
ನವದೆಹಲಿ, ಜುಲೈ 28: ಭಾರತದ ಇ-ಕಾಮರ್ಸ್ ಸೆಕ್ಟರ್ ಮುಂದಿನ ದಿನಗಳಲ್ಲಿ ಭಾರೀ ವೇಗದಲ್ಲಿ ಬೆಳೆಯುವ ಅವಕಾಶ ಇದೆ ಎಂದು ಮೆಕಿನ್ಸೀ ಕಂಪನಿಯ (McKinsey & Company) ವರದಿಯೊಂದು ಹೇಳಿದೆ. ಭಾರತದಲ್ಲಿ ಇಂಟರ್ನೆಟ್ ಬಳಸುವವರ ಪೈಕಿ ಶೇ. 20ರಿಂದ 25ರಷ್ಟು ಮಂದಿ ಮಾತ್ರವೇ ಆನ್ಲೈನ್ನಲ್ಲಿ ಶಾಪಿಂಗ್ ಮಾಡುತ್ತಾರಂತೆ. ಹಾಗಂತ ಈ ರಿಪೋರ್ಟ್ ಹೇಳುತ್ತಿದೆ. ಅಂದರೆ, 85 ಕೋಟಿ ಇಂಟರ್ನೆಟ್ ಬಳಕೆದಾರರಲ್ಲಿ 20 ಕೋಟಿಗಿಂತ ಕಡಿಮೆ ಸಂಖ್ಯೆಯ ಜನರು ಮಾತ್ರ ಆನ್ಲೈನ್ ಶಾಪಿಂಗ್ ಮಾಡುತ್ತಿದ್ದಾರೆ.
ಅಮೆರಿಕ, ಚೀನಾ ಇತ್ಯಾದಿ ಮುಂದುವರಿದ ಮಾರುಕಟ್ಟೆಗೆ ಹೋಲಿಸಿದರೆ ಭಾರತದಲ್ಲಿ ಇಕಾಮರ್ಸ್ ಇನ್ನೂ ಕಡಿಮೆ ಮಟ್ಟದಲ್ಲಿ ಇದೆ. ಆ ದೇಶಗಳಲ್ಲಿ ಇಂಟರ್ನೆಟ್ ಬಳಸುವವರ ಪೈಕಿ ಶೇ. 85ಕ್ಕಿಂತಲೂ ಹೆಚ್ಚು ಮಂದಿ ಆನ್ಲೈನ್ನಲ್ಲಿ ಖರೀದಿ ಮಾಡುತ್ತಾರೆ. ಭಾರತದಲ್ಲಿ ಇದು ಶೇ. 20-25 ಮಾತ್ರವೇ.
ಕಳೆದ ಕೆಲ ವರ್ಷಗಳಿಂದ ಭಾರತದಲ್ಲಿ ಇ-ಕಾಮರ್ಸ್ ಚಟುವಟಿಕೆ ಪ್ರಬಲವಾಗಿ ಏರುತ್ತಿದೆ. ಆನ್ಲೈನ್ ಶಾಪಿಂಗ್ ತೀವ್ರವಾಗಿ ಹೆಚ್ಚುತ್ತಿದೆ. ಜೊತೆಗೆ ಈ ಕ್ಷೇತ್ರದಲ್ಲಿ ಹೊಸತನ ಕಾಣುತ್ತಿದೆ. ಬಹಳ ಕ್ಷಿಪ್ರವಾಗಿ ಸರಕುಗಳನ್ನು ತಲುಪಿಸುವ ಕ್ವಿಕ್ ಕಾಮರ್ಸ್ ಪ್ಲಾಟ್ಫಾರ್ಮ್ಗಳು ಬೆಳವಣಿಗೆ ಹೊಂದುತ್ತಿವೆ ಎಂಬ ಸಂಗತಿಯನ್ನು ಮೆಕಿನ್ಸೀ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಇದನ್ನೂ ಓದಿ: ‘ಇವ್ರು ತಗೋತಾರೆ, ನಮ್ಗೆ ಬೇಡ ಅಂತಾರೆ’- ಪಾಶ್ಚಿಮಾತ್ಯ ದೇಶಗಳ ಇಬ್ಬಗೆ ಧೋರಣೆ ಎತ್ತಿತೋರಿಸಿದ ವಿಕ್ರಮ್ ದೊರೈಸ್ವಾಮಿ
ಭಾರತದಲ್ಲಿ 2022-23ರ ಹಣಕಾಸು ವರ್ಷದಲ್ಲಿ ಆದ ಒಟ್ಟಾರೆ ರೀಟೇಲ್ ಮಾರಾಟದಲ್ಲಿ ಇ-ಕಾಮರ್ಸ್ನಿಂದ ಆಗಿರುವುದು ಶೇ. 7ರಿಂದ 9 ಮಾತ್ರ. ಮುಂದಿನ ನಾಲ್ಕೈದು ವರ್ಷದಲ್ಲಿ ಇದು ಎರಡು ಪಟ್ಟು ಹೆಚ್ಚಬಹುದು. 2030ರೊಳಗೆ ರೀಟೇಲ್ ಮಾರಾಟದಲ್ಲಿ ಇಕಾಮರ್ಸ್ ಪಾಲು ಶೇ. 15ರಿಂದ ಶೇ. 17ರಷ್ಟಾಗಬಹುದು ಎಂದು ಅಂದಾಜಿಸಲಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