
ನವದೆಹಲಿ, ಮಾರ್ಚ್ 8: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ (International Women’s Day) ದಿನವೇ ಪ್ರಧಾನಿ ಮೋದಿ (Narendra Modi) ದೇಶದ ಜನತೆಗೆ ಉಡುಗೊರೆ ನೀಡಿದ್ದು, ಎಲ್ಪಿಜಿ ಸಿಲಿಂಡರ್ ಬೆಲೆ 100 ರೂ. (LPG Cylinder Price) ಇಳಿಕೆ ಮಾಡಿ ಘೋಷಣೆ ಮಾಡಿದ್ದಾರೆ. ಈ ವಿಚಾರವಾಗಿ ಸಾಮಾಜಿಕ ಮಾಧ್ಯಮ ಎಕ್ಸ್ ಮೂಲಕ ಸಂದೇಶ ಪ್ರಕಟಿಸಿರುವ ಮೋದಿ, ದೇಶದ ಮಹಿಳೆಯರ ಸಬಲೀಕರಣದ ನಿಟ್ಟಿನಲ್ಲಿ ನಮ್ಮ ಬದ್ಧತೆಗೆ ಪೂರಕವಾಗಿ ಈ ನಿರ್ಧಾರ ಕೈಗೊಂಡಿದ್ದೇವೆ ಎಂದು ಉಲ್ಲೇಖಿಸಿದ್ದಾರೆ.
‘ಇಂದು, ಮಹಿಳಾ ದಿನದಂದು, ನಮ್ಮ ಸರ್ಕಾರವು ಎಲ್ಪಿಜಿ ಸಿಲಿಂಡರ್ ಬೆಲೆಯನ್ನು 100 ರೂ. ಕಡಿಮೆ ಮಾಡುತ್ತಿದೆ. ಇದು ದೇಶದಾದ್ಯಂತ ಲಕ್ಷಾಂತರ ಕುಟುಂಬಗಳ ಮೇಲೆ ಆರ್ಥಿಕ ಹೊರೆಯನ್ನು ಗಮನಾರ್ಹವಾಗಿ ಕಡಿಮೆ ಮಾಡಲಿದೆ. ಈ ನಿರ್ಧಾರವು ವಿಶೇಷವಾಗಿ ನಮ್ಮ ನಾರಿ ಶಕ್ತಿಗೆ ಪ್ರಯೋಜನವನ್ನು ನೀಡಲಿದೆ. ಅಡುಗೆ ಅನಿಲವನ್ನು ಕೈಗೆಟುಕುವ ದರದಲ್ಲಿ ಸಿಗುವಂತೆ ಮಾಡುವ ಮೂಲಕ ನಾವು ಕುಟುಂಬಗಳ ಯೋಗಕ್ಷೇಮವನ್ನು ನೋಡಿಕೊಳ್ಳುತ್ತೇವೆ. ಜತೆಗೆ, ಆರೋಗ್ಯಕರ ವಾತಾವರಣವನ್ನು ಖಚಿತಪಡಿಸಿಕೊಳ್ಳುವ ಗುರಿಯನ್ನು ಹೊಂದಿದ್ದೇವೆ. ಎಂದು ಮೋದಿ ಉಲ್ಲೇಖಿಸಿದ್ದಾರೆ.
ಈ ನಿರ್ಧಾರವು ಮಹಿಳೆಯರನ್ನು ಸಬಲೀಕರಣಗೊಳಿಸುವ ಮತ್ತು ಅವರ ಬದುಕನ್ನು ಸುಲಭಗೊಳಿಸುವುದನ್ನು ಖಾತರಿಪಡಿಸಿಕೊಳ್ಳುವ ನಮ್ಮ ಬದ್ಧತೆಗೆ ಪೂರಕವಾಗಿದೆ ಎಂದು ಮೋದಿ ಹೇಳಿದ್ದಾರೆ.
ಸರ್ಕಾರದ ಈ ನಿರ್ಧಾರದೊಂದಿಗೆ ಇದೀಗ ಗೃಹ ಬಳಕೆಯ ಎಲ್ಪಿಜಿ ಸಿಲಿಂಡರ್ ದರ ಬೆಂಗಳೂರಿನಲ್ಲಿ 100 ರೂ. ಕಡಿಮೆ ಆಗಿ 805.50 ರೂ. ಆಗಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 803 ರೂ. ಆಗಿದೆ.
ಉಜ್ವಲ ಯೋಜನೆಯಡಿ ಸಿಲಿಂಡರ್ ಬೆಲೆಯ ಮೇಲಿನ 300 ರೂಪಾಯಿ ರಿಯಾಯಿತಿಯನ್ನು ಮುಂದಿನ ಒಂದು ವರ್ಷಕ್ಕೆ ಮುಂದುವರಿಸಲು ಕೇಂದ್ರ ಸಚಿವ ಸಂಪುಟ ಗುರುವಾರ ನಿರ್ಧಾರ ಕೈಗೊಂಡಿತ್ತು. ಅದರಾಚೆಗೆ, ಎಲ್ಲಾ ಸಾಮಾನ್ಯ ಸಿಲಿಂಡರ್ ಗ್ರಾಹಕರಿಗೆ ಪ್ರತಿ ಸಿಲಿಂಡರ್ಗೆ 100 ರೂ. ದರ ಇಳಿಕೆ ಅನ್ವಯವಾಗಲಿದೆ. ಸರ್ಕಾರದ ಅಂಕಿಅಂಶಗಳ ಪ್ರಕಾರ, ದೇಶಾದ್ಯಂತ ಸುಮಾರು 32.5 ಕೋಟಿ ಎಲ್ಪಿಜಿ ಸಂಪರ್ಕಗಳಿವೆ. ಇದರಲ್ಲಿ ಪ್ರಧಾನಮಂತ್ರಿ ಉಜ್ವಲ ಯೋಜನೆಯಡಿ ಕಳೆದ 10 ವರ್ಷಗಳಲ್ಲಿ ಸುಮಾರು 10.25 ಕೋಟಿ ಸಿಲಿಂಡರ್ಗಳನ್ನು ವಿತರಣೆ ಮಾಡಲಾಗಿದೆ.
ಇದನ್ನೂ ಓದಿ: ಎಲ್ಪಿಜಿ ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ ಇನ್ನಷ್ಟು ದುಬಾರಿ
ಮಾರ್ಚ್ 1ರಂದು ವಾಣಿಜ್ಯ ಬಳಕೆಯ ಎಲ್ಪಿಜಿ ಸಿಲಿಂಡರ್ ಬೆಲೆಯನ್ನು ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು 25 ರೂ. ಹೆಚ್ಚಳ ಮಾಡಿದ್ದವು. ಆದರೆ, ಗೃಹ ಬಳಕೆಯ ಸಿಲಿಂಡರ್ ಬೆಲೆಯನ್ನು ಕಳೆದ 6 ತಿಂಗಳುಗಳಿಂದ ಪರಿಷ್ಕರಣೆ ಮಾಡಿರಲಿಲ್ಲ.
ವಾಣಿಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:04 am, Fri, 8 March 24