ಇನ್ನು 10-20 ವರ್ಷ ಮಾತ್ರ ಮನುಷ್ಯರು ಕೆಲಸ ಮಾಡಬೇಕಾಗಬಹುದು: ಇಲಾನ್ ಮಸ್ಕ್ ಹೀಗ್ಯಾಕಂದ್ರು ಗೊತ್ತಾ?
Elon Musk reiterates Universal High Income society in 10-20 years: ಮನುಷ್ಯರು ರಿಟೈರ್ಮೆಂಟ್ಗೆಂದು ಹಣ ಉಳಿಸುವುದು ವ್ಯರ್ಥವೆನಿಸುತ್ತದೆ. ಎಲ್ಲವೂ ಎಲ್ಲರಿಗೂ ಸಿಗುತ್ತದೆ. ಹೀಗೆಂದು ಇಲಾನ್ ಮಸ್ಕ್ ಹೇಳುತ್ತಾರೆ. ಇನ್ನು 10ರಿಂದ 20 ವರ್ಷದಲ್ಲಿ ಎಐ ಮತ್ತು ರೋಬೋಟಿಕ್ಸ್ ವಿಸ್ಮಯವೆನಿಸುವಷ್ಟು ಬೆಳವಣಿಗೆ ಹೊಂದಿರುತ್ತವೆ. ಮನುಷ್ಯರ ಎಲ್ಲಾ ಕೆಲಸ ಮಾಡುತ್ತವೆ. ಯಾರೂ ಕೂಡ ಕೆಲಸ ಮಾಡಬೇಕಾಗಿಲ್ಲ ಎಂದು ಇಲಾನ್ ಮಸ್ಕ್ ಹೇಳುತ್ತಾರೆ.

ನವದೆಹಲಿ, ಜನವರಿ 14: ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಎನಿಸಿರುವ ಇಲಾನ್ ಮಸ್ಕ್ (Elon Musk) ಈಗ್ಗೆ ಕೆಲವಾರು ವರ್ಷಗಳಿಂದ ಮನುಷ್ಯರ ಭವಿಷ್ಯ ಹೇಗಿರುತ್ತೆ ಎಂದು ಹೇಳುತ್ತಲೇ ಬಂದಿದ್ದಾರೆ, ಎಚ್ಚರಿಸುತ್ತಲೇ ಬಂದಿದ್ದಾರೆ, ಮೆಚ್ಚುತ್ತಲೇ ಬಂದಿದ್ದಾರೆ. ಇನ್ನು 10-20 ವರ್ಷದಲ್ಲಿ ಮನುಷ್ಯರು ಹಣ ಸಂಪಾದನೆಗೆಂದು ಕೆಲಸ ಮಾಡಬೇಕಾಗದೇ ಹೋಗುವ ಪರಿಸ್ಥಿತಿ ಬರಬಹುದು ಎಂಬುದು ಅವರು ಬಾರಿ ಬಾರಿ ಹೇಳುತ್ತಲೇ ಇರುವ ಭವಿಷ್ಯವಾಗಿದೆ.
ಕೆಲ ತಿಂಗಳ ಹಿಂದೆ ನಿಖಿಲ್ ಕಾಮತ್ ಅವರ ಪೋಡ್ಕ್ಯಾಸ್ಟ್ನಲ್ಲಿ ಇಲಾನ್ ಮಸ್ಕ್ ಅವರು ಯೂನಿವರ್ಸಲ್ ಬೇಸಿಕ್ ಇನ್ಕಮ್ ಬಗ್ಗೆ ಮಾತನಾಡಿದ್ದರು. ಬೇರೆ ಬೇರೆ ಪೋಡ್ಕ್ಯಾಸ್ಟ್ಗಳಲ್ಲೂ ಮಸ್ಕ್ ಇದನ್ನೇ ಪುನರುಚ್ಚರಿಸುತ್ತಿದ್ದಾರೆ. ಮೊನ್ನೆ ಪೀಟರ್ ಡೈಮಾಂಡಿಸ್ (Moonshots with Peter Diamondis) ಅವರ ಪೋಡ್ಕ್ಯಾಸ್ಟ್ನಲ್ಲೂ ಇಲಾನ್ ಮಸ್ಕ್ ಅವರು ಎಐ ಒಳಗೊಂಡ ಮನುಷ್ಯರ ಸುಂದರ ಭವಿಷ್ಯದ ಬಗ್ಗೆ ಮಾತನಾಡಿದ್ದಾರೆ.
