ಭಾರತೀಯರು ಹೆಚ್ಚು ಹಾಟ್ ಡ್ರಿಂಕ್ಸ್ ಕುಡಿಯೋದು ಯಾಕೆ ಗೊತ್ತಾ? ಲಿಕ್ಕರ್ ಉದ್ಯಮದವರು ಹೇಳೋದಿದು

|

Updated on: Jul 05, 2024 | 4:38 PM

Nikhil Kamath discuss liquor matter in his podcast: ಉಷ್ಣ ಪ್ರದೇಶಗಳಲ್ಲಿ ಜನರು ಬಿಯರ್ ಕುಡಿಯುತ್ತಾರೆ. ಶೀತ ಪ್ರದೇಶಗಳಲ್ಲಿ ವಿಸ್ಕಿ ಇತ್ಯಾದಿ ಹಾಟ್ ಡ್ರಿಂಕ್ಸ್ ಸೇವಿಸುತ್ತಾರೆ. ಆದರೆ, ಭಾರತ ಉಷ್ಣವಲಯದಲ್ಲಿದ್ದರೂ ಜನರು ಬಿಯರ್​ಗಿಂತ ಹಾಟ್ ಡ್ರಿಂಕ್ಸ್ ಹೆಚ್ಚು ಕುಡಿಯುತ್ತಾರೆ. ಝೀರೋಧ ಎಂಬ ಷೇರು ಮಾರುಕಟ್ಟೆ ಬ್ರೋಕರ್ ಸಂಸ್ಥೆಯ ನಿಖಿಲ್ ಕಾಮತ್ ತಮ್ಮ ಇತ್ತೀಚಿನ ಪೋಡ್​ಕ್ಯಾಸ್ಟ್​ನಲ್ಲಿ ಮದ್ಯ ಉದ್ಯಮದ ಕೆಲ ತಜ್ಞರ ಜೊತೆ ಸಂವಾದಲ್ಲಿ ಈ ವಿಚಾರ ಚರ್ಚಿಸಿದ್ದಾರೆ.

ಭಾರತೀಯರು ಹೆಚ್ಚು ಹಾಟ್ ಡ್ರಿಂಕ್ಸ್ ಕುಡಿಯೋದು ಯಾಕೆ ಗೊತ್ತಾ? ಲಿಕ್ಕರ್ ಉದ್ಯಮದವರು ಹೇಳೋದಿದು
ಮದ್ಯದಂಗಡಿ
Follow us on

ನವದೆಹಲಿ, ಜುಲೈ 5: ವಿಶ್ವದೆಲ್ಲೆಡೆ ಮದ್ಯ ಸೇವನೆ ನಡೆಯುತ್ತದೆ. ಸಾಮಾನ್ಯವಾಗಿ ಉಷ್ಣ ಹೆಚ್ಚಿರುವ ಪ್ರದೇಶಗಳಲ್ಲಿ ಬಿಯರ್ ಕುಡಿಯುತ್ತಾರೆ. ಶೀತ ಹೆಚ್ಚಿರುವ ಪ್ರದೇಶಗಳಲ್ಲಿ ವಿಸ್ಕಿ, ಬ್ರಾಂಡಿ ಇತ್ಯಾದಿ ಹಾಟ್ ಡ್ರಿಂಕ್ಸ್ ಕುಡಿಯುತ್ತಾರೆ. ಈ ಹಾಟ್ ಡ್ರಿಂಕ್ಸ್​ನಲ್ಲಿ ಆಲ್ಕೋಹಾಲ್ ಅಂಶ ಅಧಿಕ ಇರುವುದರಿಂದ ದೇಹ ಬೆಚ್ಚಗಾಗುತ್ತದೆ ಎನ್ನುವುದು ಅದಕ್ಕೆ ಕಾರಣ. ವಿಶ್ವದ ಅತ್ಯುತ್ತಮ ವಿಸ್ಕಿ, ಬ್ರಾಂಡಿಗಳು ಐರೋಪ್ಯ ದೇಶಗಳಲ್ಲಿ ಸಿಗುತ್ತದೆ. ಅದೇ ಅಮೆರಿಕದಲ್ಲಿ ಜನರು ಬಿಯರ್ ಹೆಚ್ಚು ಕುಡಿಯುತ್ತಾರೆ. ಆದರೆ, ಭಾರತದ ಹೆಚ್ಚಿನ ಪ್ರದೇಶಗಳು ಉಷ್ಣವಲಯದ್ದಾಗಿದ್ದರೂ ಇಲ್ಲಿನ ಜನರು ಹಾಟ್ ಡ್ರಿಂಕ್ಸ್ ಹೆಚ್ಚು ಕುಡಿಯುತ್ತಾರೆ. ಝೀರೋಧದ ಸಹ-ಸಂಸ್ಥಾಪಕ ನಿಖಿಲ್ ಕಾಮತ್ ತಮ್ಮ ಒಂದು ಪೋಡ್​ಕ್ಯಾಸ್ಟ್​ನಲ್ಲಿ ಲಿಕ್ಕರ್ ಉದ್ಯಮದ ಕೆಲ ಪ್ರಮುಖರ ಜೊತೆ ಈ ವಿಚಾರವನ್ನು ಚರ್ಚಿಸಿದ್ದಾರೆ.

