AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

PM Kisan 13th Installment: ಪಿಎಂ ಕಿಸಾನ್ 13ನೇ ಕಂತು ಇಂದು ಬಿಡುಗಡೆ; ಹಣ ಬಂದಿಲ್ಲವಾ? ಹೀಗೆ ಮಾಡಿ

How To Check PM Kisan Installment: ಪಿಎಂ ಕಿಸಾನ್ ಯೋಜನೆಯ 13ನೇ ಕಂತಿನ ಹಣ ನಿಮಗೆ ಇನ್ನೂ ಬಂದಿಲ್ಲದಿದ್ದರೆ ಕಿಸಾನ್ ಪೋರ್ಟಲ್​ಗೆ ಹೋಗಿ ಅಲ್ಲಿ ಫಲಾನುಭವಿಗಳ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯಾ ಎಂದು ಮೊದಲು ಖಾತ್ರಿಪಡಿಸಿಕೊಳ್ಳಿ. ಅದರ ವಿವರ ಇಲ್ಲಿದೆ....

PM Kisan 13th Installment: ಪಿಎಂ ಕಿಸಾನ್ 13ನೇ ಕಂತು ಇಂದು ಬಿಡುಗಡೆ; ಹಣ ಬಂದಿಲ್ಲವಾ? ಹೀಗೆ ಮಾಡಿ
ಪಿಎಂ ಕಿಸಾನ್ ಯೋಜನೆ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Feb 27, 2023 | 11:03 AM

Share

ಬೆಂಗಳೂರು: ಕೇಂದ್ರ ಸರ್ಕಾರದ ಅತ್ಯಂತ ಜನಪ್ರಿಯ ಯೋಜನೆಗಳಲ್ಲೊಂದಾದ ಪಿಎಂ ಕಿಸಾನ್ ಸ್ಕೀಮ್​ನ (PM Kisan Samman Nidhi) 13ನೇ ಕಂತಿನ ಹಣ ಫೆಬ್ರುವರಿ 27, ಇಂದು ಬಿಡುಗಡೆ ಆಗುತ್ತಿದೆ. ಬೆಳೆ ಕಟಾವಿಗೆ ಮುನ್ನ ಎಂಟು ಕೋಟಿ ರೈತರಿಗೆ ಒಟ್ಟು 16,800 ಕೋಟಿ ರೂ ಅನ್ನು ಕೇಂದ್ರ ಬಿಡುಗಡೆ ಮಾಡುತ್ತಿದೆ. ಪ್ರತೀ ಫಲಾನುಭವಿ ರೈತರ ಖಾತೆಗೆ ನೇರವಾಗಿ 2,000 ರೂ ಜಮೆ ಆಗಲಿದೆ. ಕರ್ನಾಟಕ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಬೆಳಗಾವಿಯಲ್ಲಿ (Narendra Modi at Belagavi) ಮಧ್ಯಾಹ್ನ ಪಿಎಂ ಕಿಸಾನ್​ನ 13ನೇ ಕಂತಿನ ಹಣ ಬಿಡುಗಡೆ ಆಗಿರುವುದನ್ನು ಅಧಿಕೃತವಾಗಿ ಘೋಷಿಸಲಿದ್ದಾರೆ.

