Karnataka Budget 2022: ಕೊವಿಡ್-19 ಅಲೆಯಲ್ಲಿ ಏರುತ್ತಿರುವ ಕರ್ನಾಟಕದ ಸಾಲ; ಇಲ್ಲಿದೆ ಈ ಹಿಂದಿನ ಬಜೆಟ್ ಚಿತ್ರಣ

| Updated By: Srinivas Mata

Updated on: Mar 03, 2022 | 11:17 AM

ಬಜೆಟ್ 2022-23ರ ಹಿನ್ನೆಲೆಯಲ್ಲಿ ಕರ್ನಾಟಕ ಬಜೆಟ್​ನ ಈ ಹಿಂದಿನ ಟ್ರೆಂಡ್​ ಹೇಗಿತ್ತು ಎಂಬುದರ ಬಗ್ಗೆ ಒಂದು ಚಿತ್ರಣ ನಿಮ್ಮೆದುರು ಅಂಕಿ- ಅಂಶಗಳ ಸಹಿತ ಇಡಲಾಗುತ್ತಿದೆ.

Karnataka Budget 2022: ಕೊವಿಡ್-19 ಅಲೆಯಲ್ಲಿ ಏರುತ್ತಿರುವ ಕರ್ನಾಟಕದ ಸಾಲ; ಇಲ್ಲಿದೆ ಈ ಹಿಂದಿನ ಬಜೆಟ್ ಚಿತ್ರಣ
ವಿಧಾನಸೌಧ
Follow us on

ಕರ್ನಾಟಕ ಬಜೆಟ್ 2022-23ರ (Karnataka Budget 2022) ಮಂಡನೆಗೆ ಎದುರು ನೋಡುತ್ತಿದ್ದೇವೆ. ಈ ವರೆಗೆ ಕರ್ನಾಟಕ ರಾಜ್ಯದ ಆದಾಯ ಮತ್ತು ವ್ಯಯ ಹೇಗಿತ್ತು ಎಂದು ಪರಿಶೀಲನೆ ಮಾಡುವ ಸಮಯ ಇದು. ಈ ಹಿಂದಿನ ಡೇಟಾ ಟ್ರೆಂಡ್​ಗಳನ್ನು ಆಧಾರವಾಗಿಟ್ಟುಕೊಂಡು, ರಾಜ್ಯ ಎತ್ತ ಸಾಗಿದೆ ಎಂದು ಗಮನಿಸುವ ಕಾಲ ಇದು. ಕಳೆದ ಕೆಲವು ಸಮಯದಿಂದ ಕೊರೊನಾ ಹೊಡೆತಕ್ಕೆ ಸಿಲುಕಿ, ದೇಶದ ಇತರ ರಾಜ್ಯಗಳು ಹೇಗೆ ಸಂಕಷ್ಟಕ್ಕೆ ಸಿಲುಕಿವೆಯೋ ಅದೇ ಸ್ಥಿತಿ ಕರ್ನಾಟಕಕ್ಕೂ ಇದೆ. ಕೆಲವು ತಿಂಗಳ ಕಾಲ ಆರ್ಥಿಕ ಚಟುವಟಿಕೆ ಸ್ಥಗಿತಗೊಂಡು, ಹಿನ್ನಡೆ ಅನುಭವಿಸಿದ್ದ ಆರ್ಥಿಕತೆಯು ದೊಡ್ಡ ಮಟ್ಟದಲ್ಲಿ ಚೇತರಿಕೆಯನ್ನು ಕಾಣುತ್ತಿದೆ. ಅಂದ ಹಾಗೆ ಈ ಬಾರಿ ಬಜೆಟ್​ ಮಂಡಿಸುತ್ತಿರುವವರು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ. ಕೋಟ್ಯಂತರ ಜನರ ನಿರೀಕ್ಷೆಯನ್ನು ಮುಖ್ಯಮಂತ್ರಿ ಹೇಗೆ ಪೂರ್ಣಗೊಳಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ಕಂದಾಯ ಚಿತ್ರಣ
ರಾಜ್ಯದ ಹಣಕಾಸು ಸ್ಥಿತಿಯನ್ನು ಓಂ ಪ್ರಥಮ ಎಂಬಂತೆ ನೋಡಲು ಆರಂಭಿಸುವುದೇ ಕಂದಾಯದಿಂದ. 2015-16ರಲ್ಲಿ ಕರ್ನಾಟಕದ ವಾಸ್ತವ ಕಂದಾಯ ರಸೀದಿ 1.19 ಲಕ್ಷ ಕೋಟಿ ರೂಪಾಯಿ. ನೆನಪಿಡಿ, ಇದು ಕಂದಾಯ ರಸೀದಿ. 2019- 20ರಲ್ಲಿ ಈ ಸಂಖ್ಯೆಯ ಅಂದಾಜು (ಬಜೆಟ್) 1.82 ಲಕ್ಷ ಕೋಟಿಗೆ ಏರಿತು. ಆದರೆ ವಾಸ್ತವದಲ್ಲಿ ಆದ ಕಂದಾಯ ರಸೀದಿ 1.77 ಲಕ್ಷ ಕೋಟಿ ರೂಪಾಯಿ. 2020-21ರಲ್ಲಿ ಕಂದಾಯ ರಸೀದಿ ಸರ್ಕಾರಕ್ಕೆ ಬಂದಿದ್ದು 1.59 ಲಕ್ಷ ಕೋಟಿ ರೂಪಾಯಿ. ಆದರೆ ಬಜೆಟ್​ನಲ್ಲಿ ಅಂದಾಜು ಮಾಡಿದ್ದು 1.80 ಲಕ್ಷ ಕೋಟಿ ರೂಪಾಯಿ. ಅಲ್ಲಿಗೆ ಕೊರೊನಾ ಮೊದಲ ಅಲೆಗೆ ಆದಾಯದಲ್ಲಿ ಶೇ 11ರಷ್ಟು ಇಳಿಕೆ ಆಗಿತ್ತು. ಇನ್ನು ಸದ್ಯದ ಹಣಕಾಸು ವರ್ಷವಾದ 2021-22ಕ್ಕೆ ಆದಾಯವನ್ನು ಬಜೆಟ್ ಮಾಡಿರುವುದು 1.72 ಲಕ್ಷ ಕೋಟಿ ರೂಪಾಯಿ.

