
ಬಹಳ ಮಂದಿ 5ರಿಂದ 10 ಕ್ರೆಡಿಟ್ ಕಾರ್ಡ್ಗಳನ್ನು ಹೊಂದಿರುವುದನ್ನು ನೋಡಿದ್ದೇವೆ. ಹಾಗೆಯೇ ಹಲವು ಬ್ಯಾಂಕ್ ಖಾತೆಗಳನ್ನೂ ಹೊಂದಿರುವವರು ಹಲವರಿದ್ದಾರೆ. ಕೆಲಸದಲ್ಲಿ ಕಂಪನಿ ಬದಲಿಸಿದಾಗ ಹೊಸ ಬ್ಯಾಂಕ್ ಖಾತೆ ತೆರೆಯಬೇಕಾಗಬಹುದು. ಇಂಥ ಬೇರೆ ಬೇರೆ ಕಾರಣಗಳಿಗೆ ಹಲವು ಬ್ಯಾಂಕ್ ಖಾತೆಗಳನ್ನು (Multiple Bank Accounts) ನೀವು ಹೊಂದಿರಬಹುದು. ಇವತ್ತು ಆನ್ಲೈನ್ ಮೂಲಕವೇ ಬ್ಯಾಂಕ್ ಖಾತೆ ತೆರೆಯುವಷ್ಟು ತಂತ್ರಜ್ಞಾನ ಬಲಗೊಂಡಿದೆ, ಬ್ಯಾಂಕಿಂಗ್ ಕಾರ್ಯ ಸರಳಗೊಂಡಿದೆ. ಯುಪಿಐ ಬಂದ ಬಳಿಕವಂತೂ ಬ್ಯಾಂಕ್ ಅಕೌಂಟ್ನಿಂದ ಹಣ ವರ್ಗಾವಣೆ, ಬಿಲ್ ಪೇಮೆಂಟ್ ಇತ್ಯಾದಿ ಎಲ್ಲವೂ ಸುಗಮಗೊಂಡಿದೆ.
ಹಲವು ಬ್ಯಾಂಕ್ ಖಾತೆಗಳನ್ನು ಇಟ್ಟುಕೊಂಡಿರುವುದು ಕೆಲ ಸಂದರ್ಭದಲ್ಲಿ ಅನುಕೂಲ ಎನಿಸಿದರೂ, ಒಟ್ಟಾರೆಯಾಗಿ ಅವುಗಳನ್ನು ನಿರ್ವಹಿಸುವುದು ಅಷ್ಟು ಸುಲಭವೂ ಅಲ್ಲ. ಕೆಲವೊಂದಿಷ್ಟು ಸವಾಲುಗಳು, ಸಮಸ್ಯೆಗಳು ಎದುರಾಗುತ್ತವೆ.
ಇಂದಿನ ದಿನಮಾನದಲ್ಲಿ ಹೆಚ್ಚಿನ ಬ್ಯಾಂಕುಗಳು ಸ್ಯಾಲರಿ ಅಕೌಂಟ್ ಅಲ್ಲದ ಸೇವಿಂಗ್ ಬ್ಯಾಂಕ್ ಖಾತೆಗಳಿಗೆ 10,000 ರೂವರೆಗೂ ಮಿನಿಮಮ್ ಬ್ಯಾಲನ್ಸ್ ಮೊತ್ತ ಇರಿಸಬೇಕು ಎಂದು ನಿಯಮ ಹಾಕಿವೆ. ಅಂದರೆ, ಒಂದು ತಿಂಗಳಲ್ಲಿ ಬ್ಯಾಂಕ್ ಖಾತೆಯಲ್ಲಿ ಒಮ್ಮೆಯಾದರೂ ಬ್ಯಾಲನ್ಸ್ ಅಮೌಂಟ್ 10,000 ಇರಬೇಕು. ಬೇರೆ ಬೇರೆ ಬ್ಯಾಂಕ್ಗಳಲ್ಲಿ ಬೇರೆ ಬೇರೆ ಮಿನಿಮಮ್ ಬ್ಯಾಲನ್ಸ್ ನಿಗದಿಯಾಗಿರಬಹುದು. ಅಷ್ಟು ಹಣ ಖಾತೆಯಲ್ಲಿ ಇರದೇ ಹೋದರೆ ಆಗ ಬ್ಯಾಂಕ್ ಪೆನಾಲ್ಟಿ ಹಾಕುತ್ತದೆ.