2018 ಡಿಸೆಂಬರ್ 1ರಂದು ಚಾಲನೆಗೊಂಡ ಪಿಎಂ ಕಿಸಾನ್ ಯೋಜನೆಯ ಮೊದಲ ಕಂತಿನ ಹಣ 2019, ಫೆಬ್ರುವರಿ 24ರಂದು ಬಿಡುಗಡೆ ಆಗಿತ್ತು. ಅಲ್ಲಿಂದ ಇಲ್ಲಿಯವರೆಗೆ ಕೇಂದ್ರ ಸರ್ಕಾರ 12 ಕಂತುಗಳನ್ನು ರೈತರ ಖಾತೆಗೆ ಜಮೆ ಮಾಡಿದೆ. ಇವತ್ತು 13ನೇ ಕಂತು. ಕೇಂದ್ರ ಸರ್ಕಾರದ ಈ ಪಿಎಂ ಕಿಸಾನ್ ಯೋಜನೆಯಲ್ಲಿ ರೈತರ ಬೆಳೆ ಕಾರ್ಯಕ್ಕೆ ಅನುಕೂಲವಾಗಲೆಂದು ಪ್ರತೀ ವರ್ಷ ಒಟ್ಟು 6 ಸಾವಿರ ರೂ ಧನಸಹಾಯ ನೀಡಲಾಗುತ್ತದೆ. ಇದರಲ್ಲಿ ಪ್ರತೀ 4 ತಿಂಗಳಿಗೊಮ್ಮೆ ತಲಾ 2 ಸಾವಿರ ರೂ ಮೊತ್ತದ ಕಂತು ಹಣ ಬಿಡುಗಡೆ ಆಗುತ್ತದೆ. ಕರ್ನಾಟಕ ಸರ್ಕಾರ ಇನ್ನೆರಡು ಕಂತುಗಳನ್ನು ಸೇರಿಸಿ ಕೊಡುತ್ತದೆ. ಅಂದರೆ ರಾಜ್ಯದ ರೈತರಿಗೆ ವರ್ಷಕ್ಕೆ 5 ಕಂತುಗಳು, ಅಂದರೆ ಒಟ್ಟು 10 ಸಾವಿರ ರೂ ಸಿಗುತ್ತದೆ. ಈ ಯೋಜನೆಯಲ್ಲಿ 8 ಕೋಟಿಗೂ ಹೆಚ್ಚು ರೈತರು ನೊಂದಣಿ ಮಾಡಿಕೊಂಡು ಫಲಾನುಭವಿಗಳೆನಿಸಿದ್ದಾರೆ.

ಈ ಬಾರಿ ಕಂತಿನ ಹಣ ಬಿಡುಗಡೆಗೆ ಮುನ್ನ ರೈತರು ಕೆವೈಸಿ ಪರಿಷ್ಕರಿಸುವುದು ಅಗತ್ಯವಿತ್ತು. ಹೀಗಾಗಿ, ಹಣ ಬಿಡುಗಡೆ ತುಸು ವಿಳಂಬಗೊಂಡಿತ್ತು. ಕೆವೈಸಿ ಅಪ್​ಡೇಟ್ ಮಾಡಿದ ಎಲ್ಲಾ ರೈತರಿಗೂ 13ನೇ ಕಂತಿನ ಹಣ ಸಿಗಲಿದೆ. ಕೆಲ ರೈತರಿಗೆ ಇಂದೇ ಖಾತೆಗೆ ಹಣ ವರ್ಗಾವಣೆ ಆಗಬಹುದು. ಕೆಲವರಿಗೆ ಒಂದು ವಾರ ಆಗಬಹುದು.

ಇದನ್ನೂ ಓದಿRD Rates: ಎಸ್​ಬಿಐ, ಎಚ್​ಡಿಎಫ್​ಸಿಯಲ್ಲಿ ಆರ್​ಡಿಗೆ ಬಡ್ಡಿ ಎಷ್ಟು ಸಿಗುತ್ತದೆ? ಇಲ್ಲಿದೆ ಡೀಟೇಲ್ಸ್

ಒಂದು ವೇಳೆ ನಿಮ್ಮ ಬ್ಯಾಂಕ್ ಖಾತೆ ಹಣ ಜಮೆ ಆಗಿರದಿದ್ದರೆ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಪೋರ್ಟಲ್​ಗೆ ಹೋಗಿ ಪರಿಶೀಲನೆ ನಡೆಸಬಹುದು. ಪೋರ್ಟಲ್​ನಲ್ಲಿ ಬೆನಿಫಿಶಿಯರಿ ಸ್ಟೇಟಸ್ ಟ್ಯಾಬ್​ಗೆ ಹೋಗಿ ಅಲ್ಲಿ ನಿಮ್ಮ ನೊಂದಾಯಿತ ಮೊಬೈಲ್ ನಂಬರ್ ಹಾಕಿದರೆ ವಿವರ ಸಿಗುತ್ತದೆ.

