
ಯಾರನ್ನ ನೋಡಿದರೂ ಸಾಲ, ಎಲ್ಲಿ ನೋಡಿದರೂ ಬೆಲೆ ಏರಿಕೆ, ಇದು ದುಬಾರಿ ದುನಿಯಾ ಅನಿಸುತ್ತದೆ. ಸರ್ಕಾರ ಬೇಕಾದಷ್ಟು ನೋಟುಗಳನ್ನು ಮುದ್ರಿಸಿ ಅಗತ್ಯ ಇದ್ದವರಿಗೆ ಹಂಚಬಹುದಲ್ಲ, ಸರ್ಕಾರದ ಸಾಲವನ್ನೂ ತೀರಿಸಬಹುದಲ್ಲ ಎಂದು ಕೆಲವರಿಗಾದರೂ ಅನಿಸಿರಬಹುದು. ವಾಸ್ತವದಲ್ಲಿ, ಹಾಗೆ ಮಾಡಲು ಸಾಧ್ಯ ಇಲ್ಲ. ಒಂದೊಮ್ಮೆ ಹಾಗೆ ಮಾಡಿದರೆ ತನ್ನ ಕುತ್ತಿಗೆ ತಾನೇ ಕುಯ್ದುಕೊಂಡಂತೆ. ವೆನಿಜುವೆಲಾ, ಜಿಂಬಾಬ್ವೆ ಇತ್ಯಾದಿ ಕೆಲವಾರು ದೇಶಗಳು ಹೀಗೆ ಮಾಡಲು ಹೋಗಿ ಈಗಲೂ ಒದ್ದಾಡುತ್ತಿವೆ. ಸಾಲದ ಸುಳಿಗೆ ಸಿಲುಕಿರುವ ಪಾಕಿಸ್ತಾನ (Pakistan), ಶ್ರೀಲಂಕಾದಂತಹ ದೇಶಗಳು ಈ ದುಸ್ಸಾಹಸಕ್ಕೆ ಕೈಹಾಕಿಲ್ಲ. ಹೀಗೆ ಕರೆನ್ಸಿ ನೋಟುಗಳನ್ನು ಮನಬಂದಂತೆ ಪ್ರಿಂಟ್ ಮಾಡಲು ಆಗುವುದಿಲ್ಲ. ಅದಕ್ಕೆ ಒಂದು ಕ್ರಮ, ನೀತಿ, ನಿಯಮ, ಕಟ್ಟುಪಾಡುಗಳು ಇರುತ್ತವೆ.
ಯಾವುದೇ ಅರ್ಥವ್ಯವಸ್ಥೆಯಲ್ಲಿ ಹಣದ ಹರಿವು ಸಮರ್ಪಕವಾಗಿರಬೇಕು. ತೀರಾ ಹೆಚ್ಚಿರಬಾರದು, ತೀರಾ ಕಡಿಮೆ ಇರಬಾರದು. ಸರಕುಗಳ ಉತ್ಪಾದನೆಯ ಮೌಲ್ಯ ಅಥವಾ ಜಿಡಿಪಿಗೆ ಅನುಗುಣವಾಗಿ ಹಣದ ಸರಬರಾಜು ಇರುತ್ತದೆ. ಇದರಲ್ಲಿ ಏರುಪೇರಾದರೆ ಆಗ ಸರಕುಗಳ ಮೌಲ್ಯದಲ್ಲಿ ವೈಪರೀತ್ಯಗಳು ಕಾಣಿಸುತ್ತವೆ. ಹೆಚ್ಚು ಹಣವನ್ನು ಅರ್ಥವ್ಯವಸ್ಥೆಗೆ ತೂರಿಬಿಟ್ಟಾಗ ಸರಕುಗಳ ಬೆಲೆ ಹೆಚ್ಚುತ್ತದೆ. ಇದರಿಂದ ಹಣದುಬ್ಬರ ಅಧಿಕಗೊಳ್ಳುತ್ತದೆ.
