ಲ್ಯಾಂಡೊಮಸ್ ರಿಯಾಲ್ಟಿ ವೆಂಚರ್ಸ್ನಿಂದ 500 ಬಿಲಿಯನ್ ಅಮೆರಿಕನ್ ಡಾಲರ್ ಅನ್ನು ಈಕ್ವಿಟಿಯಾಗಿ ಭಾರತದಲ್ಲಿ ಹೂಡಿಕೆ ಮಾಡುವ ಬಗ್ಗೆ ಆಫರ್ ಬಂದಿದೆ. ಆ ಕಂಪೆನಿ ಆಫರ್ ಮಾತ್ರ ಮಾಡಿಲ್ಲ. ಅದನ್ನು ಜಾಹೀರಾತಾಗಿಯೇ ನೀಡಿ, ಹೂಡಿಕೆಗಾಗಿ ಪ್ರಧಾನಿ ಮೋದಿಯವರಲ್ಲಿ ಮನವಿಯನ್ನೇ ಮಾಡಿದೆ. 500 ಬಿಲಿಯನ್ ಅಮೆರಿಕನ್ ಡಾಲರ್ ಅಂದರೆ 50,000 ಕೋಟಿ ಅಮೆರಿಕನ್ ಡಾಲರ್. ಅದನ್ನು ಭಾರತದ ರೂಪಾಯಿ ಲೆಕ್ಕದಲ್ಲಿ ಹೇಳೋದಾದರೆ, 36 ಲಕ್ಷ ಕೋಟಿ ಆಗುತ್ತದೆ. 2021- 22ನೇ ಸಾಲಿನಲ್ಲಿ ಭಾರತದ ಒಂದು ವರ್ಷದ ಬಜೆಟ್ ವೆಚ್ಚವೇ 35 ಲಕ್ಷ ಕೋಟಿ ರೂಪಾಯಿ. ಅಂದರೆ 1 ವರ್ಷದ ಬಜೆಟ್ಗಿಂತಲೂ ಹೆಚ್ಚಿನ, ಅದರಲ್ಲೂ ಕೊರೊನಾ ಕಾಲದ ವೆಚ್ಚಕ್ಕೆ ಸಮವಾದ ಬಜೆಟ್ ಮೊತ್ತವನ್ನು ಭಾರತದ ನ್ಯಾಷನಲ್ ಇನ್ಫ್ರಾಸ್ಟ್ರಕ್ಚರ್ ಪೈಪ್ಲೈನ್ (NIP)ನಲ್ಲಿ ಹೂಡಿಕೆ ಮಾಡುವುದಕ್ಕೆ ಲ್ಯಾಂಡೊಮಸ್ ರಿಯಾಲ್ಟಿ ವೆಂಚರ್ಸ್ ಬಯಸಿದೆ ಎಂದು ಘೋಷಿಸಲಾಗಿದೆ. ಈ ಘೋಷಣೆ ಒಂದು ಬಗೆಯಲ್ಲಿ ತಮಾಷೆಯಂತೆ ಎನಿಸುತ್ತದೆ. ಅದಕ್ಕೆ ಕಾರಣ ಕೂಡ ಇದೆ. ಆ ಕಂಪೆನಿ ಹೂಡಿಕೆ ಮಾಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿ, ಜಾಹೀರಾತು ನೀಡಿದೆ.