ಇದನ್ನೂ ಓದಿ: ಷೇರುಪೇಟೆಯಲ್ಲಿ ನಿಮ್ಮ ಲಾಭದ ಬಾಲ ಕತ್ತರಿಸುವ ಬಂಡವಾಳ ಲಾಭ ತೆರಿಗೆಗಳ ಬಗ್ಗೆ ತಿಳಿಯಿರಿ
ಒಂದು ಬ್ಯಾಂಕ್ ಖಾತೆಯಿಂದ ನೀವು ಸತತ 3 ತಿಂಗಳು ಯಾವುದೇ ವಹಿವಾಟು ನಡೆಸದೇ ಇದ್ದರೆ ಅದು ನಿಷ್ಕ್ರಿಯಗೊಳ್ಳುತ್ತದೆ. ಅದನ್ನು ಸಕ್ರಿಯಗೊಳಿಸಬಹುದಾದರೂ ಹೆಚ್ಚುವರಿ ಶುಲ್ಕ ಇತ್ಯಾದಿ ರಗಳೆಗಳು ಎದುರಾಗಬಹುದು. ಮೂರ್ನಾಲ್ಕು ಬ್ಯಾಂಕ್ ಖಾತೆಗಳಿದ್ದರೆ ಹೇಗೋ ನಿಭಾಯಿಸಬಹುದು. ಇನ್ನೂ ಹೆಚ್ಚಿನ ಬ್ಯಾಂಕ್ ಅಕೌಂಟ್ಗಳಿದ್ದರೆ ಕೆಲ ಖಾತೆಗಳು ಕಣ್ತಪ್ಪಿಸಿಬಿಡಬಹುದು.
ಕೆಲವಿಷ್ಟು ಬ್ಯಾಂಕಿಂಗ್ ಸೇವೆಗಳನ್ನು ಉಚಿತವಾಗಿ ಪಡೆಯಬಹುದು. ಮತ್ತೆ ಕೆಲವಕ್ಕೆ ಶುಲ್ಕ ಇರುತ್ತದೆ. ಒಂದೊಂದು ಬ್ಯಾಂಕಿನಲ್ಲೂ ಈ ಶುಲ್ಕ ನೀತಿ ಬೇರೆ ಬೇರೆ ರೀತಿ ಇರುತ್ತದೆ. ನೀವು ಹಲವು ಬ್ಯಾಂಕ್ ಖಾತೆಗಳನ್ನು ಹೊಂದಿದ್ದರೆ ಅವೆಲ್ಲಾ ಬ್ಯಾಂಕುಗಳ ಶುಲ್ಕ ನೀತಿಗಳ ಮೇಲೆ ಕಣ್ಣಿಡುವುದು ಕಷ್ಟ. ಈ ಶುಲ್ಕಗಳು ಅಲ್ಪ ಪ್ರಮಾಣದವಾದರೂ ಎಲ್ಲಾ ಖಾತೆಗಳಿಂದ ಆಗುವ ಶುಲ್ಕ ತುಸು ದೊಡ್ಡ ಮೊತ್ತವೇ ಆಗಬಹುದು. ಆದ್ದರಿಂದ ನಿಮ್ಮ ಖಾತೆ ಇರುವ ಬ್ಯಾಂಕ್ನಿಂದ ಯಾವ್ಯಾವುದಕ್ಕೆ ಶುಲ್ಕ ಇದೆ ಎನ್ನುವ ಪೂರ್ಣ ಪಟ್ಟಿ ಪಡೆದುಕೊಳ್ಳುವುದು ಉತ್ತಮ.
ಈಗ ವಿವಿಧ ಬ್ಯಾಂಕುಗಳನ್ನು ಒಂದೇ ವೇದಿಕೆಯಲ್ಲಿ ತರುವ ಬ್ಯಾಂಕಿಂಗ್ ಅ್ಯಪ್ಗಳು, ಆನ್ಲೈನ್ ಟೂಲ್ಗಳು ಲಭ್ಯ ಇವೆ. ಹಣ ಪಾವತಿ ಬಾಕಿ ಇದ್ದರೆ ಇವು ಅಲರ್ಟ್ ಮಾಡುತ್ತವೆ. ಬ್ಯಾಂಕ್ ಖಾತೆಯಿಂದ ವಹಿವಾಟು ನಡೆಸುವ ಅಗತ್ಯ ಇದ್ದರೂ ಅಲರ್ಟ್ ಪಡೆಯಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