ಭಾರತದಲ್ಲಿ ಈರುಳ್ಳಿ ಬೆಲೆ ಯಾಕೆ ಹೆಚ್ಚುತ್ತಿದೆ? ಶೇ. 40ರಷ್ಟು ರಫ್ತುಸುಂಕ ವಿಧಿಸುವ ಕ್ರಮ ಹಿಂದೆ ಏನಿದೆ ತಂತ್ರ?

|

Updated on: Aug 22, 2023 | 1:00 PM

Onion Price Rise Reasons: ಭಾರತದಲ್ಲಿ ಈರುಳ್ಳಿ ಬೆಲೆ ಏರುಗತಿಯಲ್ಲಿದೆ. ಬೆಲೆ ಕೈಮೀರಿ ಬೆಳೆಯುವ ಮುನ್ನ ಸರ್ಕಾರ ಈರುಳ್ಳಿ ರಫ್ತಿನ ಮೇಲೆ ಶೇ. 40ರಷ್ಟು ಸುಂಕ ಹೇರಿದೆ. ಇದರಿಂದ ಸ್ಥಳೀಯವಾಗಿ ಈರುಳ್ಳಿ ಸರಬರಾಜು ಉತ್ತಮವಾಗಿ ಆಗುವ ನಿರೀಕ್ಷೆ ಇದೆ. ಆದರೆ, ಈರುಳ್ಳಿ ವರ್ತಕರು ರಫ್ತು ನಿರ್ಬಂಧಕ್ಕೆ ಅಸಮಾಧಾನಗೊಂಡಿರುವುದು ತಿಳಿದುಬಂದಿದೆ.

ಭಾರತದಲ್ಲಿ ಈರುಳ್ಳಿ ಬೆಲೆ ಯಾಕೆ ಹೆಚ್ಚುತ್ತಿದೆ? ಶೇ. 40ರಷ್ಟು ರಫ್ತುಸುಂಕ ವಿಧಿಸುವ ಕ್ರಮ ಹಿಂದೆ ಏನಿದೆ ತಂತ್ರ?
ಈರುಳ್ಳಿ
Follow us on

ನವದೆಹಲಿ, ಆಗಸ್ಟ್ 22: ಟೊಮೆಟೋ ಆಯಿತು ಈಗ ಭಾರತೀಯ ಜನಸಾಮಾನ್ಯರ ಕಣ್ಣೀರು ಬರಿಸುವ ಸರದಿ ಈರುಳ್ಳಿಯದ್ದು. ಭಾರತದ ಅಡುಗೆ ಮನೆಯಲ್ಲಿ ಸಾಮಾನ್ಯವಾಗಿ ಬಳಕೆಯಾಗುವ ಆಹಾರವಸ್ತುಗಳಲ್ಲಿ ಈರುಳ್ಳಿಯೂ (Onion) ಒಂದು. ಈ ಬಾರಿಯ ಮುಂಗಾರಿನಲ್ಲಿ ನಿರೀಕ್ಷಿತ ರೀತಿಯಲ್ಲಿ ಈರುಳ್ಳಿ ಬೆಳೆ ಬಂದಿಲ್ಲದಿರುವುದು ಬೆಲೆ ಹೆಚ್ಚಳಕ್ಕೆ ಪ್ರಮುಖ ಕಾರಣವಾಗಿದೆ. ಇದರ ಜೊತೆಗೆ, ಈರುಳ್ಳಿ ಸಾಕಷ್ಟು ಪ್ರಮಾಣದಲ್ಲಿ ಭಾರತದಿಂದ ರಫ್ತಾಗುತ್ತಿದೆ. ಇದೂ ಕೂಡ ಭಾರತದೊಳಗೆ ಈರುಳ್ಳಿ ಆವಕ ಕಡಿಮೆಯಾಗುವಂತೆ ಮಾಡಿದೆ. ಈ ಕಾರಣಕ್ಕೆ ಕೇಂದ್ರ ಸರ್ಕಾರ ಈರುಳ್ಳಿಯಿಂದ ಹೆಚ್ಚು ಕಣ್ಣೀರು ಸೃಷ್ಟಿಯಾಗುವ ಮುನ್ನವೇ ಎಚ್ಚೆತ್ತುಕೊಂಡು ಈರುಳ್ಳಿ ರಫ್ತಿನ ಮೇಲೆ ಶೇ. 40ರಷ್ಟು ಸುಂಕ (Export duty) ವಿಧಿಸಲು ನಿರ್ಧರಿಸಿದೆ.

