ಕಂಪನಿ ಕಾನೂನು ಉಲ್ಲಂಘನೆ ಆರೋಪ, ಲಿಂಕ್ಡ್​ಇನ್ ಸಂಸ್ಥೆ, ಸತ್ಯ ನಾದೆಲ್ಲಾ ಹಾಗೂ ಇತರ ಎಂಟು ಮಂದಿಗೆ ದಂಡ ವಿಧಿಸಿದ ಸರ್ಕಾರ

|

Updated on: May 23, 2024 | 10:57 AM

Company Law Violations: ಕಂಪನಿ ಕಾನೂನುಗಳ ಉಲ್ಲಂಘನೆ ಮಾಡಿದ ಕಾರಣಕ್ಕೆ ಲಿಂಕ್ಡ್​ಇನ್ ಸಂಸ್ಥೆ ಹಾಗೂ ಅದಕ್ಕೆ ಸಂಬಂಧಿಸಿದ 9 ವ್ಯಕ್ತಿಗಳ ಮೇಲೆ ಸರ್ಕಾರ ದಂಡ ವಿಧಿಸಿದೆ. ಕಾನೂನು ಪ್ರಕಾರ ಕಂಪನಿಯ ಸಿಗ್ನಿಫಿಕೆಂಟ್ ಬೆನಿಫಿಶಿಯಲ್ ಓನರ್ ಅಥವಾ ಎಸ್​ಬಿಒ ಯಾರೆಂದು ಬಹಿರಂಗಪಡಿಸಬೇಕು. ಲಿಂಕ್ಡ್​ಇನ್ ಇಂಡಿಯಾ ಈ ನಿಯಮ ಪಾಲಿಸಿಲ್ಲ. ಮೈಕ್ರೋಸಾಫ್ಟ್ ಸಿಇಒ ಸತ್ಯ ನಾದೆಲ್ಲಾ ಹಾಗೂ ರಯಾನ್ ರೋಸ್ಲಾನ್​ಸ್ಕಿ ಅವರು ಲಿಂಕ್ಡ್​ಇನ್​ನ ಎಸ್​ಬಿಒಗಳಾಗಿದ್ದಾರೆ. ಈ ವಿಚಾರ ಬಹಿರಂಪಡಿಸಿದ್ದಕ್ಕೆ ಇವರನ್ನೂ ಸೇರಿಸಿ ನಿರ್ದೇಶಕರು ಮತ್ತಿತರರನ್ನೂ ಜವಾಬ್ದಾರರನ್ನಾಗಿ ಮಾಡಲಾಗಿದೆ.

ಕಂಪನಿ ಕಾನೂನು ಉಲ್ಲಂಘನೆ ಆರೋಪ, ಲಿಂಕ್ಡ್​ಇನ್ ಸಂಸ್ಥೆ, ಸತ್ಯ ನಾದೆಲ್ಲಾ ಹಾಗೂ ಇತರ ಎಂಟು ಮಂದಿಗೆ ದಂಡ ವಿಧಿಸಿದ ಸರ್ಕಾರ
ಮೈಕ್ರೋಸಾಫ್ಟ್ ಸಿಇಒ ಸತ್ಯ ನಾದೆಲ್ಲಾ
Follow us on

ನವದೆಹಲಿ, ಮೇ 23: ಕಂಪನಿ ಕಾನೂನುಗಳನ್ನು ಉಲ್ಲಂಘನೆ ಮಾಡಿದ ಆರೋಪದ ಮೇಲೆ ಕೇಂದ್ರ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯವು (Ministry of corporate affairs) ಮೈಕ್ರೋಸಾಫ್ಟ್ ಸಿಇಒ ಸತ್ಯ ನಾದೆಲ್ಲಾ (Satya Nadella) ಸೇರಿದಂತೆ 9 ಮಂದಿಗೆ ಹಾಗೂ ಲಿಂಕ್ಡ್​ಇನ್ ಸಂಸ್ಥೆಗೆ (LinkedIn India) ದಂಡ ವಿಧಿಸಿದೆ. ಲಿಂಕ್ಡ್​ಇನ್ ಇಂಡಿಯಾದ ಮಾಜಿ ಮುಖ್ಯಸ್ಥ ಆಶುತೋಷ್ ಗುಪ್ತಾ, ಕೀತ್ ರೇಂಜರ್ ಡಾಲಿವರ್, ಬೆಂಜಮಿನ್ ಓವನ್ ಆರ್ನ್​ಡಾರ್ಫ್, ಮಿಶೆಲೆ ಕ್ಯಾಟಿ ಲ್ಯೂಂಗ್, ಲೀಸಾ ಎಮಿಕೋ ಸ್ಯಾಟೋ, ಮಾರ್ಕ್ ಲಿಯೋನಾರ್ಡ್ ನೇಡ್ರೆಸ್ ಲೇಗಾಸ್ಪಿ ಮತ್ತು ಹೆನ್ರಿ ಚೈನಿಂಗ್ ಫಾಂಗ್ ಅವರು ದಂಡ ಪಡೆದ ಇತರರು. ಇವರೆಲ್ಲರೂ ಲಿಂಕ್ಡ್​ಇನ್​ಗೆ ಜೋಡಿತವಾಗಿರುವವರು.

