Recovery Agents: ನಿಯಮ ತಿಳಿದಿರಿ: ರಿಕವರಿ ಏಜೆಂಟ್ ದುರ್ವರ್ತಿಸಿದರೆ ತತ್​ಕ್ಷಣಕ್ಕೆ ನೀವು ಏನು ಮಾಡಬಹುದು? ಎಲ್ಲಿ ದೂರು ಕೊಡಬೇಕು, ಯಾವ ಕೇಸ್ ಹಾಕಬಹುದು? ಇಲ್ಲಿದೆ ಡೀಟೇಲ್ಸ್

|

Updated on: Apr 16, 2023 | 6:33 PM

RBI Guidelines On Loan Recovery: ಆರ್​ಬಿಐ ನಿಯಮದ ಪ್ರಕಾರ, ಅನುಚಿತವಾಗಿ ವರ್ತಿಸುವ ರಿಕವರಿ ಏಜೆಂಟ್​ಗಳ ವಿರುದ್ಧ ಬ್ಯಾಂಕ್ ಗ್ರಾಹಕರು ವಿವಿಧ ದೂರು ದಾಖಲಿಸುವ, ಪ್ರಕರಣ ಹಾಕುವ ಅವಕಾಶಗಳನ್ನು ಹೊಂದಿರುತ್ತಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

Recovery Agents: ನಿಯಮ ತಿಳಿದಿರಿ: ರಿಕವರಿ ಏಜೆಂಟ್ ದುರ್ವರ್ತಿಸಿದರೆ ತತ್​ಕ್ಷಣಕ್ಕೆ ನೀವು ಏನು ಮಾಡಬಹುದು? ಎಲ್ಲಿ ದೂರು ಕೊಡಬೇಕು, ಯಾವ ಕೇಸ್ ಹಾಕಬಹುದು? ಇಲ್ಲಿದೆ ಡೀಟೇಲ್ಸ್
ಸಾಂದರ್ಭಿಕ ಚಿತ್ರ
Follow us on

ನವದೆಹಲಿ: ಬ್ಯಾಂಕ್ ಸಾಲ ಬಾಕಿ ಉಳಿಸಿಕೊಂಡಿರುವ ಗ್ರಾಹಕರಿಂದ ಹಣ ವಸೂಲಿ ಮಾಡುವ ರಿಕವರಿ ಏಜೆಂಟ್​ಗಳು (Loan Recovery Agents) ಅನುಚಿತವಾಗಿ ವರ್ತಿಸುವ ಬಗ್ಗೆ ಇತ್ತೀಚಿನ ದಿನಗಳಲ್ಲಿ ಬಹಳಷ್ಟು ದೂರುಗಳು ಕೇಳಿಬಂದಿವೆ. ಗ್ರಾಹಕರನ್ನು ನಿಂದಿಸುವುದು ಸೇರಿದಂತೆ ಅನುಚಿತವಾಗಿ ಈ ಏಜೆಂಟ್​ಗಳು ನಡೆದುಕೊಳ್ಳುವುದು ತೀರಾ ಸಾಮಾನ್ಯವಾಗಿದೆ. ಕೆಲವೊಮ್ಮೆ ರೌಡಿಗಳಂತೆ ಎರಗಿ ಹೋಗುವುದುಂಟು. ರಿಕವರಿ ಏಜೆಂಟ್​ಗಳು ಎಲ್ಲೆ ಮೀರಿ ಹೋದ ಹಲವು ಘಟನೆಗಳು ಆರ್​ಬಿಐ ಗಮನಕ್ಕೆ ಬಂದಿದ್ದು, ಇತ್ತೀಚೆಗೆ ಈ ಸಂಬಂಧ ಹೊಸ ಮಾರ್ಗಸೂಚಿ ಪ್ರಕಟಿಸಿದೆ. ಆರ್​ಬಿಐ ಅಧೀನದಲ್ಲಿರುವ ಒಂದು ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆ ತನ್ನ ಐಟಿ ಸೇವೆಯನ್ನು ಹೊರಗುತ್ತಿಗೆಗೆ ನೀಡಿದರೆ ಅದರ ಗುಣಮಟ್ಟಕ್ಕೆ ಬ್ಯಾಂಕ್ ಜವಾಬ್ದಾರಿ ವಹಿಸಿಕೊಳ್ಳಬೇಕಾಗುತ್ತದೆ ಎಂದು ಆರ್​ಬಿಐ ಮಾರ್ಗಸೂಚಿಯಲ್ಲಿ (RBI Guidelines) ತಿಳಿಸಲಾಗಿದೆ. ಅದೇ ರೀತಿ ರಿಕವರಿ ಏಜೆಂಟ್​ಗಳ ವರ್ತನೆಯ ಜವಾಬ್ದಾರಿ ಕೂಡ ಬ್ಯಾಂಕ್ ಮೇಲಿರುತ್ತದೆ ಎಂದು ಸ್ಪಷ್ಟವಾಗಿ ತಿಳಿಸಲಾಗಿದೆ. ಆರ್​ಬಿಐ ನಿಯಮದ ಪ್ರಕಾರ, ಅನುಚಿತವಾಗಿ ವರ್ತಿಸುವ ರಿಕವರಿ ಏಜೆಂಟ್​ಗಳ ವಿರುದ್ಧ ಬ್ಯಾಂಕ್ ಗ್ರಾಹಕರು ವಿವಿಧ ದೂರು ದಾಖಲಿಸುವ, ಪ್ರಕರಣ ಹಾಕುವ ಅವಕಾಶಗಳನ್ನು ಹೊಂದಿರುತ್ತಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

