LPG gas price: ಎಲ್‌ಪಿಜಿ ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ ಇನ್ನಷ್ಟು ದುಬಾರಿ
LPG commercial cylinder price hike: ಎಲ್‌ಪಿಜಿ ಗ್ರಾಹಕರಿಗೆ ಸರ್ಕಾರಿ ಸ್ವಾಮಿಗಳ ತೈಲ ಕಂಪನಿಗಳು ಮತ್ತೊಮ್ಮೆ ಶಾಕ್ ನೀಡಿವೆ. ವಾಣಿಜ್ಯ ಬಳಕೆಯ 19 ಕೆಜಿ ಸಿಲಿಂಡರ್ ದರವನ್ನು ಹೆಚ್ಚಳ ಮಾಡಲಾಗಿದೆ. ದರ ಹೆಚ್ಚಳ ಇಂದಿನಿಂದಲೇ (ಮಾರ್ಚ್ 1) ಅಸ್ತಿತ್ವಕ್ಕೆ ಬಂದಿದೆ. ಪರಿಷ್ಕೃತ ದರ ವಿವರ ಇಲ್ಲಿದೆ.
ನವದೆಹಲಿ, ಮಾರ್ಚ್ 1: ಎಲ್‌ಪಿಜಿ ವಾಣಿಜ್ಯ ಬಳಕೆಯ 19 ಕೆಜಿ ಸಿಲಿಂಡರ್ (LPG commercial cylinder) ಬೆಲೆ ಇಂದಿನಿಂದ (ಮಾರ್ಚ್ 1) ಹೆಚ್ಚಳವಾಗಿದೆ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ವಾಣಿಜ್ಯ ಬಳಕೆಯ ಪ್ರತಿ ಸಿಲಿಂಡರ್ ಬೆಲೆಯನ್ನು 25 ರೂಪಾಯಿ ಏರಿಕೆ ಮಾಡಿವೆ. ಇದರೊಂದಿಗೆ, ಸತತ ಎರಡನೇ ತಿಂಗಳು ಎಲ್‌ಪಿಜಿ ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ ಹೆಚ್ಚಳವಾದಂತಾಗಿದೆ. ಈ ಬೆಲೆ ಏರಿಕೆಯೊಂದಿಗೆ, ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಗ್ಯಾಸ್ ಸಿಲಿಂಡರ್‌ನ ಚಿಲ್ಲರೆ ಬೆಲೆ 1,795 ರೂ. ಆಗಿದೆ. ಮುಂಬೈನಲ್ಲಿ ಇಂದಿನಿಂದ 19 ಕೆಜಿ ಸಿಲಿಂಡರ್ 1,749 ರೂ.ಗೆ ಮಾರಾಟವಾಗಲಿದೆ. ಚೆನ್ನೈ ಮತ್ತು ಕೋಲ್ಕತ್ತಾದಲ್ಲಿ, ವಾಣಿಜ್ಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳ ಬೆಲೆ ಕ್ರಮವಾಗಿ 1,960 ರೂ, ಮತ್ತು 1,911 ರೂ.ಗೆ ಏರಿಕೆಯಾಗಿದೆ. ಫೆಬ್ರವರಿ 1 ರಂದು 19 ಕೆಜಿ ಗ್ಯಾಸ್ ಸಿಲಿಂಡರ್ ದರ 14 ರೂ. ಹೆಚ್ಚಾಗಿತ್ತು.
ಬೆಂಗಳೂರಿನಲ್ಲಿ ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ 23.50 ರೂ. ಹೆಚ್ಚಾಗಿ 1,875 ರೂ. ಆಗಿದೆ.
