ನವದೆಹಲಿ: ಆರ್ಬಿಐ (Reserve Bank of India) ಆಗಾಗ ನೋಟು ಮತ್ತು ನಾಣ್ಯಗಳ ಸ್ವರೂಪ ಬದಲಿಸುತ್ತಿರುತ್ತದೆ. ಖೋಟಾ ನೋಟು ನಿಯಂತ್ರಣ ಇತ್ಯಾದಿ ವಿವಿಧ ಕಾರಣಗಳಿಗೆ ಈ ಬದಲಾವಣೆ ಆಗುತ್ತಿರುತ್ತದೆ. ಆದರೆ, ಐದು ರೂ ನಾಣ್ಯದ ಸ್ವರೂಪದಲ್ಲಿ ಬದಲಾವಣೆ ಆಗಿರುವ ಕಥೆ ಕುತೂಹಲ ಮೂಡಿಸುತ್ತದೆ. 2 ಸಾವಿರ ರೂ ಮುಖಬೆಲೆಯ ನೋಟುಗಳ ಮುದ್ರಣ ನಿಂತಿರುವಂತೆಯೇ 5 ರೂ ಮುಖಬೆಲೆಯ ಹಳೆಯ ನಾಣ್ಯದ (5-Rupee Coin) ತಯಾರಿಕೆಯನ್ನು ಆರ್ಬಿಐ ನಿಲ್ಲಿಸಿದೆ. ಈಗೆಲ್ಲಾ ಹಳೆಯ 5 ರೂ ನಾಣ್ಯ ಬಹುತೇಕ ಕಡಿಮೆ ಆಗಿದ್ದು, ಗೋಲ್ಡನ್ ಬಣ್ಣದ ಹೊಸ 5 ರೂ ನಾಣ್ಯಗಳು ಹೆಚ್ಚು ಚಲಾವಣೆಯಲ್ಲಿವೆ. ಈ ಬದಲಾವಣೆಗೆ ಕಾರಣವಾಗಿದ್ದು ಬಾಂಗ್ಲಾದೇಶೀಯರ ಸ್ಮಗ್ಲಿಂಗ್ ಬಿಸಿನೆಸ್.
ಹಳೆಯ 5 ರೂ ನಾಣ್ಯವನ್ನು ಬಾಂಗ್ಲಾದೇಶಕ್ಕೆ ಅಕ್ರಮವಾಗಿ ಸಾಗಾಣಿಕೆ ಮಾಡಲಾಗುತ್ತಿತ್ತು. ಈ ಒಂದು ನಾಣ್ಯದಿಂದ ಹಲವು ರೇಜರ್ ಬ್ಲೇಡ್ ತಯಾರಿಸಬಹುದಾದಷ್ಟು ಗುಣಮಟ್ಟ ಉಳ್ಳದಾಗಿದೆ ಈ ಹಳೆಯ ನಾಣ್ಯ. ಈ ಒಂದು ನಾಣ್ಯ ಕರಗಿಸಿದರೆ ಅದರಿಂದ ಬರುವ ಲೋಹ ಬಳಸಿ 6 ಬ್ಲೇಡ್ (ಶೇವಿಂಗ್ ಬ್ಲೇಡ್) ತಯಾರಿಸಬಹುದಂತೆ. ಒಂದೊಂದು ಬ್ಲೇಡ್ ಅನ್ನು 2 ರೂಗೆ ಮಾರಬಹುದು. ಐದು ರೂ ನಾಣ್ಯದಿಂದ 12 ರೂ ಆದಾಯ ಮಾಡಿಕೊಳ್ಳಬಹುದು. ಹೀಗಾಗಿ, ಹಳೆಯ 5 ರೂ ನಾಣ್ಯಗಳನ್ನು ಕಳ್ಳಸಾಗಾಣಿಕೆದಾರರು ದಂಡಿದಂಡಿಯಾಗಿ ಬಾಂಗ್ಲಾದೇಶಕ್ಕೆ ಸಾಗಿಸುತ್ತಿದ್ದುದು ಸರ್ಕಾರದ ಗಮನಕ್ಕೆ ಬಂದಿತ್ತು. ಈ ಕಾರಣಕ್ಕೆ ಆರ್ಬಿಐ ಹೊಸ ನಾಣ್ಯ ತಯಾರಿಕೆ ಶುರುವಿಟ್ಟಿತು.
