LIC: ಆರೋಗ್ಯ ವಿಮಾ ಕ್ಷೇತ್ರದಲ್ಲಿ ವಹಿವಾಟು ಅರಂಭಿಸಲು ಎಲ್ಐಸಿ ಮತ್ತೆ ಪ್ರಯತ್ನ
ಭಾರತದಲ್ಲಿ ಕ್ಲೇಮ್ ನಿರ್ವಹಣೆಯಲ್ಲಿ ಗೊಂದಲವಾಗಬಹುದು ಎನ್ನುವ ಕಾರಣಕ್ಕೆ ಜೀವವಿಮಾ ಕಂಪನಿಗಳಿಗೆ ಆರೋಗ್ಯ ವಿಮೆ ಪಾಲಿಸಿ ನೀಡುವುದನ್ನು ನಿರ್ಬಂಧಿಸಲಾಗಿದೆ.
ಕೊಲ್ಕತ್ತಾ: ಭಾರತದ ಅತಿದೊಡ್ಡ ಜೀವ ವಿಮಾ ಕಂಪನಿ ‘ಭಾರತೀಯ ಜೀವ ವಿಮಾ ನಿಗಮ’ (Life Insurance Corporation – LIC) ಮತ್ತೊಮ್ಮೆ ಆರೋಗ್ಯ ವಿಮಾ ಕ್ಷೇತ್ರ (Health Insurance) ಪ್ರವೇಶಿಸುವ ಚಿಂತನೆ ನಡೆಸುತ್ತಿದೆ. ಇತ್ತೀಚೆಗಷ್ಟೇ ಷೇರುಪೇಟೆ ಪ್ರವೇಶಿಸಿದ ಎಲ್ಐಸಿಯ ಈ ಚಿಂತನೆ ಮಾರುಕಟ್ಟೆಯಲ್ಲಿ ಹಲವು ನಿರೀಕ್ಷೆಗಳನ್ನು ಹುಟ್ಟುಹಾಕಿದೆ. 2016ರಲ್ಲಿ ‘ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ’ವು (Insurance Regulatory and Development Authority of India – IRDA) ಜೀವವಿಮೆ ಒದಗಿಸುವ ವಿಮಾ ಕಂಪನಿಗಳಿಗೆ ಆಸ್ಪತ್ರೆ ಶುಲ್ಕ ಮರುಪಾವತಿಸುವ ಆರೋಗ್ಯ ಪಾಲಿಸಿಗಳ ಮಾರಾಟದಿಂದ ಹಿಂದೆ ಸರಿಯುವಂತೆ ಸೂಚಿಸಿತ್ತು. ಈ ಸೂಚನೆ ಹೊರಬಿದ್ದ ನಂತರ ಆರೋಗ್ಯ ವಿಮಾ ಕ್ಷೇತ್ರದಲ್ಲಿ ಎಲ್ಐಸಿ ಪಾಲುದಾರಿಕೆ ಕಡಿಮೆಯಾಗಿತ್ತು.
ಆರೋಗ್ಯ ವಿಮಾ ಕ್ಷೇತ್ರದತ್ತ ಇದೀಗ ಎಲ್ಐಸಿ ಮತ್ತೊಮ್ಮೆ ಗಮನ ಹರಿಸುವುದಾಗಿ ಹೇಳಿದೆ. ಈ ಕುರಿತು ಪಿಟಿಐ ಸುದ್ದಿಸಂಸ್ಥೆಗೆ ಪ್ರತಿಕ್ರಿಯಿಸಿರುವ ಸಂಸ್ಥೆಯ ಅಧ್ಯಕ್ಷ ಎಂ.ಆರ್.ಕುಮಾರ್, ‘ನಾವು ವಿಮಾ ಪ್ರಾಧಿಕಾರದಿಂದ ಕೆಲ ಸ್ಪಷ್ಟನೆ ಕೋರಿದ್ದಾರೆ. ಅವರು ಮಾಹಿತಿ ಒದಗಿಸಿದ ನಂತರ ಸಂಸ್ಥೆಯ ನಿರ್ಧಾರ ಪ್ರಕಟಿಸಲಾಗುವುದು. ಎಲ್ಐಸಿ ಇಂದಿಗೂ ಹಲವು ದೀರ್ಘಾವಧಿಯ ಆರೋಗ್ಯ ಸುರಕ್ಷೆ ಮತ್ತು ಖಾತ್ರಿಯ ಪಾಲಿಸಿಗಳನ್ನು ಒದಗಿಸುತ್ತಿದೆ’ ಎಂದು ಹೇಳಿದ್ದಾರೆ.
