ಕ್ಯಾಲಿಫೋರ್ನಿಯಾ: ಟ್ವಿಟ್ಟರ್ನಲ್ಲಿ ಬಹುಪಾಲು ಉದ್ಯೋಗಿಗಳಿಗೆ ಪಿಂಕ್ ಸ್ಲಿಪ್ ಕೊಟ್ಟು, ಇತ್ತೀಚೆಗಷ್ಟೇ ಇನ್ಮುಂದೆ ಕೆಲಸ ಕಸಿಯೊಲ್ಲ ಎಂದು ಎಲಾನ್ ಮಸ್ಕ್ (Elon Musk) ವಾಗ್ದಾನ ನೀಡಿದ ಬೆನ್ನಲ್ಲೇ 50 ಮಂದಿ ಉದ್ಯೋಗಿಗಳನ್ನು ಮನೆಗೆ ಕಳುಹಿಸಲಾಗಿದೆ. ಕೆಲಸ ಕಳೆದುಕೊಂಡವರ ಹೊಸ ಪಟ್ಟಿಯಲ್ಲಿ ಗಮನ ಸೆಳೆಯುವ ಹೆಸರು ಎಸ್ತರ್ ಕ್ರಾಫೋರ್ಡ್ಳದ್ದು (Esther Crawford). ಈಕೆ ತಡರಾತ್ರಿಯವರೆಗೂ ಕಚೇರಿಯಲ್ಲಿ ಕೆಲಸ ಮಾಡಿ ಅಲ್ಲಿಯೇ ಮಲಗಿರುವ ಫೋಟೋ ವೈರಲ್ ಆಗಿತ್ತು. ಟ್ವಿಟ್ಟರ್ಗೆ ಹೊಸ ಆದಾಯ ಮೂಲವೆನಿಸಿರುವ ಟ್ವಿಟ್ಟರ್ ಪೇಮೆಂಟ್ಸ್ ಫೀಚರ್ನ ಅಭಿವೃದ್ಧಿಗೆ ಈಕೆ ಪ್ರಮುಖ ಕಾರಣ. ಆದರೂ ಇವರನ್ನು ಇಲಾನ್ ಮಸ್ಕ್ ಕೆಲಸದಿಂದ ಕಿತ್ತುಹಾಕಿರುವುದು ನೆಟ್ಟಿಗರನ್ನು ಚಕಿತಗೊಳಿಸಿದೆ.
ಕಳೆದ ವರ್ಷ ಎಲಾನ್ ಮಸ್ಕ್ ಟ್ವಿಟ್ಟರ್ ಮಾಲೀಕತ್ವವನ್ನು ಪಡೆಯುತ್ತಿದ್ದಂತೆಯೇ ಮೊದಲು ಕೆಲಸ ಮಾಡಿದ ಕೆಲಸ ಎಂದರೆ ಉದ್ಯೋಗಿಗಳನ್ನು ಕೆಲಸದಿಂದ ಕಿತ್ತುಹಾಕಿದ್ದು. 7 ಸಾವಿರದಷ್ಟಿದ್ದ ಉದ್ಯೋಗಿಗಳ ಸಂಖ್ಯೆ ನೋಡನೋಡುತ್ತಲೇ 2 ಸಾವಿರಕ್ಕೆ ಇಳಿಯಿತು. ಅಳಿದುಳಿದ ಉದ್ಯೋಗಿಗಳು ಎಲಾನ್ ಮಸ್ಕ್ ಆಶಯದಂತೆ ಟ್ವಿಟ್ಟರ್ನ ರೂಪುರೇಖೆ ಬದಲಾಯಿಸಲು ರಾತ್ರಿ ಹಗಲೆನ್ನದೇ ಕೆಲಸ ಮಾಡಿದ್ದಾರೆ. ಅವರಲ್ಲಿ ಎಸ್ತರ್ ಕ್ರಾಫೋರ್ಡ್ ಕೂಡ ಒಬ್ಬರು. ಎಲಾನ್ ಮಸ್ಕ್ ನೇಮಿಸಿದ ಹೊಸ ಎಕ್ಸಿಕ್ಯೂಟಿವ್ಗಳಲ್ಲಿ ಇವರೂ ಒಬ್ಬರು.