ಎನ್​​ಸಿಟಿ ದೆಹಲಿ ಹರ್ಯಾಣ ವಿಭಾಗ ಕಂಪನಿ ರಿಜಿಸ್ಟ್ರಾರ್ ಲಿಂಕ್ಡ್​ಇನ್ ಇಂಡಿಯಾ ಸಂಸ್ಥೆಗೆ 7 ಲಕ್ಷ ದಂಡ ವಿಧಿಸಿದೆ. ಲಿಂಕ್ಡ್​ಇನ್ ಸಂಸ್ಥೆಯ ಮಾಲಕತ್ವ ಇರುವ ಮೈಕ್ರೋಸಾಫ್ಟ್​ನ ಸಿಇಒ ಸತ್ಯ ನಾಸೆಲ್ಲಾ ಮತ್ತು ಲಿಂಕ್ಡ್​ಇನ್ ಕಾರ್ಪೊರೇಶನ್​ನ ಗ್ಲೋಬಲ್ ಸಿಇಒ ರಯಾನ್ ರೋಸ್ಲಾನ್​ಸ್ಕಿ ಅವರಿಗೆ ತಲಾ 2 ಲಕ್ಷ ರೂ ದಂಡ ಹೇರಲಾಗಿದೆ. ಇತರ ಏಳು ಮಂದಿಯದ್ದೂ ಸೇರಿ ಒಟ್ಟು 27,10,800 ರೂ (27 ಲಕ್ಷ ರೂ) ದಂಡ ಹಾಕಲಾಗಿದೆ.

ಇದನ್ನೂ ಓದಿ: ಎನ್​ಆರ್​ಐಗಳು ವಿದೇಶೀಯನ್ನು ವಿವಾಹವಾದರೆ ಭಾರತದಲ್ಲಿರುವ ಅವರ ಆಸ್ತಿ ಏನಾಗುತ್ತೆ? ಇಲ್ಲಿದೆ ವಿವರ

ಯಾವ ಕಾನೂನು ಉಲ್ಲಂಘನೆ?

ಭಾರತದ ಕಂಪನಿ ಕಾನೂನು ಪ್ರಕಾರ ನೊಂದಾಯಿತ ಸಂಸ್ಥೆಗಳು ಸಿಬಿಒಗಳ ಮಾಹಿತಿಯನ್ನು ಸಲ್ಲಿಸಬೇಕು. ಇಲ್ಲಿ ಎಸ್​ಬಿಒ ಎಂದರೆ ಸಿಗ್ನಿಫಿಕೆಂಟ್ ಬೆನಿಫಿಷಿಯಲ್ ಓನರ್. ಅಂದರೆ ಕಂಪನಿಯಲ್ಲಿ ಶೇ. 10ಕ್ಕಿಂತ ಹೆಚ್ಚು ಷೇರುಪಾಲು ಇರುವಂಥವರು. ಲಿಂಕ್ಡ್​ಇನ್ ಇಂಡಿಯಾದಲ್ಲಿ ಸತ್ಯ ನಾದೆಲ್ಲ ಮತ್ತು ರಯಾನ್ ರೋಸ್ಲಾನ್​ಸ್ಕಿ ಅವರು ಎಸ್​ಬಿಒಗಳಾಗಿದ್ದಾರೆ. ಈ ವಿಚಾರವನ್ನು ಸಂಸ್ಥೆ ಬಹಿರಂಗಪಡಿಸಿಲ್ಲ ಎಂದು ರಿಜಿಸ್ಟ್ರಾರ್ ಆಫ್ ಕಂಪನೀಸ್ (ಆರ್​ಒಸಿ) ತನ್ನ 63 ಪುಟಗಳ ಆದೇಶದಲ್ಲಿ ತಿಳಿಸಿದೆ.

ಇಲ್ಲಿ ದಂಡ ವಿಧಿಸಲಾಗಿರುವ ಇತರ ವ್ಯಕ್ತಿಗಳು ಲಿಂಕ್ಡ್​ಇನ್​ನ ನಿರ್ದೇಶಕರು ಹಾಗೂ ಇತರ ಉನ್ನತ ಹುದ್ದೆಯಲ್ಲಿರುವವರಾಗಿದ್ದಾರೆ. ಕಂಪನಿಯ ಎಸ್​ಬಿಒಗಳು ಯಾರೆಂದು ಮಾಹಿತಿ ಬಹಿರಂಪಡಿಸಲು ವಿಫಲರಾಗಿದ್ದಕ್ಕೆ ಅವರನ್ನೂ ಜವಾಬ್ದಾರರನ್ನಾಗಿ ಮಾಡಲಾಗಿದೆ. ಲಿಂಕ್ಡ್​ಇನ್ ಸಂಸ್ಥೆ ಹಾಗೂ 9 ಮಂದಿ ವ್ಯಕ್ತಿಗಳಿಗೆ ಫೈನ್ ಹೇರಲಾಗಿದೆ.

ಇದನ್ನೂ ಓದಿ: ಆರ್​ಬಿಐನಿಂದ ಸರ್ಕಾರಕ್ಕೆ ದಾಖಲೆಯ 2.11 ಲಕ್ಷ ಕೋಟಿ ರೂ ಡಿವಿಡೆಂಡ್

ವೃತ್ತಿಪರರ ಸೋಷಿಯಲ್ ನೆಟ್ವರ್ಕಿಂಗ್ ಸೈಟ್ ಆಗಿರುವ ಲಿಂಕ್ಡ್​ಇನ್ ಕಾರ್ಪೊರೇಶನ್ ಅನ್ನು ಮೈಕ್ರೋಸಾಫ್ಟ್ ಸಂಸ್ಥೆ 2016ರಲ್ಲಿ ಖರೀದಿ ಮಾಡಿತ್ತು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