‘ಉಷ್ಣವಲಯದ ಪ್ರದೇಶಗಳಲ್ಲಿ ಹಾಟ್ ಡ್ರಿಂಕ್ಸ್ ಮತ್ತು ಬಿಯರ್ ಎರಡೂ ಸಮಾನವಾಗಿ ಕುಡಿಯುವ ಏಕೈಕ ದೇಶವೆಂದರೆ ಭಾರತವೇ. ಇಂಥದ್ದೇ ವಾತಾವರಣ ಇರುವ ವಿಯೆಟ್ನಾಂನಂತಹ ದೇಶಗಳಲ್ಲಿ ಬಿಯರ್ ಕುಡಿಯುವುದು ಹೆಚ್ಚು,’ ಎಂದು ಮದ್ಯ ಉದ್ಯಮ ಪರಿಣಿತರು ಈ ಪೋಡ್​ಕ್ಯಾಸ್ಟ್​ನಲ್ಲಿ ಹೇಳುತ್ತಾರೆ.

ಬಜೆಟ್ ಕಡಿಮೆ, ಸಮಯ ಕಡಿಮೆ, ಬೇಗ ಕಿಕ್ಕೇರಬೇಕು…

ನಿಖಿಲ್ ಕಾಮತ್ ನಡೆಸುವ ಪೋಡ್​ಕ್ಯಾಸ್ಟ್​ನಲ್ಲಿ ಮಾತನಾಡಿದ ಗೋವಾ ಬ್ರಿವಿಂಗ್ ಕಂಪನಿಯ ಸ್ಥಾಪಕ ಸೂರಜ್ ಶೆನಾಯ್ ಒಂದು ಇಂಟರೆಸ್ಟಿಂಗ್ ಅಭಿಪ್ರಾಯ ನೀಡಿದ್ದಾರೆ. ಅವರ ಪ್ರಕಾರ ಭಾರತದಲ್ಲಿ ಕುಡಿಯುವ ವಿಚಾರವೆಲ್ಲಾ ಮನಸ್ಸಿಗೆ ಸಂಬಂಧಿಸಿದಂತೆ. ಜನರ ಕೈಯಲ್ಲಿ ದುಡ್ಡಿಲ್ಲ, ಸಮಯ ಇಲ್ಲ. ಬೇಗ ಕಿಕ್ಕೇರಬೇಕು. ಅದಕ್ಕೆ ಅನುಗುಣವಾಗಿ ಕುಡಿಯುತ್ತಾರೆ.

