ಬೆಳಗಾವಿ: ಪ್ರಧಾನಿ ನರೇಂದ್ರ ಮೋದಿ ಇಂದು ಪಿಎಂ ಕಿಸಾನ್ ಯೋಜನೆಯ (PM Kisan Scheme) 13ನೇ ಕಂತಿನ ಹಣವನ್ನು ಫಲಾನುಭವಿ ರೈತರಿಗೆ ಬಿಡುಗಡೆ ಮಾಡಿದ್ದಾರೆ. ಇಲ್ಲಿಯ ಮಾಲಿನಿ ಸಿಟಿಯಲ್ಲಿ (Malini City of Belagavi) ಆಯೋಜಿಸಲಾದ ಸಮಾವೇಶದಲ್ಲಿ ಪ್ರಧಾನಿಗಳು 16 ಸಾವಿರ ಕೋಟಿ ರೂಗೂ ಹೆಚ್ಚು ಮೊತ್ತದ ಹಣವನ್ನು ಬಿಡುಗಡೆ ಮಾಡಿದ್ದಾರೆ. ಇದರೊಂದಿಗೆ 8 ಕೋಟಿಗೂ ಹೆಚ್ಚು ರೈತರ ಖಾತೆಗಳಿಗೆ ತಲಾ 2 ಸಾವಿರ ರೂ ಜಮೆಯಾಗಲಿದೆ. ಕರ್ನಾಟಕದಲ್ಲಿ ಪಿಎಂ ಕಿಸಾನ್ ಯೋಜನೆಯ 49 ಲಕ್ಷ ಫಲಾನುಭವಿಗಳಿಗೆ ಪಿಎಂ ಮೋದಿ ಉಡುಗೊರೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ನರೇಂದ್ರ ಮೋದಿ, ದೇಶದ ಎಲ್ಲಾ ಫಲಾನುಭವಿ ರೈತರ ಖಾತೆಗಳಿಗೆ ಒಂದು ಕ್ಲಿಕ್ ಮೂಲಕ ಹಣ ವರ್ಗಾವಣೆ ಆಗಿದೆ. ಮಧ್ಯವರ್ತಿಗಳ ಕಾಟ ಇಲ್ಲದೇ ನೇರವಾಗಿ ಹಣ ರೈತರನ್ನು ತಲುಪಿದೆ. ಕಾಂಗ್ರೆಸ್ ಸರ್ಕಾರ ಇದ್ದಾಗ ಕೋಟಿ ಹಣ ಬಿಡುಗಡೆ ಮಾಡಿದರೆ ಪೂರ್ಣವಾಗಿ ಯಾರ ಕೈಗೂ ತಲುಪುತ್ತಿರಲಿಲ್ಲ. ದಶಕಗಳವರೆಗೂ ಕಾಂಗ್ರೆಸ್ಸಿಗರು ರೈತರನ್ನು ಕಡೆಗಣಿಸಿದ್ದರು ಎಂದರು.
ಭಾರತದ ಭವಿಷ್ಯದ ದೃಷ್ಟಿಯಿಂದ ಕೃಷಿ ಕ್ಷೇತ್ರಕ್ಕೆ ಹೆಚ್ಚು ಒತ್ತು ನೀಡಿದ್ದೇವೆ. ಬಜೆಟ್ನಲ್ಲಿ ಈ ಕ್ಷೇತ್ರಕ್ಕೆ 1 ಲಕ್ಷ ಕೋಟಿಗೂ ಹೆಚ್ಚು ಅನುದಾನ ಮೀಸಲಿಡಲಾಗಿದೆ. ರೈತರಿಗೆ ಪಿಎಂ ಪ್ರಮಾಣ್ ಸೇರಿದಂತೆ ಹಲವು ಯೋಜನೆಗಳನ್ನು ಪ್ರಕಟಿಸಿದ್ದೇವೆ ಎಂದು ಪ್ರಧಾನಿಗಳು ಹೇಳಿದರು.
ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, ಸಿಎಂ ಬಸವರಾಜ ಬೊಮ್ಮಾಯಿ, ಲಕ್ಷ್ಮಣ ಸವದಿ, ಗೋವಿಂದ ಕಾರಜೋಳ, ಶಶಿಕಲಾ ಜೊಲ್ಲೆ ಮೊದಲಾದ ಹಲವರು ಈ ಕಾರ್ಯಕ್ರಮದಲ್ಲಿದ್ದರು. ಪಿಎಂ ಮೋದಿ ಇದಕ್ಕೆ ಮುನ್ನ ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣ ಉದ್ಘಾಟನೆ ಮಾಡಿ ಬಂದಿದ್ದರು. ಬಳಿಕ ಬೆಳಗಾವಿಯಲ್ಲಿ ರೋಡ್ಶೋ ಕೂಡ ನಡೆಸಿದರು.
