ಎಲ್ಪಿಜಿ ಅಡುಗೆ ಅನಿಲ ಸಿಲಿಂಡರ್ನ ಅಪಾಯದ ಬಗ್ಗೆ ಬಳಕೆದಾರರಲ್ಲಿ ಒಂದು ಜಾಗೃತಿ ಇದ್ದೇ ಇದೆ. ಒಂದು ವೇಳೆ ಅನಿಲ ಸೋರಿಕೆಯಾದಲ್ಲಿ ತಕ್ಷಣವೇ ಮಾಡಬೇಕಾದದ್ದು ಏನು ಎಂಬ ಬಗ್ಗೆ ಪ್ರಾಥಮಿಕವಾದ ಮಾಹಿತಿ ಇದೆ. ಆದರೆ ನಿಜವಾಗಿಯೂ ಬಹಳ ಮಂದಿಗೆ ಗೊತ್ತಾಗಬೇಕಾದದ್ದು ಏನೆಂದರೆ, ಎಲ್ಪಿಜಿ ಅಡುಗೆ ಅನಿಲ ಸಿಲಿಂಡರ್ ಬಳಸುವ ಗ್ರಾಹಕರಿಗೆ ವೈದ್ಯಕೀಯ ವೆಚ್ಚದ ಕವರೇಜ್ 2 ಲಕ್ಷ ರೂಪಾಯಿ ಜತೆಗೆ ಪ್ರತ್ಯೇಕವಾಗಿ 6 ಲಕ್ಷ ರೂಪಾಯಿ ಅಪಘಾತ ವಿಮೆ ಕವರ್ ಆಗುತ್ತದೆ. ಆಯಿಲ್ ಕಾರ್ಪೊರೇಷನ್, ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಮತ್ತು ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ನಂಥ ಸರ್ಕಾರಿ ಸ್ವಾಮ್ಯದ ತೈಲ ಮಾರ್ಕೆಟಿಂಗ್ ಕಂಪೆನಿಗಳು ಮತ್ತು ಆ ಕಂಪೆನಿಗಳ ಡೀಲರ್ಗಳು ಎಲ್ಪಿಜಿ ಅನಿಲ ಇನ್ಷೂರೆನ್ಸ್ ಪಾಲಿಸಿ ಆರಿಸಿಕೊಳ್ಳುತ್ತಾರೆ. ಅದು ಗುಂಪು ಇನ್ಷೂರೆನ್ಸ್ ಕವರ್ ಹೊಂದಿರುತ್ತದೆ.
ಎಲ್ಪಿಜಿಗೆ ಸಂಬಂಧಿಸಿದ ಅಪಘಾತಗಳಲ್ಲಿ ತೊಂದರೆಗೆ ಈಡಾಗುವ ವ್ಯಕ್ತಿಗೆ ವೇಗವಾಗಿ ಪರಿಹಾರ ದೊರೆಯಲಿ ಎಂಬ ಕಾರಣಕ್ಕೆ ಪಬ್ಲಿಕ್ ಲಯಬಿಲಿಟಿ ಪಾಲಿಸಿ ಫಾರ್ ಆಯಿಲ್ ಇಂಡಸ್ಟ್ರೀಸ್ ಅಡಿಯಲ್ಲಿ ಸಮಗ್ರ ಇನ್ಷೂರೆನ್ಸ್ ಪಾಲಿಸಿ ತರಲಾಗಿದೆ. ಇದಕ್ಕಾಗಿ ಕಂಪೆನಿಗಳು ಮತ್ತು ಡೀಲರ್ಗಳು ಪ್ರೀಮಿಯಂ ಪಾವತಿಸುತ್ತಾರೆ. ಗ್ರಾಹಕರು ಏನನ್ನೂ ಪಾವತಿಸುವ ಅಗತ್ಯ ಇಲ್ಲ. ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದಿಂದ 2019ರ ಜುಲೈನಲ್ಲಿ ರಾಜ್ಯಸಭೆಗೆ ಒದಗಿಸಿದ ಮಾಹಿತಿ ಪ್ರಕಾರ, ಎಲ್ಪಿಜಿ ಸಿಲಿಂಡರ್ಗಳಿಗೆ ಸಂಬಂಧಿಸಿದ ಅಪಘಾತಗಳಲ್ಲಿ ಎಲ್ಲ ಸಂತ್ರಸ್ತರಿಗೂ ಈ ಕವರೇಜ್ ಉಚಿತವಾಗಿ ದೊರೆಯುತ್ತದೆ.
