Latent View Analytics: ಕನಸಿನ ಬೆಲೆಗೆ ಲಿಸ್ಟಿಂಗ್ ಆದ ಲೇಟೆಂಟ್ ವ್ಯೂ ಅನಲಿಟಿಕ್ಸ್​; ಹೂಡಿಕೆದಾರರಿಗೆ ಬಂಪರ್ ಲಾಭ

ಲೇಟೆಂಟ್ ವ್ಯೂ ಅನಲಿಟಿಕ್ಸ್ ನವೆಂಬರ್ 23, 2021ರಂದು ಐಪಿಒ ವಿತರಣೆ ಬೆಲೆಗಿಂತ ಶೇ 169ರಷ್ಟು ಪ್ರೀಮಿಯಂನೊಂದಿಗೆ ಲಿಸ್ಟಿಂಗ್ ಆಗಿದೆ. ಇಂಥ ಅಭೂತಪೂರ್ವ ಲಿಸ್ಟಿಂಗ್ ಹಿಂದಿನ ಕಾರಣ ಏನು ಎಂಬ ಮಾಹಿತಿ ಇಲ್ಲಿದೆ.

Latent View Analytics: ಕನಸಿನ ಬೆಲೆಗೆ ಲಿಸ್ಟಿಂಗ್ ಆದ ಲೇಟೆಂಟ್ ವ್ಯೂ ಅನಲಿಟಿಕ್ಸ್​; ಹೂಡಿಕೆದಾರರಿಗೆ ಬಂಪರ್ ಲಾಭ
ಸಾಂದರ್ಭಿಕ ಚಿತ್ರ
Updated By: Srinivas Mata

Updated on: Nov 23, 2021 | 11:31 AM

ಡೇಟಾ ಅನಲಿಟಿಕ್ಸ್ ಸೇವೆಗಳನ್ನು ಒದಗಿಸುವ ಲೇಟೆಂಟ್​ ವ್ಯೂ ಅನಲಿಟಿಕ್ಸ್​ ಲಿಸ್ಟಿಂಗ್ ನವೆಂಬರ್ 23ನೇ ತಾರೀಕಿನ ಮಂಗಳವಾರದಂದು ಆಗಿದ್ದು, ಐಪಿಒ ವಿತರಣೆ ಬೆಲೆಯ ಶೇ 169ರಷ್ಟು ಪ್ರೀಮಿಯಂಗೆ ಷೇರುಪೇಟೆಗೆ ಪ್ರವೇಶ ನೀಡಿದೆ. ಆ ಮೂಲಕ ನಿರೀಕ್ಷಿತ ಮಟ್ಟದ ಆರಂಭವನ್ನೇ ಪಡೆದುಕೊಂಡಿದೆ. 197 ರೂಪಾಯಿಯಂತೆ ವಿತರಣೆ ಮಾಡಿದ್ದ ಈ ಷೇರು ಬಿಎಸ್​ಇಯಲ್ಲಿ 530 ರೂಪಾಯಿಗೆ ಹಾಗೂ ಎನ್​ಎಸ್​ಇಯಲ್ಲಿ 512.20 ರೂಪಾಯಿಗೆ ಲಿಸ್ಟಿಂಗ್ ಆಯಿತು. ಪ್ರಮುಖ ಡಿಜಿಟಲ್ ಪ್ಲಾಟ್​ಫಾರ್ಮ್​ ಪೇಟಿಎಂ ಲಿಸ್ಟಿಂಗ್​ನಿಂದ ಆದ ಭ್ರಮನಿರಸನವನ್ನು ಮೀರುವಂತೆ ಇಂದಿನ ವಹಿವಾಟು ಆರಂಭಗಗೊಂಡಿದೆ. ಶೇ 150ಕ್ಕಿಂತ ಹೆಚ್ಚಿನ ಪ್ರೀಮಿಯಂನೊಂದಿಗೆ ಲೇಟೆಂಟ್ ವ್ಯೂ ಅನಲಿಟಿಕ್ಸ್ ಲಿಸ್ಟಿಂಗ್ ಆಗಬಹುದು ಎಂಬುದು ವಿಶ್ಲೇಷಕರ ನಿರೀಕ್ಷೆ ಆಗಿತ್ತು. ಗ್ರೇ ಮಾರ್ಕೆಟ್ ಪ್ರೀಮಿಯಂ (GMP) ಶೇ 180ರಷ್ಟಿತ್ತು. ಆರೋಗ್ಯಕರ ಹಣಕಾಸು ಸ್ಥಿತಿ, ಪ್ರಬಲ ಬೆಳವಣಿಗೆ ಸಾಧ್ಯತೆ, ಬ್ಲ್ಯೂಚಿಪ್ ಕಂಪೆನಿಗಳೊಂದಿಗೆ ಉತ್ತಮ ಬಾಂಧವ್ಯ, ಉತ್ತಮ ಮೌಲ್ಯಮಾಪನ ಇವೆಲ್ಲವೂ ಕಂಪೆನಿಯ ಷೇರಿನ ಬೆಲೆಯನ್ನು ಬೆಂಬಲಿಸಿದೆ.