ಪಿಎಂ ಕಿಸಾನ್ ಸಮ್ಮಾನ್ ನಿಧಿ
ಕೇಂದ್ರ ಸರ್ಕಾರದ ಅತ್ಯಂತ ಜನಪ್ರಿಯ ಯೋಜನೆಗಳಲ್ಲೊಂದಾದ ಪಿಎಂ ಕಿಸಾನ್ ಸ್ಕೀಮ್ನ (PM Kisan Samman Nidhi) 13ನೇ ಕಂತಿನ ಒಟ್ಟು 6,800 ಕೋಟಿ ರೂ ಇಂದು (ಫೆ. 27) ಬಿಡುಗಡೆ ಆಗಿದೆ. ಪ್ರತೀ ಫಲಾನುಭವಿ ರೈತರ ಖಾತೆಗೆ ನೇರವಾಗಿ 2,000 ರೂ ಜಮೆ ಆಗುತ್ತಿದೆ.
ಇದನ್ನೂ ಓದಿ: PM KUSUM Scheme: ಪಿಎಂ ಕುಸುಮ್- ಕೇಂದ್ರದ ದೂರದೃಷ್ಟಿಯ ಒಂದು ಯೋಜನೆ
2018 ಡಿಸೆಂಬರ್ 1ರಂದು ಚಾಲನೆಗೊಂಡ ಪಿಎಂ ಕಿಸಾನ್ ಯೋಜನೆಯ ಮೊದಲ ಕಂತಿನ ಹಣ 2019, ಫೆಬ್ರುವರಿ 24ರಂದು ಬಿಡುಗಡೆ ಆಗಿತ್ತು. ಅಲ್ಲಿಂದ ಇಲ್ಲಿಯವರೆಗೆ ಕೇಂದ್ರ ಸರ್ಕಾರ 12 ಕಂತುಗಳನ್ನು ರೈತರ ಖಾತೆಗೆ ಜಮೆ ಮಾಡಿದೆ. ಇವತ್ತು 13ನೇ ಕಂತು. ಕೇಂದ್ರ ಸರ್ಕಾರದ ಈ ಪಿಎಂ ಕಿಸಾನ್ ಯೋಜನೆಯಲ್ಲಿ ರೈತರ ಬೆಳೆ ಕಾರ್ಯಕ್ಕೆ ಅನುಕೂಲವಾಗಲೆಂದು ಪ್ರತೀ ವರ್ಷ ಒಟ್ಟು 6 ಸಾವಿರ ರೂ ಧನಸಹಾಯ ನೀಡಲಾಗುತ್ತದೆ. ಇದರಲ್ಲಿ ಪ್ರತೀ 4 ತಿಂಗಳಿಗೊಮ್ಮೆ ತಲಾ 2 ಸಾವಿರ ರೂ ಮೊತ್ತದ ಕಂತು ಹಣ ಬಿಡುಗಡೆ ಆಗುತ್ತದೆ. ಕರ್ನಾಟಕ ಸರ್ಕಾರ ಇನ್ನೆರಡು ಕಂತುಗಳನ್ನು ಸೇರಿಸಿ ಕೊಡುತ್ತದೆ. ಅಂದರೆ ರಾಜ್ಯದ ರೈತರಿಗೆ ವರ್ಷಕ್ಕೆ 5 ಕಂತುಗಳು, ಅಂದರೆ ಒಟ್ಟು 10 ಸಾವಿರ ರೂ ಸಿಗುತ್ತದೆ. ಈ ಯೋಜನೆಯಲ್ಲಿ 8 ಕೋಟಿಗೂ ಹೆಚ್ಚು ರೈತರು ನೊಂದಣಿ ಮಾಡಿಕೊಂಡು ಫಲಾನುಭವಿಗಳೆನಿಸಿದ್ದಾರೆ.
ಈ ಬಾರಿ ಕಂತಿನ ಹಣ ಬಿಡುಗಡೆಗೆ ಮುನ್ನ ರೈತರು ಕೆವೈಸಿ ಪರಿಷ್ಕರಿಸುವುದು ಅಗತ್ಯವಿತ್ತು. ಹೀಗಾಗಿ, ಹಣ ಬಿಡುಗಡೆ ತುಸು ವಿಳಂಬಗೊಂಡಿತ್ತು. ಕೆವೈಸಿ ಅಪ್ಡೇಟ್ ಮಾಡಿದ ಎಲ್ಲಾ ರೈತರಿಗೂ 13ನೇ ಕಂತಿನ ಹಣ ಸಿಗಲಿದೆ. ಕೆಲ ರೈತರಿಗೆ ಇಂದೇ ಖಾತೆಗೆ ಹಣ ವರ್ಗಾವಣೆ ಆಗಬಹುದು. ಕೆಲವರಿಗೆ ಒಂದು ವಾರ ಆಗಬಹುದು.