ಕಳೆದ ಎರಡು ತಿಂಗಳ ದರ ಪರಿಷ್ಕರಣೆ ಬಗ್ಗೆ ಗಮನಿಸುವುದಾದರೆ, ಕೋಲ್ಕತ್ತಾದಲ್ಲಿ ಗರಿಷ್ಠ ಹೆಚ್ಚಳ ಕಂಡುಬಂದಿದೆ. ಕೋಲ್ಕತ್ತಾದಲ್ಲಿ ಎರಡು ತಿಂಗಳ ಅವಧಿಯಲ್ಲಿ ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ 42 ರೂಪಾಯಿ ಏರಿಕೆಯಾಗಿದೆ. ಆ ನಂತರ ಮುಂಬೈನಲ್ಲಿ 40.5 ರೂ. ಏರಿಕೆಯಾಗಿದೆ. ದೇಶದ ರಾಜಧಾನಿ ದೆಹಲಿಯಲ್ಲಿ ಈ ಏರಿಕೆ 39.5 ರೂ. ಆಗಿದೆ. ದಕ್ಷಿಣ ಭಾರತದ ಅತಿದೊಡ್ಡ ಮಹಾನಗರವಾದ ಚೆನ್ನೈಯಲ್ಲಿ ಎರಡು ತಿಂಗಳಲ್ಲಿ ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆ ಕನಿಷ್ಠ 36 ರೂ. ಏರಿಕೆಯಾಗಿದೆ. ಮುಂಬರುವ ದಿನಗಳಲ್ಲಿ ವಾಣಿಜ್ಯ ಅನಿಲ ಸಿಲಿಂಡರ್‌ಗಳ ಬೆಲೆಯಲ್ಲಿ ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಗೃಹ ಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆ ಯಥಾಸ್ಥಿತಿ
ಗೃಹಬಳಕೆಯ ಗ್ಯಾಸ್ ಸಿಲಿಂಡರ್‌ಗಳ ಬೆಲೆ ಪರಿಷ್ಕರಣೆಯನ್ನು ಕಳೆದ 6 ತಿಂಗಳುಗಳಿಂದ ಸ್ಥಗಿತಗೊಳಿಸಲಾಗಿದೆ. ಆಗಸ್ಟ್ 30 ರಿಂದ ಗೃಹಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಆ ಸಮಯದಲ್ಲಿ ಕೇಂದ್ರ ಸರ್ಕಾರವು ಗೃಹಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ 200 ರೂ. ಇಳಿಕೆ ಮಾಡಿತ್ತು. ಆ ನಂತರ ದೆಹಲಿಯಲ್ಲಿ ಗೃಹಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆ 903 ರೂ.ಗೆ ಮತ್ತು ಕೋಲ್ಕತ್ತಾದಲ್ಲಿ 929 ರೂ.ಗೆ ಇಳಿದಿತ್ತು.
ಇದನ್ನೂ ಓದಿ: ಬೆಂಗಳೂರು ಸೇರಿದಂತೆ ದೇಶದ ವಿವಿಧೆಡೆ ಪೆಟ್ರೋಲ್, ಡೀಸೆಲ್ ದರ ಹೇಗಿದೆ?
ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಹಿಂದಿನ ತಿಂಗಳ ಅಂತರರಾಷ್ಟ್ರೀಯ ಮಾರುಕಟ್ಟೆಯ ಸರಾಸರಿ ಬೆಲೆಯನ್ನು ಆಧರಿಸಿ ಪ್ರತಿ ತಿಂಗಳ ಮೊದಲನೆಯ ದಿನ ಎಲ್‌ಪಿಜಿ ಬೆಲೆಯನ್ನು ಪರಿಷ್ಕರಿಸುತ್ತವೆ. ಆದರೆ, ಗೃಹ ಬಳಕೆಯ ಗ್ಯಾಸ್ ಸಿಲಿಂಡರ್‌ಗಳ ಬೆಲೆ ಪರಿಷ್ಕರಣೆ ಕಳೆದ ಆರು ತಿಂಗಳುಗಳಿಂದ ಸ್ಥಗಿತವಾಗಿದ್ದು, ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆಯನ್ನು ಪ್ರತಿ ತಿಂಗಳ ಪರಿಷ್ಕರಣೆ ಮಾಡಲಾಗುತ್ತಿದೆ. ಕಳೆದ ತಿಂಗಳು ಕೇಂದ್ರ ಸರ್ಕಾರ ಮಧ್ಯಂತರ ಬಜೆಟ್ ಮಂಡನೆ ಮಾಡುವುದಕ್ಕೂ ಕೆಲವೇ ಗಂಟೆಗಳ ಮುನ್ನ ವಾಣಿಜ್ಯ ಬಳಕೆಯ 19 ಕೆಜಿ ಸಿಲಿಂಡರ್ ದರ 14 ರೂಪಾಯಿ ಏರಿಕೆ ಮಾಡಲಾಗಿತ್ತು.
ವಾಣಿಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:46 am, Fri, 1 March 24