Cryptocurrency: ಅಕ್ರಮ ಹಣ ವರ್ಗಾವಣೆ, ಭಯೋತ್ಪಾದನೆ ಕೃತ್ಯಗಳಿಗೆ ಹಣಕಾಸಿನ ನೆರವಿಗಾಗಿ ಕ್ರಿಪ್ಟೋಕರೆನ್ಸಿ ಬಳಕೆ ಎಂದ ಕೇಂದ್ರ ಹಣಕಾಸು ಸಚಿವೆ
ಕ್ರಿಪ್ಟೋಕರೆನ್ಸಿಯನ್ನು ಅಕ್ರಮ ಹಣ ವರ್ಗಾವಣೆ, ಭಯೋತ್ಪಾದಕರಿಗೆ ಹಣಕಾಸು ನೆರವು ನೀಡುವುದಕ್ಕೆ ಬಳಕೆ ಮಾಡಲಾಗುತ್ತಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಭಾರತದಲ್ಲಿ ಈಗಾಗಲೇ ಅನಿಶ್ಚಿತವಾಗಿರುವ ಕ್ರಿಪ್ಟೋಕರೆನ್ಸಿ (Cryptocurrency) ಮಾರುಕಟ್ಟೆಯ ಮೇಲೆ ಮತ್ತಷ್ಟು ಅನುಮಾನಗಳನ್ನು ಮೂಡುವಂತೆ ಮಾಡಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಏಪ್ರಿಲ್ 18ರಂದು ಸೋಮವಾರ ಮಾತನಾಡಿ, ಕ್ರಿಪ್ಟೋಕರೆನ್ಸಿಯ ಸುತ್ತ ಇರುವ ದೊಡ್ಡ ಅಪಾಯವೆಂದರೆ ಅಕ್ರಮ ಹಣ ವರ್ಗಾವಣೆ ಮತ್ತು ಭಯೋತ್ಪಾದನೆ ಕೃತ್ಯಗಳಿಗೆ ಹಣಕಾಸಿನ ನೆರವಿನ ಸಾಧ್ಯತೆ ಎಂದಿದ್ದಾರೆ. ನಿರ್ಮಲಾ ಸೀತಾರಾಮನ್ ಹೇಳಿದಂತೆ, “ಎಲ್ಲ ಬಗೆಯಿಂದಲೂ ಸಕಲ ದೇಶಗಳಿಗೆ ದೊಡ್ಡ ಅಪಾಯವೆಂದರೆ ಅಕ್ರಮ ಹಣ ವರ್ಗಾವಣೆ ಮತ್ತು ಅಂತಹ ಕರೆನ್ಸಿ ಭಯೋತ್ಪಾದನೆಗೆ ಹಣಕಾಸು ಒದಗಿಸುವ ಅಂಶವಾಗಿದೆ.” ಅಂದಹಾಗೆ ಅವರು ಅಂತಾರಾಷ್ಟ್ರೀಯ ಹಣಕಾಸು ನಿಧಿಯ ಸೆಮಿನಾರ್‌ನಲ್ಲಿ ಮಾತನಾಡಿದರು. “ತಂತ್ರಜ್ಞಾನವನ್ನು ಬಳಸುವ ನಿಯಂತ್ರಣವು ಒಂದೇ ಉತ್ತರವೆಂದು ನಾನು ಭಾವಿಸುತ್ತೇನೆ,” ಎಂದು ಅವರು ಹೇಳಿದ್ದಾರೆ.
ಡಿಜಿಟಲ್ ಜಗತ್ತಿನಲ್ಲಿ ಭಾರತದ ಕಾರ್ಯಕ್ಷಮತೆ ಮತ್ತು ಕಳೆದ ದಶಕದಲ್ಲಿ ಡಿಜಿಟಲ್ ಮೂಲಸೌಕರ್ಯ ಚೌಕಟ್ಟನ್ನು ನಿರ್ಮಿಸಲು ಸರ್ಕಾರದ ಪ್ರಯತ್ನಗಳನ್ನು ನಿರ್ಮಲಾ ಸೀತಾರಾಮನ್ ಎತ್ತಿ ತೋರಿಸಿದ್ದು, ಕೊವಿಡ್-19 ಸಾಂಕ್ರಾಮಿಕ ಸಮಯದಲ್ಲಿ ಭಾರತದಲ್ಲಿ ಡಿಜಿಟಲ್ ಅಳವಡಿಕೆ ದರದ ಹೆಚ್ಚಳವನ್ನು ಒತ್ತಿಹೇಳಿದ್ದಾರೆ. “ನಾನು 2019ರ ಡೇಟಾವನ್ನು ಬಳಸಿದರೆ ಭಾರತದಲ್ಲಿ ಡಿಜಿಟಲ್ ಅಳವಡಿಕೆ ದರವು ಸುಮಾರು ಶೇ 85 ಆಗಿದೆ. ಆದರೆ ಜಾಗತಿಕವಾಗಿ ಅದೇ ವರ್ಷ ಇದು ಕೇವಲ ಶೇ 64ರ ಸಮೀಪದಲ್ಲಿದೆ. ಆದ್ದರಿಂದ ಸಾಂಕ್ರಾಮಿಕ ಸಮಯವು ನಿಜವಾಗಿ ನಮಗೆ ಪರೀಕ್ಷಿಸಲು ಮತ್ತು ಅದನ್ನು ಸಾಬೀತುಪಡಿಸಲು ಸಹಾಯ ಮಾಡಿದೆ. ಸಾಮಾನ್ಯ ಜನರು ಇದನ್ನು ಬಳಸಬಹುದು, ಮತ್ತು ಬಳಕೆ ವಾಸ್ತವವಾಗಿ ಸಾಬೀತಾಗಿದೆ,” ಎಂದು ಕೇಂದ್ರ ಸಚಿವೆ ಪ್ರತಿಪಾದಿಸಿದ್ದಾರೆ.