ಸಾಲ ವಸೂಲಾತಿಗೆ ಹೋಗುವ ರಿಕವರಿ ಏಜೆಂಟ್​ಗಳು ಏನೇನು ಮಾಡುವಂತಿಲ್ಲ?

  • ಮೊದಲಿಗೆ ರಿಕವರಿ ಏಜೆಂಟ್​ಗಳು ಸಾಲ ವಸೂಲಾತಿ ವೇಳೆ ಜನರನ್ನು ದೈಹಿಕವಾಗಿ ಅಥವಾ ವಾಚಕವಾಗಿ ಹೆದರಿಸುವುದು, ಕಿರುಕುಳ ಕೊಡುವುದು ಮಾಡುವಂತಿಲ್ಲ. ಸಾರ್ವಜನಿಕವಾಗಿ ಜನರನ್ನು ಅವಮಾನಿಸುವ ಉದ್ದೇಶದಿಂದ ಯಾವ ನಡೆಯನ್ನೂ ಇಡುವಂತಿಲ್ಲ.
  • ಜನರ ಖಾಸಗಿತನಕ್ಕೆ ಧಕ್ಕೆಯಾಗುವ ರೀತಿಯಲ್ಲಿ ನಡೆದುಕೊಳ್ಳುವಂತಿಲ್ಲ.
  • ಗ್ರಾಹಕರ ಮೊಬೈಲ್ ಫೋನ್​ಗೆ ಅನುಚಿತವೆನಿಸುವ ಸಂದೇಶಗಳನ್ನು ಕಳುಹಿಸುವಂತಿಲ್ಲ.
  • ಬೆಳಗ್ಗೆ 8ಗಂಟೆಯಿಂದ ಸಂಜೆ 7 ಗಂಟೆಯವರೆಗೆ ಮಾತ್ರ ರಿಕವರಿ ಕಾರ್ಯಕ್ಕೆ ಹೋಗಬೇಕು.

ಇದನ್ನೂ ಓದಿMilk Industry: ಕ್ಷೀರೋದ್ಯಮಕ್ಕೆ ಎಫ್​ಟಿಎ ಬೇಕೆ? ಆಮದು ಉತ್ಪನ್ನ ಜೊತೆ ಸ್ಪರ್ಧಿಸದಿದ್ದರೆ ರಫ್ತು ಹೇಗೆ ಸಾಧ್ಯ? ಹೆಚ್ಚುವರಿ ಹಾಲು ಏನು ಮಾಡುವುದು?

