ಮುಂಬೈ: ಕೆನಡಾ ಪೆನ್ಷನ್ ಫಂಡ್ ಸಂಸ್ಥೆ (Canada Pension Fund) ಕೋಟಕ್ ಮಹೀಂದ್ರ ಬ್ಯಾಂಕ್ನಲ್ಲಿ ಹೊಂದಿರುವ ತನ್ನ ಕೆಲ ಷೇರುಪಾಲನ್ನು (Stake) ಮಾರಲು ನಿರ್ಧರಿಸಿದ ಬೆನ್ನಲ್ಲೇ ಕೋಟಕ್ನ ಷೇರು ಶುಕ್ರವಾರ ಶೇ. 2ರಷ್ಟು ಕಡಿಮೆಬೆಲೆಗೆ ಕುಸಿತ ಕಂಡಿದೆ. ಗುರುವಾರ ಸಂಜೆ 1,885 ರೂ ಇದ್ದ ಕೋಟಕ್ ಬ್ಯಾಂಕ್ (Kotak Mahindra Bank) ಷೇರು ಬೆಲೆ ಶುಕ್ರವಾರ ಬೆಳಗ್ಗಿನ ಒಂದು ಹೊತ್ತಿನಲ್ಲಿ 1,845 ರುಪಾಯಿಗೆ ಕುಸಿತ ಕಂಡಿತ್ತು. ಈ ವರದಿ ಬರೆಯುವಾಗ ಕೋಟಕ್ ಷೇರು ಬೆಲೆ 1,865 ರುಪಾಯಿಯಲ್ಲಿತ್ತು. ಕೆನಡಾ ಪೆನ್ಷನ್ ಫಂಡ್ ತನ್ನ ಕೋಟಕ್ ಷೇರುಗಳನ್ನು ಮಾರಲು ಮುಂದಾದ ಬಳಿಕ ಈ ಬೆಲೆ ಇಳಿಕೆಯಾಗಿದೆ. ಕೋಟಕ್ ಬ್ಯಾಂಕ್ನಲ್ಲಿ ಕೆನಡಾ ಪೆನ್ಷನ್ ಫಂಡ್ 8.63 ಕೋಟಿ ಷೇರುಗಳನ್ನು ಹೊಂದಿದೆ. ಅದರ ಷೇರುಪಾಲು ಶೇ. 4.34ರಷ್ಟಿದೆ. ಇದರಲ್ಲಿ 3.3 ಕೋಟಿ ಷೇರುಗಳನ್ನು 1792-1886 ರೂ ಬೆಲೆಗೆ ಮಾರುವುದಾಗಿ ಕೆನಡಾ ಪೆನ್ಷನ್ ಫಂಡ್ ಹೇಳಿತ್ತು. ಬಿಎಸ್ಇ ಎಕ್ಸ್ಚೇಂಜ್ ಡಾಟಾ ಪ್ರಕಾರ ಇಷ್ಟೂ ಷೇರುಗಳು ಮಾರಾಟವಾಗಿವೆ.
ಬಿಎಸ್ಇ ಷೇರುಪೇಟೆಯಲ್ಲಿ ಎರಡು ಬ್ಲಾಕ್ ಡೀಲ್ಗಳಲ್ಲಿ 3.3 ಕೋಟಿ ಷೇರುಗಳು ಮಾರಲಾಗಿರುವುದು ತಿಳಿದುಬಂದಿದೆ. ಬೆಳಗ್ಗೆ 9:15ಕ್ಕೆ 2.2 ಕೋಟಿ ಷೇರುಗಳು 1,855 ರೂ ಬೆಲೆಗೆ ಮಾರಾಟವಾಗಿವೆ. ಇನ್ನು, 1.09 ಕೋಟಿ ಷೇರುಗಳು ನಂತರದ ಸಮಯದಲ್ಲಿ 1,864.15 ರೂ ಬೆಲೆಗೆ ಮಾರಾಟ ಕಂಡಿವೆ. ಕೆನಡಾ ಪೆನ್ಷನ್ ಫಂಡ್ನಿಂದ ಈ ಎರಡು ಬ್ಲಾಕ್ ಡೀಲ್ಗಳಾಗಿವೆ ಎನ್ನಲಾಗಿದೆ.
ಇದನ್ನೂ ಓದಿ: HAL: ಷೇರುವಿಭಜನೆ ಅಂತ ಹೇಳಿದ್ದೇ ತಡ ಎಚ್ಎಎಲ್ ಷೇರಿಗೆ ಭರ್ಜರಿ ಬೇಡಿಕೆ; ಏನಿದು ಷೇರುವಿಭಜನೆ? ಯಾರಿಗೆ ಲಾಭ?
ಕೋಟಕ್ ಮಹೀಂದ್ರ ಬ್ಯಾಂಕ್ನಲ್ಲಿ ವಿದೇಶೀ ಪೋರ್ಟ್ಫೋಲಿಯೋ ಹೂಡಿಕೆದಾರರು (ಎಫ್ಪಿಐ) ಬಹಳ ದೊಡ್ಡ ಪಾಲು ಹೊಂದಿದ್ದಾರೆ. ಶೇ. 39.43ರಷ್ಟು ಪಾಲು ಎಫ್ಪಿಐನವರದ್ದೇ ಆಗಿದೆ. ವಿವಿಧ ಮ್ಯೂಚುವಲ್ ಫಂಡ್ಗಳು ಶೇ. 10.99ರಷ್ಟು ಪಾಲು ಹೊಂದಿವೆ.
ಕೆಲ ಹಣಕಾಸು ಮತ್ತು ಷೇರು ರೇಟಿಂಗ್ ಸಂಸ್ಥೆಗಳು ಕೋಟಕ್ ಮಹೀಂದ್ರ ಬ್ಯಾಂಕಿನ ಷೇರಿಗೆ ಉತ್ತಮ ರೇಟಿಂಗ್ ನೀಡಿವೆ. ಮುಂದಿನ ಒಂದು ವರ್ಷದಲ್ಲಿ ಈ ಬ್ಯಾಂಕ್ನ ಷೇರುಬೆಲೆ ಸರಾಸರಿ 2,134 ರೂ ಆಗಬಹುದು ಎಂದು ಭವಿಷ್ಯ ನುಡಿದಿವೆ. ಅಂದರೆ ಈಗ ಕೋಟಕ್ ಬ್ಯಾಂಕ್ನ ಷೇರುಗಳ ಮೇಲೆ ಹೂಡಿಕೆ ಮಾಡಿದರೆ ಒಂದು ವರ್ಷದಲ್ಲಿ ಶೇ. 13ರಷ್ಟು ಲಾಭ ಮಾಡಿಕೊಳ್ಳುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 3:16 pm, Fri, 9 June 23