ಹಾಗೆಯೇ, ಬೆನಿಫಿಶಿಯರಿ ಲಿಸ್ಟ್ ಟ್ಯಾಬ್​ಗೆ ಹೋಗಿ ನಿಮ್ಮ ರಾಜ್ಯ, ಜಿಲ್ಲೆ, ಉಪಜಿಲ್ಲೆ, ಬ್ಲಾಕ್ ಮತ್ತು ಗ್ರಾಮದ ಹೆಸರನ್ನು ನಮೂದಿಸಿದರೆ ಆ ಊರಿನ ಎಲ್ಲಾ ಫಲಾನುಭವಿಗಳ ಪಟ್ಟಿ ಸಿಗುತ್ತದೆ. ಒಂದು ವೇಳೆ ನೀವು ಫಲಾನುಭವಿಯಾಗಲು ಅರ್ಹರಿದ್ದೂ ಪಟ್ಟಿಯಲ್ಲಿ ಹೆಸರು ಇಲ್ಲದಿದ್ದರೆ ಮತ್ತೊಮ್ಮೆ ನೊಂದಾವಣಿ ಮಾಡಿಸಬೇಕಾಗಬಹುದು. ಅಥವಾ ಸಮೀಪದ ಸಿಎಸ್​ಸಿ ಕೇಂದ್ರಕ್ಕೆ ಹೋಗಿ ಸಂಪರ್ಕಿಸಬಹುದು.

ಎಲ್ಲಾ ರೈತರಿಗೂ ಅರ್ಹರಾ?

ಯೋಜನೆಯ ಆರಂಭದಲ್ಲಿ ಸಣ್ಣ ರೈತರಿಗೆಂದು ಉದ್ದೇಶಿಸಲಾಗಿತ್ತು. ಅಂದರೆ 2 ಹೆಕ್ಟೇರ್​ಗಿಂತ ಹೆಚ್ಚು ಜಮೀನು ಇರದ ರೈತರಿಗೆ ಧನಸಹಾಯ ನೀಡಲಾಗುತ್ತಿತ್ತು. ಇತ್ತೀಚೆಗೆ ಈ ಯೋಜನೆಯನ್ನು ಎಲ್ಲಾ ರೈತರಿಗೂ ವಿಸ್ತರಿಸಲಾಗಿದೆ.

ಇದನ್ನೂ ಓದಿPAN Alert! ಪಾನ್ ಕಾರ್ಡ್​ದಾರರೇ ಗಮನಿಸಿ, ಉಚಿತವಾಗಿ ಆಗಬೇಕಾದ ಕೆಲಸಕ್ಕೆ ಸಾವಿರ ರೂ ತೆರಬೇಕಾದೀತು; 10 ಸಾವಿರ ದಂಡ ಬಿದ್ದೀತು

ಆದರೆ, ವೃತ್ತಿಪರರು, ಸರ್ಕಾರಿ ನೌಕರರು ಮೊದಲಾದವರು ರೈತರಾಗಿದ್ದರೂ ಈ ಯೋಜನೆಯ ಫಲಾನುಭವಿಗಲು ಅರ್ಹರಿರುವುದಿಲ್ಲ. ಹಾಗೆಯೇ, ಐಟಿ ರಿಟರ್ನ್ಸ್ ಸಲ್ಲಿಸುತ್ತಿರುವವರನ್ನೂ ಯೋಜನೆಯ ವ್ಯಾಪ್ತಿಯಿಂದ ಹೊರಗಿಡಲಾಗಿದೆ. ಒಂದು ವೇಳೆ ಯೋಜನೆಗೆ ಯಾವುದೇ ರೈತ ಅರ್ಹನಾಗಿದ್ದರೂ ಅವರ ಕುಟುಂಬದಲ್ಲಿ ಯಾರಾದರೂ ಆದಾಯ ತೆರಿಗೆ ಪಾವತಿಸುವವರಾಗಿದ್ದರೆ ಅಂಥವರೂ ಯೋಜನೆಗೆ ಅರ್ಹರಾಗಿರುವುದಿಲ್ಲ.

ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