ಕಂದಾಯ ವೆಚ್ಚ
2015-16ರಲ್ಲಿ ಕರ್ನಾಟಕದ ವಾಸ್ತವ ಕಂದಾಯ ವೆಚ್ಚ 1.17 ಲಕ್ಷ ಕೋಟಿ ರೂಪಾಯಿ ಇತ್ತು. ಇನ್ನು ಹಣಕಾಸು ವರ್ಷ 2019-20ಕ್ಕೆ ಪರಿಷ್ಕೃತ ಕಂದಾಯ ವೆಚ್ಚ 1.76 ಲಕ್ಷ ಕೋಟಿ ರೂಪಾಯಿ. ಇದು ಅತ್ಯುತ್ತಮ ಹಣಕಾಸು ವರ್ಷಗಳಲ್ಲಿ ಇಂದು. ಏಕೆಂದರೆ, ಬಜೆಟ್​ನಲ್ಲಿ ಅಂದಾಜು ಮಾಡಿದ್ದ 1.81 ಲಕ್ಷ ಕೋಟಿಗಿಂತ ಕಡಿಮೆ ಆಗಿತ್ತು. ಹಾಗೆ ನೋಡಿದರೆ ಶೇ 2.6ರಷ್ಟು ಇಳಿಕೆ ಕಂಡಿತ್ತು. 2020-21ರ ಹಣಕಾಸು ವರ್ಷಕ್ಕೆ ಬಜೆಟ್​ನಲ್ಲಿ ಅಂದಾಜು ಮಾಡಿದ್ದ ಕಂದಾಯ ವೆಚ್ಚ 1.79 ಲಕ್ಷ ಕೋಟಿ ರೂಪಾಯಿ. ಪರಿಷ್ಕೃತ ಕಂದಾಯ ವೆಚ್ಚ ಸಹ ಈ ಸಂಖ್ಯೆಗೆ ಹೊಂದಾಣಿಕೆ ಆಗಿತ್ತು. ಪ್ರಸಕ್ತ ಹಣಕಾಸು ವರ್ಷವಾದ 2021-22ಕ್ಕೆ ರಾಜ್ಯ ಸರ್ಕಾರ 1.87 ಲಕ್ಷ ಕೋಟಿ ರೂಪಾಯಿ ಕಂದಾಯ ವೆಚ್ಚವನ್ನು ಅಂದಾಜಿಸಿದೆ. ಇದು ಶೇ 4ರಷ್ಟು ಹೆಚ್ಚಳ ಆಗುತ್ತದೆ.