ಇದನ್ನೂ ಓದಿ: ಭಾರತ ಸೇವಕ ಅಲ್ಲ ಉತ್ಪಾದಕ ಆಗಬೇಕು: ಉದ್ಯಮಿ ಬಾಬಾ ಕಲ್ಯಾಣಿ ಸಲಹೆ
ಮನುಷ್ಯರು ಅಂದುಕೊಂಡಿದ್ದೆಲ್ಲಾ ಸಿಗುತ್ತಾ?
‘ಇನ್ನು 10ರಿಂದ 20 ವರ್ಷದಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮತ್ತು ರೋಬೋಟಿಕ್ಸ್ ಬಹಳ ಅದ್ಬುತವಾಗಿ ಬೆಳವಣಿಗೆ ಹೊಂದುತ್ತವೆ. ಆರೋಗ್ಯಪಾಲನೆ, ವಸತಿ, ಆದಾಯ ಎಲ್ಲವೂ ಯಥೇಚ್ಛವಾಗಿ ಒದಗಿ ಬರುತ್ತದೆ. ಜನರು ರಿಟೈರ್ಮೆಂಟ್ ಭದ್ರತೆ ಬಗ್ಗೆ ಚಿಂತಿಸಬೇಕಿಲ್ಲ. ರಿಟೈರ್ಮೆಂಟ್ಗೆಂದು ಹಣ ಉಳಿಸುವುದು ಅಪ್ರಸ್ತುತ ಆಗಿಬಿಡುತ್ತದೆ’ ಎಂದು ಮೂನ್ಶಾಟ್ಸ್ ವಿತ್ ಪೀಟರ್ ಡೈಮಾಂಡಿಸ್ ಪಾಡ್ಕ್ಯಾಸ್ಟ್ನಲ್ಲಿ ಇಲಾನ್ ಮಸ್ಕ್ ಅಭಿಪ್ರಾಯಪಟ್ಟಿದ್ದಾರೆ.
‘ಭವಿಷ್ಯದಲ್ಲಿ ಯೂನಿವರ್ಸಲ್ ಹೈ ಇನ್ಕಮ್ ಸ್ಥಿತಿ ಇರುತ್ತದೆ. ಜನರಿಗೆ ಬಯಸಿದ್ದೆಲ್ಲಾ ಸಿಗುತ್ತದೆ. ಮನುಷ್ಯರ ಆಸೆ ಆಕಾಂಕ್ಷೆಗಳೆಲ್ಲಾ ಈಡೇರಿರುತ್ತದೆ. ಮಾಡಲು ಇನ್ನೇನೂ ಉಳಿದಿರುವುದಿಲ್ಲ. ಮನುಷ್ಯರ ಒಟ್ಟೂ ಬುದ್ಧಿವಂತಿಕೆಯನ್ನು ಎಐ ಮೀರಿ ಹೋಗುತ್ತದೆ. ಮನುಷ್ಯರ ಎಲ್ಲಾ ಕೆಲಸಗಳನ್ನೂ ಯಂತ್ರಗಳು ಮಾಡುತ್ತವೆ. ಉತ್ಪಾದನೆ ಹೆಚ್ಚಾಗುತ್ತದೆ, ಬೆಲೆಗಳು ಇಳಿಯುತ್ತವೆ’ ಎಂದು ಇಲಾನ್ ಮಸ್ಕ್ ತಿಳಿಸಿದ್ದಾರೆ.