ಎಲ್ಪಿಜಿ ಸಿಲಿಂಡರ್ ಅಪಘಾತದಿಂದ ಮೃತಪಟ್ಟಲ್ಲಿ ಈ ಪಾಲಿಸಿಯಲ್ಲಿ 6 ಲಕ್ಷ ರೂಪಾಯಿ ಕವರೇಜ್ ದೊರೆಯುತ್ತದೆ. ಇದರ ಹೊರತುಪಡಿಸಿ ಒಂದು ಕುಟುಂಬಕ್ಕೆ 30 ಲಕ್ಷ ರೂಪಾಯಿ ತನಕ ಹಾಗೂ ಒಬ್ಬ ವ್ಯಕ್ತಿಗೆ ಗರಿಷ್ಠ ರೂ. 2 ಲಕ್ಷದ ತನಕ ವೈದ್ಯಕೀಯ ವೆಚ್ಚ ಕವರೇಜ್ ಆಗುತ್ತದೆ. ಒಂದು ವೇಳೆ ಆಸ್ತಿ ಹಾನಿ ಆಗಿದ್ದಲ್ಲಿ, ಅಧಿಕೃತವಾದ ಗ್ರಾಹಕರು ತಮ್ಮ ಆ ಬಗ್ಗೆ ದಾಖಲಿಸಿದ್ದಲ್ಲಿ ಗರಿಷ್ಠ 2 ಲಕ್ಷ ರೂಪಾಯಿ ದೊರೆಯುತ್ತದೆ.
ಸಂತ್ರಸ್ತರು ಅಥವಾ ಸಂತ್ರಸ್ತರ ಕುಟುಂಬದವರು ಎಲ್ಪಿಜಿ ಡೀಲರ್ಗೆ ಬರವಣಿಗೆಯಲ್ಲಿ ವಿಚಾರವನ್ನು ತಿಳಿಸಬೇಕು. ಎಲ್ಪಿಜಿ ಗ್ರಾಹಕರು/ಸಂತ್ರಸ್ತರು ಬೇರೆ ಯಾರನ್ನೂ ಎಲ್ಪಿಜಿ ಇನ್ಷೂರೆನ್ಸ್ ವಿಷಯದಲ್ಲಿ ಸಂಪರ್ಕಿಸುವ ಅಗತ್ಯ ಇಲ್ಲ. ಆ ನಂತರ ತೈಲ ಮಾರ್ಕೆಟಿಂಗ್ ಕಂಪೆನಿಗಳನ್ನು ಮತ್ತು ಇನ್ಷೂರೆನ್ಸ್ ಕಂಪೆನಿಗಳನ್ನು ಡೀಲರ್ ಸಂಪರ್ಕಿಸುತ್ತಾರೆ. ತೈಲ ಮಾರ್ಕೆಟಿಂಗ್ ಕಂಪೆನಿ ಮತ್ತು ಇನ್ಷೂರೆನ್ಸ್ ಪರವಾಗಿ ಪರಿಶೀಲನೆ ನಡೆಸಲಾಗುತ್ತದೆ. ಆ ನಂತರ ಕ್ಲೇಮ್ ನಿಯಮಾವಳಿಗಳನ್ನು ಪೂರ್ತಿ ಮಾಡಬೇಕಾಗುತ್ತದೆ.
ಈ ಕ್ಲೇಮ್ ವಿವಿಧ ಹಂತಗಳನ್ನು ದಾಟಿ, ಮೃತರ ಅಥವಾ ಬಾಧಿತ ಕುಟುಂಬದ ಬ್ಯಾಂಕ್ ಖಾತೆಗೆ ಹಣ ಜಮೆ ಆಗುವುದಕ್ಕೆ ಕನಿಷ್ಠ 10ರಿಂದ 14 ವರ್ಕಿಂಗ್ ಡೇಸ್ ತೆಗೆದುಕೊಳ್ಳುತ್ತದೆ.
ಇದನ್ನೂ ಓದಿ: How to book gas cylinder: ವಾಟ್ಸಾಪ್ ಮೂಲಕ ಇಂಡೇನ್, ಎಚ್ಪಿ, ಭಾರತ್ ಗ್ಯಾಸ್ ಸಿಲಿಂಡರ್ ಬುಕ್ಕಿಂಗ್ ಹೇಗೆ?
(LPG customers covered under insurance in case of accident by cylinder. Premium borne by dealers and OMC)