ಮೆಡಿಕ್ಲೇಮ್ ಪಾಲಿಸಿಗಳು ದೇಶದಲ್ಲಿ ಅತ್ಯಂತ ವೇಗವಾಗಿ ಮಾರಾಟವಾಗುತ್ತಿರುವ ‘ಬೆಸ್ಟ್ ಸೆಲ್ಲರ್’ ಪಾಲಿಸಿಗಳಾಗಿವೆ. ಎಲ್ಐಸಿಯು ಈ ಮೊದಲು ಮಾರುತ್ತಿದ್ದ ಪಾಲಿಸಿಗಳು ಇನ್ಡೆಮ್ನಿಟಿ (Indemnity Health Insurance) ನಿಯಮ ಆಧರಿತ ಆರೋಗ್ಯ ಪಾಲಿಸಿಗಳಾಗಿದ್ದವು. ಇಂಥ ಪಾಲಿಸಿಗಳಲ್ಲಿ ವಿಮೆಯ ಖಾತ್ರಿ ಮೊತ್ತಕ್ಕೆ ಸರಿಸಮನಾದ ಮೊತ್ತವನ್ನು ಚಿಕಿತ್ಸೆಗೆ ಒದಗಿಸಲಾಗುತ್ತಿತ್ತು. ಆದರೆ, ಇದೀಗ ಮಾರುಕಟ್ಟೆಯಲ್ಲಿ ಚಾಲ್ತಿಯಲ್ಲಿರುವ ಬಹುತೇಕ ಆರೋಗ್ಯ ವಿಮೆ ಯೋಜನೆಗಳು ಪೂರ್ವ ನಿರ್ಧರಿತ (Fixed Benefit Health Insurance) ಮೊತ್ತವನ್ನು ಚಿಕಿತ್ಸೆಗೆ ಒದಗಿಸುತ್ತವೆ. ಮೊದಲಿನಿಂದಲೂ ಅಸ್ತಿತ್ವದಲ್ಲಿರುವ ಕಾಯಿಲೆಗಳಿಗೆ ನಿಗದಿತ ಕಾಯುವಿಕೆ ಅವಧಿ ಮುಗಿದ ನಂತರ ಚಿಕಿತ್ಸಾ ವೆಚ್ಚವನ್ನು ವಿಮಾ ಕಂಪನಿ ಭರಿಸುತ್ತದೆ.
ವಿಮಾ ನಿಯಂತ್ರಣ ಪ್ರಾಧಿಕಾರದ ಅಧ್ಯಕ್ಷ ದೇಬಶಿಶ್ ಪಾಂಡಾ ಅವರು ಇತ್ತೀಚೆಗಷ್ಟೇ ದೇಶದ ಎಲ್ಲ ನಾಗರಿಕರಿಗೆ 2030ರ ಒಳಗೆ ಆರೋಗ್ಯ ವಿಮೆಯ ಸುರಕ್ಷೆ ಸಿಗಬೇಕು ಎಂದು ತಮ್ಮ ಕನಸು ಹಂಚಿಕೊಂಡಿದ್ದರು. ಇದು ಸಾಧ್ಯವಾಗಿಸಲು ಎಲ್ಲ ಜೀವವಿಮಾ ಕಂಪನಿಗಳು ಆರೋಗ್ಯ ವಿಮಾ ಕ್ಷೇತ್ರವನ್ನೂ ಪ್ರವೇಶಿಸಬೇಕು ಎಂದು ಕರೆ ನೀಡಿದ್ದರು. ಎಲ್ಐಸಿ ಚಿಂತನೆಯ ಮೇಲೆ ಈ ಹೇಳಿಕೆಯು ಪ್ರಭಾವ ಬೀರಿತ್ತು. ಆದರೆ ನಂತರದ ದಿನಗಳಲ್ಲಿ ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿದ್ದ ಅವರು, ಜೀವವಿಮಾ ಕಂಪನಿಗಳು ಆರೋಗ್ಯ ವಿಮೆ ಪಾಲಿಸಿ ಮಾರುವುದರ ಲಾಭ-ನಷ್ಟಗಳನ್ನು ಪರಿಶೀಲಿಸಲಾಗುತ್ತಿದೆ. ಪ್ರಾಧಿಕಾರವು ಈ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಹೇಳಿದ್ದರು.
ವಿಶ್ವದ ಹಲವು ದೇಶಗಳಲ್ಲಿ ಜೀವವಿಮಾ ಕಂಪನಿಗಳು ಆರೋಗ್ಯ ವಿಮಾ ಪಾಲಿಸಿಗಳನ್ನೂ ಮಾರುತ್ತಿವೆ. ಆದರೆ ಭಾರತದಲ್ಲಿ ಕ್ಲೇಮ್ ನಿರ್ವಹಣೆಯಲ್ಲಿ ಗೊಂದಲವಾಗಬಹುದು ಎನ್ನುವ ಕಾರಣಕ್ಕೆ ಜೀವವಿಮಾ ಕಂಪನಿಗಳಿಗೆ ಆರೋಗ್ಯ ವಿಮೆ ಪಾಲಿಸಿ ನೀಡುವುದನ್ನು ನಿರ್ಬಂಧಿಸಲಾಗಿದೆ.
Published On - 9:58 am, Tue, 16 August 22