ಬೆಂಗಳೂರು: ಭಾರತದ ಔದ್ಯಮಿಕ ವಲಯದಲ್ಲಿ ಒಟ್ಟಾರೆ ಸಂಬಳ ಪ್ರಮಾಣದ ಏರಿಕೆಯಲ್ಲಿ (Salary Hike) ತುಸು ಕಡಿಮೆ ಆಗಿದ್ದರೂ ಮುಂಬೈ, ಡೆಲ್ಲಿ, ಬೆಂಗಳೂರು, ಚೆನ್ನೈ, ಹೈದರಾಬಾದ್ ನಗರಗಳು ಹೆಚ್ಚು ಸಂಬಳ ಕೊಡುವ ನಗರಗಳೆನಿಸಿವೆ. ಅದರಲ್ಲೂ ಬೆಂಗಳೂರು ಅತಿ ಹೆಚ್ಚು ಸಂಬಳ ಕೊಡುವ ನಗರವಾಗಿದೆ. ಇದು ಟೀಮ್ಲೀಸ್ ಸರ್ವಿಸಸ್ ಎಂಬ ಸಂಸ್ಥೆ ಬಿಡುಗಡೆ ಮಾಡಿದ ಒಂದು ವರದಿಯಲ್ಲಿ ಕಂಡು ಬಂದ ಅಂಶ. ಈ ವರದಿ ಪ್ರಕಾರ 2021-22ರ ವರ್ಷಕ್ಕೆ ಹೋಲಿಸಿದರೆ 2022-23ರಲ್ಲಿ ಬೆಂಗಳೂರಿನಲ್ಲಿ ಆಗಿರುವ ಸಂಬಳ ಹೆಚ್ಚಳ ಶೇ. 7.79ರಷ್ಟು. ಬೇರಾವ ನಗರಗಳಿಗಿಂತ ಹೆಚ್ಚು ಸಂಬಳ ಹೆಚ್ಚಳ ಕಂಡಿದ್ದಾರೆ ಬೆಂಗಳೂರಿಗರು. ಭಾರತದಲ್ಲಿ ಒಟ್ಟಾರೆ ಆಗಿರುವ ಸಂಬಳ ಹೆಚ್ಚಳ ಶೇ. 3.20 ಮಾತ್ರ. ಅತಿಹೆಚ್ಚು ಸಂಬಳ ಕೊಟ್ಟಿರುವ ನಗರಗಳನ್ನು ಕ್ರಮವಾಗಿ ಪಟ್ಟಿ ಮಾಡುವುದಾದರೆ ಬೆಂಗಳೂರು, ಮುಂಬೈ, ಚೆನ್ನೈ, ದೆಹಲಿ ಮತ್ತು ಹೈದರಾಬಾದ್ ನಿಲ್ಲುತ್ತವೆ.
ಜಾಬ್ಸ್ ಅಂಡ್ ಸ್ಯಾಲರಿ ಪ್ರೈಮರ್ ರಿಪೋರ್ಟ್ ಹೆಸರಿನ ಈ ವರದಿಯಲ್ಲಿ ಕಂಡ ಒಂದು ಬಹು ಅಚ್ಚರಿಯ ಅಂಶ ಎಂದರೆ ಅದು ಗುತ್ತಿಗೆ ಉದ್ಯೋಗಿಗಳು (Contract Employees) ಮತ್ತು ಖಾಯಂ ಉದ್ಯೋಗಿಗಳ ನಡುವಿನ ಸಂಬಳದಲ್ಲಿ ಇದ್ದ ಅಂತರ ಕಡಿಮೆ ಆಗಿರುವುದು. ಶೇ. 41ರಷ್ಟು ಹುದ್ದೆಗಳಲ್ಲಿ ಗುತ್ತಿಗೆ ಮತ್ತು ಖಾಯಂ ನೌಕರರ ನಡುವಿನ ಸಂಬಳ ವ್ಯತ್ಯಾಸ ಶೇ. 5 ಅಥವಾ ಅದಕ್ಕಿಂತಲೂ ಕಡಿಮೆ ಎನ್ನಲಾಗಿದೆ.
2022-23ರಲ್ಲಿ ಸೇಲ್ಸ್ ಮತ್ತು ಐಟಿ ಹುದ್ದೆಗಳಿಗೆ ಹೆಚ್ಚು ಡಿಮ್ಯಾಂಡ್ ಸೃಷ್ಟಿಯಾಗಿತ್ತು. ಬಿಎಫ್ಎಸ್ಐ ಎಂದು ಹೇಳಲಾಗುವ ಬ್ಯಾಂಕಿಂಗ್, ಹಣಕಾಸು ಸೇವೆ ಮತ್ತು ಇನ್ಷೂರೆನ್ಸ್ ವಲಯದಲ್ಲಿ ಸಂಬಳ ಹೆಚ್ಚಳ ಕಡಿಮೆ ಆಗಿದೆ.
