ಬೆಂಗಳೂರು, ಜುಲೈ 19: ದೇಶದ ಹಲವೆಡೆ ತೀವ್ರವಾಗಿ ಏರಿದ್ದ ಟೊಮೆಟೋದ ಬೆಲೆಗಳು ಸುಧಾರಿಸಿಕೊಂಡಿವೆ. ಸರ್ಕಾರವೇ ಮುಂದೆ ನಿಂತು ಹಲವೆಡೆ ಟೊಮೆಟೋವನ್ನು ಅಗ್ಗದ ಬೆಲೆಗೆ ಮಾರುತ್ತಿದೆ. ಬೆಂಗಳೂರಿನಲ್ಲಿ ಮಾತ್ರ ಟೊಮೆಟೋ ಬೆಲೆ (Tomato Price) ಕಡಿಮೆ ಆಗುವ ಲಕ್ಷಣ ಕಾಣುತ್ತಿಲ್ಲ. ಈಗಲೂ 120 ರೂ ಮೇಲೆಯೇ ಬೆಲೆ ಇದೆ. ಇದೇ ವೇಳೆ, ನೆರೆಯ ಕೋಲಾರದಲ್ಲಿ ಟೊಮೆಟೋ ಹೆಚ್ಚಾಗಿ ಬೆಳೆಯಲಾಗುತ್ತಿದ್ದರೂ ಬೆಂಗಳೂರಿನಲ್ಲಿ ಟೊಮೆಟೋ ಬೆಲೆ ತಗ್ಗುತ್ತಿಲ್ಲದಿರುವುದು ಆಶ್ಚರ್ಯ ಮೂಡಿಸುತ್ತದೆ. ಇದು ಕರ್ನಾಟಕದಾದ್ಯಂತ ಇರುವ ಸ್ಥಿತಿಯೂ ಹೌದು. ಕೋಲಾರದ ಟೊಮೆಟೋ ಬೆಂಗಳೂರಿಗೆ ಬರುವುದಕ್ಕಿಂತ ಹೆಚ್ಚಾಗಿ ಉತ್ತರ ಭಾರತಕ್ಕೆ ಸಾಗುತ್ತಿವೆಯಂತೆ.
ತೋಟಗಾರಿಕಾ ಬೆಳೆಗಾರರ ಸಹಕಾರಿ ಮಾರಾಟ ಮತ್ತು ಸಂಸ್ಕರಣೆ ಸಂಘದ (ಹಾಪ್ಕಾಮ್ಸ್) ನಿರ್ವಾಹಕ ನಿರ್ದೇಶಕ ಉಮೇಶ್ ರೆಡ್ಡಿ ಹೇಳುವ ಪ್ರಕಾರ, ರಾಜ್ಯಕ್ಕೆ ಅಗತ್ಯ ಇರುವಷ್ಟು ಟೊಮೆಟೋದ ಸರಬರಾಜು ಇಲ್ಲ. ಕೋಲಾರದ ಹೆಚ್ಚಿನ ಟೊಮೆಟೋಗಳು ಕರ್ನಾಟಕ ಬದಲು ಬೇರೆ ಕಡೆಗೆ ಹೋಗುತ್ತಿವೆ. ನಾಶಿಕ್ನಿಂದ ಬರಬೇಕಿದ್ದ ಟೊಮೆಟೋ ಈ ಬಾರಿ ಕೈಕೊಟ್ಟಿವೆಯಂತೆ. ಮುಂದಿನ ದಿನಗಳಲ್ಲಿ ಟೊಮೆಟೋ ಬೆಳೆ ಉತ್ತಮಗೊಂಡು ಪೂರೈಕೆ ಹೆಚ್ಚಾಗಿ, ಟೊಮೆಟೋ ಬೆಲೆ ಇಳಿಕೆಯಾಗುವ ನಿರೀಕ್ಷೆ ಇದೆ.
