Tomato: 2021ರಲ್ಲಿ ಟೊಮೆಟೋದಿಂದ 20 ಲಕ್ಷ ನಷ್ಟ ಮಾಡಿಕೊಂಡಿದ್ದ ರೈತನಿಗೆ ಈ ಬಾರಿ 3 ಕೋಟಿ ರೂ ಬಂಪರ್
Pune Farmer Earns Rs. 2.8 Cr From Tomatoes: ಪುಣೆಯ ಈಶ್ವರ್ ಗಾಯಕರ್ ಎಂಬುವವರು ತಮ್ಮ ಜಮೀನಿನಲ್ಲಿ ಬೆಳೆದಿದ್ದ ಟೊಮೆಟೋ ಮಾರಿ 2.8 ಕೋಟಿ ರೂ ಲಾಭ ಮಾಡಿಕೊಂಡಿದ್ದಾರೆ. ಅವರ ಬಳಿ ಇನ್ನೂ ಸಾವಿರಾರು ಕ್ರೇಟ್ ಟೊಮೆಟೋ ಇದ್ದು ಇನ್ನಷ್ಟು ಲಾಭ ಮಾಡುವ ನಿರೀಕ್ಷೆಯಲ್ಲಿದ್ದಾರೆ.
ಪುಣೆ, ಜುಲೈ 17: ಟೊಮೆಟೋ ಹಣ್ಣಿನ (Tomato Price) ಬೆಲೆ ನೂರು ರೂ ಮೇಲಿದೆ. ಪೂರ್ಣಪ್ರಮಾಣದಲ್ಲಿ ಟೊಮೆಟೋ ಬೆಳೆದ ರೈತರೇ ಲಕ್ಷಾಧಿಪತಿ, ಕೋಟ್ಯಾಧಿಪತಿಗಳಾಗುವ ಯೋಗ. ಹಿಂದಿನ ವರ್ಷಗಳಲ್ಲಿ ನಷ್ಟದ ಮೇಲೆ ನಷ್ಟಗಳನ್ನು ಕಂಡಿದ್ದ ರೈತರಲ್ಲಿ ಕೆಲವರಾದರೂ ಈಗ ನಿಟ್ಟುಸಿರು ಬಿಟ್ಟಿದ್ದಾರೆ. ಕೆಲ ದಿನಗಳ ಹಿಂದೆ ಮಹಾರಾಷ್ಟ್ರದ ಪುಣೆಯ ರೈತರೊಬ್ಬರು 13,000 ಕ್ರೇಟ್ ಟೊಮೆಟೋಗಳನ್ನು ಮಾರಿ 1.5 ಕೋಟಿ ರೂ ಸಂಪಾದಿಸಿದ ಸುದ್ದಿ ವೈರಲ್ ಆಗಿತ್ತು. ಈಗ ಅದೇ ರೈತನ ಸಂಪಾದನೆ 2.8 ಕೋಟಿ ರೂಗೆ ಏರಿದೆ. ಪುಣೆ ಜಿಲ್ಲೆಯ ಜುನ್ನಾರ್ ತಾಲೂಕಿನ 36 ವರ್ಷದ ಈಶ್ವರ್ ಗಾಯಕರ್ (Pune Farmer Eshwar Gayakar) ಒಟ್ಟು 17,000 ಕ್ರೇಟ್ ಟೊಮೆಟೋಗಳನ್ನು (Crate) ಮಾರಿದ್ದಾರೆ. ಅವರ ಬಳಿ ಇನ್ನೂ ಮೂರ್ನಾಲ್ಕು ಸಾವಿರ ಕ್ರೇಟ್ಗಳಷ್ಟು ಟೊಮೆಟೋ ಸಂಗ್ರಹ ಇದ್ದು, ತಮ್ಮ ನಿರೀಕ್ಷೆಯ 3.5 ಕೋಟಿ ರೂ ಸಂಪಾದಿಸುವ ಉಮೇದಿನಲ್ಲಿದ್ದಾರೆ.
