ನವದೆಹಲಿ: ಭಾರತದ ಅತಿದೊಡ್ಡ ವಿಮಾ ಸಂಸ್ಥೆ ಎನಿಸಿದ ಮತ್ತು ಯಾವತ್ತೂ ನಷ್ಟವನ್ನೇ ಕಾಣದ ಲೈಫ್ ಇನ್ಷೂರೆನ್ಸ್ ಕಾರ್ಪೊರೇಷನ್ (LIC) ಷೇರುಪೇಟೆಗೆ ಪ್ರವೇಶ ಮಾಡಿದರೆ ಹೇಗಿದ್ದೀತು. ಧಾಮ್ ಧೂಮ್ ನಿರೀಕ್ಷಿಸುವುದು ಸಹಜ. ಒಂದು ವರ್ಷದ ಹಿಂದೆ ಎಲ್ಐಸಿ ಐಪಿಒಗೆ ಬಂದಾಗ ಆಗಿದ್ದು ಇದೇ ಧಾಮ್ ಧೂಮ್ ಆಟ. ಬರೋಬ್ಬರಿ 21,000 ಕೋಟಿ ರುಪಾಯಿಯ ಐಪಿಒ. ಇದು ಭಾರತದ ಷೇರು ಮಾರುಕಟ್ಟೆ ಇತಿಹಾಸದಲ್ಲೇ ಕಂಡಿರುವ ಅತಿದೊಡ್ಡ ಐಪಿಒ. ಅಬ್ಬರದಿಂದ ಐಪಿಒಗೆ ಇಳಿದ ಎಲ್ಐಸಿ ಷೇರು ಒಂದು ವರ್ಷದಲ್ಲಿ 300 ರುಪಾಯಿಗೂ ಹೆಚ್ಚು ಮೊತ್ತದಷ್ಟು ಕಡಿಮೆ ಬೆಲೆಗೆ ಬಿಕರಿ ಆಗುತ್ತಿದೆ.
ವರ್ಷದ ಹಿಂದೆ ಎಲ್ಐಸಿ ಐಪಿಒನಲ್ಲಿ ಜನರು ಮುಗಿಬಿದ್ದು ಷೇರುಗಳನ್ನು ಖರೀದಿಸಿದರು. ಇದು ನಿರೀಕ್ಷಿತವೇ. ಆದರೆ, ಅಚ್ಚರಿ ಎದುರಾಗಿದ್ದು ಅದಾದ ಬಳಿಕವೇ. ಐಪಿಒಗೆ ಭರ್ಜರಿ ಸ್ಪಂದನೆ ಪಡೆದ ಎಲ್ಐಸಿ ಷೇರುಮಾರುಕಟ್ಟೆಗಳಲ್ಲಿ ಲಿಸ್ಟ್ ಆಗುವಾಗ ಅಚ್ಚರಿ ಶುರುವಾಗಿದ್ದು. ಐಪಿಒ ಬೆಲೆಗಿಂತ ಶೇ. 8ರಷ್ಟು ಕಡಿಮೆ ಬೆಲೆಯಲ್ಲಿ ಎಲ್ಐಸಿ ಷೇರುಗಳು ಲಿಸ್ಟ್ ಆದವು.
ಭಾರತೀಯ ಜೀವ ವಿಮಾ ನಿಗಮದ ಐಪಿಒಗೆ ಆಫರ್ ಮಾಡಲಾಗಿದ್ದ ಷೇರುಗಳಿಗೆ 3 ಪಟ್ಟು ಹೆಚ್ಚು ಬೇಡಿಕೆ ಇತ್ತು. 949 ರುಪಾಯಿ ಬೆಲೆಗೆ ಐಪಿಒನಲ್ಲಿ ಖರೀದಿಸಲಾಯಿತು. ಆದರೆ, 2022 ಮೇ 17ರಂದು ಬಿಎಸ್ಇ ಮಾರುಕಟ್ಟೆಯಲ್ಲಿ ಲಿಸ್ಟ್ ಮಾಡುವಾಗ ಎಲ್ಐಸಿ ಷೇರುಬೆಲೆ ಶೇ. 8.62ರಷ್ಟು ಕಡಿಮೆ ಆಯಿತು. 949 ರೂ ಬದಲು 867.20 ರೂ ಬೆಲೆಗೆ ಲಿಸ್ಟ್ ಆಯಿತು.