ಸರ್ಕಾರ ಈರುಳ್ಳಿ ಮೇಲೆ ರಫ್ತು ಸುಂಕ ಏರಿದ್ದೂ ಕೂಡ ದೇಶದ ಹಲವೆಡೆ ಈರುಳ್ಳಿ ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ. ಭಾರತದ ಅನೇಕ ರಾಜ್ಯಗಳಲ್ಲಿ ಈರುಳ್ಳಿ ಬೆಲೆ ಐದಾರು ರೂಗಳಷ್ಟು ಹೆಚ್ಚಾಗಿದೆ. ಕೆಲವಡೆ 20 ರೂನಷ್ಟು ಬೆಲೆ ಹೆಚ್ಚಳವಾಗಿದೆ. ಸರ್ಕಾರ ತನ್ನಲ್ಲಿರುವ ಈರುಳ್ಳಿ ದಾಸ್ತಾನನ್ನು ಬಳಸಿ ಕೆಲ ಆಯ್ದ ಪ್ರದೇಶಗಳಲ್ಲಿ ರಿಯಾಯಿತಿ ದರದಲ್ಲಿ ಈರುಳ್ಳಿ ಮಾರಾಟ ಮಾಡುತ್ತಿದೆ.

ವಿಶ್ವದಲ್ಲಿ ಅತಿಹೆಚ್ಚು ಈರುಳ್ಳಿ ಬೆಳೆಯುವುದು ಚೀನಾ ಬಿಟ್ಟರೆ ಭಾರತದಲ್ಲೇ. ಕರ್ನಾಟಕ, ಮಹಾರಾಷ್ಟ್ರ, ಮಧ್ಯಪ್ರದೇಶ ಮತ್ತು ಗುಜರಾತ್ ರಾಜ್ಯಗಳಲ್ಲಿ ದೇಶದ ಶೇ. 60ರಷ್ಟು ಈರುಳ್ಳಿ ಉತ್ಪಾದನೆ ಆಗುತ್ತದೆ. 2022-23ರ ಹಣಕಾಸು ವರ್ಷದಲ್ಲಿ ಭಾರತದಿಂದ ಸುಮಾರು 25 ಲಕ್ಷ ಟನ್​ಗಳಷ್ಟು ಈರುಳ್ಳಿ ರಫ್ತಾಗಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಈರುಳ್ಳಿ ರಫ್ತು ಶೇ. 64ರಷ್ಟು ಹೆಚ್ಚಾಗಿದೆ. ಭಾರತದ ಹೆಚ್ಚಿನ ಈರುಳ್ಳಿ ರಫ್ತು ಬಾಂಗ್ಲಾದೇಶ, ಮಲೇಷ್ಯಾ, ಯುಎಇ ಮತ್ತು ಶ್ರೀಲಂಕಾಗೆ ಹೋಗಿದೆ.

ಇದನ್ನೂ ಓದಿ: Bengaluru Girl: ಬೆಂಗಳೂರಿನ 22 ವರ್ಷದ ಮಹಿಳಾ ಪೋಸ್ಟ್ ಮಾಸ್ಟರ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಬಿಲ್ ಗೇಟ್ಸ್

ಕಳೆದ ಎರಡು ಮೂರು ವರ್ಷಗಳಿಂದ ಈರುಳ್ಳಿ ಮೇಲಿನ ರಫ್ತು ನಿರ್ಬಂಧಗಳು ಇಲ್ಲದ್ದರಿಂದ ಈ ಬಾರಿ ಈರುಳ್ಳಿ ರಫ್ತು ಬಹಳ ಮಟ್ಟಿಗೆ ಹೆಚ್ಚಾಗಿತ್ತು. ಇದೂ ಕೂಡ ಭಾರತದಲ್ಲಿ ಈರುಳ್ಳಿ ಸಂಗ್ರಹ ಕಡಿಮೆಗೊಂಡು ಬೆಲೆ ಹೆಚ್ಚಳಕ್ಕೆ ದಾರಿ ಮಾಡಿದೆ.