ಎಸ್ತರ್ ಕ್ರಾಫೋರ್ಡ್ ಅವರನ್ನು ಟ್ವಿಟ್ಟರ್ ಬ್ಲೂ ವಿಭಾಗದ ನೂತನ ಮುಖ್ಯಸ್ಥೆಯಾಗಿ ಮಸ್ಕ್ ನೇಮಕ ಮಾಡಿದರು. ಟ್ವಿಟ್ಟರ್ ಪೇಮೆಂಟ್ಸ್ ಎಂಬ ಹೊಸ ಫೀಚರ್ ಅನ್ನು ಡೆವಲಪ್ ಮಾಡಿದ್ದು ಕ್ರಾಫೋರ್ಡ್ ನೇತೃತ್ವದ ತಂಡವೇ. ಇದೀಗ ಅವರ ಕೆಲಸವೇ ಹೋಗಿದೆ. ವರದಿಯ ಪ್ರಕಾರ, ಕಳೆದ ಶುಕ್ರವಾರ ಟ್ವಿಟ್ಟರ್ನ ಇಡೀ ಪ್ರಾಡಕ್ಟ್ ಟೀಮನ್ನೇ ಮನೆಗೆ ಕಳುಹಿಸಲಾಗಿದೆಯಂತೆ. ಒಟ್ಟು 50 ಮಂದಿಗೆ ಉದ್ಯೋಗನಷ್ಟವಾಗಿದೆ.
ಇದನ್ನೂ ಓದಿ: Hyundai ಮತ್ತು KIA ಕಾರುಗಳಿಂದ ಭಾರತಕ್ಕೆ ಭಾರೀ ನಷ್ಟ? ಕೊರಿಯನ್ ಕಂಪನಿಗಳ ಬಗ್ಗೆ ಸಚಿವ ಗೋಯಲ್ ಅಸಮಾಧಾನ
ಇದೇ ವೇಳೆ, ಯಾವಾಗ ಬೇಕಾದರೂ ಕೆಲಸ ಹೋಗುವ ಭೀತಿಯಲ್ಲಿರುವ ಅಳಿದುಳಿದ ಉದ್ಯೋಗಿಗಳ ಭಯ ಇನ್ನಷ್ಟು ಹೆಚ್ಚುವಂತೆ ಸ್ಲ್ಯಾಕ್ ಕನೆಕ್ಷನ್ ತಪ್ಪಿದೆ. ಸ್ಲ್ಯಾಕ್ ಎಂಬುದು ಟ್ವಿಟ್ಟರ್ನಲ್ಲಿ ಉದ್ಯೋಗಿಗಳ ಆಂತರಿಕ ಸಂವಹನಕ್ಕಾಗಿ ಇರುವ ಕಮ್ಯೂನಿಕೇಶನ್ ಅಪ್ಲಿಕೇಶನ್. ಸ್ಲ್ಯಾಕ್ ಬಳಸಲು ಅಸಾಧ್ಯವಾಗಿರುವ ಉದ್ಯೋಗಿಗಳು ತಮ್ಮ ಕೆಲಸ ಹೋಯಿತು ಎಂದು ತಲೆ ಮೇಲೆ ಕೈ ಹೊತ್ತು ಕೂರುವಂತಾಗಿತ್ತು. ಆದರೆ, ನಿಜಾಂಶ ತಿಳಿದ ಮೇಲೆ ಇವರು ನಿಟ್ಟುಸಿರು ಬಿಟ್ಟಿದ್ದಾರೆ. ನಿಜಾಂಶ ಏನೆಂದರೆ, ಎಲಾನ್ ಮಸ್ಕ್ ಅವರು ಸ್ಲ್ಯಾಕ್ ಅಪ್ಲಿಕೇಶನ್ನ ಬಿಲ್ ಅನ್ನು ಕಟ್ಟಿಲ್ಲದಿರುವುದರಿಂದ ಅದರ ಅಕ್ಸೆಸ್ ನಿಂತುಹೋಗಿತ್ತು ಎನ್ನಲಾಗಿದೆ.
Published On - 12:54 pm, Mon, 27 February 23