ಇದನ್ನೂ ಓದಿ: ಭಾರತ-ಅಮೆರಿಕದ ಮಧ್ಯೆ ಮುಖ್ಯ ಖನಿಜಗಳ ವಿಚಾರಕ್ಕೆ ಸಭೆ; ಭಾರತಕ್ಕೇನು ಲಾಭ?
ಕೆಲಸ ಐಚ್ಛಿಕ ಮಾತ್ರ: ಮಸ್ಕ್
‘ಯಾರೂ ಕೂಡ ಕೆಲಸ ಮಾಡುವ ಅಗತ್ಯ ಇಲ್ಲ. ಕೆಲಸ ಐಚ್ಛಿಕ ಮಾತ್ರ. ಅಂಗಡಿಯಲ್ಲಿ ತರಕಾರಿ ಖರೀದಿಸುವ ಬದಲು ನಿಮ್ಮ ನೆಲದಲ್ಲೇ ತರಕಾರಿ ಬೆಳೆಯಲು ಕೆಲಸ ಮಾಡಬಹುದು. ಇಂಥ ಕೆಲಸ ಬೇಕಾದರೆ ಮಾಡಬಹುದು ಅಷ್ಟೇ. ಪ್ರತಿಯೊಬ್ಬರಿಗೂ ಕನಿಷ್ಠವಾದ ಆದಾಯ ಸಿಗುತ್ತದೆ. ಸಾವಿರಾರು ಕೋಟಿ ರೋಬೋಗಳು ಮನುಷ್ಯರ ಸೇವೆಗೆ ನಿಂತಿರುತ್ತವೆ’ ಎಂದು ಪೋಡ್ಕ್ಯಾಸ್ಟ್ನಲ್ಲಿ ಇಲಾನ್ ಮಸ್ಕ್ ಹೇಳಿದ್ದಾರೆ.
ಮಂಗಳದಲ್ಲಿ ಮನುಷ್ಯರ ಕಾಲೊನಿ?
ಇಲಾನ್ ಮಸ್ಕ್ ಕೆಲ ವರ್ಷಗಳ ಹಿಂದೆ ಮಂಗಳ ಗ್ರಹದ ವಸಾಹತು ಮಾಡುವ ಬಗ್ಗೆ ಮಾತನಾಡಿದ್ದರು. 2025ರ ಆಸುಪಾಸಿನಲ್ಲಿ ಮಂಗಳ ಗ್ರಹದಲ್ಲಿ ಮನುಷ್ಯರ ಕಾಲೊನಿ ನಿರ್ಮಿಸಲಾಗುವುದು ಎಂದಿದ್ದರು. ಆ ನಿಟ್ಟಿನಲ್ಲಿ ಪ್ರಯತ್ನಗಳಾಗುತ್ತಿವೆಯಾದರೂ ಗುರಿ ಈಡೇರಲು ಹಲವಾರು ವರ್ಷಗಳೇ ಆಗಬಹುದು. ಹೀಗಾಗಿ, ಇಲಾನ್ ಮಸ್ಕ್ ಅವರ ಯೂನಿವರ್ಸಲ್ ಹೈ ಇನ್ಕಮ್ ಸ್ಥಿತಿಗೆ ಬರಲು ಮನುಷ್ಯರಿಗೆ ಹಲವು ದಶಕಗಳೇ ಆಗಬಹುದು. ಅಥವಾ ಕೈಗಾರಿಕಾ ಕ್ರಾಂತಿಯಿಂದ ಸ್ಲಂಗಳು ಸೃಷ್ಟಿಯಾದಂತೆ, ಎಐ ಕ್ರಾಂತಿಯಿಂದ ಇನ್ನೇನೋ ಅಸಮತೋಲನ ಸೃಷ್ಟಿಯಾಗದು ಎನ್ನಲು ಕಾರಣವಿಲ್ಲ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