ಬಂಡವಾಳ ವೆಚ್ಚ
ಸಾಮಾನ್ಯವಾಗಿ ಬಂಡವಾಳ ವೆಚ್ಚವನ್ನು ರಾಜ್ಯ ಸರ್ಕಾರ ಹೆಚ್ಚಿಗೆ ಮಾಡಬೇಕು. ರಸ್ತೆ, ಸೇತುವೆ, ಮೂಲಸೌಕರ್ಯ ಇಂಥವುಗಳಿಗೆ ಹೆಚ್ಚಿನ ಹಣ ಇಡಬೇಕು. ವಿಪರ್ಯಾಸ ಏನೆಂದರೆ, ಕಂದಾಯ ವೆಚ್ಚ ಹೆಚ್ಚಾಗುತ್ತಿದೆಯೇ ವಿನಾ ಬಂಡವಾಳ ವೆಚ್ಚಕ್ಕೆ ಹೆಚ್ಚು ನೀಡುತ್ತಿಲ್ಲ. 2015-16ನೇ ಸಾಲಿನಲ್ಲಿ ಆದ ವಾಸ್ತವ ಬಂಡವಾಳ ವೆಚ್ಚ 25,480 ಕೋಟಿ ರೂಪಾಯಿ, ಇನ್ನು 2020-21ರಲ್ಲಿ ಬಜೆಟ್ ಮಾಡಿದ ಬಂಡವಾಳ ವೆಚ್ಚ ಕೇವಲ 58,117 ಕೋಟಿ ರೂಪಾಯಿ ಮಾತ್ರ. ಇನ್ನೂ ಬೇಸರದ ವಿಚಾರ ಏನೆಂದರೆ, 2020-21ರ ಪರಿಷ್ಕೃತ ಅಂದಾಜು ಮೊತ್ತ 50,730 ಕೋಟಿ ರೂಪಾಯಿಗೆ ಹೋಲಿಸಿದರೆ 2021-22ಕ್ಕೆ ಬಜೆಟ್ ಆದ ಬಂಡವಾಳ ವೆಚ್ಚ 58,800 ಕೋಟಿ, ಅಂದರೆ ಶೇ 9ರಷ್ಟು ಹೆಚ್ಚಳ ಮಾತ್ರ.

2020-21ರ ಬಜೆಟ್​ನಲ್ಲಿ ಅಂದಾಜಿಸಿದ ಬಂಡವಾಳ ವೆಚ್ಚ 58,117 ಕೋಟಿ ರೂಪಾಯಿಯನ್ನು ಪರಿಷ್ಕೃತಗೊಳಿಸಿ 50,730 ಕೋಟಿಗೆ ಇಳಿಸಿದ್ದು ಏಕೆ ಅಂತ ಹೇಳುವುದಕ್ಕೆ ವಿಶೇಷ ಬುದ್ಧಿವಂತಿಕೆ ಏನೂ ಬೇಡ. ಕೊವಿಡ್​-19 ಮೊದಲ ಅಲೆಯ ಕಾರಣ ನೀಡಿ, ಇಳಿಕೆ ಮಾಡಲಾಯಿತು. ಮತ್ತೆ ಇದರಿಂದಾಗಿ ಬಂಡವಾಳ ವೆಚ್ಚಕ್ಕಿಂತ ಕಂದಾಯ ವೆಚ್ಚವನ್ನು ಹೆಚ್ಚು ಮಾಡಲಾಯಿತು.

ಸಾಲ ಬೆಳೆದಿದೆ
ಕರ್ನಾಟಕ ರಾಜ್ಯದ ಸಾಲ ಪ್ರಮಾಣ ಬೆಳೆದಿರುವುದು ಗಮನಕ್ಕೆ ಬರುತ್ತದೆ. 2015-16ರಲ್ಲಿ 21,100 ಕೋಟಿ ರೂಪಾಯಿ ಸಮೀಪ ಇತ್ತು. ಹೆಚ್ಚಿನ ಸಮಸ್ಯೆ ಕಾರಣಕ್ಕೆ ಬಜೆಟ್ ಅಂದಾಜಿನ ಸಾಲ ಪ್ರಮಾಣವನ್ನು 53,000 ಕೋಟಿಗೆ ನಿಲ್ಲಿಸಲಾಯಿತು. ಆದರೆ 2020-21ನೇ ಸಾಲಿನಲ್ಲಿ ಕಂದಾಯ ರಸೀದಿಗೆ ಪೆಟ್ಟು ಬಿದ್ದಿದ್ದರಿಂದ ಹೆಚ್ಚು ಸಾಲ ಮಾಡಬೇಕಾಯಿತು. ಅದು 70,400 ಕೋಟಿ ರೂಪಾಯಿ ಸಮೀಪ ಬಂದು ನಿಂತಿತು. ಕೊವಿಡ್​-19 ಮೊದಲ ಅಲೆಯ ಹೊಡೆತ ಭಾರೀ ಗಟ್ಟಿಯಾಗಿಯೇ ಬಿದ್ದಿದ್ದರಿಂದ ಕಂದಾಯ ರಸೀದಿ ಕುಸಿತವಾಗಿ, ಸಾಲ ಮಾಡುವುದು ಅನಿವಾರ್ಯ ಎಂಬ ಸ್ಥಿತಿ ನಿರ್ಮಾಣವಾಗಿತ್ತು.

ಇದನ್ನೂ ಓದಿ: Budget 2022 Explainer: ಕೇಂದ್ರ ಬಜೆಟ್​ನಲ್ಲಿ ಘೋಷಣೆಯಾದ 5 ನದಿ ಜೋಡಣಾ ಯೋಜನೆಗಳಿವು, ಇದರಲ್ಲಿ 3 ಕರ್ನಾಟಕಕ್ಕೆ ಸಂಬಂಧಿಸಿದ್ದು