ಇದನ್ನೂ ಓದಿ: Leave Encashment Tax: ಲೀವ್ ಎನ್ಕ್ಯಾಶ್ಮೆಂಟ್ಗೆ ತೆರಿಗೆ: ಬದಲಾವಣೆ ತಂದ ಹಣಕಾಸು ಇಲಾಖೆ; ಏನಿದು ಹೊಸ ರೂಲ್ಸ್?
ಬೆಂಗಳೂರಿನಲ್ಲಿ ಟೆಲಿಕಾಂ ವಲಯದಲ್ಲಿ ರಿಲೇಶನ್ಶಿಪ್ ಮ್ಯಾನೇಜರ್ ಹುದ್ದೆಗಳಿಗೆ ಶೇ. 10.19ರಷ್ಟು ಸಂಬಳ ಹೆಚ್ಚಳವಾಗಿದೆ. ಮ್ಯಾನೇಜರ್ಗಳ ಪೈಕಿ ಈ ಹುದ್ದೆಗೆ ಅತಿ ಹೆಚ್ಚು ಸಂಬಳ ಇದೆ.
ಇನ್ನು ಗೇಮ್ ಡೆವಲಪರ್ಸ್ ಹುದ್ದೆಗಳಿಗೂ ಒಳ್ಳೆಯ ಆದ್ಯತೆ ಸಿಕ್ಕಿದೆ. ಬೆಂಗಳೂರಿನಲ್ಲಿ ಗೇಮ್ ಡೆವಲಪರ್ಗೆ ಸಿಕ್ಕ ಸರಾಸರಿ ಸಂಬಳ ಹೆಚ್ಚಳ ಶೇ. 9.30 ಎಂದು ಟೀಮ್ಲೀಸ್ ಸರ್ವಿಸಸ್ನ ಈ ವರದಿ ಹೇಳುತ್ತದೆ.
ಇಂಡಸ್ಟ್ರಿಯಲ್ ಮ್ಯಾನುಫ್ಯಾಕ್ಚರಿಂಗ್ ವಲಯ ಬಹಳ ಉತ್ತಮವಾಗಿ ಗಮನ ಸೆಳೆಯುತ್ತಿದೆ. ರಿಯಲ್ ಎಸ್ಟೇಟ್, ಕಟ್ಟಡ ನಿರ್ಮಾಣ, ಹೆಲ್ತ್ಕೇರ್, ಮೀಡಿಯಾ ಅಂಡ್ ಎಂಟರ್ಟೈನ್ಮೆಂಟ್, ಆಟೊಮೊಬೈಲ್, ಇಕಾಮರ್ಸ್ ವಲಯದಲ್ಲಿ ಒಳ್ಳೆಯ ಸಂಬಳ ಸಿಗುತ್ತಿವೆ. ಹೊಸ ಹೊಸ ರೀತಿಯ ಹುದ್ದೆಗಳು ರಚನೆಯಾಗುತ್ತಿವೆ. ಭವಿಷ್ಯದ ಪರಿಸ್ಥಿತಿಗೆ ಅನುಗುಣವಾಗಿ ಹೊಂದಿಕೆಯಾಗುವ ಹುದ್ದೆಗಳ ಸೃಷ್ಟಿಯಾಗುತ್ತಿವೆ. ಇವುಗಳ ಹೆಸರೂ ಕೂಡ ಹೊಸತೇ.
ಇದನ್ನೂ ಓದಿ: Angel Tax: 21 ದೇಶಗಳಿಗೆ ಏಂಜೆಲ್ ಟ್ಯಾಕ್ಸ್ನಿಂದ ವಿನಾಯಿತಿ ಕೊಟ್ಟ ಭಾರತ; ಏನಿದು ಏಂಜೆಲ್ ತೆರಿಗೆ? ಇಲ್ಲಿದೆ ಡೀಟೇಲ್ಸ್
ಟೆಲಿಕಾಂ ವಲಯದಲ್ಲಿ ಸೀನಿಯರ್ ಗೋಲ್ಯಾಂಡ್ ಡೆವಲಪರ್ ಎಂಬ ಹುದ್ದೆ ಒಂದು ಉದಾಹರಣೆ. ಬಯೋಸ್ಟಾಟಿಶಿಯನ್, ಲೀಡ್ ಮಜೆಂಟೋ ಡೆವಲಪರ್, ರೋಬೋಟಿಕ್ಸ್ ಇನ್ಸ್ಟ್ರಕ್ಟರ್ ಇತ್ಯಾದಿ ಹೆಸರಿನ ಹುದ್ದೆಗಳಿವೆ. ಇವೆಲ್ಲವೂ ಆಯಾ ಉದ್ಯಮಕ್ಕೆ ಮಾತ್ರ ಹೊಂದಿಕೆಯಾಗುವ ಹೆಸರಿನ ಹುದ್ದೆಗಳು. ಆನ್ಲೈನ್ ಶಿಕ್ಷಣ ಕ್ಷೇತ್ರದಲ್ಲಿ ರೋಬೋಟಿಕ್ಸ್ ಇನ್ಸ್ಟ್ರಕ್ಟರ್ ಹುದ್ದೆ ಕುತೂಹಲ ಮೂಡಿಸುತ್ತದೆ.