ಬಿಲ್ಡ್ ಇಂಡಿಯಾ ಅಡಿಯಲ್ಲಿ ನ್ಯಾಷನಲ್ ಇನ್ಫ್ರಾಸ್ಟ್ರಕ್ಚರ್ ಪೈಪ್ಲೈನ್ (NIP) ಮತ್ತು ನಾನ್ NIP ಪ್ರಾಜೆಕ್ಟ್ನಲ್ಲಿ 2 ಲಕ್ಷ ಕೋಟಿ ಯುಎಸ್ಡಿ ಹೂಡಿಕೆ ಯೋಜನೆಯಿದೆ. ಲ್ಯಾಂಡೊಮಸ್ ರಿಯಾಲ್ಟಿ ವೆಂಚರ್ಸ್ ಇಂಕ್, ಯುಎಸ್ಎಯಿಂದ ಆ ಯೋನೆಯ ಮೊದಲ ಹಂತವಾಗಿ 500 ಬಿಲಿಯನ್ ಯುಎಸ್ಡಿ ಹೂಡಿಕೆ ಮಾಡಲು ಬಯಸುತ್ತದೆ. ಇನ್ವೆಸ್ಟ್ ಇಂಡಿಯಾ ಅಭಿಯಾನದ ಭಾಗವಿದು ಎಂದು ಲ್ಯಾಂಡ್ಮಸ್ ಗ್ರೂಪ್ ಅಧ್ಯಕ್ಷ ಪ್ರದೀಪ್ ಕುಮಾರ್ ಸತ್ಯಪ್ರಕಾಶ್ ಜಾಹೀರಾತಿನಲ್ಲಿ ತಿಳಿಸಿದ್ದಾರೆ.
NIP ಮತ್ತು NIP ಹೊರತಾದ ಪ್ರಾಜೆಕ್ಟ್ಗಳನ್ನು ಪೂರ್ಣಗೊಳಿಸುವ ಜತೆಗೆ ಹೂಡಿಕೆದಾರರು ಮತ್ತು ಡೆವಲಪರ್ಗಳಿಗೆ ಬೆಂಬಲ ನೀಡುವ ಉದ್ದೇಶ ಇದೆ ಎಂದು ಸತ್ಯಪ್ರಕಾಶ್ ಹೇಳಿದ್ದಾರೆ. ಎನರ್ಜಿ, ಸಾಮಾಜಿಕ ಮೂಲಸೌಕರ್ಯ, ಉತ್ಪಾದನೆ, ಸಾರಿಗೆ, ಆಹಾರ ಪರಿಷ್ಕರಣೆ, ಕೃಷಿ, ನೀರು ಮತ್ತು ಚರಂಡಿ ಮುಂತಾದ ವಲಯಗಳ ಪ್ರಾಜೆಕ್ಟ್ ಬೆಂಬಲಿಸುವ ಉದ್ದೇಶ ಇದೆ. ಲ್ಯಾಂಡ್ಮಸ್ ತನ್ನ ವೆಬ್ಸೈಟ್ನಲ್ಲೂ ಈ ಘೋಷಣೆ ಮಾಡಿದೆ. ವೆಬ್ಸೈಟ್ನಲ್ಲಿ ಇರುವ ಮಾಹಿತಿಯಂತೆ, ಎಚ್.ಎನ್.ಮಮತಾ, ಯಶಸ್ ಪ್ರದೀಪ್ ಕುಮಾರ್, ರಕ್ಷಿತ್ ಗಂಗಾಧರ್, ಗುಣಶ್ರೀ ಪ್ರದೀಪ್ ಕುಮಾರ್ ನಿರ್ದೇಶಕರು. ಪಮೇಲಾ ಕೇಫ್, ಪ್ರವೀಣ್ ಆಸ್ಕರ್ ಶಿರಿ, ಪ್ರವೀಣ್ ಮುರಳೀಧರ್, ಎ.ವಿ.ವಿ. ಭಾಸ್ಕರ್, ನವೀನ್ ಸಜ್ಜನ್ ಲ್ಯಾಂಡ್ಮಸ್ ಸಲಹೆಗಾರರ ಪಟ್ಟಿಯಲ್ಲಿದ್ದಾರೆ.
