಣೆ ಮಾಡಿ ಆದಾಯ ಮಾಡಿಕೊಳ್ಳಬಹುದು. ಸರ್ಕಾರ ಕೂಡ ಜೇನುಸಾಕಣೆಗೆ ಉತ್ತೇಜಿಸುತ್ತಿದೆ.

ಜೇನುತುಪ್ಪಗೆ ದೊಡ್ಡ ಬೇಡಿಕೆ; ಜೇನುಸಾಕಣೆಗೆ ಕೇಂದ್ರದಿಂದ ಉತ್ತೇಜನ; ‘ಸಿಹಿ ಕ್ರಾಂತಿ’ ಹಾದಿಯಲ್ಲಿ ಭಾರತ
ಜೇನು
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 02, 2025 | 6:10 PM

Share

ನವದೆಹಲಿ, ನವೆಂಬರ್ 2: ದೇಶ ವಿದೇಶಗಳಲ್ಲಿ ಜೇನುತುಪ್ಪಗೆ ಬೇಡಿಕೆ ಹೆಚ್ಚುತ್ತಿದೆ. ಉತ್ಪಾದನೆಯಾಗುತ್ತಿರುವುದಕ್ಕಿಂತ ಬೇಡಿಕೆ ಹೆಚ್ಚಿರುವುದರಿಂದ ಜೇನುಸಾಕಣೆ ಈಗ ಬಹಳ ಲಾಭದಾಯಕ ಕಸುಬಾಗುತ್ತಿದೆ. ಜೇನುತುಪ್ಪ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಲು ಗುರಿ ಹೊಂದಿರುವ ಕೇಂದ್ರ ಸರ್ಕಾರ ಈ ನಿಟ್ಟಿನಲ್ಲಿ ವೈಜ್ಞಾನಿಕ ವಿಧಾನದಲ್ಲಿ ಜೇನುಸಾಕಣೆಗೆ ಉತ್ತೇಜಿಸಲು ನ್ಯಾಷನಲ್ ಬೀಕೀಪಿಂಗ್ ಅಂಡ್ ಹನಿ ಮಿಷನ್ (NBHM – National Beekeeping and Honey Mission)) ಅನ್ನು ನಡೆಸುತ್ತಿದೆ. ರಾಷ್ಟ್ರೀಯ ಜೇನು ಮಂಡಳಿ NBB- National Bee Board)) ಮೂಲಕ 2020-21ರಲ್ಲಿ ರಾಷ್ಟ್ರೀಯ ಜೇನುಸಾಕಣೆ ಮಿಷನ್ (ಎನ್​ಬಿಎಚ್​ಎಂ) ಅನ್ನು 500 ಕೋಟಿ ರೂ ಬಜೆಟ್​ನಲ್ಲಿ ಮೂರು ವರ್ಷಗಳಿಗೆ ಆರಂಭಿಸಲಾಗಿತ್ತು. ನಂತರ ಇನ್ನೂ ಮೂರು ವರ್ಷ ವಿಸ್ತರಿಸಲಾಗಿದೆ. ಈ ಸ್ಕೀಮ್ 2025-26ರವರೆಗೂ ಇರುತ್ತದೆ. ಅಂದರೆ, 2026ರ ಮಾರ್ಚ್ 31ರವರೆಗೂ ಜೇನುಸಾಕಣೆ ಯೋಜನೆ ಚಾಲನೆಯಲ್ಲಿ ಇರಲಿದೆ.

ಜೇನುಸಾಕಣೆಯಿಂದ ಸಿಹಿ ಕ್ರಾಂತಿ ಜೊತೆಗೆ ಕೃಷಿ ಕ್ಷೇತ್ರಕ್ಕೂ ಅನುಕೂಲ

ಜೇನುಹುಳುಗಳು ಪರಾಗಸ್ಪರ್ಶ ಪ್ರಕ್ರಿಯೆ ಮೂಲಕ ಬೆಳೆಗಳ ಇಳುವರಿ ಹೆಚ್ಚಿಸಲು ನೆರವಾಗುತ್ತವೆ. ಹೀಗಾಗಿ, ಜೇನ್ನೊಣಗಳು ರೈತಸ್ನೇಹಿ ಕ್ರಿಮಿಗಳೆನಿಸಿವೆ. ಜೇನುಸಾಕಣೆಯು ಸಾಕಷ್ಟು ಮಂದಿಗೆ ಉಪಕಸುಬಾಗಿದೆ. ರೈತರು ಹಾಗೂ ಜಮೀನು ಇಲ್ಲದ ಕೃಷಿ ಕಾರ್ಮಿಕರಿಗೆ ಈಗ ಇದು ಪ್ರಧಾನ ಕಸುಬುಗಳಲ್ಲಿ ಒಂದಾಗಿದೆ. ಜೇನುಹುಳುಗಳಿಂದ ಸಿಗುವ ಜೇನುತುಪ್ಪ, ಹಾಗೂ ಪ್ರೊಪೋಲಿಸ್ ಅಂಟು, ಜೇನು ವಿಷ, ರಾಯಲ್ ಜೆಲ್ಲಿ ಇತ್ಯಾದಿ ಜೇನುಗೂಡು ಉತ್ಪನ್ನಗಳನ್ನೂ ರಫ್ತು ಮಾಡಿ ಆದಾಯ ಗಳಿಸುವ ಅವಕಾಶ ಇದೆ.