ಲೇಟೆಂಟ್ ವ್ಯೂ ಅನಲಿಟಿಕ್ಸ್​ ಐಪಿಒಗೆ ಹೂಡಿಕೆದಾರರಿಂದ ಅಭೂತಪೂರ್ವವಾದ ಪ್ರತಿಕ್ರಿಯೆ ದೊರೆತಿತ್ತು. ನವೆಂಬರ್​ 10ರಿಂದ 12ರ ಮಧ್ಯೆ ಮುಕ್ತವಾಗಿದ್ದ ಐಪಿಒಗೆ 326.49 ಪಟ್ಟು ಬೇಡಿಕೆ ಬಂದಿತ್ತು. ಸಾಂಸ್ಥಿಕೇತರ ಹೂಡಿಕೆದಾರರು 850.66 ಪಟ್ಟು ಹೆಚ್ಚು ಸಬ್​ಸ್ಕ್ರೈಬ್ ಮಾಡಿದ್ದರು. ಕ್ವಾಲಿಫೈಡ್ ಇನ್​ಸ್ಟಿಟ್ಯೂಷನಲ್​ ಬೈಯರ್​ಗಳಿಗೆ ಮೀಸಲಾಗಿದ್ದಕ್ಕಿಂತ 145.48 ಪಟ್ಟು ಹೆಚ್ಚು ಬೇಡಿಕೆ ಬಂದಿತ್ತು. ರೀಟೇಲ್ ಹೂಡಿಕೆದಾರರಿಗೆ ಮೀಸಲಾಗಿದ್ದಕ್ಕಿಂತ 119.44ಪಟ್ಟು ಹೆಚ್ಚಾಗಿಯೇ ಅರ್ಜಿ ಹಾಕಿದ್ದರು. ಉದ್ಯೋಗಿಗಳಿಗಾಗಿ ಮೀಸಲಾಗಿದ್ದ ಭಾಗಕ್ಕೆ 3.87 ಪಟ್ಟು ಜಾಸ್ತಿ ಬೇಡಿಕೆ ಆಗಿತ್ತು.

ಈ ಕಂಪೆನಿಯು ತಂತ್ರಜ್ಞಾನದ ಬ್ಲ್ಯೂಚಿಪ್ ಕಂಪೆನಿಗಳಿಗೆ ಸೇವೆಯನ್ನು ಒದಗಿಸುತ್ತದೆ. ಮೊದಲ ಸಾರ್ವಜನಿಕ ವಿತರಣೆಯಲ್ಲಿ 600 ಕೋಟಿ ರೂಪಾಯಿ ಸಂಗ್ರಹಿಸಿದೆ. ಅದರಲ್ಲಿ 474 ಕೋಟಿ ರೂಪಾಯಿ ಹೊಸದಾಗಿ ವಿತರಣೆ ಮಾಡಿದ್ದಾದರೆ, ಬಾಕಿ ಆಫರ್​ ಫಾರ್ ಸೇಲ್​ (OFS) ಮೂಲಕ ಮಾರಾಟ ಮಾಡಿದ್ದು. ಎಲ್ಲ ವಿಶ್ಲೇಷಕರೂ ಈ ಕಂಪೆನಿಯ ಐಪಿಒಗೆ ಸಬ್​ಸ್ಕ್ರೈಬ್ ಆಗುವಂತೆ ಶಿಫಾರಸು ಮಾಡಿದ್ದರು. ಜಾಗತಿಕ ಮಟ್ಟದಲ್ಲಿ ಡೇಟಾ ಮತ್ತು ಅನಲಿಟಿಕ್ಸ್ ಮಾರುಕಟ್ಟೆ ಸಿಎಜಿಆರ್​ (ಕಾಂಪೌಂಡ್ ಆನ್ಯುಯಲ್ ಗ್ರೋಥ್ ರೇಟ್) ಶೇ 18ರಂತೆ FY20ಯಲ್ಲಿ ಇದ್ದ 17,400 ಕೋಟಿ ಅಮೆರಿಕನ್ ಡಾಲರ್​​ನಿಂದ FY24ಗೆ 33,260 ಕೋಟಿಗೆ ಬೆಳೆಯುವ ನಿರೀಕ್ಷೆ ಇದೆ. ​

ಇದನ್ನೂ ಓದಿ: Paytm Listing: ಪೇಟಿಎಂ ಐಪಿಒದಲ್ಲಿ ಸಂಗ್ರಹಿಸಿದ್ದ 18 ಸಾವಿರ ಕೋಟಿಯ ದುಪ್ಪಟ್ಟಿಗೂ ಹೆಚ್ಚು ಹಣ 38 ಸಾವಿರ ಕೋಟಿ ಕಳ್ಕೊಂಡ ಹೂಡಿಕೆದಾರರು