ಈ ಕಂಪೆನಿಯು ಒಂದು ಪುಟದ ವೆಬ್ಸೈಟ್ ಹೊಂದಿದ್ದು, ಇದರಲ್ಲಿ ಸಮೂಹದ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. Zoominfo ಮಾಹಿತಿಯಂತೆ, ಈ ಕಂಪೆನಿಗೆ 19 ಉದ್ಯೋಗಿಗಳಿದ್ದಾರೆ. ಆದಾಯ 5 ಮಿಲಿಯನ್ ಯುಎಸ್ಡಿ ಇದೆ. ಭಾರತದ ರೂಪಾಯಿ ಲೆಕ್ಕದಲ್ಲಿ 36 ಕೋಟಿ ಅಂದುಕೊಳ್ಳಿ. ಇನ್ನೊಂದು ಆಸಕ್ತಿಕರ ಸಂಗತಿ ಏನೆಂದರೆ ಈ ಕಂಪೆನಿಯ ವೆಬ್ಸೈಟ್ 2015ರಲ್ಲಿ ಕರ್ನಾಟಕದ ಶಿವನ್ ಚೆಟ್ಟಿ ಗಾರ್ಡನ್ನಲ್ಲಿ ಕೇಂದ್ರ ಕಚೇರಿ ಹೊಂದಿರುವ ಯುನೈಟೆಡ್ ಲ್ಯಾಂಡ್ ಬ್ಯಾಂಕ್ನಿಂದ ನೋಂದಣಿ ಆಗಿದೆ. ವರ್ಷಕ್ಕೆ 36 ಕೋಟಿ ರೂಪಾಯಿಯ ಆದಾಯ ಇರುವ ಒಂದು ಕಂಪೆನಿಯಿಂದ 36 ಲಕ್ಷ ಕೋಟಿ ರೂಪಾಯಿ ಹೂಡುವ ಜಾಹೀರಾತು ಬಂದಲ್ಲಿ ತಮಾಷೆ ಅನಿಸಲ್ಲವೆ?
ಈ ಎನ್ಐಪಿಯನ್ನು 2019ರ ಡಿಸೆಂಬರ್ನಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಣೆ ಮಾಡಿದರು. 2020ರಿಂದ 2025ರ ಹಣಕಾಸು ವರ್ಷದ ಮಧ್ಯ 111 ಲಕ್ಷ ಕೋಟಿ ಒಟ್ಟಾರೆ ಮೂಲಸೌಕರ್ಯ ಹೂಡಿಕೆಗೆ ಬರಬಹುದು ಎಂದು ಅಂದಾಜಿಸಲಾಗಿದೆ. ಕೇಂದ್ರ ಬಜೆಟ್ 2021ರಲ್ಲಿ ಎನ್ಐಪಿ ಅಡಿಯಲ್ಲಿನ ಪ್ರಾಜೆಕ್ಟ್ಗಳನ್ನು 6835ರಿಂದ 7400ಕ್ಕೆ ಹೆಚ್ಚಿಸಲಾಯಿತು.
ಇನ್ನು ಮತ್ತೆ ಹೂಡಿಕೆ ಜಾಹೀರಾತಿನ ಬಗ್ಗೆ ಹೇಳುವುದಾದರೆ, 36 ಲಕ್ಷ ಕೋಟಿಯನ್ನು ಸಂಖ್ಯೆಯಲ್ಲಿ ಬರೆದರೆ ಹೇಗಿರುತ್ತದೆ ಗೊತ್ತಾ? 36,000,000,000,000 – ಹೀಗಿರುತ್ತದೆ.
ಇದನ್ನೂ ಓದಿ: ಅಮೆರಿಕದ ಎಲೆಕ್ಟ್ರಿಕಲ್ ವಾಹನ ಮಾರುಕಟ್ಟೆಯಲ್ಲಿ ದೊಡ್ಡ ಮೊತ್ತದ ಹೂಡಿಕೆ ಘೋಷಿಸಿದ ಹುಂಡೈ, ಕಿಯಾ
(Landomus Realty Ventures Inc, USA offers Rs 36 lakh crores investment in India by giving advertisement)