ಇದನ್ನೂ ಓದಿ: ಕಮರಿತು ಟೆಸ್ಲಾ ಬರುವ ನಿರೀಕ್ಷೆ; ಭಾರತದ ಸಹವಾಸ ಬೇಡ ಎಂದು ಬಿಟ್ಟರಾ ಇಲಾನ್ ಮಸ್ಕ್?

‘ಭಾರತದ ನಗರ ಪ್ರದೇಶ ವಾಸಕ್ಕೆ ಅಯೋಗ್ಯವಾಗಿದೆ. ಜನರು ಕೆಲಸ ಮುಗಿಸಿ ಮನೆಗೆ ಹೋಗುವ ಹೊತ್ತಲ್ಲಿ ಬೇರೆ ಬೇರೆ ಕೆಲಸ ಮಾಡುವ ನಾಲ್ಕು ಜನರು ಒಟ್ಟಿಗೆ ಒಂದು ಸಣ್ಣ ಕೋಣೆಯಲ್ಲಿ ಕೂತು ಕುಡಿದು ನಂತರ ಮನೆಗೆ ಹೋಗುತ್ತಾರೆ. ಭಾರತದಲ್ಲಿ ಪ್ರಯಾಣಕ್ಕೆ ಹಿಡಿಯುವ ಸಮಯ ನೋಡಿದರೆ ಜನರಿಗೆ ಸಮಯಾವಕಾಶ ಸಿಗುವುದೇ ಕಡಿಮೆ. ನಿಮ್ಮ ನಿತ್ಯದ ಜಂಜಾಟದಲ್ಲಿ ಒಂದು ಬ್ರೇಕ್​ಗೆ ಸಮಯ ಕಡಿಮೆಯೇ ಇರುತ್ತದೆ. ಈ ರೀತಿಯಲ್ಲಿ ಭಾರತದಲ್ಲಿ ಕುಡಿತದ ಅಭ್ಯಾಸ ರೂಪಿತವಾಗಿದೆ. ಭಾರತದಲ್ಲಿ ತಯಾರಾದ ವಿದೇಶೀ ಮದ್ಯದಲ್ಲಿ (ಐಎಂಎಫ್​ಎಲ್) ಹೆಚ್ಚಿನ ಮಾರಾಟ ಆಗುವುದು ಇಂಥ ವರ್ಗಗಳಿಗೆಯೇ.

ಬಿಯರ್​ಗಿಂತ ಹಾಟ್ ಡ್ರಿಂಕ್ಸ್ ಹೆಚ್ಚು ಯಾಕೆ? ಇದು ಕಿಕ್ಕಿನ ವಿಚಾರ

ನಿಮ್ಮಲ್ಲಿ ಒಂದು ಗಂಟೆ ಮಾತ್ರವೇ ಇರುತ್ತದೆ. ನೀವು ಎರಡು ಬಿಯರ್ ಬಾಟಲ್ ಕುಡಿಯುತ್ತೀರಿ. ಅದರಿಂದ ಏರುವ ಮತ್ತು ಬೇಗನೇ ಹೊರಟುಹೋಗುತ್ತದೆ. ಅದೇ ನೀವು ಎರಡು ನೈಂಟಿ (180 ಎಂಎಲ್) ತೆಗೆದುಕೊಂಡರೆ ನಶೆ ಹೆಚ್ಚು ಹೊತ್ತು ಇರುತ್ತದೆ ಎಂದು ಸೈಡ್​ಕಾರ್ ಎಂಬ ಬಾರ್​ನ ಸ್ಥಾಪಕಿ ಮೀನಾಕ್ಷಿ ಸಿಂಗ್ ಹೇಳುತ್ತಾರೆ.

ಅಂತೆಯೇ ಭಾರತದಲ್ಲಿ 180 ಎಂಎಲ್ (ಕ್ವಾರ್ಟರ್) ಮತ್ತು 250 ಎಂಎಲ್​ನ ಪೋವಾ ಬಾಟಲ್​​ಗಳು ಹೆಚ್ಚು ಸೇಲ್ ಆಗುತ್ತವೆ.