ಇದನ್ನೂ ಓದಿ: Twitter Layoffs: ರಾತ್ರಿ ಮನೆಗೆ ಹೋಗದೆ ಕಷ್ಟಪಟ್ಟಿದ್ದರ ಫಲಶ್ರುತಿ; ಟ್ವಿಟ್ಟರ್ನಲ್ಲಿ ಕೆಲಸ ಕಳೆದುಕೊಂಡಳು ಕ್ರಾಫೋರ್ಡ್
ಹಳೆಯ ನಾಣ್ಯದಲ್ಲೇನಿದೆ ವಿಶೇಷತೆ?
ಹೊಸ 5 ರೂ ನಾಣ್ಯಕ್ಕೆ ಹೋಲಿಸಿದರೆ ಹಳೆಯ ನಾಣ್ಯದ ಗುಣಮಟ್ಟ ಉತ್ತಮವಾದುದು. ಒಂದು ನಾಣ್ಯ 9 ಗ್ರಾಂ ತೂಗುತ್ತದೆ. ಇದನ್ನು ಕುಪ್ರೋ–ನಿಕೆಲ್ ಲೋಹದಿಂದ ಮಾಡಲಾಗಿದೆ. ಇದರ ಮುಖಬೆಲೆ 5 ರೂ ಆದರೂ, ನಾಣ್ಯದ ನೈಜ ಮೌಲ್ಯ ಭಿನ್ನವಾಗಿರಬಹುದು. ಕುಪ್ರೋ ನಿಕೆಲ್ ಲೋಹದ ಬೆಲೆ ತುಸು ದುಬಾರಿಯಾದ್ದರಿಂದ ಹಳೆಯ 5 ರೂ ನಾಣ್ಯ ಹೆಚ್ಚು ಮೌಲ್ಯಯುತವಾಗಿದೆ. ಇದನ್ನು ಕರಗಿಸಿ ಲೋಹವನ್ನು ಮಾರುಕಟ್ಟೆಗೆ ಮಾರಿದರೆ 5 ರೂಗಿಂತ ಹೆಚ್ಚು ಸಿಗುತ್ತದೆ. ಇದು ದುಷ್ಕರ್ಮಿಗಳಿಂದ ದುರ್ಬಳಕೆಗೆ ತುತ್ತಾಗಿ ಹೋಗಿದೆ. ಹೀಗಾಗಿ, ಹಳೆಯ 5 ರೂ ನಾಣ್ಯದ ಪ್ರಮಾಣ ಕಡಿಮೆ ಆಗಿಹೋಗಿದೆ ಎಂದು ವರದಿಗಳು ಹೇಳುತ್ತವೆ.
ಇಂಥ ದುರ್ಬಳಕೆಯನ್ನು ತಡೆಗಟ್ಟಲೆಂದೇ ಹೊಸ 5 ರೂ ನಾಣ್ಯವನ್ನು ರೂಪಿಸಲಾಗಿದೆ. ಹೊಸ 5 ರೂ ನಾಣ್ಯ ನೋಡಲು ಹೆಚ್ಚು ಸುಂದರವಾದರೂ ಅದರ ತೂಕ ಬಹಳ ಕಡಿಮೆ. ಅಲ್ಲದೇ ಈ ನಾಣ್ಯ ತಯಾರಿಕೆಗೆ ಕಡಿಮೆ ಬೆಲೆಯ ಲೋಹಗಳನ್ನು ಬೆರೆಸಲಾಗಿದೆ. ಇದನ್ನು ಕರಗಿಸಿ ಲಾಭದಾಯಕವೆನಿಸುವ ಉತ್ಪನ್ನಗಳನ್ನು ಮಾಡಲು ಆಗುವುದಿಲ್ಲ. ರೇಜರ್ ಬ್ಲೇಡ್ ತಯಾರಿಕೆಯೂ ಸಾಧ್ಯವಿಲ್ಲ.