
ನವದೆಹಲಿ: ಸೆಂಟ್ರಲ್ ಗವರ್ನ್ಮೆಂಟ್ ಹೆಲ್ತ್ ಸ್ಕೀಮ್ (CGHS- Central Government Health Scheme) ಫಲಾನುಭವಿಗಳಿಗೆ ಕೇಂದ್ರ ಸರ್ಕಾರ ಭರ್ಜರಿ ಕೊಡುಗೆ ನೀಡುತ್ತಿದೆ. ಈ ಯೋಜನೆಯಲ್ಲಿರುವ ವಿವಿಧ ದರಗಳನ್ನು ಪರಿಷ್ಕರಿಸಲು ಸರ್ಕಾರ ನಿರ್ಧರಿಸಿದೆ. ಹಾಗೆಯೇ, ಆಸ್ಪತ್ರೆಗೆ ದಾಖಲಾಗಲು ಬೇಕಾದ ರೆಫರಲ್ ಪ್ರಕ್ರಿಯೆಯನ್ನೂ (Referral Process) ಸರ್ಕಾರ ಒಂದು ಹಂತ ಸರಳಗೊಳಿಸಿದೆ. ಕೇಂದ್ರ ಆರೋಗ್ಯ ಸಚಿವಾಲಯ ಹೊರಡಿಸಿದ ಮಾಹಿತಿ ಪ್ರಕಾರ ಸಿಜಿಎಚ್ಎಸ್ ಯೋಜನೆ ಅಡಿ ಒಪಿಡಿ ಕನ್ಸಲ್ಟೇಶನ್ ಶುಲ್ಕ 150 ರೂನಿಂದ 350 ರೂಗೆ ಏರಿಸಲಾಗಿದೆ. ಐಪಿಡಿ ಕನ್ಸಲ್ಟೇಶ್ ಶುಲ್ಕವನ್ನು 300ರಿಂದ 350 ರೂಗೆ ಹೆಚ್ಚಿಸಲಾಗಿದೆ. ಐಸಿಯು ಸರ್ವಿಸ್ ಅನ್ನು 5,400 ರೂಗೆ ನಿಗದಿ ಮಾಡಲಾಗಿದೆ. ಫಲಾನುಭವಿ ದಾಖಲಾಗುವ ಆಸ್ಪತ್ರೆಯಲ್ಲಿ ವಿವಿಧ ಬೆಡ್ ಚಾರ್ಜ್ ದರಗಳನ್ನೂ ಹೆಚ್ಚಿಸಲಾಗಿದೆ. ಈ ಹೆಚ್ಚುವರಿ ದರಗಳಿಂದ ಸರ್ಕಾರಕ್ಕೆ 240 ಕೋಟಿ ರೂನಿಂದ 300 ಕೋಟಿ ರೂಗೆ ಹೆಚ್ಚುವರಿ ವೆಚ್ಚ ತಗುಲುವ ನಿರೀಕ್ಷೆ ಇದೆ.
