ಡೀಮ್ಯಾಟ್ ಅಕೌಂಟ್ ಮಾದರಿಯಲ್ಲಿ ವಿಮಾ ಪಾಲಿಸಿಗಳಿಗೆ ಇ-ಇನ್ಷೂರೆನ್ಸ್ ಅಕೌಂಟ್

|

Updated on: Apr 02, 2024 | 5:25 PM

e-Insurance Account Mandatory: ಡೀಮ್ಯಾಟ್ ಅಕೌಂಟ್​ನಲ್ಲಿ ಷೇರುಗಳನ್ನು ಎಲೆಕ್ಟ್ರಾನಿಕ್ ರೂಪದಲ್ಲಿ ಇರಿಸಲಾಗುವಂತೆ ಇನ್ಮುಂದೆ ವಿಮಾ ಪಾಲಿಸಿಗಳೂ ಕೂಡ ಎಲೆಕ್ಟ್ರಾನಿಕ್ ರೂಪದಲ್ಲಿ ದೊರೆಯುತ್ತವೆ. ಅದಕ್ಕಾಗಿ ಇ-ಇನ್ಷೂರೆನ್ಸ್ ಖಾತೆಗಳನ್ನು ರಚಿಸಬೇಕಾಗುತ್ತದೆ. ಏಪ್ರಿಲ್ 1ರಿಂದ ವಿಮಾ ಪಾಲಿಸಿಗಳಿಗೆ ಇ-ಇನ್ಷೂರೆನ್ಸ್ ಅಕೌಂಟ್ ಅನ್ನು ಕಡ್ಡಾಯ ಮಾಡಲಾಗಿದೆ.

ಡೀಮ್ಯಾಟ್ ಅಕೌಂಟ್ ಮಾದರಿಯಲ್ಲಿ ವಿಮಾ ಪಾಲಿಸಿಗಳಿಗೆ ಇ-ಇನ್ಷೂರೆನ್ಸ್ ಅಕೌಂಟ್
ಇನ್ಷೂರೆನ್ಸ್ ಪಾಲಿಸಿ
Follow us on

ನವದೆಹಲಿ, ಏಪ್ರಿಲ್ 2: ಷೇರುಗಳನ್ನು ಡೀಮ್ಯಾಟ್ ಅಕೌಂಟ್ (Demat Account) ಮೂಲಕ ಎಲೆಕ್ಟ್ರಾನಿಕ್ ರೂಪದಲ್ಲಿ ಇರಿಸಿಕೊಳ್ಳಲಾಗುತ್ತಿರುವಂತೆಯೇ ಇನ್ಷೂರೆನ್ಸ್ ಪಾಲಿಸಿಗಳಿಗೂ ಪ್ರತ್ಯೇಕ ಡೀಮ್ಯಾಟ್ ಖಾತೆ ತೆರೆಯಬೇಕಾಗುತ್ತದೆ. ಇನ್ಷೂರೆನ್ಸ್ ನಿಯಂತ್ರಣ ಪ್ರಾಧಿಕಾರವಾದ ಐಆರ್​ಡಿಎಐ ಇಂಥದ್ದೊಂದು ನಿಯಮ ರೂಪಿಸಿದ್ದು, ಏಪ್ರಿಲ್ 1ರಿಂದ ಜಾರಿಯಾಗಿದೆ. ಏಪ್ರಿಲ್ 1ರ ಬಳಿಕ ನೀವು ಇನ್ಷೂರೆನ್ಸ್ ಪಾಲಿಸಿ ಮಾಡಿಸುವುದಾದರೆ ನಿಮಗೆ ಡಿಜಿಟಲ್ ಸ್ವರೂಪದಲ್ಲಿ ಪಾಲಿಸಿಗಳನ್ನು ನೀಡಲಾಗುತ್ತದೆ.

ಡಿಮೆಟೀಲಿಯರೈಸ್ಡ್ ಅಥವಾ ಡೀಮ್ಯಾಟ್ ಅಕೌಂಟ್ ಅನ್ನು ನಾಲ್ಕು ರೆಪಾಸಿಟರಿಗಳಲ್ಲಿ ತೆರೆಯಲು ಅವಕಾಶ ಇದೆ. ಕ್ಯಾಮ್ಸ್ ರೆಪಾಸಿಟರಿ, ಕಾರ್ವಿ, ಎನ್​ಎಸ್​ಡಿಎಲ್ ಡಾಟಾಬೇಸ್ ಮ್ಯಾನೇಜ್ಮೆಂಟ್ ಮತ್ತು ಸೆಂಟ್ರಲ್ ಇನ್ಷೂರೆನ್ಸ್ ರೆಪಾಸಿಟರಿ ಆಫ್ ಇಂಡಿಯಾ ಸಂಸ್ಥೆಗಳು ಡೀಮ್ಯಾಟ್ ಅಕೌಂಟ್​ಗೆ ಅವಕಾಶ ಕೊಡುತ್ತವೆ. ಈ ಹಿಂದೆಯೂ ಅಂದರೆ 2013ರಿಂದಲೂ ಈ ನಾಲ್ಕು ರೆಪಾಸಿಟರಿಗಳಲ್ಲಿ ಇನ್ಷೂರೆನ್ಸ್ ಪಾಲಿಸಿಗಾಗಿ ಡೀಮ್ಯಾಟ್ ಖಾತೆ ರಚಿಸಲು ಅವಕಾಶ ಇತ್ತು. ಆದರೆ, ಕಡ್ಡಾಯ ಮಾಡಲಾಗಿರಲಿಲ್ಲ. ಈಗ ಎಲ್ಲಾ ಇನ್ಷೂರೆನ್ಸ್ ಪಾಲಿಸಿಗಳನ್ನು ಡಿಜಿಟಲ್ ರೂಪದಲ್ಲಿ ಕೊಡಬೇಕೆಂದು ಕಡ್ಡಾಯ ಮಾಡಲಾಗಿದೆ.