ಭಾರತದಲ್ಲಿ ಅತಿಹೆಚ್ಚು ಈರುಳ್ಳಿ ಬೆಳೆಯುವ ಪ್ರದೇಶ ಮಹಾರಾಷ್ಟ್ರದ ನಾಶಿಕ್ ಜಿಲ್ಲೆ. ಇಲ್ಲಿನ ಈರುಳ್ಳಿ ವರ್ತಕರು ಸರ್ಕಾರದ ರಫ್ತು ಸುಂಕ ಹೇರಿಕೆ ಕ್ರಮವನ್ನು ಬಲವಾಗಿ ವಿರೋಧಿಸಿದ್ದಾರೆ. ಬಹಳ ಹೆಚ್ಚು ಕಾಲ ಈರುಳ್ಳಿ ಬೆಲೆ ಕಡಿಮೆ ಮಟ್ಟದಲ್ಲಿ ಇದ್ದು ರೈತರಿಗೆ ಬಹಳ ನಷ್ಟ ಆಗಿದೆ. ಸರ್ಕಾರದಿಂದಲೂ ರೈತರಿಗೆ ಪರಿಹಾರ ಸಿಕ್ಕಿಲ್ಲ. ಈಗ ರಫ್ತಿಗೆ ನಿರ್ಬಂಧ ಹಾಕಿರುವುದು ರೈತರಿಗೆ ಇನ್ನಷ್ಟು ಅನ್ಯಾಯ ಮಾಡಿದಂತಾಗುತ್ತದೆ ಎಂಬುದು ಇಲ್ಲಿನ ವರ್ತಕರ ವಾದ.

ಈರುಳ್ಳಿ ರಫ್ತು ಸುಂಕಕ್ಕೆ ಕನಿಷ್ಠ ಬೆಲೆ ನಿಗದಿ ಮಾಡಲು ಒತ್ತಾಯ

ಈರುಳ್ಳಿ ಮೇಲೆ ಶೇ. 40ರಷ್ಟು ರಫ್ತು ಸುಂಕ ಹೇರುವ ಸರ್ಕಾರದ ನಿರ್ಧಾರಕ್ಕೆ ಉದ್ಯಮದಲ್ಲಿ ಮಿಶ್ರ ಪ್ರತಿಕ್ರಿಯೆ ಇದೆ. ಆದರೆ ರಫ್ತು ಸುಂಕ ಎಷ್ಟೆಂದು ನಿರ್ಧರಿಸಲು ಫ್ಲೋರ್ ಪ್ರೈಸ್ ಅಥವಾ ಕನಿಷ್ಠ ಬೆಲೆ ನಿಗದಿ ಮಾಡುವಂತೆ ಈರುಳ್ಳಿ ವರ್ತಕರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ತರಕಾರಿ ಅಂಗಡಿಯಲ್ಲಿ ಯುಪಿಐ ಪಾವತಿ ಮಾಡಿ ದಂಗಾದ ಜರ್ಮನ್ ಮಿನಿಸ್ಟರ್

ಸರ್ಕಾರ ಶೇ. 40ರಷ್ಟು ರಫ್ತು ಸುಂಕ ಹೇರಿದೆ. ಅದರೆ, ಕನಿಷ್ಠ ಬೆಲೆ ಎಷ್ಟು ಎಂದು ನಿರ್ದಿಷ್ಟಪಡಿಸಿಲ್ಲ. ಇದರಿಂದ ಕೆಲ ರಫ್ತುದಾರರಿಗೆ ಮತ್ತು ಬಂದರುಗಳಿಗೆ ಹೆಚ್ಚು ಅನುಕೂಲ ಆಗಬಹುದು. ಇತರರಿಗೆ ಅನ್ಯಾಯ ಆಗುತ್ತದೆ ಎಂಬುದು ಈರುಳ್ಳಿ ವರ್ತಕರ ವಲಯದಲ್ಲಿ ಕೇಳಿಬಂದಿರುವ ಅನಿಸಿಕೆ.

ಸರ್ಕಾರ ಇತ್ತೀಚೆಗೆ ಬಾಸ್ಮತಿಯೇತರ ತಳಿಯ ಅಕ್ಕಿಗಳು ಮತ್ತು ಗೋಧಿಯ ರಫ್ತನ್ನು ನಿಷೇಧಿಸಿತ್ತು. ಇದರಿಂದ ಕೃಷಿ ವ್ಯವಹಾರ ವಲಯಕ್ಕೆ ಹಿನ್ನಡೆಯಾಗಿತ್ತು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