LIC Jeevan Amar: ಎಲ್​ಐಸಿಯ ಜೀವನ್ ಅಮರ್ ಪಾಲಿಸಿ ಇಷ್ವವಾಗದಿದ್ದಲ್ಲಿ 15 ದಿನದಲ್ಲೇ ನಿಮ್ಮ ಹಣ ವಾಪಸ್

| Updated By: Srinivas Mata

Updated on: Apr 20, 2022 | 10:50 AM

ಭಾರತೀಯ ಜೀವ ವಿಮಾ ನಿಗಮದ ಜೀವನ್ ಅಮರ್ ಪ್ಲಾನ್​ ಬಗ್ಗೆ ನಿಮಗೆ ಎಷ್ಟು ಗೊತ್ತಿದೆ? ಈ ಪ್ಲಾನ್​ ಬಗ್ಗೆ ವಿವರಗಳು ಈ ಲೇಖನದಲ್ಲಿವೆ.

LIC Jeevan Amar: ಎಲ್​ಐಸಿಯ ಜೀವನ್ ಅಮರ್ ಪಾಲಿಸಿ ಇಷ್ವವಾಗದಿದ್ದಲ್ಲಿ 15 ದಿನದಲ್ಲೇ ನಿಮ್ಮ ಹಣ ವಾಪಸ್
ಸಾಂದರ್ಭಿಕ ಚಿತ್ರ
Follow us on

ವಿಮಾ ಪ್ಲಾನ್​ಗಳನ್ನು ಖರೀದಿಸುವ ವಿಚಾರಕ್ಕೆ ಬಂದಾಗ ಭಾರತೀಯ ಜೀವ ವಿಮಾ ನಿಗಮ ಅಥವಾ ಎಲ್​ಐಸಿ (LIC) ಭಾರತೀಯರಲ್ಲಿ ಅತ್ಯಂತ ಜನಪ್ರಿಯ ಆಯ್ಕೆಗಳಲ್ಲಿ ಒಂದು. ಅದರ ಪರಿಣಾಮವಾಗಿ, ಎಲ್​ಐಸಿಯು ನಿರ್ದಿಷ್ಟ ಗುಂಪಿನ ಜನರಿಗೆ ವಿಶೇಷ ಕಾರ್ಯತಂತ್ರಗಳನ್ನು ಆಯ್ಕೆ ಮಾಡಿದೆ. ಸರ್ಕಾರದ ಬೆಂಬಲ ಇರುವ ಈ ಸಂಸ್ಥೆಯು ವಿವಿಧ ವಯಸ್ಸಿನ ಮತ್ತು ಹಿನ್ನೆಲೆಯ ಜನರಿಗೆ ವ್ಯಾಪಕ ಶ್ರೇಣಿಯ ವಿಮಾ ಆಯ್ಕೆಗಳನ್ನು ನೀಡುತ್ತದೆ. ಅಪಾಯಮುಕ್ತ ಸ್ವತ್ತುಗಳಲ್ಲಿ ಹೂಡಿಕೆ ಮಾಡಲು ಇಷ್ಟಪಡುವ ಭಾರತೀಯರಲ್ಲಿ ಎಲ್ಐಸಿ ಪಾಲಿಸಿಗಳು ಜನಪ್ರಿಯವಾಗಿವೆ ಮತ್ತು ಇತರ ಆಯ್ಕೆಗಳಿಗೆ ಹೋಲಿಸಿದರೆ ಹೆಚ್ಚಿನ ಆದಾಯದ ಕಾರಣದಿಂದಾಗಿ ಬ್ಯಾಂಕ್ ಎಫ್‌ಡಿಗಳು ಮತ್ತು ಪೋಸ್ಟ್ ಆಫೀಸ್ ಉಳಿತಾಯ ಯೋಜನೆಗಳ ನಂತರ ಎಲ್​ಐಸಿ ಪ್ಲಾನ್​ಗಳು ಅಚ್ಚುಮೆಚ್ಚಿನವು. ಈ ದಿನ ಎಲ್​ಐಸಿಯ ಯೋಜನೆಗಳಲ್ಲಿ ಒಂದನ್ನು ಪರಿಚಯಿಸಲಾಗುತ್ತದೆ. ಅದರ ಹೆಸರು ಜೀವನ್ ಅಮರ್.

