LIC IPO: ಎಲ್​ಐಸಿ ಐಪಿಒ ಇಂದಿನಿಂದ ಆರಂಭ: ನಿಮಗೆ ತಿಳಿದಿರಲೇ ಬೇಕು ಈ ಸಂಗತಿಗಳು

| Updated By: Vinay Bhat

Updated on: May 04, 2022 | 11:48 AM

ಇದು ಭಾರತದ ಅತೀದೊಡ್ಡ ಐಪಿಒ ಎಂಬ ಹೆಗ್ಗಳಿಕೆ ಗಳಿಸಿದ್ದು, ಇದಕ್ಕೆ ಅತ್ಯುತ್ತಮ ಪ್ರತಿಕ್ರಿಯೆ ಕೂಡ ವ್ಯಕ್ತವಾಗುತ್ತಿದೆ. ಹಾಗಾದರೆ ಎಲ್​ಐಸಿ ಐಪಿಒ ಬಗ್ಗೆ ನೀವು ತಿಳಿದುಕೊಳ್ಳಬೇಕಾಗಿರುವ ಪ್ರಮುಖ ಸಂಗತಿಗಳೇನು ಎಂಬುದನ್ನು ನೋಡೋಣ.

LIC IPO: ಎಲ್​ಐಸಿ ಐಪಿಒ ಇಂದಿನಿಂದ ಆರಂಭ: ನಿಮಗೆ ತಿಳಿದಿರಲೇ ಬೇಕು ಈ ಸಂಗತಿಗಳು
LIC IPO
Follow us on

ಸರ್ಕಾರಿ ಸ್ವಾಮ್ಯದ ಭಾರತೀಯ ಜೀವ ವಿಮಾ ನಿಗಮದ (LIC) ಬಹುನಿರೀಕ್ಷಿತ ಆರಂಭಿಕ ಷೇರು ಮಾರಾಟ (IPO) ಇಂದಿನಿಂದ (ಮೇ. 04) ಆರಂಭವಾಗುತ್ತಿದೆ. ಪ್ರತಿ ಷೇರಿಗೆ 902ರಿಂದ 949 ರೂಪಾಯಿ ನಿಗದಿ ಮಾಡಲಾಗಿದ್ದು, ಮೇ 9ರವರೆಗೂ ಷೇರು ಖರೀದಿಗೆ ಬಿಡ್​ ಮಾಡಬಹುದು. ಎಲ್​ಐಸಿ ಐಪಿಒ ಶುರುವಾಗುವ ಮುಂಚೆಯೇ ಕೆಲವು ಹೂಡಿಕೆದಾರರಿಂದ 5,627 ಕೋಟಿ ಗಳಿಸಲಾಗಿದೆ ಎಂದು ಎಲ್​ಐಸಿ ಹೇಳಿಕೊಂಡಿದೆ. ಈ ಮಾರಾಟ ದಿಂದ 21 ಸಾವಿರ ಕೋಟಿ ರೂಪಾಯಿ ಸಂಗ್ರಹಿಸುವ ಗುರಿಯನ್ನು ಎಲ್​ಐಸಿ ಹೊಂದಿದೆ.  ಇದು ಭಾರತದ ಅತೀದೊಡ್ಡ ಐಪಿಒ ಎಂಬ ಹೆಗ್ಗಳಿಕೆ ಗಳಿಸಿದ್ದು, ಇದಕ್ಕೆ ಅತ್ಯುತ್ತಮ ಪ್ರತಿಕ್ರಿಯೆ ಕೂಡ ವ್ಯಕ್ತವಾಗುತ್ತಿದೆ. ಹಾಗಾದರೆ ಎಲ್​ಐಸಿ ಐಪಿಒ ಬಗ್ಗೆ ನೀವು ತಿಳಿದುಕೊಳ್ಳಬೇಕಾಗಿರುವ ಪ್ರಮುಖ ಸಂಗತಿಗಳೇನು ಎಂಬುದನ್ನು ನೋಡೋಣ.

ಸಾರ್ವಜನಿಕರು ಮತ್ತು ಪಾಲಿಸಿದಾರರಿಗೆ ರಿಯಾಯಿತಿ:

ಎಲ್​ಐಸಿಯ ಆರಂಭಿಕ ಷೇರು ಮಾರಾಟದಲ್ಲಿ ಸಾರ್ವಜನಿಕರು ಮತ್ತು ಪಾಲಿಸಿದಾರರಿಗೆ ರಿಯಾಯಿತಿ ನೀಡಲಾಗಿದೆ. ಪಾಲಿಸಿದಾರರಾಗಿ ಅಪ್ಲೈ ಮಾಡಿದರೆ ಸಾರ್ವಜನಿಕರಿಗೆ ಸಿಗುವುದಕ್ಕಿಂತಲೂ ಹೆಚ್ಚು ರಿಯಾಯಿತಿ ಸಿಗುತ್ತದೆ. ಎಲ್‌ಐಸಿ ಪಾಲಿಸಿದಾರರಿಗೆ 2 ಲಕ್ಷ ರೂ. ವರೆಗೆ ಹೂಡಿಕೆಗೆ ಅವಕಾಶವಿದೆ. ಅದರ ಮೇಲ್ಪಟ್ಟು ಮಾಡಲಚ್ಛಿಸುವವರು ರಿಟೇಲ್‌ ಮಾರ್ಗದಲ್ಲಿ ಎಲ್‌ಐಸಿ ಐಪಿಒನಲ್ಲಿ ಹೂಡಿಕೆ ಮಾಡಬಹುದು. ರಿಟೇಲ್‌ ಖರೀದಿದಾರರಿಗೆ ಪ್ರತಿ ಷೇರಿನ ಮೇಲೆ 45 ರೂ. ರಿಯಾಯಿತಿ ಇರುತ್ತದೆ. ಅದೆ ಎಲ್​​ಐಸಿ ಪಾಲಿಸಿದಾರರಿಗೆ ಪ್ರತಿ ಷೇರಿನ ಮೇಲೆ  60 ರೂ. ಡಿಸ್ಕೌಂಟ್ ನೀಡಲಾಗಿದೆ. ಇನ್ನು ಎಲ್ಐಸಿ ಪಾಲಿಸಿದಾರರು ಹಾಗೂ ಉದ್ಯೋಗಿಗಳಿಗೆ ಐಪಿಒನಲ್ಲಿ ಪಾಲ್ಗೊಳ್ಳುವಂತೆ ಉತ್ತೇಜನ ನೀಡಲು ಸರ್ಕಾರ ಷೇರುಗಳನ್ನು ಮೀಸಲಿಟ್ಟಿದೆ. ಎಲ್ಐಸಿ ಪಾಲಿಸಿದಾರರಿಗೆ ಶೇ.10 ರಷ್ಟು ಷೇರುಗಳನ್ನು ಹಾಗೂ ಎಲ್ಐಸಿ ಉದ್ಯೋಗಿಗಳಿಗೆ ಶೇ.5 ರಷ್ಟು ಷೇರುಗಳನ್ನು ಮೀಸಲಿಡಲಾಗಿದೆ. ರಿಟೇಲ್ ಹೂಡಿಕೆದಾರರಿಗೆ ಶೇ.35 ರಷ್ಟು ಷೇರುಗಳನ್ನು ಮೀಸಲಿಡಲಾಗಿದೆ.

ನಿಬಂಧನೆ:

ಎಲ್ಐಸಿ ಐಪಿಒಗೆ ಅಪ್ಲೈ ಮಾಡಲು ನೀವು ಡಿಮ್ಯಾಟ್ ಖಾತೆ ತೆರೆಯಬೇಕು ಹಾಗೂ ಆ ಬಳಿಕ ಈ ಕೆಳಗೆ ವಿವರಿಸಿರುವ ಹಂತಗಳನ್ನು ಅನುಸರಿಸುವ ಮೂಲಕ ಐಪಿಒಗೆ ಅಪ್ಲೈ ಮಾಡಿ. ಇದರ ಜೊತೆಗೆ ಗುರುತು ದೃಢೀಕರಣ ದಾಖಲೆ, ವಯಸ್ಸಿನ ದಾಖಲೆ ಹಾಗೂ ಬ್ಯಾಂಕ್ ವಿವರಗಳು ಸೇರಿದಂತೆ ಕೆಲವು ದಾಖಲೆಗಳನ್ನು ನೀವು ಹೊಂದಿರಬೇಕು. ಇನ್ನು ಎಲ್ಐಸಿ ಪಾಲಿಸಿದಾರರು ಅವರ ಪಾಲಿಸಿ ಹಾಗೂ  ಡಿಮ್ಯಾಟ್ ಖಾತೆಯನ್ನು ಪ್ಯಾನ್ ಜೊತೆಗೆ ಲಿಂಕ್ ಮಾಡೋದು ಅಗತ್ಯ. ಒಂದೊಮ್ಮೆ ಎಲ್‌ಐಸಿ ಪಾಲಿಸಿಗಳು ಮೆಚೂರಿಟಿಗೊಂಡಿದ್ದರೆ, ಪಾಲಿಸಿಗಳನ್ನು ಸರೆಂಡರ್‌ ಮಾಡಿದ್ದರೆ ಅಥವಾ ಪಾಲಿಸಿದಾರ ಅಕಾಲ ಮೃತ್ಯವಿಗೆ ಈಡಾಗಿ ಪಾಲಿಸಿಯ ಲ್ಯಾಪ್ಸ್‌ ಆಗಿದ್ದರೆ ಅಂಥ ಪಾಲಿಸಿಗಳನ್ನು ಬಳಸಿಯೂ ಐಪಿಒ ಷೇರು ಖರೀದಿಗೆ ಅವಕಾಶ ಕಲ್ಪಿಸಲಾಗಿದೆ.

