ನವದೆಹಲಿ, ಮಾರ್ಚ್ 4: ಯುಪಿಐ ಮೂಲಕ ಹಣ ಪಾವತಿಸುವಾಗ ಕೆಲವೊಂದು ಪಾವತಿಗಳಿಗೆ ಪ್ಲಾಟ್ಫಾರ್ಮ್ ಫೀ, ಅಥವಾ ಟ್ರಾನ್ಸಾಕ್ಷನ್ ಫೀ ಅಥವಾ ಕನ್ವೀನಿಯನ್ಸ್ ಫೀ (convenience fee) ಅನ್ನು ಹೆಚ್ಚುವರಿಯಾಗಿ ನೀವು ತೆತ್ತಿರಬಹುದು. ಈಗೀಗ ಇದು ಹೆಚ್ಚಾಗುತ್ತಿದೆ. ಮುಂಬರುವ ದಿನಗಳಲ್ಲಿ ಪ್ರತೀ ಪಾವತಿಯಲ್ಲೂ ಟ್ರಾನ್ಸಾಕ್ಷನ್ ಫೀ ವಿಧಿಸುವುದನ್ನೇ ಅಧಿಕೃತಗೊಳಿಸುವ ಸಾಧ್ಯತೆ ಇಲ್ಲದಿಲ್ಲ. ಆದರೆ, ಈ ರೀತಿ ಟ್ರಾನ್ಸಾಕ್ಷನ್ ಶುಲ್ಕ ವಿಧಿಸಿದರೆ ಯುಪಿಐ ಬಳಕೆ ಪ್ರಮಾಣದಲ್ಲಿ ವ್ಯತ್ಯಯವಾಗುತ್ತದಾ? ಸಮೀಕ್ಷಾ ವರದಿಯೊಂದು ಇಂಥದ್ದೊಂದು ಸಾಧ್ಯತೆಯನ್ನು ತೋರಿಸಿದೆ. ಲೋಕಲ್ಸರ್ಕಲ್ಸ್ ಸಂಸ್ಥೆ ನಡೆಸಿದ ಆನ್ಲೈನ್ ಸರ್ವೆ ಪ್ರಕಾರ ಯುಪಿಐ ಪಾವತಿಗೆ ಟ್ರಾನ್ಸಾಕ್ಷನ್ ಫೀ ವಿಧಿಸಿದರೆ ಹೆಚ್ಚಿನ ಜನರು ಅದರ ಬಳಕೆಯನ್ನೇ ನಿಲ್ಲಿಸಬಹುದು ಎಂದಿದೆ.
ಲೋಕಲ್ ಸರ್ಕಲ್ಸ್ ನಡೆಸಿದ ಸಮೀಕ್ಷೆಯಲ್ಲಿ 364 ಜಿಲ್ಲೆಗಳಿಂದ ಆಯ್ದ 34,000 ಜನರ ಬಳಿ ಈ ವಿಚಾರದ ಬಗ್ಗೆ ಸಮೀಕ್ಷೆ ನಡೆಸಲಾಗಿದೆ. ಇವರಲ್ಲಿ ಬಹಳ ಜನರು ಕಳೆದ ಒಂದು ವರ್ಷದಲ್ಲಿ ಯುಪಿಐ ಪಾವತಿಯಲ್ಲಿ ಟ್ರಾನ್ಸಾಕ್ಷನ್ ಫೀ ಕಟ್ಟಿರುವುದಾಗಿ ತಿಳಿಸಿದ್ದಾರೆ. ಇವರಲ್ಲಿ ಅರ್ಧದಷ್ಟು ಜನರು ಒಂದು ತಿಂಗಳಲ್ಲಿ ಯುಪಿಐ ಮೂಲಕ ಕನಿಷ್ಠ 10 ವಹಿವಾಟುಗಳನ್ನು ನಡೆಸುತ್ತಾರೆ.