ಇದನ್ನೂ ಓದಿ: ತಾತನ 30 ವರ್ಷ ಹಿಂದಿನ ಎಸ್​ಬಿಐ ಷೇರು ಸರ್ಟಿಫಿಕೇಟ್ ಅಚಾನಕ್ಕಾಗಿ ಸಿಕ್ಕಿದಾಗ… ಈಗೆಷ್ಟಿದೆ ನೋಡಿ ಅದರ ಮೌಲ್ಯ

ಇ ಇನ್ಷೂರೆನ್ಸ್ ಎಂದರೇನು?

ವಿಮಾ ಪಾಲಿಸಿ ಒಪ್ಪಂದಕ್ಕೆ ಸಾಕ್ಷ್ಯ ದಾಖಲೆಯಾಗಿ ಇ ಇನ್ಷೂರೆನ್ಸ್ ಪಾಲಿಸಿ ಇರುತ್ತದೆ. ಇನ್ಷೂರೆನ್ಸ್ ಕಂಪನಿಗಳು ಡಿಜಿಟಲ್ ರೂಪದಲ್ಲಿ ವಿಮಾ ಪಾಲಿಸಿಗಳನ್ನು ನಿಮಗೆ ಕೊಡುತ್ತವೆ. ಡೀಮ್ಯಾಟ್ ಅಕೌಂಟ್​ಗಳು ಷೇರುಗಳನ್ನು ಹೊಂದಿರುವ ರೀತಿಯಲ್ಲಿ ಇ-ಇನ್ಷೂರೆನ್ಸ್ ಅಕೌಂಟ್ನಲ್ಲಿ ನಿಮ್ಮ ಇನ್ಷೂರೆನ್ಸ್ ಪಾಲಿಸಿಗಳನ್ನು ಸಂಗ್ರಹಿಸಬಹುದು. ಒಂದಕ್ಕಿಂತ ಹೆಚ್ಚು ಇನ್ಷೂರೆನ್ಸ್ ಪಾಲಿಸಿಗಳಿಗೆ ಒಂದೇ ಇನ್ಷೂರೆನ್ಸ್ ಅಕೌಂಟ್ ಹೊಂದಬಹುದು.

ಇ-ಇನ್ಷೂರೆನ್ಸ್ ಅಕೌಂಟ್ (ಎಐಎ) ತೆರೆಯುವುದು ಹೇಗೆ?

ಏಪ್ರಿಲ್ 1ರ ಬಳಿಕ ಇನ್ಷೂರೆನ್ಸ್ ಪಾಲಿಸಿ ಮಾಡಿಸುವಾಗ ಇ-ಇನ್ಷೂರೆನ್ಸ್ ಅಕೌಂಟ್ ಅನ್ನು ತೆರೆಯಲಾಗುತ್ತದೆ. ಯಾವ ರೆಪಾಸಿಟರಿಯಲ್ಲಿ ಅಕೌಂಟ್ ತೆರೆಯಬಹುದು ಎಂಬುದು ನಿಮ್ಮ ಆಯ್ಕೆಗೆ ಬಿಟ್ಟಿದ್ದು. ಒಮ್ಮೆ ಖಾತೆ ತೆರೆದರೆ ಬೇರೆ ವಿಮಾ ಪಾಲಿಸಿ ಮಾಡಿಸಿದಾಗ ಅದೇ ಖಾತೆ ಅಡಿಯಲ್ಲಿ ಸೇರಿಸಬಹುದು.

ಇದನ್ನೂ ಓದಿ: ಕೆಲಸ ಬದಲಿಸಿದರೆ ಹಳೆಯ ಪಿಎಫ್ ಖಾತೆ ಬಗ್ಗೆ ಚಿಂತೆ ಬೇಡ; ತನ್ನಂತಾನೇ ಆಗುತ್ತೆ ಹಣ ವರ್ಗಾವಣೆ

ನಿಮ್ಮ ಹಳೆಯ ಇನ್ಷೂರೆನ್ಸ್ ಪಾಲಿಸಿ ಇದ್ದರೆ ಅದನ್ನು ಎಲೆಕ್ಟ್ರಾನಿಕ್ ರೂಪಕ್ಕೆ ಪರಿವರ್ತಿಸುವ ಅವಕಾಶ ಇದೆ. ಇನ್ಷೂರೆನ್ಸ್ ರೆಪಾಸಿಟರಿಗಳಲ್ಲಿ ಖಾತೆ ತೆರೆದು ಆ ಬಳಿಕ ನಿಮ್ಮ ಪಾಲಿಸಿಯನ್ನು ಎಲೆಕ್ಟ್ರಾನಿಕ್ ರೂಪಕ್ಕೆ ಪರಿವರ್ತಿಸಬಹುದು.

ನೀವು ಈಗ ಇ-ಇನ್ಷೂರೆನ್ಸ್ ಪಡೆದಿದ್ದರೂ ನಿಮಗೆ ಭೌತಿಕ ರೂಪದ ವಿಮಾ ಪಾಲಿಸಿ ಬೇಕೆನಿಸಿದರೆ ಇನ್ಷೂರೆನ್ಸ್ ಕಂಪನಿಗಳಿಗೆ ಮನವಿ ಮಾಡಿ ಪಡೆದುಕೊಳ್ಳಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