ಇವು ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ಹೊಸ ಗೈಡ್​ಲೈನ್ಸ್​ನಲ್ಲಿ ತಿಳಿಸಿರುವ ಕೆಲ ಅಂಶಗಳು. ಆದರೂ ಕೂಡ ಲೋನ್ ರಿಕವರಿ ಏಜೆಂಟ್​ಗಳು ತಮ್ಮ ಉದ್ಧಟತನದ ವರ್ತನೆ ನಿಲ್ಲಿಸಿಲ್ಲ. ಗ್ರಾಹಕರಿಗೂ ಕೂಡ ತಮ್ಮ ಹಕ್ಕಿನ ಬಗ್ಗೆ ಹೆಚ್ಚಿನ ಅರಿವು ಇದ್ದಂತಿಲ್ಲ. ಹೀಗಾಗಿ, ರಿಕವರಿ ಏಜೆಂಟ್​ಗಳಿಂದ ಗ್ರಾಹಕರು ಕಿರುಕುಳ ಅನುಭವಿಸುವುದು ಮುಂದುವರಿದಿದೆ.

ರಿಕವರಿ ಏಜೆಂಟ್​ಗಳ ವಿರುದ್ಧ ಸಾಲದ ಗ್ರಾಹಕರು ಏನೇನು ಕ್ರಮ ಕೈಗೊಳ್ಳಬಹುದು?

