AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೇಶ ಬಿಟ್ಟು ಹೋಗುತ್ತೇವೆ ಹೊರತು ಗೌಪ್ಯತೆ ಮಾತ್ರ ಬಿಡಲ್ಲ: ವಾಟ್ಸಾಪ್ ಹಠಕ್ಕೇನು ಕಾರಣ?

Why Whatsapp threatening to stop service in India: ಭಾರತದ ಅತಿದೊಡ್ಡ ಮೆಸೇಜಿಂಗ್ ಪ್ಲಾಟ್​ಫಾರ್ಮ್ ಎನಿಸಿರುವ ವಾಟ್ಸಾಪ್ ದೇಶದ ಬಿಸಿನೆಸ್ ತೊರೆಯಲು ಸಿದ್ಧವಾಗಿದೆ. ಕೇಂದ್ರದ ಬಿಗಿ ಐಟಿ ಕಾನೂನು ಬಗ್ಗೆ ವಾಟ್ಸಾಪ್ ಅಸಮಾಧಾನಗೊಂಡಿದೆ. ನೆಲದ ಕಾನೂನಿಗಿಂತ ತನ್ನ ಬಳಕೆದಾರರ ಗೌಪ್ಯತೆ ಮುಖ್ಯ ಎಂಬುದು ತಮ್ಮ ಸಿದ್ಧಾಂತ ಎಂದು ವಾಟ್ಸಾಪ್​ನ ಮಾತೃ ಸಂಸ್ಥೆ ಮೆಟಾ ಹೇಳಿದೆ. ವಾಟ್ಸಾಪ್ ಜಾಗತಿಕವಾಗಿ ಹೊಂದಿರುವ ಬಳಕೆದಾರರ ಬಳಗದಲ್ಲಿ ಭಾರತದಲ್ಲೆ ಅತಿಹೆಚ್ಚು ಇದ್ದಾರೆ.

ದೇಶ ಬಿಟ್ಟು ಹೋಗುತ್ತೇವೆ ಹೊರತು ಗೌಪ್ಯತೆ ಮಾತ್ರ ಬಿಡಲ್ಲ: ವಾಟ್ಸಾಪ್ ಹಠಕ್ಕೇನು ಕಾರಣ?
ವಾಟ್ಸಾಪ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 03, 2024 | 11:46 AM

Share

ನವದೆಹಲಿ, ಮೇ 3: ವಾಟ್ಸಾಪ್ ಭಾರತದಲ್ಲಿ ಅತಿಹೆಚ್ಚು ಬಳಸಲಾಗುವ ಮೆಸೇಜಿಂಗ್ ಪ್ಲಾಟ್​ಫಾರ್ಮ್ ಆಗಿದೆ. ಬಹುತೇಕ ಸ್ಮಾರ್ಟ್​ಫೋನ್ ಬಳಕೆದಾರರು ಸಕ್ರಿಯ ವಾಟ್ಸಾಪ್ ಬಳಕೆದಾರರೇ (Whatsapp active users) ಆಗಿದ್ದಾರೆ. ವಿಶ್ವಾದ್ಯಂತ ನೂರಕ್ಕೂ ಹೆಚ್ಚು ದೇಶಗಳಲ್ಲಿ ವಾಟ್ಸಾಪ್​ಗೆ 280 ಕೋಟಿ ಬಳಕೆದಾರರಿದ್ದಾರೆ. ಭಾರತದಲ್ಲೇ ಅತಿಹೆಚ್ಚು ವಾಟ್ಸಾಪ್ ಬಳಕೆದಾರರು ಇರುವುದು. ಇಲ್ಲಿ ಸುಮಾರು 50 ಕೋಟಿಯಷ್ಟು ಸಕ್ರಿಯ ಯೂಸರ್ಸ್ ಇದ್ದಾರೆ. ಇದೀಗ ತನ್ನ ಅತಿದೊಡ್ಡ ಮಾರುಕಟ್ಟೆಯನ್ನೇ ಬಿಟ್ಟುಹೋಗಲು ವಾಟ್ಸಾಪ್ ಸಜ್ಜಾಗಿದೆ. ಅಷ್ಟಕ್ಕೂ ವಾಟ್ಸಾಪ್ ಈ ನಿರ್ಧಾರಕ್ಕೆ ಏನು ಕಾರಣ?

