ಮೈದಾನದಲ್ಲೇ ಕೆಎಲ್ ರಾಹುಲ್ ನಿಂದಿಸಿ ಟ್ರೋಲ್ ಆದ ಲಕ್ನೋ ಮಾಲೀಕ ಸಂಜೀವ್ ಗೋಯಂಕಾ ಅಂತಿಂಥವರಲ್ಲ; ಹೀಗಿದೆ ಅವರ ಬಿಸಿನೆಸ್ ಸಾಮ್ರಾಜ್ಯ

|

Updated on: May 10, 2024 | 6:07 PM

Know Who Is Sanjiv Goenka: ಸನ್ ರೈಸರ್ಸ್ ಹೈದರಾಬಾದ್ ಎದುರು ಲಕ್ನೋ ತಂಡ ಹೀನಾಯ ಸೋತ ಬಳಿಕ ನಾಯಕ ಕೆಎಲ್ ರಾಹುಲ್ ಜೊತೆ ಮಾಲೀಕ ಸಂಜೀವ್ ಗೋಯಂಕಾ ಕೋಪದಿಂದ ಮಾತನಾಡುತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಆಗಿದೆ. ಸಂಜೀವ್ ಗೋಯಂಕಾ ವರ್ತನೆ ಬಗ್ಗೆ ಅಸಮಾಧಾನಗೊಂಡ ಕ್ರಿಕೆಟ್ ಅಭಿಮಾನಿಗಳು ಟ್ರೋಲ್ ಮಾಡಿದ್ದಾರೆ. ಸಂಜೀವ್ ಗೋಯಂಕಾ ಅವರು ಲಕ್ನೋ ತಂಡದ ಒಡೆತನ ಹೊಂದಿರುವ ಆರ್​ಪಿಎಸ್​ಜಿ ಗ್ರೂಪ್​ನ ಮಾಲೀಕರಾಗಿದ್ದಾರೆ. ಅವರ ಆಸ್ತಿ ಮೌಲ್ಯ 30,000 ಕೋಟಿ ರೂ ಸಮೀಪದಷ್ಟಿದೆ.

ಮೈದಾನದಲ್ಲೇ ಕೆಎಲ್ ರಾಹುಲ್ ನಿಂದಿಸಿ ಟ್ರೋಲ್ ಆದ ಲಕ್ನೋ ಮಾಲೀಕ ಸಂಜೀವ್ ಗೋಯಂಕಾ ಅಂತಿಂಥವರಲ್ಲ; ಹೀಗಿದೆ ಅವರ ಬಿಸಿನೆಸ್ ಸಾಮ್ರಾಜ್ಯ
ಸಂಜೀವ್ ಗೋಯಂಕಾ
Follow us on

ಕ್ರಿಕೆಟ್ ಅಭಿಮಾನಿಗಳಿಗೆ ಈಗ ಸಂಜೀವ್ ಗೋಯಂಕಾ (Sanjiv Goenka) ಹೆಸರು ಪರಿಚಿತವಾಗತೊಡಗಿದೆ. ಮೊನ್ನೆ (ಮೇ 8) ಹೈದರಾಬಾದ್​ನಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ಎದುರು ಲಕ್ನೋ ಸೂಪರ್ ಜೇಂಟ್ಸ್ ತಂಡ (Lucknow Super Giants) ಅತಿ ಹೀನಾಯವಾಗಿ ಸೋತಿತ್ತು. ಎಸ್​ಆರ್​ಎಚ್​ನ ಸ್ಫೋಟಕ ಆಟಕ್ಕೆ ಕೆಎಲ್ ರಾಹುಲ್ (KL Rahul) ನೇತೃತ್ವದ ಎಲ್​ಎಸ್​ಜಿ ಚಿಂದಿಚಿಂದಿಯಾಗಿತ್ತು. ಲಕ್ನೋ ತಂಡದ ಮಾಲೀಕರಾದ ಸಂಜೀವ್ ಗೋಯಂಕಾ ಅಂದು ಪಂದ್ಯದ ಬಳಿಕ ಮೈದಾನದಲ್ಲೇ ಕ್ಯಾಪ್ಟನ್ ಕೆಎಲ್ ರಾಹುಲ್ ಜೊತೆ ಸಿಟ್ಟಿನಿಂದ ಮಾತನಾಡುತ್ತಿರುವ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಬಹಳಷ್ಟು ಜನರು, ಅದರಲ್ಲೂ ಕ್ರಿಕೆಟ್ ಪ್ರೇಮಿಗಳು, ಅದರಲ್ಲೂ ಕರ್ನಾಟಕದ ಕ್ರಿಕೆಟ್ ಪ್ರೇಮಿಗಳು ಸಂಜೀವ್ ಗೋಯಂಕಾ ಅವರನ್ನು ಟ್ರೋಲ್ ಮಾಡಿದ್ದರು. ಮರ್ಯಾದೆ ಇಲ್ಲದ ಕಡೆ ಇರುವ ಬದಲು ಆರ್​​ಸಿಬಿಗೆ ಬನ್ನಿ ಎಂದು ಕನ್ನಡಿಗರು ಹೇಳಿದ್ದುಂಟು.