‘ಯುಪಿಐ ಪಾವತಿಯಲ್ಲಿ ಟ್ರಾನ್ಸಾಕ್ಷನ್ ಶುಲ್ಕ ಪಾವತಿಸಲು ಕೇವಲ 23 ಪ್ರತಿಶತದಷ್ಟು ಜನರು ಮಾತ್ರ ತಯಾರಿದ್ದಾರೆ. ಶೇ 73ರಷ್ಟು ಜನರು ಟ್ರಾನ್ಸಾಕ್ಷನ್ ಫೀ ಅನ್ನು ಅಧಿಕೃತವಾಗಿ ಜಾರಿಗೆ ತಂದರೆ ಯುಪಿಐ ಬಳಕೆಯನ್ನೇ ಬಿಡುವುದಾಗಿ ಹೇಳಿದ್ದಾರೆ,’ ಎಂದು ಲೋಕಲ್ ಸರ್ಕಲ್ಸ್ ಸಮೀಕ್ಷೆಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: ಎಲ್ಲಾ ಎಸ್ಐಪಿಗಳು ಚಿನ್ನದ ಮೊಟ್ಟೆ ಕೊಡುವ ಕೋಳಿಗಳಲ್ಲ; ಹೂಡಿಕೆ ಮಾಡುವಾಗ ರಿಸ್ಕ್ ನೆನಪಿರಲಿ
‘ಸಮೀಕ್ಷೆಯಲ್ಲಿ ಪಾಲ್ಗೊಂಡ ಯುಪಿಐ ಬಳಕೆದಾರರ ಪೈಕಿ ಶೇ. 37ರಷ್ಟು ಜನರು ಕಳೆದ 12 ತಿಂಗಳಲ್ಲಿ ಯುಪಿಐ ಪಾವತಿಯಲ್ಲಿ ಟ್ರಾನ್ಸಾಕ್ಷನ್ ಫೀ ನೀಡಿರುವುದಾಗಿ ಹೇಳಿಕೊಂಡಿದ್ದಾರೆ,’ ಎಂದೂ ಸಮೀಕ್ಷಾ ವರದಿ ಹೇಳಿದೆ.
ಕಳೆದ ಮೂರ್ನಾಲ್ಕು ವರ್ಷಗಳಿಂದ ಭಾರತದಲ್ಲಿ ಯುಪಿಐ ಬಹಳ ಜನಪ್ರಿಯವಾಗಿದೆ. ಯಾವುದೇ ರಗಳೆ, ಸಂಕೀರ್ಣತೆ ಇಲ್ಲದೇ ಸುಲಭವಾಗಿ ಹಣ ಕಳುಹಿಸಬಹುದು. ಜೊತೆಗೆ ಇದರ ವಹಿವಾಟು ಕೂಡ ಉಚಿತ. ಹೀಗಾಗಿ, ಯುಪಿಐ ಜನಪ್ರಿಯತೆ ಮತ್ತು ಬಳಕೆ ತೀರಾ ಹೆಚ್ಚಿದೆ. ಬುಕ್ಮೈಶೋ, ಐಆರ್ಸಿಟಿಸಿ ಇತ್ಯಾದಿ ಪ್ಲಾಟ್ಫಾರ್ಮ್ಗಳು ಪ್ರತೀ ಬುಕಿಂಗ್ಗೂ ಕನ್ವೀಯನ್ಸ್ ಫೀ ಎಂದು ವಸೂಲಿ ಮಾಡುತ್ತವೆ. ಡಿಟಿಎಚ್, ಮೊಬೈಲ್ ರೀಚಾರ್ಜ್ ಇತ್ಯಾದಿ ಬಿಲ್ಗಳ ಪಾವತಿಗೆ ಟ್ರಾನ್ಸಾಕ್ಷನ್ ಫೀ ವಿಧಿಸಲಾಗುತ್ತಿದೆ. ಹೆಚ್ಚಿನ ಯುಪಿಐ ಬಳಕೆದಾರರು ಆಕ್ಷೇಪಿಸಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿಲ್ಲ. ಆದರೆ, ಪ್ರತೀ ಯುಪಿಐ ಟ್ರಾನ್ಸಾಕ್ಷನ್ಗೂ ನಿರ್ದಿಷ್ಟ ಶುಲ್ಕ ವಿಧಿಸಬೇಕೆನ್ನುವ ಪ್ರಸ್ತಾಪ ಇದೆ. ಇದೇನಾದರೂ ಜಾರಿಯಾದರೆ ನಮ್ಮ ಪ್ರತೀ ವಹಿವಾಟಿಗೂ ನಿರ್ದಿಷ್ಟ ಶುಲ್ಕ ಹೆಚ್ಚುವರಿಯಾಗಿ ಇರುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