ದೇಶ ಬಿಡುತ್ತೇವೆ ಹೊರತು, ಮೆಸೇಜ್ ಮೂಲ ಕೊಡಲು ಆಗಲ್ಲ ಎನ್ನುವ ವಾಟ್ಸಾಪ್

ಭಾರತದಲ್ಲಿ ಫೇಸ್​ಬುಕ್, ವಾಟ್ಸಾಪ್ ಇತ್ಯಾದಿ ಸೋಷಿಯಲ್ ಮೀಡಿಯಾ ಮತ್ತು ಮೆಸೇಜಿಂಗ್ ಪ್ಲಾಟ್​​ಫಾರ್ಮ್​ಗಳಲ್ಲಿ ಬಹಳಷ್ಟು ಮಾಹಿತಿ ಹಂಚಿಕೆ ಆಗುತ್ತಿರುತ್ತದೆ. ಹಲವು ಅಪರಾಧ ಕೃತ್ಯಗಳ ವಿಡಿಯೋ ಅಥವಾ ಸುಳ್ಳು ಸುದ್ದಿಗಳು ಪ್ರಸಾರವಾಗಬಹುದು. ಇದಕ್ಕೆ ಕಡಿವಾಣ ಹಾಕಲು ಈ ಸುಳ್ಳು ಮತ್ತು ಅಪರಾಧ ಕಂಟೆಂಟ್​ನ ಮೂಲಸೃಷ್ಟಿಕರ್ತರನ್ನು ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸಬೇಕಾಗುತ್ತದೆ. ಈ ವಿಚಾರದಲ್ಲಿ 2021ರ ಐಟಿ ನಿಯಮಗಳನ್ನು ಮಾಡಲಾಗಿದೆ. ಹರಡುತ್ತಿರುವ ಮಾಹಿತಿಯ ಮೂಲವನ್ನು ಗುರುತಿಸಲು ಕಾನೂನು ಜಾರಿ ಸಂಸ್ಥೆಗಳಿಗೆ ಸೋಷಿಯಲ್ ಮೀಡಿಯಾ ಕಂಪನಿಗಳು ಸಹಕರಿಸಬೇಕು ಎನ್ನುತ್ತವೆ ನಿಯಮಗಳು.

ಇದನ್ನೂ ಓದಿ: ಮೆಸೇಜ್ ಟ್ರೇಸ್ ಮಾಡೋಕ್ಕಾಗಲ್ಲ; ಬಲವಂತಪಡಿಸಿದರೆ ಭಾರತವನ್ನೇ ತೊರೆಯಬೇಕಾಗುತ್ತೆ: ವಾಟ್ಸಾಪ್ ಬೆದರಿಕೆ