ಇದನ್ನೂ ಓದಿ: Rs 5 Coin: ಭಾರತದ 5 ರೂ ನಾಣ್ಯ ಬಳಸಿ ಬಾಂಗ್ಲಾದಲ್ಲಿ ಬ್ಲೇಡ್ ಬಿಸಿನೆಸ್? ಆರ್ಬಿಐ ಕಾಯಿನ್ ಕಥೆ
ಒಂದು ವೇಳೆ ನಿಮ್ಮ ಬ್ಯಾಂಕ್ ಖಾತೆ ಹಣ ಜಮೆ ಆಗಿರದಿದ್ದರೆ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಪೋರ್ಟಲ್ಗೆ ಹೋಗಿ ಪರಿಶೀಲನೆ ನಡೆಸಬಹುದು. ಪೋರ್ಟಲ್ನಲ್ಲಿ ಬೆನಿಫಿಶಿಯರಿ ಸ್ಟೇಟಸ್ ಟ್ಯಾಬ್ಗೆ ಹೋಗಿ ಅಲ್ಲಿ ನಿಮ್ಮ ನೊಂದಾಯಿತ ಮೊಬೈಲ್ ನಂಬರ್ ಹಾಕಿದರೆ ವಿವರ ಸಿಗುತ್ತದೆ.
ಹಾಗೆಯೇ, ಬೆನಿಫಿಶಿಯರಿ ಲಿಸ್ಟ್ ಟ್ಯಾಬ್ಗೆ ಹೋಗಿ ನಿಮ್ಮ ರಾಜ್ಯ, ಜಿಲ್ಲೆ, ಉಪಜಿಲ್ಲೆ, ಬ್ಲಾಕ್ ಮತ್ತು ಗ್ರಾಮದ ಹೆಸರನ್ನು ನಮೂದಿಸಿದರೆ ಆ ಊರಿನ ಎಲ್ಲಾ ಫಲಾನುಭವಿಗಳ ಪಟ್ಟಿ ಸಿಗುತ್ತದೆ. ಒಂದು ವೇಳೆ ನೀವು ಫಲಾನುಭವಿಯಾಗಲು ಅರ್ಹರಿದ್ದೂ ಪಟ್ಟಿಯಲ್ಲಿ ಹೆಸರು ಇಲ್ಲದಿದ್ದರೆ ಮತ್ತೊಮ್ಮೆ ನೊಂದಾವಣಿ ಮಾಡಿಸಬೇಕಾಗಬಹುದು. ಅಥವಾ ಸಮೀಪದ ಸಿಎಸ್ಸಿ ಕೇಂದ್ರಕ್ಕೆ ಹೋಗಿ ಸಂಪರ್ಕಿಸಬಹುದು.
ಎಲ್ಲಾ ರೈತರೂ ಅರ್ಹರಾ?
ಯೋಜನೆಯ ಆರಂಭದಲ್ಲಿ ಸಣ್ಣ ರೈತರಿಗೆಂದು ಉದ್ದೇಶಿಸಲಾಗಿತ್ತು. ಅಂದರೆ 2 ಹೆಕ್ಟೇರ್ಗಿಂತ ಹೆಚ್ಚು ಜಮೀನು ಇರದ ರೈತರಿಗೆ ಧನಸಹಾಯ ನೀಡಲಾಗುತ್ತಿತ್ತು. ಇತ್ತೀಚೆಗೆ ಈ ಯೋಜನೆಯನ್ನು ಎಲ್ಲಾ ರೈತರಿಗೂ ವಿಸ್ತರಿಸಲಾಗಿದೆ.
ಇದನ್ನೂ ಓದಿ: PAN Alert! ಪಾನ್ ಕಾರ್ಡ್ದಾರರೇ ಗಮನಿಸಿ, ಉಚಿತವಾಗಿ ಆಗಬೇಕಾದ ಕೆಲಸಕ್ಕೆ ಸಾವಿರ ರೂ ತೆರಬೇಕಾದೀತು; 10 ಸಾವಿರ ದಂಡ ಬಿದ್ದೀತು
ಆದರೆ, ವೃತ್ತಿಪರರು, ಸರ್ಕಾರಿ ನೌಕರರು ಮೊದಲಾದವರು ರೈತರಾಗಿದ್ದರೂ ಈ ಯೋಜನೆಯ ಫಲಾನುಭವಿಗಲು ಅರ್ಹರಿರುವುದಿಲ್ಲ. ಹಾಗೆಯೇ, ಐಟಿ ರಿಟರ್ನ್ಸ್ ಸಲ್ಲಿಸುತ್ತಿರುವವರನ್ನೂ ಯೋಜನೆಯ ವ್ಯಾಪ್ತಿಯಿಂದ ಹೊರಗಿಡಲಾಗಿದೆ. ಒಂದು ವೇಳೆ ಯೋಜನೆಗೆ ಯಾವುದೇ ರೈತ ಅರ್ಹನಾಗಿದ್ದರೂ ಅವರ ಕುಟುಂಬದಲ್ಲಿ ಯಾರಾದರೂ ಆದಾಯ ತೆರಿಗೆ ಪಾವತಿಸುವವರಾಗಿದ್ದರೆ ಅಂಥವರೂ ಯೋಜನೆಗೆ ಅರ್ಹರಾಗಿರುವುದಿಲ್ಲ.
Published On - 5:25 pm, Mon, 27 February 23