ಇದನ್ನೂ ಓದಿ: ಭಾರತದಲ್ಲಿ ತಯಾರಿಸಿದ ಪಿಕ್ಸೆಲ್ ಸ್ಮಾರ್ಟ್​ಫೋನ್​ಗಳನ್ನು ಅಮೆರಿಕ, ಯೂರೋಪ್​ಗೆ ರಫ್ತು ಮಾಡಲು ಗೂಗಲ್ ಯೋಜನೆ

ಬಹಳ ಜನರು ಸಾರಾಯಿ ಕುಡಿಯುವುದು ಯಾಕೆ?

ಭಾರತದಲ್ಲಿ ಹೆಚ್ಚು ಜನರು ಲೋಕಲ್ ಡ್ರಿಂಕ್ಸ್ ಹೆಚ್ಚಾಗಿ ಕುಡಿಯುವುದು ಯಾಕೆ ಎಂದು ನಿಖಿಲ್ ಕಾಮತ್ ಈ ಸಂವಾದದ ವೇಳೆ ಕೇಳುತ್ತಾರೆ. ಅದಕ್ಕೆ ಜಿನ್ ಎಕ್ಸ್​ಪ್ಲೋರರ್ಸ್ ಕ್ಲಬ್​ನ ಸಹ-ಸಂಸ್ಥಾಪಕ ಶುಚಿರ್ ಸೂರಿ ಉತ್ತರಿಸುತ್ತಾ, ಭಾರತದಲ್ಲಿ ಸಾರಾಯಿ ಅಥವಾ ಲೋಕಲ್ ಸರಕುಗಳಲ್ಲಿ ಆಲ್ಕೋಹಾಲ್ ಪ್ರಮಾಣ ಕಡಿಮೆ ಇರುತ್ತದೆ. ಈ ಕಾರಣಕ್ಕೆ ಅದು ಹೆಚ್ಚು ರುಚಿ ಎನಿಸುತ್ತದೆ. ಬೆಲೆಯೂ ಕಡಿಮೆ. ವಿಸ್ಕಿಯಲ್ಲಿ ಶೇ. 42ರಷ್ಟು ಆಲ್ಕೋಹಾಲ್ ಇದ್ದರೆ, ಈ ಠರ್ರಾ ಅಥವಾ ಸಾರಾಯಿಯಲ್ಲಿ ಶೇ. 28ರಷ್ಟು ಆಲ್ಕೋಹಾಲ್ ಇರುತ್ತದೆ. ಹಾಗೆಯೇ, ಕಂಟ್ರಿ ಲಿಕ್ಕರ್​ನಲ್ಲಿ ಬೇರೆ ಬೇರೆ ಫ್ಲೇವರ್ಸ್ ಇರುತ್ತದೆ ಎಂದು ಹೇಳುತ್ತಾರೆ.

ಒಟ್ಟಾರೆ ಜನರು ತಾವು ತೆರುವ ಹಣಕ್ಕೆ ಬೇಗ ಮತ್ತೇರಿಸಿಕೊಳ್ಳಬಯಸುತ್ತಾರೆ. ತಮ್ಮ ಕಠಿಣ ಜೀವನದಿಂದ ಒಂದಷ್ಟು ಕಾಲ ಪಾರಾಗಲು ಬಯಸುತ್ತಾರೆ ಎಂದು ಮೀನಾಕ್ಷಿ ಸಿಂಗ್ ತಿಳಿಸುತ್ತಾರೆ.

(ಗಮನಿಸಿ: ಯಾವುದೇ ಅಲ್ಕೋಹಾಲ್ ಅಂಶದ ಪಾನೀಯಗಳು ಆರೋಗ್ಯಕ್ಕೆ ಹಾನಿಕರವಾಗಿರುತ್ತದೆ.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