ಆದರೆ, ವಾಟ್ಸಾಪ್​ಗೆ ಅದರದ್ದೇ ಆದ ನೀತಿ ಇದೆ. ತನ್ನ ಬಳಕೆದಾರರ ಖಾಸಗಿತ್ವ ಮತ್ತು ಗೌಪ್ಯತೆಯನ್ನು ಕಾಪಾಡುವುದು ಅದರ ಒಂದು ನೀತಿ. ಅದರ ಮೆಸೇಜ್​ಗಳನ್ನು ಎಂಡ್ ಟು ಎಂಡ್ ಎನ್​ಕ್ರಿಪ್ಟ್ ಮಾಡಲಾಗಿರುತ್ತದೆ. ಒಬ್ಬರಿಂದ ಇನ್ನೊಬ್ಬರಿಗೆ ಕಳುಹಿಸಲಾದ ಮೆಸೇಜ್ ಅನ್ನು ಥರ್ಡ್ ಪಾರ್ಟಿ ನೋಡಲು ಸಾಧ್ಯವಿರುವುದಿಲ್ಲ. ಅಷ್ಟು ಗೌಪ್ಯವಾಗಿ ದತ್ತಾಂಶದ ರವಾನೆ ಆಗುತ್ತದೆ. ಈಗ ಸಿಬಿಐ ಇತ್ಯಾದಿ ಏಜೆನ್ಸಿಗಳು ತನಿಖೆ ನಡೆಸುವಾಗ ಒಬ್ಬ ವ್ಯಕ್ತಿಯ ವಾಟ್ಸಾಪ್ ಮೆಸೇಜ್ ಅನ್ನು ಪತ್ತೆ ಮಾಡಬೇಕೆಂದು ಪ್ರಯತ್ನಿಸಿದರೆ ಅದು ಸಾಧ್ಯವಾಗುವುದಿಲ್ಲ. ಸ್ವತಃ ತನ್ನ ಬಳಿಯೇ ಈ ಮಾಹಿತಿ ಇರುವುದಿಲ್ಲ ಎಂದು ವಾಟ್ಸಾಪ್ ಹೇಳುತ್ತದೆ.

ಮೆಸೇಜ್ ಅನ್ನು ಎನ್​ಕ್ರಿಪ್ಟ್ ಮಾಡದೇ ಹೋದರೆ ಇದು ಸಾಧ್ಯವಾಗಬಹುದು. ಆದರೆ, ಬಳಕೆದಾರರ ಗೌಪ್ಯತೆ ಕಾಪಾಡುವುದು ತನ್ನ ಆದ್ಯ ಕರ್ತವ್ಯ. ಸರ್ಕಾರ ಬಲವಂತ ಮಾಡಿದರೆ ಭಾರತದಿಂದಲೇ ಹೊರಟು ಹೋಗುತ್ತೇವೆ ಹೊರತು ಎನ್​ಕ್ರಿಪ್ಷನ್ ಸಿಸ್ಟಂನಲ್ಲಿ ಮಾತ್ರ ಕಾಂಪ್ರಮೈಸ್ ಆಗೋದಿಲ್ಲ ಎಂದು ವಾಟ್ಸಾಪ್ ಹೇಳಿದೆ.

ಇದನ್ನೂ ಓದಿ: ಹೊಸ ಅಪ್​ಡೇಟ್ ತರುತ್ತಿದೆ ವಾಟ್ಸ್​ಆ್ಯಪ್ | ಇಂಟರ್​ನೆಟ್ ಇಲ್ಲದಿದ್ದರೂ ಫೋಟೊ ಕಳಿಸಿ

ಅಂದಹಾಗೆ, 2021ರ ಈ ಐಟಿ ನಿಯಮದ ವಿರುದ್ಧ ವಾಟ್ಸಾಪ್ ದೆಹಲಿ ಹೈಕೋರ್ಟ್​ನಲ್ಲಿ ಅರ್ಜಿ ಹಾಕಿದೆ. ಇದರ ವಿಚಾರಣೆ ವೇಳೆ ವಾಟ್ಸಾಪ್ ಪರ ವಕೀಲರು ದೇಶ ತೊರೆಯಲು ವಾಟ್ಸಾಪ್ ಸಿದ್ಧವಾಗಿದೆ ಎಂದಿದ್ದಾರೆ. ಇದು ಕೇವಲ ಬೆದರಿಕೆ ಮಾತ್ರವಾ ಅಥವಾ ವಾಟ್ಸಾಪ್ ನಿಜವಾಗಿಯೂ ಭಾರತವನ್ನು ಬಿಟ್ಟು ಹೋಗುತ್ತದಾ ಗೊತ್ತಿಲ್ಲ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