ಇದನ್ನೂ ಓದಿ: ಅಕ್ಟೋಬರ್​ನಲ್ಲಿ 1.96 ಲಕ್ಷ ಕೋಟಿ ರೂ ಜಿಎಸ್​ಟಿ ಸಂಗ್ರಹ; ರೀಫಂಡ್​ಗಳಲ್ಲಿ ಶೇ. 39ರಷ್ಟು ಏರಿಕೆ

ಭಾರತದಲ್ಲಿ ಜೇನುಸಾಕಣೆಗೆ ಅನುಕೂಲವಾಗಿರುವಂತಹ ವೈವಿಧ್ಯಮಯ ಕೃಷಿ ವಾತಾವರಣ ಇದೆ. ಇದು ಗ್ರಾಮೀಣ ಭಾಗದ ಜನರ ಬದುಕಿಗೆ ಆಧಾರವಾಗುವುದರ ಜೊತೆ ಜೇನು ಉತ್ಪನ್ನಗಳಲ್ಲಿ ಸ್ವಾವಲಂಬನೆ ಸಾಧಿಸಲು ಬೇಕಾದ ಸಾಮರ್ಥ್ಯ ಇರುವುದನ್ನು ಸರ್ಕಾರ ಕಂಡುಕೊಂಡಿದೆ. ಈ ಕಾರಣಕ್ಕೆ ರಾಷ್ಟ್ರೀಯ ಜೇನುಸಾಕಣೆ ಯೋಜನೆ (ಎನ್​ಬಿಎಚ್​ಎಂ) ಅನ್ನು ಸರ್ಕಾರ ಹಮ್ಮಿಕೊಂಡಿದೆ.

ಈ ಜೇನುಸಾಕಣೆ ಯೋಜನೆಯನ್ನು ಮೂರು ಉಪ ಮಿಷನ್​ಗಳ ಮೂಲಕ ಜಾರಿ ಮಾಡಲಾಗುತ್ತಿದೆ. ಮೊದಲ ಮಿಷನ್​ನಲ್ಲಿ ವೈಜ್ಞಾನಿಕವಾಗಿ ಜೇನುಸಾಕಣೆ ಮಾಡುವ ಮೂಲಕ ವಿವಿಧ ಬೆಳೆಗಳ ಉತ್ಪಾದನೆಗೆ ಪುಷ್ಟಿ ಕೊಡಲಾಗುತ್ತದೆ.

ಎರಡನೇ ಮಿಷನ್​ನಲ್ಲಿ ಜೇನು ಉತ್ಪನ್ನಗಳ ಸಂಗ್ರಹ, ಸಂಸ್ಕರಣೆ, ಮಾರಾಟ, ಮೌಲ್ ವರ್ಧನೆ ಇತ್ಯಾದಿ ಕಾರ್ಯಗಳತ್ತ ಗಮನ ನೀಡಲಾಗುತ್ತದೆ. ಇದಕ್ಕೆ ಬೇಕಾದ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಲು ಆದ್ಯತೆ ಕೊಡಲಾಗುತ್ತದೆ.

ಇದನ್ನೂ ಓದಿ: ಸಾಲ ಬಳಸಿ ಸಾಹುಕಾರರಾದವರಿದ್ದಾರೆ… ಒಳ್ಳೆ ಸಾಲ, ಕೆಟ್ಟ ಸಾಲ ಮಧ್ಯೆ ವ್ಯತ್ಯಾಸ ತಿಳಿದಿರಿ…

ಮೂರನೇ ಮಿನಿ ಮಿಷನ್​ನಲ್ಲಿ ವಿವಿಧ ಪ್ರದೇಶಗಳ ವಾತಾವರಣ ಮತ್ತು ಸಾಮಾಜಿಕ ಆರ್ಥಿಕ ಪರಿಸ್ಥಿತಿಯನ್ನು ಗಣನೆಗೆ ತೆಗೆದುಕೊಂಡು ಸೂಕ್ತ ವಿಧಾನದ ಜೇನುಸಾಕಣೆಗೆ ಬೇಕಾದ ಸಂಶೋಧನೆ ಮತ್ತು ತಂತ್ರಜ್ಞಾನ ಅಭಿವೃದ್ಧಿಪಡಿಸಲು ಒತ್ತುಕೊಡಲಾಗುತ್ತದೆ.

ಜೇನು ರಫ್ತಿನಲ್ಲಿ ಭಾರತ ನಂ. 1

ಭಾರತವು ಈಗ ಪ್ರಮುಖ ಜೇನು ರಫ್ತುದಾರ ದೇಶವೆನಿಸಿದೆ. ಅತಿಹೆಚ್ಚು ಜೇನು ರಫ್ತು ಮಾಡುವ ದೇಶಗಳ ಪಟ್ಟಿಯಲ್ಲಿ 2020ರಲ್ಲಿ ಭಾರತ 9ನೇ ಸ್ಥಾನದಲ್ಲಿ ಇತ್ತು. ಈಗ ಅದು ಎರಡನೇ ಸ್ಥಾನಕ್ಕೆ ಏರಿದೆ. 2024ರಲ್ಲಿ ಭಾರತವು 1.4 ಲಕ್ಷ ಮೆಟ್ರಿಕ್ ಟನ್​ಗಳಷ್ಟು ನೈಸರ್ಗಿಕ ಜೇನುತುಪ್ಪ ಉತ್ಪಾದಿಸಿದೆ. 2023-24ರಲ್ಲಿ 1.07 ಲಕ್ಷ ಮೆಟ್ರಿಕ್ ಟನ್​ಗಳಷ್ಟು ಜೇನುತುಪ್ಪವನ್ನು ರಫ್ತು ಮಾಡಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