ಕೇವಲ 2,500 ರೂಗೆ ಲವ್ ಇನ್ಷೂರೆನ್ಸ್; ಮದುವೆ ಬಳಿಕ ಬಂತು 1.2 ಲಕ್ಷ ರೂ ಹಣ

China woman buys ‘love insurance’, claims cash after marriage: ಚೀನೀ ಹುಡುಗಿಯೊಬ್ಬಳು ಕಾಲೇಜಿನಲ್ಲಿ ಪ್ರೀತಿಸುತ್ತಿದ್ದ ಹುಡುಗನಿಗೆ ಲವ್ ಇನ್ಷೂರೆನ್ಸ್ ಪಾಲಿಸಿ ಖರೀದಿಸಿದ್ದಳು. ಹತ್ತು ವರ್ಷದ ಬಳಿಕ ಆತನನ್ನು ಮದುವೆಯಾಗಿ ಈಗ 1.2 ಲಕ್ಷ ರೂ ಹಣಕ್ಕಾಗಿ ಕ್ಲೇಮ್ ಮಾಡಿದ್ದಾಳೆ. ಲವ್​ನಲ್ಲಿ ಕಮಿಟ್ ಆದವರನ್ನು 10 ವರ್ಷದೊಳಗೆ ಮದುವೆಯಾದರೆ ಪಾಲಿಸಿ ಹಣಕ್ಕೆ ಕ್ಲೇಮ್ ಮಾಡಬಹುದು ಎಂದು ಇನ್ಷೂರೆನ್ಸ್ ಕಂಪನಿ ಹೇಳಿತ್ತು.

ಕೇವಲ 2,500 ರೂಗೆ ಲವ್ ಇನ್ಷೂರೆನ್ಸ್; ಮದುವೆ ಬಳಿಕ ಬಂತು 1.2 ಲಕ್ಷ ರೂ ಹಣ
ಚೀನೀ ಜೋಡಿಯ ಸಾಂದರ್ಭಿಕ ಚಿತ್ರ

Updated on: Jan 14, 2026 | 5:43 PM

ಲವ್ ಇನ್ಷೂರೆನ್ಸ್ (Love Insurance) ಪಾಲಿಸಿಯಿಂದ ಮಹಿಳೆಯೊಬ್ಬಳು ಭರ್ಜರಿ ಹಣ ಕ್ಲೇಮ್ ಮಾಡಿ ಗಳಿಸಿದ್ದಾಳೆ. ಹತ್ತು ವರ್ಷದ ಹಿಂದೆ ಈ ಮಹಿಳೆ ಕೇವಲ 2,500 ರೂಗೆ ಲವ್ ಇನ್ಷೂರೆನ್ಸ್ ಪಡೆದಿದ್ದಳು. ಇದೀಗ ವಿವಾಹದ ಬಳಿಕ ಇನ್ಷೂರೆನ್ಸ್ ಹಣ ಕ್ಲೇಮ್ ಮಾಡಿದ್ದಾಳೆ. ಇನ್ಷೂರೆನ್ಸ್ ಕಂಪನಿ ಈ ಮಹಿಳೆಗೆ 1.2 ಲಕ್ಷ ರೂ ಪಾವತಿಸಿದೆ. ಅಂದಹಾಗೆ ಈ ಘಟನೆ ನಡೆದಿರುವುದು ಚೀನಾದಲ್ಲಿ. ಈ ಲವ್ ಇನ್ಷೂರೆನ್ಸ್ ಕೂಡ ಈಗ ಚಾಲ್ತಿಯಲ್ಲಿಲ್ಲ. ಆದರೂ ಈ ಲವ್ ಇನ್ಷೂರೆನ್ಸ್ ಸ್ಟೋರಿ ಇಂಟರೆಸ್ಟಿಂಗ್ ಆಗಿದೆ.

ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ಪತ್ರಿಕೆಯಲ್ಲಿ ಬಂದ ವರದಿ ಪ್ರಕಾರ ವು ಎಂಬ ಹುಡುಗಿ 2015ರಲ್ಲಿ ತಾನು ಓದುತ್ತಿದ್ದ ಕಾಲೇಜಿನಲ್ಲಿ ಒಬ್ಬ ಹುಡುಗನನ್ನು ಪ್ರೀತಿಸುತ್ತಿದ್ದಳು. ಚೈನಾ ಲೈಫ್ ಪ್ರಾಪರ್ಟಿ ಅಂಡ್ ಕ್ಯಾಷುವಾಲಿಟಿ ಇನ್ಷೂರೆನ್ಸ್ ಕಂಪನಿ ಲಿಮಿಟೆಡ್ ಎನ್ನುವ ಕಂಪನಿಯು ಆ ಸಂದರ್ಭದಲ್ಲಿ ಲವ್ ಇನ್ಷೂರೆನ್ಸ್ ಪಾಲಿಸಿ ಆಫರ್ ಮಾಡಿತ್ತು. 299 ಯುವಾನ್ (3,900 ರೂ) ಹಣಕ್ಕೆ ಈ ಪಾಲಿಸಿ ಮಾರಾಟವಾಗುತ್ತಿತ್ತು. ವುಗೆ ಈ ಪಾಲಿಸಿ 199 ಯುವಾನ್​ಗೆ ಸಿಕ್ಕಿತು. ಇದನ್ನು ತನ್ನ ಬಾಯ್​ಫ್ರೆಂಡ್​ಗೆ ಗಿಫ್ಟಾಗಿ ನೀಡಿದ್ದಳು ವು.