ಇದೇ ಸಂಜೀವ್ ಗೋಯಂಕಾ ಅವರು ಕೆಲ ವರ್ಷಗಳ ಹಿಂದೆ ಎಂಎಸ್ ಧೋನಿ ಜೊತೆಯೂ ಇದೇ ರೀತಿಯಲ್ಲಿ ಕೋಪದಿಂದ ಸಂವಾದ ನಡೆಸುತ್ತಿರುವ ಫೋಟೋವೊಂದೂ ಕೂಡ ಹಂಚಿಕೆ ಆಗಿತ್ತು. ಆಗ ಎಂಎಸ್ ಧೋನಿ ಅವರು ಹಿಂದಿನ ಪುಣೆ ರೈಸಿಂಗ್ ಜೇಂಟ್ಸ್ ತಂಡದ ಕ್ಯಾಪ್ಟನ್ ಆಗಿದ್ದರು. ಆ ತಂಡದ ಮಾಲೀಕ ಇದೇ ಸಂಜೀವ್ ಗೋಯಂಕಾ ಆಗಿದ್ದರು. ಆಗ ಎಂಎಸ್ ಧೋನಿ ಕ್ಯಾಪ್ಟನ್ಸಿ ತೆಗೆದಿದ್ದರು.

ಇದನ್ನೂ ಓದಿ: ನಿಮ್ಮನ್ನು ಈ ರೀತಿ ನೋಡೋಕೆ ತುಂಬಾ ನೋವಾಗುತ್ತೇ, ದಯವಿಟ್ಟು RCBಗೆ ಬಂದ್ಬಿಡಿ ಕೆ.ಎಲ್‌ ರಾಹುಲ್​​ಗೆ ಅಭಿಮಾನಿಗಳ ಮನವಿ

ದೊಡ್ಡ ಬಿಸಿನೆಸ್​ಮ್ಯಾನ್ ಸಂಜೀವ್ ಗೋಯಂಕಾ

ಕ್ರೀಡಾಪಟುವಿಗೆ ಮರ್ಯಾದೆ ಕೊಡದ ಗೋಯಂಕಾ ಎಂಥ ಶ್ರೀಮಂತ ಆದರೇನು ಎಂದು ಟ್ರೋಲ್ ಮಾಡುತ್ತಿರುವವರಿದ್ದಾರೆ. ಸಂಜೀವ್ ಗೋಯಂಕಾ ಹತ್ತಾರು ಕಂಪನಿಗಳ ಒಡೆಯ. ಅವರ ನಿವ್ವಳ ಆಸ್ತಿ ಮೌಲ್ಯ ಹೆಚ್ಚೂಕಡಿಮೆ 30,000 ಕೋಟಿ ರೂನಷ್ಟಿದೆ. ಆರ್​ಪಿಎಸ್​ಜಿ ಗ್ರೂಪ್ ಅಡಿಯಲ್ಲಿ ಬಿಸಿನೆಸ್ ಸಾಮ್ರಾಜ್ಯವನ್ನೇ ಹೊಂದಿದ್ದಾರೆ.