ಉದಾಹರಣೆಗೆ, ಒಂದು ದೇಶದಲ್ಲಿ 100 ತೆಂಗಿನಕಾಯಿ ಸರಕುಗಳ ಉತ್ಪಾದನೆ ಆಗುತ್ತಿದೆ ಎಂದಿಟ್ಟುಕೊಳ್ಳಿ. ಅದನ್ನು ಖರೀದಿಸಲು 100 ರೂಪಾಯಿಯು ಚಲಾವಣೆಯಲ್ಲಿರುತ್ತದೆ ಎಂದು ಭಾವಿಸೋಣ. ಒಂದು ಕಾಯಿಗೆ ಒಂದು ರೂ ಬೆಲೆ ಇರುತ್ತದೆ. ಈಗ ನೀವೇನಾದರೂ 200 ರೂ ಅನ್ನು ವ್ಯವಸ್ಥೆಗೆ ಸೇರಿಸಿದಾಗ ಒಂದು ಕಾಯಿಗೆ ಹೆಚ್ಚು ಹಣ ಕೊಡಲು ಸಿದ್ಧರಿರುತ್ತೀರಿ. ಆಗ ಕಾಯಿ ಬೆಲೆ ಹೆಚ್ಚಾಗುತ್ತದೆ.
ಇದನ್ನೂ ಓದಿ: ಅಮೆರಿಕ ಏನೇ ಮಾಡಿದರೂ ಛಲ ಬಿಡದ ಚೀನಾ; ಇಯುವಿ ಮೆಷೀನ್ನ ಪ್ರೋಟೋಟೈಪ್ ತಯಾರು; ಮುಂದಿದೆ ಟೆಕ್ನಾಲಜಿ ಜಟಾಪಟಿ
ವೆನಿಜುವೆಲಾ, ಜಿಂಬಾಬ್ವೆ ಮೊದಲಾದ ಅನೇಕ ದೇಶಗಳು ಇಂಥ ಪ್ರಯೋಗಕ್ಕೆ ಕೈಹಾಕಿ ಸುಟ್ಟುಕೊಂಡಿವೆ. ಅಲ್ಲಿ ಒಂದು ರೊಟ್ಟಿ ಖರೀದಿಸಬೇಕೆಂದರೆ ಸಾವಿರಾರು ರುಪಾಯಿ ಕೊಡಬೇಕು. ಅಷ್ಟರಮಟ್ಟಿಗೆ ಹಣದ ಮೌಲ್ಯ ಕಡಿಮೆ ಆಗಿದೆ.
ಆರ್ಥಿಕತೆ ಬೆಳೆದಂತೆ ಚಲಾವಣೆಯ ಹಣವನ್ನೂ ಹೆಚ್ಚಿಸಬೇಕು. ಇಲ್ಲದಿದ್ದರೆ ಹಣ ಕುಸಿತ ಅಥವಾ ಡೀಫ್ಲೇಶನ್ ಸ್ಥಿತಿ ನಿರ್ಮಾಣ ಆಗುತ್ತದೆ. ಉದಾಹರಣೆಗೆ, ಒಂದು ದೇಶದ ಜಿಡಿಪಿ ಹೆಚ್ಚುತ್ತಿರುತ್ತದೆ. ಅಂದರೆ ಉತ್ಪಾದನೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತದೆ. ಆರ್ಥಿಕತೆಗೆ ಒಂದಿಷ್ಟು ಹಣದುಬ್ಬರವೂ ಬೇಕು. ಬ್ಯುಸಿನೆಸ್ಗಳು ಅಥವಾ ಉದ್ದಿಮೆಗಳು ತಮ್ಮ ಉತ್ಪನ್ನನ್ನು ಮಾರಿ ಲಾಭ ಗಳಿಸಬೇಕೆಂದರೆ ಹಣದುಬ್ಬರ ಅಥವಾ ಬೆಲೆ ಏರಿಕೆ ಅಗಲೇಬೇಕು. ಆದರೆ ಅದು ಮಿತಿಯಲ್ಲಿರಬೇಕು. ಹೀಗಾಗಿ, ಸರ್ಕಾರವು ಹಣದುಬ್ಬರಕ್ಕೆ ಟಾರ್ಗೆಟ್ ಫಿಕ್ಸ್ ಮಾಡುತ್ತದೆ. ಭಾರತ ಸರ್ಕಾರ ಸದ್ಯ ಶೇ. 4ರ ಹಣದುಬ್ಬರವನ್ನು ಟಾರ್ಗೆಟ್ ಆಗಿ ಮಾಡಿಕೊಂಡಿದೆ. ಅಷ್ಟಿದ್ದರೆ ಆರ್ಥಿಕತೆಯು ಸಮತೋಲನದಿಂದ ಸಾಗುತ್ತದೆ ಎಂಬುದು ಭಾವನೆ. ಇದನ್ನು ತಜ್ಞರಿರುವ ಸಮಿತಿಗಳು ನಿರ್ಧರಿಸುತ್ತವೆ.