ಕ್ರಿಪ್ಟೋಕರೆನ್ಸಿ ಅಥವಾ ಬ್ಲಾಕ್‌ಚೈನ್ ಮತ್ತು ಫಿನ್‌ಟೆಕ್ ವಿಚಾರಕ್ಕೆ ಬಂದಾಗ ಭಾರತವು ಎಲ್ಲ ಆಯ್ಕೆಗಳನ್ನು ಕೊನೆಗೊಳಿಸುತ್ತಿಲ್ಲ ಎಂದು ಮಾರ್ಚ್‌ನಲ್ಲಿ ನಡೆದ ಇಂಡಿಯಾ ಟುಡೇ ಸಮಾವೇಶದಲ್ಲಿ ನಿರ್ಮಲಾ ಸೀತಾರಾಮನ್ ಹೇಳಿದ್ದರು. ಭಾರತದಲ್ಲಿ ಕ್ರಿಪ್ಟೋಕರೆನ್ಸಿ ನಿಯಮಾವಳಿಗಳ ರಚನೆಯ ಬಗ್ಗೆ ಎಲ್ಲ ವಿವರಗಳನ್ನು ಒದಗಿಸುವ ವಿಷಯದ ಕುರಿತು ಸಂಪುಟ ಟಿಪ್ಪಣಿಯನ್ನು ಸಿದ್ಧಪಡಿಸಲಾಗುತ್ತಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದರು. “ಖಂಡಿತವಾಗಿಯೂ ಸುಪ್ರೀಂ ಕೋರ್ಟ್ ಕ್ರಿಪ್ಟೋಕರೆನ್ಸಿಯ ಬಗ್ಗೆ ಕಾಮೆಂಟ್ ಮಾಡಿದೆ ಮತ್ತು ಆರ್‌ಬಿಐ ಅಧಿಕೃತ ಕ್ರಿಪ್ಟೋಕರೆನ್ಸಿಯ ಮೇಲೆ ಕರೆ ನೀಡಬಹುದಾದರೂ ನಮ್ಮ ಕಡೆಯಿಂದ ಎಲ್ಲ ಆಯ್ಕೆಗಳನ್ನು ಕೊನೆಗೊಳಿಸುತ್ತಿಲ್ಲ ಎಂಬುದು ನಮಗೆ ಸ್ಪಷ್ಟವಾಗಿದೆ,” ಎಂದು ಅವರು ಹೇಳಿದ್ದರು.
2022ರ ಬಜೆಟ್‌ನಲ್ಲಿ ಘೋಷಿಸಿದಂತೆ ಭಾರತೀಯ ರಿಸರ್ವ್ ಬ್ಯಾಂಕ್ (RBI) ಭಾರತದ ಸ್ವಂತ ಡಿಜಿಟಲ್ ಕರೆನ್ಸಿಯನ್ನು ಪ್ರಾರಂಭಿಸಲು ಕೆಲಸ ಮಾಡುತ್ತಿದೆ ಎಂದು ಅವರು ಹೇಳಿದ್ದಾರೆ. ಕ್ರಿಪ್ಟೋ ಆಸ್ತಿಗಳ ಮೇಲಿನ ತೆರಿಗೆಯನ್ನು ಮೊದಲು ಜಾರಿಗೆ ತರಲಾಗುವುದು ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: Taxation On Cryptocurrency: ಕ್ರಿಪ್ಟೋಕರೆನ್ಸಿ ವಹಿವಾಟಿನ ತೆರಿಗೆ ಲೆಕ್ಕಾಚಾರ ಹೇಗೆ? ಇಲ್ಲಿದೆ ಉದಾಹರಣೆ ಸಹಿತ ಮಾಹಿತಿ