  • ರಿಕವರಿ ಏಜೆಂಟ್ ನಿಮ್ಮೊಂದಿಗೆ ಅನುಚಿತವಾಗಿ ನಡೆದುಕೊಳ್ಳುತ್ತಿದ್ದರೆ ಆತ ಮಾಡುವ ಎಲ್ಲಾ ಕರೆ, ಇಮೇಲ್ ಮತ್ತು ಎಸ್ಸೆಮ್ಮೆಸ್​ಗಳನ್ನು ದಾಖಲೆಯಾಗಿ ಇಟ್ಟುಕೊಂಡಿರಿ. ಇದು ಆ ಏಜೆಂಟ್​ನ ಅನುಚಿತ ವರ್ತನೆಗೆ ಪ್ರಮುಖ ಸಾಕ್ಷಿಯಾಗುತ್ತದೆ.
  • ನೀವು ಸೂಕ್ತ ದಾಖಲೆಗಳನ್ನು ಎತ್ತಿ ಇಟ್ಟುಕೊಂಡ ಬಳಿಕ, ಎರಡನೇ ಹಂತದಲ್ಲಿ ಪೊಲೀಸ್ ಠಾಣೆಗೆ ಹೋಗಿ ದೂರು ದಾಖಲಿಸಿ. ಪೊಲೀಸರು ಸೂಕ್ತವಾಗಿ ಸ್ಪಂದಿಸದಿದ್ದರೆ ಅಥವಾ ದೂರು ದಾಖಲಿಸಿಕೊಳ್ಳದಿದ್ದರೆ ಕೋರ್ಟ್​ನಲ್ಲಿ ಬ್ಯಾಂಕ್ ವಿರುದ್ಧವೇ ಸಿವಿಲ್ ಇಂಜಂಕ್ಷನ್​ಗೆ ಅರ್ಜಿ ಸಲ್ಲಿಸಬಹುದು.
  • ರಿಕವರಿ ಏಜೆಂಟ್​ಗಳಿಂದ ಆದ ಕಿರುಕುಳಕ್ಕೆ ಕೋರ್ಟ್​ನಲ್ಲಿ ಪರಿಹಾರ ಕೋರಬಹುದು.
  • ರಿಕವರಿ ಏಜೆಂಟ್​ಗಳಿಂದ ಕಿರುಕುಳವಾದರೆ ನಿಮ್ಮ ಲೋನ್ ಆಫೀಸರ್ ಅಥವಾ ಬ್ಯಾಂಕ್, ಹಣಕಾಸು ಸಂಸ್ಥೆಯನ್ನು ಸಂಪರ್ಕಿಸಿ, ನಿಮ್ಮ ಬಳಿ ಇರುವ ಸಾಕ್ಷ್ಯಾಧಾರಗಳನ್ನು ಕೊಡಬಹುದು. ಈ ಸಂದರ್ಭದಲ್ಲಿ ರಿಕವರಿ ಏಜೆಂಟ್ ವಿರುದ್ಧ ಬ್ಯಾಂಕ್​ನಿಂದ ಸೂಕ್ತ ಕ್ರಮ ಜಾರಿಯಾಗುವ ಸಾಧ್ಯತೆ ದಟ್ಟವಾಗಿರುತ್ತದೆ.
  • ಬ್ಯಾಂಕಿಗೆ ದೂರು ಕೊಟ್ಟರೂ ಏಜೆಂಟ್​ನಿಂದ ಕಿರುಕುಳ ಮುಂದುವರಿಯುತ್ತಿದ್ದರೆ ಆಗ ಖುದ್ದು ಆರ್​ಬಿಐಗೇ ಇಮೇಲೆ ಮೂಲಕ ದೂರು ಕೊಡಬಹುದು. ಲೋನ್ ರಿಕವರಿ ಏಜೆಂಟ್​ಗಳ ವಿರುದ್ಧ ದೂರು ಬಂದರೆ ಆರ್​ಬಿಐ ಅದನ್ನು ಬಹಳ ಗಂಭೀರವಾಗಿ ತೆಗೆದುಕೊಳ್ಳುತ್ತದೆ. ನೀವಿರುವ ಪ್ರದೇಶದಲ್ಲಿ ರಿಕವರಿ ಏಜೆಂಟ್​ಗಳನ್ನು ಕಳುಹಿಸದಿರುವಂತೆ ಬ್ಯಾಂಕಿಗೆ ನಿರ್ಬಂಧ ಬೀಳಬಹುದು.
  • ನಿಮ್ಮಿಂದ ಸಾಲ ವಸೂಲು ಮಾಡಲು ರಿಕವರಿ ಏಜೆಂಟ್​ಗಳು ನಿಮ್ಮ ಸ್ನೇಹಿತರನ್ನೋ ಅಥವಾ ಕುಟುಂಬ ಸದಸ್ಯರನ್ನೋ ಸಂಪರ್ಕಿಸುವುದು, ನೀವು ಕೆಲಸ ಮಾಡುವ ಜಾಗಕ್ಕೆ ಬಂದು ಜಗಳ ಮಾಡುವುದು ಅಥವಾ ನೆರೆ ಮನೆಯವರ ಎದುರು ನಿಮ್ಮೊಂದಿಗೆ ಜಗಳಕ್ಕಿಳಿಯುವುದು ಸೇರಿದಂತೆ ನಿಮ್ಮ ಆತ್ಮಗೌರವಕ್ಕೆ ಧಕ್ಕೆ ತರುವ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದರೆ ಬ್ಯಾಂಕು ಮತ್ತು ರಿಕವರಿ ಏಜೆಂಟ್ ವಿರುದ್ಧ ನೀವು ಮಾನನಷ್ಟ ಮೊಕದ್ದಮೆ ಹಾಕಬಹುದು.
  • ಸಾಲ ವಸೂಲಾತಿ ನೆವದಲ್ಲಿ ನಿಮ್ಮ ಅನುಮತಿ ಇಲ್ಲದೇ ನಿಮ್ಮ ಜಾಗಕ್ಕೆ ಯಾರಾದರೂ ಅತಿಕ್ರಮಣ ಮಾಡಲು ಬಂದರೂ ಮೊಕದ್ದಮೆ ಹೂಡಬಹುದು.

ಇದನ್ನೂ ಓದಿCGHS: ಕೇಂದ್ರ ಸರ್ಕಾರ ಆರೋಗ್ಯ ಯೋಜನೆಯಲ್ಲಿ ಓಪಿಡಿ, ಆಸ್ಪತ್ರೆ ಬೆಡ್ ಚಾರ್ಜ್ ಇತ್ಯಾದಿ ದರ ಹೆಚ್ಚಳ; ಸರ್ಕಾರಕ್ಕೆ ಹೆಚ್ಚಿನ ಹೊರೆ

ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 6:33 pm, Sun, 16 April 23