ಇದನ್ನೂ ಓದಿ: ಇನ್ನು 10-20 ವರ್ಷ ಮಾತ್ರ ಮನುಷ್ಯರು ಕೆಲಸ ಮಾಡಬೇಕಾಗಬಹುದು: ಇಲಾನ್ ಮಸ್ಕ್ ಹೀಗ್ಯಾಕಂದ್ರು ಗೊತ್ತಾ?

ಲವ್ ಇನ್ಷೂರೆನ್ಸ್ ನಿಯಮಗಳೇನಿತ್ತು..?

ಪ್ರೀತಿ ಪ್ರೇಮಗಳು ಬೇಗನೇ ಮುರಿದುಬೀಳುತ್ತವೆ. ಮದುವೆಯಲ್ಲಿ ಅಂತ್ಯವಾಗುವ ಪ್ರೇಮಕಥೆಗಳು ಬಹಳ ವಿರಳ. ಚೀನಾದಲ್ಲೂ ಇದೇ ಕಥೆ. ಹೀಗಾಗಿ, ಇನ್ಷೂರೆನ್ಸ್ ಕಂಪನಿಯು ಇದನ್ನೇ ಬಂಡವಾಳವಾಗಿ ಇಟ್ಟುಕೊಂಡು ಲವ್ ಇನ್ಷೂರೆನ್ಸ್ ಪಾಲಿಸಿ ಆಫರ್ ಮಾಡಿದೆ. ಪಾಲಿಸಿ ಆರಂಭವಾದ ದಿನದಿಂದ ಮೂರನೇ ವಾರ್ಷಿಕೋತ್ಸವ ಮುಗಿದ ಬಳಿಕ 10 ವರ್ಷದೊಳಗೆ ಪ್ರೇಮಿಯನ್ನು ವಿವಾಹವಾದರೆ 10,000 ಗುಲಾಬಿ ಹೂ ಕೊಡುತ್ತೇವೆ. ಅಥವಾ 0.5 ಕೆರಟ್​ನ ಡೈಮಂಡ್ ರಿಂಗ್ ಕೊಡುತ್ತೇವೆ, ಅಥವಾ 10,000 ಯುವಾನ್ ಅನ್ನು ಕ್ಯಾಷ್ ರೂಪದಲ್ಲಿ ಕೊಡುತ್ತೇವೆ ಎಂದು ಕಂಪನಿ ಆಫರ್ ಕೊಟ್ಟಿತ್ತು.

ವು ಇಂಥದ್ದೊಂದು ಪಾಲಿಸಿಯನ್ನು ತನ್ನ ಪ್ರಿಯಕರನಿಗೆ ಕೊಟ್ಟಾಗ ಆತನಿಗೆ ಕಕ್ಕಾಬಿಕ್ಕಿಯಾಗಿತ್ತು. ‘ಈಕೆ ಲವ್ ಇನ್ಷೂರೆನ್ಸ್ ಖರೀದಿಸಿದ್ದಾಗಿ ಹೇಳಿದಾಗ ಆಕೆಗೆ ಯಾರೊ ಟೊಪ್ಪಿ ಹಾಕಿದ್ದಾರೆ ಎಂದೇ ಭಾವಿಸಿದ್ದೆ’ ಎಂದು ಈಗ ಈಕೆಯನ್ನು ವರಿಸಿರುವ ಆ ಪ್ರಿಯಕರ ಹೇಳಿದ್ದಾರೆ.

ಇದನ್ನೂ ಓದಿ: ಭಾರತ ಸೇವಕ ಅಲ್ಲ ಉತ್ಪಾದಕ ಆಗಬೇಕು: ಉದ್ಯಮಿ ಬಾಬಾ ಕಲ್ಯಾಣಿ ಸಲಹೆ

2015ರಲ್ಲಿ ಇಬ್ಬರೂ ಪ್ರೀತಿಸಲು ಆರಂಭಿಸಿದರು. 2025ರ ಅಕ್ಟೋಬರ್​ನಲ್ಲಿ ಮದುವೆಯಾಗಿದ್ದಾರೆ. ಆ ಬಳಿಕ ಇನ್ಷೂರೆನ್ಸ್ ಹಣಕ್ಕೆ ಕ್ಲೇಮ್ ಮಾಡಿದ್ದಾರೆ. 10,000 ಗುಲಾಬಿ ಹೂ ಬೇಡ, ಡೈಮಂಡ್ ರಿಂಗ್ ಕೂಡ ಬೇಡ, 10,000 ಯುವಾನ್ (1.2 ಲಕ್ಷ ರೂ) ಹಣ ಕೊಡಿ ಎಂದು ಅರ್ಜಿ ಹಾಕಿದ್ದಾರೆ. ಈ ಹಣ ಬಂತಾ ಇಲ್ಲವಾ ಎಂಬುದು ಗೊತ್ತಿಲ್ಲ. ಅಂದಹಾಗೆ, ಆ ಚೀನಾ ಕಂಪನಿಯು ಈ ಲವ್ ಇನ್ಷೂರೆನ್ಸ್ ಪಾಲಿಸಿ ಸ್ಕೀಮ್ ಅನ್ನು 2017ರಲ್ಲೇ ನಿಲ್ಲಿಸಿದೆ. ಅಲ್ಲಿಯವರೆಗೆ ಮಾಡಿಸಿರುವ ಪಾಲಿಸಿಗಳು ಆ್ಯಕ್ಟಿವ್ ಇರುತ್ತವೆ ಎನ್ನಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