ರೈತ ಗಾಯಕರ್ ಬಳಿ ಅಪ್ಪನಿಂದ ಬಳುವಳಿಯಾಗಿ ಬಂದಿದ್ದ 18 ಎಕರೆ ಕೃಷಿ ಜಮೀನು ಹೊಂದಿದ್ದಾರೆ. ಇದರಲ್ಲಿ 12 ಎಕರೆ ಜಮೀನಿನಲ್ಲಿ ಟೊಮೆಟೋ ಬೆಳೆದಿದ್ದರು. ಇವರ ಅದೃಷ್ಟಕ್ಕೆ ಸರಿಯಾದ ಸಮಯಕ್ಕೆ ಟೊಮೆಟೋ ಬೆಳೆಗೆ ಭರ್ಜರಿ ಬೇಡಿಕೆ ಸೃಷ್ಟಿಯಾಗಿತ್ತು. ಇವರು ಒಮ್ಮೆಗೇ 17,000 ಕ್ರೇಟ್ಗಳನ್ನು ಮಾರಿಲ್ಲ. ಒಂದು ತಿಂಗಳ ಅವಧಿಯಲ್ಲಿ ಟೊಮೆಟೋ ಮಾರಿದ್ದಾರೆ. ಒಂದು ಕ್ರೇಟ್ ಟೊಮೆಟೋಗೆ 770 ರಿಂದ 2,311 ರೂವರೆಗೂ ಬೆಲೆ ಸಿಕ್ಕಿತಂತೆ. ತನಗೆ ಈವರೆಗೂ ಒಟ್ಟು 2.8 ಕೋಟಿ ರೂ ಸಿಕ್ಕಿದೆ ಎನ್ನುತ್ತಾರೆ ರೈತ ಗಾಯಕರ್. ಒಂದು ಕ್ರೇಟ್ನಲ್ಲಿ ಸಾಮಾನ್ಯವಾಗಿ 15ರಿಂದ 30 ಕಿಲೋ ಟೊಮೆಟೋ ಇರುತ್ತದೆ.
ಇದನ್ನೂ ಓದಿ: ತರಕಾರಿ ಬೆಲೆ ಏರಿಕೆಗೆ ‘ಮಿಯಾಸ್’ ಮುಸ್ಲಿಮರ ಟೀಕಿಸಿದ ಅಸ್ಸಾಂ ಸಿಎಂ ಹಿಮಂತ ಬಿಸ್ವ ಶರ್ಮಾ; ಪ್ರತಿಪಕ್ಷಗಳ ಆಕ್ರೋಶ
ಹಿಂದೆ ಸಾಕಷ್ಟು ಅನುಭವಿಸಿದ್ದ ರೈತ ಇವರು…
ಟೊಮೆಟೋ ಹಣ್ಣು ಬೆಳೆದರೆ ಕೋಟ್ಯಾಧೀಶ್ವರ ಆಗಬಹುದು ಎಂದು ನೀವು ಭಾವಿಸಿದರೆ ಅದು ತಪ್ಪು. ಟೊಮೆಟೋ ಬೆಳೆಗೆ ಯಾವಾಗ ಬೇಡಿಕೆ ಸೃಷ್ಟಿಯಾಗುತ್ತದೆ, ಯಾವಾಗ ಬೇಡಿಕೆ ಕಡಿಮೆ ಆಗುತ್ತದೆ ಎಂಬುದನ್ನು ಮೊದಲೇ ಗ್ರಹಿಸುವುದು ಕಷ್ಟ. ಈಶ್ವರ್ ಗಾಯಕರ್ 2005ರಿಂದಲೂ ಕೃಷಿ ಮಾಡುತ್ತಿದ್ದಾರೆ. 2017ರಿಂದ 12 ಎಕರೆ ಜಾಗದಲ್ಲಿ ಟೊಮೆಟೋ ಬೆಳೆಯುತ್ತಿದ್ದಾರೆ. ಹಲವು ಬಾರಿ ಲಕ್ಷಾಂತರ ರೂ ನಷ್ಟ ಮಾಡಿಕೊಂಡಿದ್ದಾರೆ. 2021ರಲ್ಲಿ ಟೊಮೆಟೋ ಬೆಳೆಯಿಂದ ಇವರಿಗೆ 18ರಿಂದ 20 ಲಕ್ಷ ರೂನಷ್ಟು ನಷ್ಟವಾಗಿತ್ತಂತೆ. ಅದರೂ ನಿರಾಶರಾಗದೇ, ಹತಾಶರಾಗದೇ ಟೊಮೆಟೋ ಬೆಳೆಯನ್ನು ನೆಚ್ಚಿಕೊಂಡ ಬಂದ ಗಾಯಕರ್ಗೆ ಈಗ ಭರ್ಜರಿ ಆದಾಯ ಸಿಕ್ಕಿದೆ.
ಭಾರತದಲ್ಲಿ ಈ ಸೀಸನ್ನಲ್ಲಿ ಬೇಡಿಕೆಗೆ ತಕ್ಕಷ್ಟು ಟೊಮೆಟೋ ಉತ್ಪಾದನೆ ಇಲ್ಲದ್ದರಿಂದ ಬೆಲೆ ಸಾಕಷ್ಟು ಏರಿದೆ. ಹಿಮಾಚಲಪ್ರದೇಶದಲ್ಲಿ ಪ್ರವಾಹ ಬಂದಿದ್ದು ಬಹುತೇಕ ಇದಕ್ಕೆ ಕಾರಣ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