ಇದನ್ನೂ ಓದಿ: Adani: ಆರಲ್ಲ, ಮೂರು ತಿಂಗಳು ಮಾತ್ರ ಟೈಮ್; ಅದಾನಿ ತನಿಖೆ ಪೂರ್ಣಗೊಳಿಸಿ ವರದಿ ಸಲ್ಲಿಸಲು ಸೆಬಿಗೆ ಆಗಸ್ಟ್ 14 ಗಡುವು
ಷೇರು ಮಾರುಕಟ್ಟೆಯಲ್ಲಿ ಭಾರೀ ನಿರೀಕ್ಷೆ ಹುಟ್ಟಿಸಿ ಮಕಾಡೆ ಮಲಗಿದ ಪ್ರಮುಖ ಕಂಪನಿಗಳಲ್ಲಿ ಪೇಟಿಎಂ ಇತ್ಯಾದಿ ಸಾಲಿನಲ್ಲಿ ಎಲ್ಐಸಿಯೂ ಇದೆ. 867 ರುಪಾಯಿಗೆ ಲಿಸ್ಟ್ ಆಗಿದ್ದ ಇದರ ಷೇರುಬೆಲೆ ಮೇ 17 ಬುಧವಾರ ಬೆಳಗಿನ ವಹಿವಾಟಿನಲ್ಲಿ 567 ರುಪಾಯಿಗೆ ಬಂದಿಳಿದಿತ್ತು. ಒಂದು ವರ್ಷದಲ್ಲಿ ಬರೋಬ್ಬರಿ 300 ರೂನಗಳಷ್ಟು ಬೆಲೆ ಕುಸಿತ ಕಂಡಿದೆ ಎಲ್ಐಸಿ ಷೇರು.
ಎಲ್ಐಸಿ ಐಪಿಒದಲ್ಲಿ ಇದ್ದ 949 ರೂ ದರಕ್ಕೆ ಹೋಲಿಸಿದರೆ 382 ರುಪಾಯಿಯಷ್ಟು ಬೆಲೆ ಕಡಿಮೆ ಆಗಿದೆ. ಈ ಒಂದು ವರ್ಷದ ಅವಧಿಯಲ್ಲಿ ಎಲ್ಐಸಿ ಷೇರು ಬೆಲೆ 918.95 ರೂಗಳ ಗರಿಷ್ಠ ಮಟ್ಟ ಮುಟ್ಟಿತ್ತು. ಹಾಗೆಯೇ 530 ರುಪಾಯಿಗೂ ಕುಸಿದಿತ್ತು. ಇಂದು ಮೇ 17 ಬುಧವಾರ ಸಂಜೆ ವೇಳೆಗೆ ಎಲ್ಐಸಿ ಷೇರು ಬೆಲೆ ತುಸು ಹಿಗ್ಗಿ 570 ರುಪಾಯಿಗೆ ಹೋಗಿದೆ. ಅದಾನಿ ಕಂಪನಿಗಳಲ್ಲಿ ಹೂಡಿಕೆ ಮಾಡಿರುವುದರಿಂದ ಎಲ್ಐಸಿ ಷೇರುಬೆಲೆ ಈ ವರ್ಷ 565 ರುಪಾಯಿಯವರೆಗೆ ಮಾತ್ರ ಹೋಗಬಹುದು ಎಂದು ತಜ್ಞರು ಏಪ್ರಿಲ್ ತಿಂಗಳಲ್ಲಿ ಅಂದಾಜು ಮಾಡಿದ್ದರು. ಆದರೆ, ಆ ಲೆಕ್ಕಾಚಾರ ಮೀರಿ ಈಗ 570 ರುಪಾಯಿಗೆ ಹೋಗಿ ಮುಟ್ಟಿದೆ. ಮುಂದಿನ ದಿನಗಳಲ್ಲಿ ಷೇರುಪೇಟೆಯಲ್ಲಿ ಎಲ್ಐಸಿ ಎಷ್ಟು ವೇಗವಾಗಿ ವೃದ್ದಿ ಕಾಣುತ್ತದೆ ಎಂಬುದು ಕುತೂಹಲ ಮೂಡಿಸಿದೆ.