ಈಗ ಜಿಡಿಪಿ ಬೆಳೆದಾಗ ಅದರ ಜೊತೆಗೆ ಹಣದುಬ್ಬರವನ್ನೂ ಸೇರಿಸಿದಾಗ ಉತ್ಪನ್ನಗಳು ಹಾಗೂ ಅದರ ಬೆಲೆ ಏರುತ್ತವೆ. ಅದಕ್ಕೆ ಅನುಗುಣವಾಗಿ ಹಣವೂ ಚಲಾವಣೆಯಲ್ಲಿ ಇರಬೇಕು. ಆಗ ಸರ್ಕಾರವು ಹೊಸ ಹಣದ ಹರಿವನ್ನು ಸೇರಿಸಬೇಕು. ಅದೂ ಜಿಡಿಪಿ ಹೆಚ್ಚಳ, ಹಣದುಬ್ಬರ ಇವೆಲ್ಲವನ್ನೂ ಲೆಕ್ಕಾಚಾರ ಮಾಡಿಯೇ ಹೆಚ್ಚುವರಿ ಹಣ ಬಿಡುಗಡೆ ಮಾಡಬೇಕಾಗುತ್ತದೆ.
ಇದನ್ನೂ ಓದಿ: ಮತ್ತೆ ವಿದೇಶದಲ್ಲಿ ಭಾರತದ ವಿರುದ್ಧ ರಾಹುಲ್ ಧ್ವನಿ; ಸತ್ಯ ಎಷ್ಟು, ಸುಳ್ಳೆಷ್ಟು?
ಒಂದು ದೇಶದಲ್ಲಿರುವ ಹಣವೆಲ್ಲವೂ ಕರೆನ್ಸಿ ರೂಪದಲ್ಲೇ ಇರಬೇಕೆಂದೇನಿಲ್ಲ. ಎಲೆಕ್ಟ್ರಾನಿಕ್ ರೂಪದಲ್ಲೂ ಇರುತ್ತದೆ. ಜನರ ಕ್ಯಾಷ್ ವಹಿವಾಟಿಗೆ ಅನುಕೂಲವಾಗಲೆಂದು ನೋಟುಗಳನ್ನು ಪ್ರಿಂಟ್ ಮಾಡಲಾಗುತ್ತದೆ. ಅರ್ಥ ವ್ಯವಸ್ಥೆಗೆ ಹೆಚ್ಚು ಹಣದ ಅಗತ್ಯ ಇದ್ದಾಗ ಸರ್ಕಾರ (ಆರ್ಬಿಐ) ಬೇರೆ ಬೇರೆ ವಿಧಾನಗಳಲ್ಲಿ ಹಣವನ್ನು ಹರಿಸುತ್ತದೆ. ಅದರಲ್ಲಿ ಒಂದು ವಿಧಾನವು ಆರ್ಬಿಐನ ಓಪನ್ ಮಾರ್ಕೆಟ್ ಅಪರೇಷನ್ಸ್. ಈ ವಿಧಾನದಲ್ಲಿ ಸರ್ಕಾರಿ ಬಾಂಡ್ಗಳನ್ನು ಆರ್ಬಿಐ ಖರೀದಿಸುವ ಮೂಲಕ ಹಣವನ್ನು ಬಿಡುಗಡೆ ಮಾಡುತ್ತದೆ. ಇದು ಡಿಜಿಟಲ್ ಹಣವೇ ಆಗಿರುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