ಗೋಯಂಕಾ ಎಂಬುದು ಭಾರತದ ಖ್ಯಾತ ಬಿಸಿನೆಸ್ ಫ್ಯಾಮಿಲಿಗಳಲ್ಲಿ ಒಂದು. ಇಂಡಿನ್ ಎಕ್ಸ್​ಪ್ರೆಸ್, ಕನ್ನಡಪ್ರಭ ಇತ್ಯಾದಿ ಮಾಧ್ಯಮಗಳನ್ನು ಆರಂಭಿಸಿದ್ದು ಇದೇ ಗೋಯಂಕಾ ಫ್ಯಾಮಿಲಿ. 2011ರಲ್ಲಿ ಗೋಯಂಕಾ ಕುಟುಂಬದ ಬಿಸಿನೆಸ್ ವಿಭಜನೆ ಆಯಿತು. ಆ ಕುಟುಂಬದ ಸಂತತಿಯಾದ ಸಂಜೀವ್ ಗೋಯಂಕಾ ಈಗ ಆರ್​ಪಿಎಸ್​ಜಿ ಗ್ರೂಪ್​ನ ಒಡೆಯರಾಗಿದ್ದಾರೆ. ವಿದ್ಯುತ್, ಐಟಿ, ಮೀಡಿಯಾ, ಕ್ರೀಡೆ, ಶಿಕ್ಷಣ, ಇನ್​ಫ್ರಾಸ್ಟ್ರಕ್ಚರ್, ಕಾರ್ಬನ್ ಬ್ಲ್ಯಾಕ್, ರೀಟೇಲ್ ಇತ್ಯಾದಿ ಕ್ಷೇತ್ರಗಳಲ್ಲಿ ಅವರ ಕಂಪನಿಗಳು ವ್ಯವಹಾರ ಹೊಂದಿವೆ.

ಇದನ್ನೂ ಓದಿ: ಫೋಟೋ ಅಪ್​ಲೋಡ್ ಮಾಡಿ, ನಿಮ್ಮ ಚಿತ್ರವಿರುವ ಕೇಕ್ ಪಡೆಯಿರಿ; ಇದು ಜೊಮಾಟೋದ ಫೋಟೋ ಕೇಕ್ ಫೀಚರ್

ಕೋಲ್ಕತಾ ಮೂಲದ ಸಂಜೀವ್ ಗೋಯಂಕಾ ವಿದ್ಯುತ್ ಕ್ಷೇತ್ರದಲ್ಲಿ ಹಿಡಿತ ಹೊಂದಿದ್ದಾರೆ. ಇವರ ಪೂರ್ವಿಕರ ಪ್ರಮುಖ ವ್ಯವಹಾರವೇ ಈ ಕ್ಷೇತ್ರದಲ್ಲಿತ್ತು. 19ನೇ ಶತಮಾನದ ಕೊನೆಯಿಂದ ಹಿಡಿದು ಇಲ್ಲಿಯವರೆಗೆ ಕೋಲ್ಕತಾಗೆ ವಿದ್ಯುತ್ ವಿತರಣೆ ಮಾಡುತ್ತಿರುವ ಸಿಇಎಸ್​ಸಿ ಕಂಪನಿ ಇವರ ಆರ್​​ಪಿಎಸ್​ಜಿ ಗ್ರೂಪ್​ಗೆ ಸೇರಿದ್ದಾಗಿದೆ. ಎನ್​ಪಿಸಿಎಲ್, ಸಿಪಿಎಲ್, ಐಸಿಎಂಎಲ್, ಡಿಐಎಲ್ ಇತ್ಯಾದಿ ಕಂಪನಿಗಳು ವಿದ್ಯುತ್ ಉತ್ಪಾದನೆ ಮತ್ತು ವಿತರಣೆಯ ಸೇವೆಯಲ್ಲಿವೆ.

ನೇಚರ್ಸ್ ಬ್ಯಾಸ್ಕೆಟ್​ನಿಂದ ಹಿಡಿದು ಸ್ಪೆನ್ಸರ್ಸ್ ರೀಟೇಲ್​ವರೆಗೆ ಚಿಲ್ಲರೆ ಮಾರಾಟ ಕ್ಷೇತ್ರದಲ್ಲಿ ಇವರ ಮಾಲಕತ್ವದ ಕಂಪನಿಗಳಿವೆ. ಮೋಹನ್ ಬಗಾನ್ ಫುಟ್ಬಾಲ್ ತಂಡ, ಲಕ್ನೋ ಸೂಪರ್ ಜೈಂಟ್ಸ್ ಕ್ರಿಕೆಟ್ ತಂಡ, ಸೌತ್ ಆಫ್ರಿಕಾದ ಡರ್ಬನ್ ಸೂಪರ್ ಜೇಂಟ್ಸ್ ಕ್ರಿಕೆಟ್ ತಂಡ ಇದೇ ಆರ್​ಪಿಎಸ್​ಜಿ ಗ್ರೂಪ್​ನದ್ದಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