ಸೆಂಟ್ರಲ್ ಗವರ್ನ್ಮೆಂಟ್ ಹೆಲ್ತ್ ಸ್ಕೀಮ್ ಯೋಜನೆಯು ಕೇಂದ್ರ ಸರ್ಕಾರೀ ನೌಕರರು, ಪಿಂಚಣಿದಾರರು ಹಾಗೂ ಅವರ ಅವಲಂಬಿತರಿಗೆ ಇರುವ ಆರೋಗ್ಯ ವಿಮಾ ಸೇವೆಯಾಗಿದೆ. ಇವರಷ್ಟೇ ಅಲ್ಲದೇ, ಸ್ವಾತಂತ್ರ್ಯ ಹೋರಾಟಗಾರರು, ಮಾಜಿ ರಾಜ್ಯಪಾಲರು, ಮಾಜಿ ಲೆಫ್ಟಿನೆಂಟ್ ಗವರ್ನರುಗಳು, ಹೈಕೋರ್ಟ್ ನಿವೃತ್ತ ನ್ಯಾಯಾಧೀಶರು, ರೈಲ್ವೆ ಬೋರ್ಡ್ ಉದ್ಯೋಗಿಗಳು, ಮಾಜಿ ಮತ್ತು ಹಾಲಿ ಸಂಸದರು, ಪೋಸ್ಟಲ್ ಮತ್ತು ಟೆಲಿಗ್ರಾಫ್ ಇಲಾಖೆಯ ಉದ್ಯೋಗಿಗಳೂ ಈ ಯೋಜನೆಗೆ ನೊಂದಾಯಿಸಿಕೊಳ್ಳಬಹುದು. ಈ ಸ್ಕೀಮ್ನಲ್ಲಿ ಒಟ್ಟು 42 ಲಕ್ಷದಷ್ಟು ಫಲಾನುಭವಿಗಳಿದ್ದಾರೆ.
ಸಿಜಿಎಚ್ಎಸ್ ಸ್ಕೀಮ್ನ ಫಲಾನುಭವಿಗಳು ನೇರವಾಗಿ ಖಾಸಗಿ ಆಸ್ಪತ್ರೆಗೆ ದಾಖಲಾಗಲು ಆಗುವುದಿಲ್ಲ. ಅವರು ಸಿಜಿಎಚ್ಎಸ್ ನಿಗದಿಪಡಿಸಿದ ಆರೋಗ್ಯ ಕೇಂದ್ರದಿಂದ (ವೆಲ್ನೆಸ್ ಸೆಂಟರ್) ರೆಫರ್ ಮಾಡಲಾಗುವ ಆಸ್ಪತ್ರೆಗೆ ದಾಖಲಾಗಬೇಕು. ಅಥವಾ ತಮಗೆ ಬೇಕಾದ ಆಸ್ಪತ್ರೆಗೆ ದಾಖಲಾಗಬೇಕೆಂದರೂ ವೆಲ್ನೆಸ್ ಸೆಂಟರ್ನಿಂದ ಶಿಫಾರಸು ಪಡೆಯಬೇಕು. ಈಗ ಈ ಪ್ರಕ್ರಿಯೆಯನ್ನು ಸರ್ಕಾರ ತುಸು ಸರಳಗೊಳಿಸಲಾಗಿದೆ.
ಈ ಮುಂಚೆ, ಸಿಜಿಎಚ್ಎಸ್ ಯೋಜನೆಯ ಫಲಾನುಭವಿಯೇ ಖುದ್ದಾಗಿ ಈ ವೆಲ್ನೆಸ್ ಸೆಂಟರ್ಗೆ ಹೋಗಿ ಆಸ್ಪತ್ರೆಗೆ ದಾಖಲಾಗಲು ಶಿಫಾರಸು ಪಡೆಯಬೇಕಿತ್ತು. ಆದರೆ, ಈಗ ಫಲಾನುಭವಿಯ ಪರ ಯಾರಾದರೂ ವ್ಯಕ್ತಿ ಸೂಕ್ತ ದಾಖಲೆಗಳೊಂದಿಗೆ ವೆಲ್ನೆಸ್ ಸೆಂಟರ್ಗೆ ಹೋಗಿ ಆಸ್ಪತ್ರೆಗೆ ದಾಖಲಾಗಲು ಶಿಫಾರಸು ಪಡೆಯಬಹುದು. ಅಥವಾ ಫಲಾನುಭವಿಯು ವೆಲ್ನೆಸ್ ಸೆಂಟರ್ನ ವೈದ್ಯಾಧಿಕಾರಿಗೆ ವಿಡಿಯೋ ಕರೆ ಮಾಡಿಯೂ ರೆಫರಲ್ ಪಡೆಯಬಹುದು.
Published On - 1:56 pm, Sun, 16 April 23