ತರಕಾರಿ ಬೆಲೆ ಏರಿಕೆಗೆ ‘ಮಿಯಾಸ್’ ಮುಸ್ಲಿಮರ ಟೀಕಿಸಿದ ಅಸ್ಸಾಂ ಸಿಎಂ ಹಿಮಂತ ಬಿಸ್ವ ಶರ್ಮಾ; ಪ್ರತಿಪಕ್ಷಗಳ ಆಕ್ರೋಶ
ಬಂಗಾಳಿ-ಮಾತನಾಡುವ ಮುಸ್ಲಿಮರನ್ನು ಸಾಮಾನ್ಯವಾಗಿ ರಾಜ್ಯದಲ್ಲಿ ‘ಮಿಯಾಸ್' ಎಂದು ಕರೆಯಲಾಗುತ್ತದೆ. ಈ ಸಮುದಾಯವು ಹೆಚ್ಚಾಗಿ ಕೃಷಿ ಹಾಗೂ ವ್ಯಾಪಾರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆ.
ಗುವಾಹಟಿ, ಜುಲೈ 16: ಅಸ್ಸಾಂನ ಗುವಾಹಟಿಯಲ್ಲಿ ತರಕಾರಿ ಬೆಲೆ ಏರಿಕೆಗೆ ಸಂಬಂಧಿಸಿ ಅಲ್ಲಿನ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ (Himanta Biswa Sarma) ನೀಡಿರುವ ಹೇಳಿಕೆ ಇದೀಗ ವಿವಾದಕ್ಕೆ ಗ್ರಾಸವಾಗಿದೆ. ತರಕಾರಿ ದರ ಏರಿಕೆಗೆ ಶರ್ಮಾ ಅವರು ‘ಮಿಯಾಸ್ (ಬಂಗಾಳಿ-ಮಾತನಾಡುವ ಮುಸ್ಲಿಮರನ್ನು ಸಾಮಾನ್ಯವಾಗಿ ಅಸ್ಸಾಂನಲ್ಲಿ ಹೀಗೆ ಕರೆಯುತ್ತಾರೆ)’ ಅವರನ್ನು ದೂಷಿಸಿದ್ದಾರೆ. ಇದಕ್ಕೆ ವಿರೋಧ ಪಕ್ಷಗಳು ತೀಕ್ಷ್ಣ ತಿರುಗೇಟು ನೀಡಿವೆ.
ಎಐಯುಡಿಎಫ್ ಮುಖ್ಯಸ್ಥ ಬದ್ರುದ್ದೀನ್ ಅಜ್ಮಲ್ ಅವರು ಸಿಎಂ ಹೇಳಿಕೆಯಿಂದ ‘ಮಿಯಾಸ್’ ಸಮುದಾಯದವರಿಗೆ ನೋವಾಗಿದೆ ಎಂದು ಹೇಳಿದ್ದಾರೆ. ಮುಂದಿನ ವರ್ಷದ ಲೋಕಸಭೆ ಚುನಾವಣೆಗೆ ಮುನ್ನ ಬಿಜೆಪಿ ಕೋಮು ರಾಜಕಾರಣ ಆರಂಭಿಸಿದೆ ಎಂದು ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳು ಟೀಕಿಸಿವೆ.
ಗುವಾಹಟಿಯಲ್ಲಿ ತರಕಾರಿಗಳ ಹೆಚ್ಚಿನ ದರದ ಕುರಿತು ಸುದ್ದಿಗಾರರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಶರ್ಮಾ, ‘ಗ್ರಾಮಗಳಲ್ಲಿ ತರಕಾರಿಗಳಿಗೆ ಹೆಚ್ಚಿನ ಬೆಲೆ ಇಲ್ಲ. ಇಲ್ಲಿ ‘ಮಿಯಾ’ ಮಾರಾಟಗಾರರು ನಮಗೆ ಹೆಚ್ಚು ದರ ವಿಧಿಸುತ್ತಾರೆ. ಇವರಿಂದಾಗಿ ತರಕಾರಿಗಳನ್ನು ಮಾರಾಟ ಮಾಡುವ ಅಸ್ಸಾಮಿ ಮಾರಾಟಗಾರರು ಓಡಿಹೋಗುವಂತಾಗಿದೆ. ನಾನು ಗುವಾಹಟಿಯ ಎಲ್ಲಾ ಫುಟ್‌ಪಾತ್‌ಗಳನ್ನು ತೆರವುಗೊಳಿಸುತ್ತೇನೆ ಮತ್ತು ನಮ್ಮ ಅಸ್ಸಾಮಿ ಜನರು ಮುಂದೆ ಬಂದು ತಮ್ಮ ವ್ಯವಹಾರಗಳನ್ನು ಪ್ರಾರಂಭಿಸಲು ನಾನು ಒತ್ತಾಯಿಸುತ್ತೇನೆ ಎಂದು ಹೇಳಿದ್ದಾರೆ.
ಬಂಗಾಳಿ-ಮಾತನಾಡುವ ಮುಸ್ಲಿಮರನ್ನು ಸಾಮಾನ್ಯವಾಗಿ ರಾಜ್ಯದಲ್ಲಿ ‘ಮಿಯಾಸ್’ ಎಂದು ಕರೆಯಲಾಗುತ್ತದೆ. ಈ ಸಮುದಾಯವು ಹೆಚ್ಚಾಗಿ ಕೃಷಿ ಹಾಗೂ ವ್ಯಾಪಾರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆ.
