ನವದೆಹಲಿ, ಜುಲೈ 5: ಬಜಾಜ್ ಅಟೊ ಸಂಸ್ಥೆ ಇಂದು ಶುಕ್ರವಾರ ಫ್ರೀಡಂ 125 ಬೈಕ್ ಅನ್ನು ಬಿಡುಗಡೆ ಮಾಡಿದೆ. ಸಿಎನ್ಜಿಯಲ್ಲಿ ಓಡುವ ವಿಶ್ವದ ಮೊದಲ ಬೈಕ್ ಇದಾಗಿದೆ. ಈ ಸಿಎನ್ಜಿ ಬೈಕ್ನ ಬೆಲೆ 95,000 ರೂನಿಂದ ಆರಂಭವಾಗಿ 1.10 ಲಕ್ಷ ರೂವರೆಗೂ ಇದೆ. ಪೆಟ್ರೋಲ್ ಎಂಜಿನ್ನ ಬೈಕ್ಗೆ ಹೋಲಿಸಿದರೆ ಈ ಸಿಎನ್ಜಿ ಬೈಕ್ ತರುವ ಹಣದ ಉಳಿತಾಯ ಅಗಾಧವಾದುದು. ಈ ಬೈಕ್ನ ಅನಾವರಣದ ವೇಳೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಉಪಸ್ಥಿತರಿದ್ದರು. ಈ ವಾಹನ ತಯಾರಿಸಲು ಬಜಾಜ್ ಸಂಸ್ಥೆ ಹಾಕಿದ ಆರ್ ಅಂಡ್ ಡಿ ಶ್ರಮವನ್ನು ಅವರು ಮೆಚ್ಚಿಕೊಂಡರು.
ಬಜಾಜ್ನ ಸಿಎನ್ಜಿ ಬೈಕ್ ಆದ ಫ್ರೀಡಂ 125 ಪ್ರಾಯೋಗಿಕವಾಗಿ ಎಷ್ಟು ಹಣ ಉಳಿಸಬಹುದು ಎಂಬುದನ್ನು ನಿತಿನ್ ಗಡ್ಕರಿ ನಿದರ್ಶನ ಕೊಟ್ಟರು. ಅವರ ಪ್ರಕಾರ ಈಗಿನ ಬೆಲೆಯಲ್ಲಿ ಪೆಟ್ರೋಲ್ ದ್ವಿಚಕ್ರ ವಾಹನದಿಂದ ಆಗುವ ವೆಚ್ಚ ಒಂದು ಕಿಮೀಗೆ 2.25 ರೂ. ಆದರೆ, ಸಿಎನ್ಜಿ ಬೈಕ್ನಲ್ಲಿ ಒಂದು ಕಿಮೀಗೆ ಕೇವಲ ಒಂದು ರೂ ಮಾತ್ರವೇ ವೆಚ್ಚವಾಗುವುದು.
‘ನಾವು ದ್ವಿಚಕ್ರ ವಾಹನಗಳನ್ನು ರಫ್ತು ಮಾಡುವುದರಲ್ಲಿ ನಂಬರ್ ಒನ್ ಆಗಿದ್ದೇವೆ. ಪೆಟ್ರೋಲ್ ಬೈಕ್ಗಳಿಗೆ ಹೋಲಿಸಿದರೆ ಸಿಎನ್ಜಿ ಬೈಕ್ ವೆಚ್ಚ ಕಡಿಮೆ ಇರುವುದರಿಂದ ನಿಮಗೆ ಇನ್ನೂ ಹೆಚ್ಚಿನ ಮಾರುಕಟ್ಟೆ ಸಿಗುವ ಪೂರ್ಣ ವಿಶ್ವಾಸ ನನಗಿದೆ,’ ಎಂದು ನಿತಿನ್ ಗಡ್ಕರಿ ಹೇಳಿದರು.
ಇದನ್ನೂ ಓದಿ: ಕಮರಿತು ಟೆಸ್ಲಾ ಬರುವ ನಿರೀಕ್ಷೆ; ಭಾರತದ ಸಹವಾಸ ಬೇಡ ಎಂದು ಬಿಟ್ಟರಾ ಇಲಾನ್ ಮಸ್ಕ್?
ಬಜಾಜ್ ಫ್ರೀಡಂ 125 ಬೈಕ್ನಲ್ಲಿ ಡುಯಲ್ ಟ್ಯಾಂಕ್ ಇದೆ. ಸೀಟಿನ ಕೆಳಗೆ ಎರಡು ಲೀಟರ್ನ ಪೆಟ್ರೋಲ್ ಟ್ಯಾಂಕ್ ಮತ್ತು ಎರಡು ಕಿಲೋ ಸಿಎನ್ಜಿ ಟ್ಯಾಂಕ್ಗಳಿರುತ್ತವೆ. ಒಂದು ಕಿಲೋ ಸಿಎನ್ಜಿ ಬೆಲೆ 60 ರೂ ಇದೆ. ಒಂದು ಕಿಲೋ ಸಿಎನ್ಜಿಯಲ್ಲಿ ಬೈಕ್ 106 ಕಿಮೀ ಓಡುತ್ತದೆ ಎಂದು ಬಜಾಜ್ ಸಂಸ್ಥೆ ಹೇಳಿಕೊಂಡಿದೆ.
ನಿತಿನ್ ಗಡ್ಕರಿ ಅವರು ಇದೇ ವೇಳೆ ಪೆಟ್ರೋಲ್ ಟ್ಯಾಂಕ್ ಬದಲು ಎಥನಾಲ್ ಟ್ಯಾಂಕ್ ಇರಿಸುವಂತೆ ಬಜಾಜ್ ಆಟೊ ಸಂಸ್ಥೆಗೆ ಸಲಹೆ ನೀಡಿದರು. ಪೆಟ್ರೋಲ್ಗಿಂತ ಎಥನಾಲ್ ಹೆಚ್ಚು ಪರಿಸರಸ್ನೇಹಿಯಾಗಿರುತ್ತದೆ ಎಂಬುದು ಅವರ ಅನಿಸಿಕೆ.
ಇದನ್ನೂ ಓದಿ: ಟಾಟಾ ನೆಕ್ಸಾನ್ ಗೆ ಭರ್ಜರಿ ಪೈಪೋಟಿ ನೀಡಲಿದೆ ಸ್ಕೋಡಾ ಹೊಸ ಸಬ್ ಕಂಪ್ಯಾಕ್ಟ್ ಎಸ್ಯುವಿ
ಸಿಎನ್ಜಿ ಕೂಡ ಪೆಟ್ರೋಲಿಯಂ ಪದಾರ್ಥವೇ ಆದರೂ ಪೆಟ್ರೋಲ್ ಮತ್ತು ಡೀಸಲ್ಗೆ ಹೋಲಿಸಿದರೆ ಪರಿಸರಕ್ಕೆ ಕಡಿಮೆ ಹಾನಿ ಮಾಡುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