ಎಲ್​ಐಸಿಯ ಜೀವನ್ ಅಮರ್ ಯೋಜನೆಯು ಶುದ್ಧ ರಕ್ಷಣೆಯ ಯೋಜನೆಯಾಗಿದ್ದು, ಅದು ಮಾರುಕಟ್ಟೆಯ ಏರಿಳಿತಕ್ಕೆ ಜೋಡಣೆ ಆಗಿಲ್ಲ ಮತ್ತು ಲಾಭರಹಿತವಾಗಿದೆ. ಯೋಜನೆಯು ನಿಮಗೆ ಎರಡು ಡೆತ್ ಬೆನಿಫಿಟ್ ಆಯ್ಕೆಗಳ ನಡುವೆ ಆರಿಸಿಕೊಳ್ಳುವ ಅವಕಾಶಗಳನ್ನು ನೀಡುತ್ತದೆ: ಸಮ್​ ಅಶ್ಯೂರ್ಡ್​ಗೆ ಸಮಾನ ಆದ ಮೊತ್ತ ಅಥವಾ ಹೆಚ್ಚುತ್ತಿರುವ ವಿಮಾ ಮೊತ್ತ. ಪಾಲಿಸಿ ಪ್ರಕಾರ, ಇದು ಕಡಿಮೆ ಪ್ರೀಮಿಯಂನಲ್ಲಿ ಹೆಚ್ಚಿನ ಪ್ರಯೋಜನಗಳನ್ನು ಒದಗಿಸುತ್ತದೆ. ಎಲ್ಐಸಿ ಜೀವನ್ ಅಮರ್ ಯೋಜನೆಯು ಪಾಲಿಸಿ ಅವಧಿಯಲ್ಲಿ ವಿಮೆದಾರರ ಕುಟುಂಬವನ್ನು ವಿಮೆ ಮಾಡಿಸಿಕೊಂಡವರ ಅಕಾಲಿಕ ಮರಣದ ಸಂದರ್ಭದಲ್ಲಿ ಆರ್ಥಿಕವಾಗಿ ರಕ್ಷಿಸುತ್ತದೆ. ಇದು ಎಲ್​ಐಸಿಯ ಮೊದಲ ಟರ್ಮ್ ಯೋಜನೆಯಾಗಿದ್ದು, ಆಕ್ಸಿಡೆಂಟಲ್ ಡೆತ್ ಬೆನಿಫಿಟ್ ರೈಡರ್ ಅನ್ನು ಸೇರಿಸುವ ಆಯ್ಕೆಯನ್ನು ಹೊಂದಿದೆ.

ಒಂದು ವೇಳೆ ವ್ಯಕ್ತಿಯು 30 ವರ್ಷ ವಯಸ್ಸಿನವರಾಗಿದ್ದರೆ ಮತ್ತು ಎಲ್ಐಸಿ ಜೀವನ್ ಅಮರ್ ಯೋಜನೆಯಲ್ಲಿ ಹೂಡಿಕೆ ಮಾಡಲು ಬಯಸಿದರೆ ಹತ್ತು ವರ್ಷಗಳಲ್ಲಿ 2.5 ಲಕ್ಷ ರೂಪಾಯಿಗಳ ಖಚಿತ ಪಾವತಿಯನ್ನು ಪಡೆಯಲು ಮಾಸಿಕ 3,000 ರೂಪಾಯಿಗಳ ಪ್ರೀಮಿಯಂ ಪಾವತಿಸಬೇಕಾಗುತ್ತದೆ. ಪಾಲಿಸಿದಾರರು ತಮ್ಮ ಪ್ರೀಮಿಯಂಗಳನ್ನು ಮೂರು ವಿಧಗಳಲ್ಲಿ ಪಾವತಿಸಬಹುದು: ಏಕ, ನಿಯಮಿತ ಅಥವಾ ಸೀಮಿತ. ಈ ಪ್ಲಾನ್ ಮರಣದ ಪ್ರಯೋಜನವನ್ನು ಒಂದು ಇಡಿಗಂಟಿನಲ್ಲಿ ಅಥವಾ ಮಾಸಿಕ ಕಂತುಗಳಲ್ಲಿ ಪಡೆಯುವ ಆಯ್ಕೆಯನ್ನು ಸಹ ನೀಡುತ್ತದೆ. “ಎಲ್​ಐಸಿಯ ಜೀವನ್ ಅಮರ್ ಶುದ್ಧ ರಕ್ಷಣಾ ಯೋಜನೆಯಾಗಿ ಪಾಲಿಸಿದಾರರಿಗೆ ಅತ್ಯಂತ ಅಗ್ಗದ ಬೆಲೆಯಲ್ಲಿ ಜೀವ ವಿಮೆಯನ್ನು ಒದಗಿಸುತ್ತದೆ ಮತ್ತು ಪಾಲಿಸಿದಾರರ ಕುಟುಂಬಕ್ಕೆ ಪಾಲಿಸಿದಾರರ ಮರಣದ ಸಂದರ್ಭದಲ್ಲಿ ಹಣಕಾಸಿನ ಬೆಂಬಲವನ್ನು ನೀಡುತ್ತದೆ,” ಎಂದು ಕಂಪೆನಿಯ ವೆಬ್‌ಸೈಟ್‌ನಲ್ಲಿ ತಿಳಿಸಲಾಗಿದೆ.