ಶರ್ಮಾ ಹೇಳಿಕೆಗೆ ಪ್ರತಿಕ್ರಿಯಿಸಿದ ಎಐಯುಡಿಎಫ್ ಮುಖ್ಯಸ್ಥ ಬದ್ರುದ್ದೀನ್ ಅಜ್ಮಲ್, ಇಂತಹ ಮಾತುಗಳು ರಾಜ್ಯದ ಮುಖ್ಯಸ್ಥರಾಗಿರುವ ಮುಖ್ಯಮಂತ್ರಿಗೆ ತಕ್ಕುದಲ್ಲ. ಅವರ ಹೇಳಿಕೆಯಿಂದ ಸಮುದಾಯದವರ ಮನಸಿಗೆ ನೋವಾಗಿದೆ ಎಂದು ಹೇಳಿದ್ದಾರೆ.
ಇದು ಕೋಮು ವಿಭಜನೆಯನ್ನು ಮಾಡುವಂಥ ಹೇಳಿಕೆ. ಇದು ಯಾವುದೇ ಘಟನೆಯನ್ನು ಪ್ರಚೋದಿಸಿದರೆ, ಸರ್ಕಾರ ಮತ್ತು ಹಿಮಂತ ಬಿಸ್ವಾ ಶರ್ಮಾ ಅದಕ್ಕೆ ಹೊಣೆಯಾಗುತ್ತಾರೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ತರಕಾರಿಗಳ ಬೆಲೆಯನ್ನು ‘ಮಿಯಾ’ಗಳು ನಿಯಂತ್ರಿಸುವುದಿಲ್ಲ ಎಂದೂ ಅವರು ಸಮರ್ಥಿಸಿಕೊಂಡಿದ್ದಾರೆ.
ಈ ಮಧ್ಯೆ, ಉಭಯ ನಾಯಕರ ಹೇಳಿಕೆಗಳನ್ನು ಕಾಂಗ್ರೆಸ್ ಖಂಡಿಸಿದೆ. ಜನರ ನಡುವೆ ಕೋಮುವಾದದ ಒಡಕು ಮೂಡಿಸಲು ಈ ‘ಮಿಯಾ-ಅಸ್ಸಾಮಿ’ ವಿವಾದವನ್ನು ಸೃಷ್ಟಿಸಲು ಶರ್ಮಾ ಮತ್ತು ಅಜ್ಮಲ್ ಇಬ್ಬರೂ ಒಟ್ಟಾಗಿದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ಭೂಪೇನ್ ಕುಮಾರ್ ಬೋರಾ ಆರೋಪಿಸಿದ್ದಾರೆ.
ಅಸ್ಸಾಮಿ ಯುವಕರು ಕೃಷಿ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದನ್ನು ನಾವು ಸ್ವಾಗತಿಸುತ್ತೇವೆ. ಆದರೆ ಅವರು ಅದನ್ನು ಮಾಡುತ್ತಾರೆ ಎಂದು ನಾನು ಭಾವಿಸುವುದಿಲ್ಲ ಏಕೆಂದರೆ ಇದಕ್ಕೆ ಸಾಕಷ್ಟು ಶ್ರಮ ಬೇಕಾಗುತ್ತದೆ. ಜನರ ನಡುವೆ ಕೋಮುವಾದದ ಒಡಕು ಮೂಡಿಸಲು ಈ ವಿವಾದ ಸೃಷ್ಟಿಸಲಾಗಿದೆ ಎಂದು ಬೋರಾ ಟೀಕಿಸಿದ್ದಾರೆ.
ಇದನ್ನೂ ಓದಿ: Manipur: ಮಣಿಪುರದಲ್ಲಿ ಮತ್ತೆ ಹಿಂಸಾಚಾರ; ಮಹಿಳೆಯ ಗುಂಡಿಕ್ಕಿ ಹತ್ಯೆ
ಚುನಾವಣೆಗಳು ಹತ್ತಿರ ಬರುತ್ತಿದ್ದಂತೆ ಇಬ್ಬರೂ ಜನರನ್ನು ಧರ್ಮದ ಆಧಾರದ ಮೇಲೆ ವಿಭಜಿಸಲು ಮುಂದಾಗಿದ್ದಾರೆ. ಬಿಜೆಪಿ ನಿರುದ್ಯೋಗ, ಬೆಲೆ ಏರಿಕೆ, ಅಕ್ರಮ ವಲಸಿಗರು ಮುಂತಾದ ಪ್ರಮುಖ ಸಮಸ್ಯೆಗಳನ್ನು ಪರಿಹರಿಸಲು ವಿಫಲವಾಗಿದೆ ಮತ್ತು ಗಮನವನ್ನು ಬೇರೆಡೆಗೆ ಸೆಳೆಯಲು ಅವರು ಇಂತಹ ತಂತ್ರಗಳಲ್ಲಿ ತೊಡಗಿದೆ. ಶರ್ಮಾ ಅವರ ಇಂತಹ ಕೋಮುವಾದಿ ಹೇಳಿಕೆಗಳು ಪ್ರಮುಖ ವಿಷಯಗಳಿಂದ ಜನರ ಗಮನವನ್ನು ಸೆಳೆಯುವ ತಂತ್ರವಾಗಿದೆ ಎಂದು ರೈಜೋರ್ ದಳದ ಅಧ್ಯಕ್ಷ ಮತ್ತು ಶಾಸಕ ಅಖಿಲ್ ಗೊಗೊಯ್ ಟೀಕಿಸಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 4:38 pm, Sun, 16 July 23