ಸರ್ಕಾರಿ ಸ್ವಾಮ್ಯದ ವಿಮಾ ಕಂಪೆನಿಯಾದ ಭಾರತೀಯ ಜೀವ ವಿಮಾ ನಿಗಮ (LIC) ಮೇ 30ನೇ ತಾರೀಕಿನ ಸೋಮವಾರದಂದು ಪ್ರಕಟಿಸಿರುವ ಹಣಕಾಸಿನ ಫಲಿತಾಂಶದ ಪ್ರಕಾರ, ಮಾರ್ಚ್ 2022ಕ್ಕೆ ಕೊನೆಗೊಳ್ಳುವ ತ್ರೈಮಾಸಿಕದಲ್ಲಿ ರೂ. 2,409 ಕೋಟಿ ನಿವ್ವಳ ಲಾಭವನ್ನು ವರದಿ ಮಾಡಿದೆ. ಇದು ಹಿಂದಿನ ವರ್ಷದ ಇದೇ ಅವಧಿಯಲ್ಲಿ ವರದಿಯಾದ ರೂ. 2,917.33 ಕೋಟಿಗೆ ಹೋಲಿಸಿದರೆ ಶೇ 17.41ರಷ್ಟು ಕಡಿಮೆಯಾಗಿದೆ. ಇಡೀ ಹಣಕಾಸು ವರ್ಷದಲ್ಲಿ ಕಂಪೆನಿಯ ನಿವ್ವಳ ಲಾಭವು ರೂ. 4,043.12 ಕೋಟಿ ಎಂದು ವರದಿಯಾಗಿದ್ದು, ಇದು ಹಣಕಾಸು ವರ್ಷ 2021ರಲ್ಲಿ ಇದ್ದ ರೂ. 2,900.56 ಕೋಟಿಗೆ ಹೋಲಿಸಿದರೆ ಶೇ 39.4ರಷ್ಟು ಹೆಚ್ಚಾಗಿದೆ.
ಹಣಕಾಸು ವರ್ಷ 2022ರ ನಾಲ್ಕನೇ ತ್ರೈಮಾಸಿಕದಲ್ಲಿ ಒಟ್ಟು ಆದಾಯವು 2,11,471 ಕೋಟಿ ರೂಪಾಯಿ ಬಂದಿದ್ದು, ಇದು ಕಳೆದ ವರ್ಷದ ಇದೇ ತ್ರೈಮಾಸಿಕದಲ್ಲಿ ವರದಿಯಾದ 1,89,176 ಕೋಟಿ ಆದಾಯಕ್ಕೆ ಹೋಲಿಸಿದರೆ ಶೇ 11.64ರಷ್ಟು ಹೆಚ್ಚಾಗಿದೆ. ಇತ್ತೀಚೆಗೆ ಭಾರತದ ಅತಿದೊಡ್ಡ ಆರಂಭಿಕ ಸಾರ್ವಜನಿಕ ಕೊಡುಗೆಗೆ (ಐಪಿಒ) ತೆರೆದಿರುವ ಎಲ್ಐಸಿ, ಪ್ರತಿ ಈಕ್ವಿಟಿ ಷೇರಿಗೆ ರೂ. 1.50 ರಷ್ಟು ಲಾಭಾಂಶವನ್ನು ಘೋಷಿಸಿರುವುದು ನಿಯಂತ್ರಕ ಫೈಲಿಂಗ್ನಿಂದ ತಿಳಿದುಬಂದಿದೆ.
ಪರಿಶೀಲನೆಯಲ್ಲಿರುವ ತ್ರೈಮಾಸಿಕದಲ್ಲಿ ಅದರ ನಿವ್ವಳ ಪ್ರೀಮಿಯಂ ಆದಾಯವು 1,44,158.84 ಕೋಟಿ ರೂಪಾಯಿಗೆ ಏರಿದೆ ಎಂದು ಕಂಪೆನಿಯು ಗಮನ ಸೆಳೆದಿದೆ. ಇದು ಹಣಕಾಸು ವರ್ಷ 2021ರ ನಾಲ್ಕನೇ ತ್ರೈಮಾಸಿಕದಲ್ಲಿ ವರದಿಯಾದ 1,22,290.64 ಕೋಟಿ ರೂಪಾಯಿಗೆ ಹೋಲಿಸಿದರೆ ಶೇ 17.88 ರಷ್ಟು ಏರಿಕೆಯಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: LIC Stock Market Debut: 949 ರೂ.ಗೆ ಹಂಚಿದ್ದ ಎಲ್ಐಸಿ ಷೇರು ಶೇ 9ರಷ್ಟು ಕಡಿಮೆಗೆ 867 ರೂಪಾಯಿಯಲ್ಲಿ ಮಾರುಕಟ್ಟೆ ಲಿಸ್ಟಿಂಗ್