ಪಾಲಿಸಿದಾರರು ತಮ್ಮ ಜೀವನ್ ಅಮರ್ ಕವರೇಜ್ ಬಗ್ಗೆ ಅತೃಪ್ತರಾಗಿದ್ದರೆ ನಿರ್ದಿಷ್ಟ ಸಂದರ್ಭಗಳಲ್ಲಿ ಅದನ್ನು ಹಿಂತಿರುಗಿಸಬಹುದು. ಮಾಹಿತಿಯ ಪ್ರಕಾರ, ಪಾಲಿಸಿಯ ನಿಯಮಗಳ ಬಗ್ಗೆ ಅತೃಪ್ತಿ ಹೊಂದಿದ್ದರೆ ಪಾಲಿಸಿ ಬಾಂಡ್ ಅನ್ನು ಸ್ವೀಕರಿಸಿದ 15 ದಿನಗಳ ಒಳಗೆ ಅದನ್ನು ಸಂಸ್ಥೆಗೆ ಹಿಂತಿರುಗಿಸಬಹುದು. ಆ ನಂತರ ಎಲ್​ಐಸಿ ಪಾಲಿಸಿಯನ್ನು ರದ್ದುಗೊಳಿಸುತ್ತದೆ ಮತ್ತು ಯಾವುದೇ ಶುಲ್ಕವನ್ನು ಕಡಿತಗೊಳಿಸದೆ ಠೇವಣಿ ಮಾಡಿದ ಪ್ರೀಮಿಯಂ ಮೊತ್ತವನ್ನು ಮರುಪಾವತಿ ಮಾಡುತ್ತದೆ.

ಆದರೆ, ಜೀವ ವಿಮಾದಾರರು ನಿಗದಿತ ಮುಕ್ತಾಯದ ದಿನಾಂಕದ ನಂತರವೂ ಯಾವುದೇ ಅವಘಡ ಆಗದೆ ಉಳಿದುಕೊಂಡಲ್ಲಿ ಮೆಚ್ಯೂರಿಟಿ ಪ್ರಯೋಜನ ಪಾವತಿಸುವುದಿಲ್ಲ ಮತ್ತು ಸರೆಂಡರ್ ಮೌಲ್ಯ ಇರುವುದಿಲ್ಲ. 18 ರಿಂದ 65 ವರ್ಷ ವಯಸ್ಸಿನ ಜನರು ಜೀವನ್ ಅಮರ್ ಪಾಲಿಸಿಯನ್ನು ಖರೀದಿಸಬಹುದು. ಈ ಪಾಲಿಸಿಯ ಗರಿಷ್ಠ ಮೆಚ್ಯೂರಿಟಿ ವಯಸ್ಸು 80 ವರ್ಷಗಳು. ಈ ವಿಮೆಯು 10 ರಿಂದ 40 ವರ್ಷಗಳವರೆಗೆ ಇರುತ್ತದೆ. ಪುರುಷರು ಮತ್ತು ಮಹಿಳೆಯರಿಗೆ ಪ್ರೀಮಿಯಂಗಳು ವಿಭಿನ್ನವಾಗಿರುತ್ತವೆ ಎಂಬುದು ಗಮನಿಸಬೇಕಾದ ಅಂಶವಾಗಿದೆ.

ಇದನ್ನೂ ಓದಿ: LIC: ಎಲ್​ಐಸಿಯಿಂದ ಹೊಸದಾದ ಉಳಿತಾಯ ಜೀವ ವಿಮಾ ಯೋಜನೆ ಪರಿಚಯ

Published On - 1:41 pm, Tue, 19 April 22