ಎಲ್​ಐಸಿ ಆ್ಯಂಕರ್ ಬುಕ್​ನಲ್ಲಿ ಭಾಗವಹಿಸುತ್ತಿಲ್ಲ 28 ಮ್ಯೂಚುಯಲ್ ಫಂಡ್​ಗಳು: ಇಲ್ಲಿದೆ ಪಟ್ಟಿ

ಇವರಿಗೆ ಹೂಡಿಕೆ ಮಾಡಲು ಅವಕಾಶವಿಲ್ಲ:

ಎಲ್‌ಐಸಿ ಪಾಲಿಸಿದಾರರಾಗಿರುವ ಅನಿವಾಸಿ ಭಾರತೀಯರಿಗೆ ಇದರಲ್ಲಿ ಹೂಡಿಕೆ ಮಾಡಲು ಅವಕಾಶವಿಲ್ಲ. ಹಾಗೆಯೆ ಗ್ರೂಪ್‌ ವಿಮೆಗಳನ್ನು ಕೊಂಡಿರುವವರಿಗೆ ಸಾಧ್ಯವಾಗುವುದಿಲ್ಲ.

ಅರ್ಜಿ ಸಲ್ಲಿಸುವುದು ಹೇಗೆ?

  • ನಿಮ್ಮ ನೆಟ್ ಬ್ಯಾಂಕಿಂಗ್ ಖಾತೆ ತೆರೆಯಿರಿ ಹಾಗೂ IPO/e-IPO ಆಯ್ಕೆಯನ್ನು ಆರಿಸಿ.
  • ದೃಢೀಕರಣ ಪ್ರಕ್ರಿಯೆ ಪೂರ್ಣಗೊಳಿಸಲು ವೆಬ್ ಸೈಟ್ ನಲ್ಲಿ ಕೇಳಿರುವ ಬ್ಯಾಂಕ್ ವಿವರಗಳು ಹಾಗೂ ಇತರ ಮಾಹಿತಿಗಳನ್ನು ನಮೂದಿಸಿ.
  • Invest In IPO ಆಯ್ಕೆ ಆರಿಸಿ ಹಾಗೂ LIC ಆಯ್ಕೆ ಮಾಡಿ.
  • ಷೇರುಗಳ ಸಂಖ್ಯೆ ಹಾಗೂ ಬಿಡ್ ಬೆಲೆ ನಮೂದಿಸಿ. ಬಿಡ್ ಸಲ್ಲಿಸುವ ಮೊದಲು ನಿಬಂಧನೆಗಳು ಹಾಗೂ ನಿಯಮಗಳನ್ನು ಓದಿ ಅರ್ಥ ಮಾಡಿಕೊಂಡು ಮುಂದುವರೆಯಿರಿ.
  •  ಆ ಬಳಿಕ ಪ್ರಕ್ರಿಯೆ ಪೂರ್ಣಗೊಳಿಸಲು ‘Apply Now’ಆಯ್ಕೆ ಮೇಲೆ ಕ್ಲಿಕ್ ಮಾಡಿ.

ಎಲ್‌ಐಸಿ ಐಪಿಒ ಚಂದಾದಾರರಾದ ನಂತರ, ಹೂಡಿಕೆದಾರರು ಷೇರುಗಳನ್ನು ಹಂಚಲಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸಬೇಕಾಗುತ್ತದೆ. ಅದಕ್ಕಾಗಿ ನೀವು ನಾಲ್ಕು ಹಂತಗಳನ್ನು ಪಾಲನೆ ಮಾಡಬೇಕು. ಐಪಿಒ ಹಂಚಿಕೆ ಪರಿಶೀಲನೆ ಮಾಡಲು ಬಿಎಸ್ಇಇಂಡಿಯಾ ವೆಬ್ ತಾಣದಕ್ಕೆ ಹೋಗಿ ನಿಮ್ಮ ಅರ್ಜಿ ಸಂಖ್ಯೆ, ಪ್ಯಾನ್ ವಿವರ ಸಲ್ಲಿಸಿ ನಿಮ್ಮ ಚಂದಾದಾರಿಕೆಯನ್ನು ಪರಿಶೀಲಿಸಬಹುದು.

ಹೆಚ್ಚಿನ ವಾಣಿಜ್ಯ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:48 am, Wed, 4 May 22