ಇದನ್ನೂ ಓದಿ: ಟೊಮೆಟೊ ಹೊತ್ತು ಕೋಲಾರದಿಂದ ದೆಹಲಿಗೆ ಹೊರಟಿದ್ದ ಲಾರಿ ಪಲ್ಟಿ, ಕೆಂಪು ಸುಂದ್ರಿಗೆ ಪೊಲೀಸರಿಂದ ಬಿಗಿಬಂದೋಬಸ್ತ್
ಹಿಮಾಚಲಪ್ರದೇಶದಲ್ಲಿ ಪ್ರವಾಹದಿಂದಾಗಿ ಟೊಮೆಟೋ ಬೆಳೆ ಹಾಳಾದ ಹಿನ್ನೆಲೆಯಲ್ಲಿ ಉತ್ತರಭಾರತದ ವಿವಿಧೆಡೆ ಟೊಮೆಟೋ ಪೂರೈಕೆ ಬಹಳ ಕಡಿಮೆ ಆಗಿದೆ. ಕೋಲಾರ ಮತ್ತು ಈಗ ಮಹಾರಾಷ್ಟ್ರದಿಂದ ದೇಶದ ವಿವಿಧೆಡೆಗೆ ಟೊಮೆಟೋ ಸರಬರಾಜು ಆಗುತ್ತಿದೆ. ಕೆಲ ತಿಂಗಳುಗಳ ಹಿಂದಿನಿಂದಲೇ ಉತ್ತರಭಾರತದ ಬಹಳಷ್ಟು ವರ್ತಕರು ಕೋಲಾರದಲ್ಲಿ ಬೀಡುಬಿಟ್ಟಿದ್ದಾರೆ. ಇಲ್ಲಿಯ ಎಪಿಎಂಸಿ ಯಾರ್ಡ್ನಲ್ಲಿ ನಡೆಯುವ ಹರಾಜಿನಲ್ಲಿ ಹೆಚ್ಚಿನ ಬೆಲೆ ಕೊಟ್ಟು ಟೊಮೆಟೋವನ್ನು ಇವರು ಖರೀದಿಸಿ ಉತ್ತರಭಾರತಕ್ಕೆ ಸಾಗಿಸುತ್ತಿದ್ದಾರೆ. ಇದು ಒಂದು ವಿಷಯ.
ಮತ್ತೊಂದು ಸಂಗತಿ ಎಂದರೆ ಕೋಲಾರ ಎಪಿಎಂಸಿ ಮಾರುಕಟ್ಟೆಗೆ ಟೊಮೆಟೋ ಪೂರೈಕೆಯಲ್ಲಿ ಹೆಚ್ಚಳ ಆಗಿಲ್ಲದೇ ಇರುವುದು. ಕೋಲಾರ ಎಪಿಎಂಸಿ ಮಾರುಕಟ್ಟೆಯ ಕಾರ್ಯದರ್ಶಿ ವಿಜಯಲಕ್ಷ್ಮೀ ಹೇಳುವ ಪ್ರಕಾರ ಈಗ 55ರಿಂದ 65 ಸಾವಿರ ಟೊಮೆಟೋ ಕ್ರೇಟ್ಗಳು ನಿತ್ಯ ಬರುತ್ತಿವೆ. ಈ ಹಿಂದಿನ ವರ್ಷಗಳಲ್ಲಿ ಇದೇ ಅವಧಿಯಲ್ಲಿ ಸರಬರಾಜಾಗುತ್ತಿದ್ದ ಟೊಮೆಟೋಗೆ ಹೋಲಿಸಿದರೆ ಈ ಬಾರಿ ಶೇ. 20ರಷ್ಟು ಮಾತ್ರ ಸಪ್ಲೈ ಇದೆ. ಇದರಲ್ಲಿ ಬೆಂಗಳೂರಿಗೆ ಬರುತ್ತಿರುವುದು ಶೇ. 5ರಿಂದ 6 ರಷ್ಟು ಟೊಮೆಟೋ ಮಾತ್ರ.
ಇದನ್ನೂ ಓದಿ: Tomato: 2021ರಲ್ಲಿ ಟೊಮೆಟೋದಿಂದ 20 ಲಕ್ಷ ನಷ್ಟ ಮಾಡಿಕೊಂಡಿದ್ದ ರೈತನಿಗೆ ಈ ಬಾರಿ 3 ಕೋಟಿ ರೂ ಬಂಪರ್
ಈ ಪರಿಸ್ಥಿತಿಯಲ್ಲಿ ಟೊಮೆಟೋ ಬೆಲೆ ಹೆಚ್ಚುವ ಸಾಧ್ಯತೆಯನ್ನು ಅಧಿಕಾರಿಗಳು ತಳ್ಳಿಹಾಕುತ್ತಾರೆ. ಬೆಂಗಳೂರಿನಲ್ಲಿ ಮುಂದಿನ ಕೆಲ ದಿನಗಳವರೆಗೂ ಬೆಲೆ ಏರಿಕೆ ಆಗದೇ ಬಹುತೇಕ ಯಥಾಸ್ಥಿತಿಯಲ್ಲಿ ಮುಂದುವರಿಯಬಹುದು. ಮಹಾರಾಷ್ಟ್ರದ ನಾಶಿಕ್ನಿಂದ ಟೊಮೆಟೋ ಆವಕಗಳು ಬಂದ ಬಳಿಕ ಬೆಲೆ ಇಳಿಕೆ ಆಗಬಹುದು ಎಂದೆನ್ನಲಾಗುತ್ತಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