ನವದೆಹಲಿ: ನಾಳೆ (ಜೂನ್ 28) ಮುಸ್ಲಿಮರ ಪವಿತ್ರ ಈದ್ ಉಲ್ ಜುಹಾ (Eid Ul-Zuha) ಇರುವುದರಿಂದ ದೇಶದ ಬಹುತೇಕ ಎಲ್ಲೆಡೆ ರಜೆ ಇದೆ. ಬಕ್ರೀದ್ ಪ್ರಯುಕ್ತ ಭಾರತದ ಷೇರು ಮಾರುಕಟ್ಟೆಗಳಿಗೂ ಬುಧವಾರ ರಜೆ ನಿಗದಿಯಾಗಿತ್ತು. ಆದರೆ, ಇಂದು ಅಚಾನಕ್ಕಾಗಿ ರಜಾ ಪಟ್ಟಿಯಲ್ಲಿ ಬದಲಾವಣೆ ಮಾಡಲಾಗಿದ್ದು, ಜೂನ್ 28 ಬದಲು ಮರುದಿನ ರಜೆ ಕೊಡಲು ನಿರ್ಧರಿಸಲಾಗಿದೆ. ಅಂದರೆ ಜೂನ್ 29, ಗುರುವಾದಂದು ಷೇರುಪೇಟೆಗಳು ಬಂದ್ ಆಗಿರುತ್ತವೆ. ಬುಧವಾರ ಯಥಾ ಪ್ರಕಾರ ಕಾರ್ಯನಿರ್ವಹಿಸಲಿದೆ. ಬಾಂಬೆ ಸ್ಟಾಕ್ ಎಕ್ಸ್ಚೇಂಜ್ (BSE), ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ (NSE) ಮತ್ತಿತರ ಷೇರು ಎಕ್ಸ್ಜೇಂಜ್ ಕೇಂದ್ರಗಳಿಗೆ (Stock Exchange Markets) ರಜೆ ಇದೆ. ವಿದೇಶೀ ಕರೆನ್ಸಿ ವಿನಿಮಯ ಮಾರುಕಟ್ಟೆಯೂ ಇರುವುದಿಲ್ಲ. ಜೂನ್ 29ರಂದು ಯಾವುದೇ ಷೇರು ವಹಿವಾಟು, ಬಾಂಡ್ ಮಾರಾಟ, ಫಾರೆಕ್ ವಹಿವಾಟುಗಳು ನಡೆಯುವುದಿಲ್ಲ. ನಾಳೆ ಬುಧವಾರ ಸಂಜೆ ಬಂದ್ ಆಗುವ ಷೇರುಪೇಟೆ ಮತ್ತೆ ಬಾಗಿಲು ತೆರೆಯುವುದು ಜೂನ್ 30ರ ಬೆಳಗ್ಗೆಯೇ.
ಬಹು ಸರಕು ವಿನಿಯಮ ಮಾರುಕಟ್ಟೆ ಎನಿಸಿದ ಎಂಸಿಎಕ್ಸ್ (MCX- Multi Commodity Exchange) ಜೂನ್ 29ರಂದು ಸಂಜೆಯವರೆಗೂ ಬಂದ್ ಆಗಿರುತ್ತದೆ. ಸಂಜೆ 5ರ ಬಳಿಕ ಮಧ್ಯರಾತ್ರಿಯವರೆಗೂ ಅದು ತೆರೆದಿರುತ್ತದೆ. ಕಮಾಡಿಟಿ ಡಿರೈವೇಟಿವ್ ಸೆಗ್ಮೆಂಟ್ನಲ್ಲೂ ಸಂಜೆಯ ಬಳಿಕ ವಹಿವಾಟು ಇರುತ್ತದೆ.
ಜೂನ್ 27, ಮಂಗಳವಾರದಂದು ಭಾರತದ ಬಿಎಸ್ಇ ಮತ್ತು ಎನ್ಎಸ್ಇ ಷೇರು ವಿನಿಮಯ ಕೇಂದ್ರಗಳು ಭರ್ಜರಿ ವಹಿವಾಟು ಕಾಣುತ್ತಿವೆ. ಸೆನ್ಸೆಕ್ಸ್ ಬೆಳ್ಳಂಬೆಳಗ್ಗೆಯೇ 100 ಅಂಕಗಳನ್ನು ಹೆಚ್ಚಿಸಿಕೊಂಡಿದೆ. ಎನ್ಎಸ್ಇ ನಿಫ್ಟಿ ಸೂಚ್ಯಂಕ ಮತ್ತೆ 18,700 ಅಂಕಗಳ ಮಟ್ಟಕ್ಕಿಂತ ಮೇಲೇರಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