ಮುಂಬೈ: ಮಣಪ್ಪುರಂ ಫೈನಾನ್ಸ್ ಲಿಮಿಟೆಡ್ನ ಚಿನ್ನದ ಸಾಲದ ಪೋರ್ಟ್ಫೋಲಿಯೋದಲ್ಲಿ ಕಳೆದ ತ್ರೈಮಾಸಿಕಕ್ಕಿಂತ ಮಾರ್ಚ್ ತ್ರೈಮಾಸಿಕದಲ್ಲಿ ಶೇ 5.6ರಷ್ಟು ಕುಗ್ಗಿದೆ. ವಿಶ್ಲೇಷಕರು ನಿರೀಕ್ಷೆ ಮಾಡಿದ್ದಕ್ಕಿಂತ ಹೆಚ್ಚಾಗಿಯೇ ಕುಗ್ಗಿದೆ. ಏಕೆಂದರೆ ಹಣ ವಸೂಲಿ ಮಾಡಿಕೊಳ್ಳುವುದಕ್ಕಾಗಿ ಮಣಪ್ಪುರಂ ಫೈನಾನ್ಸ್ನಿಂದ ರೂ. 404 ಕೋಟಿ ರೂಪಾಯಿ ಮೌಲ್ಯದಷ್ಟು ಚಿನ್ನವನ್ನು ಹರಾಜು ಹಾಕಲಾಗಿದೆ. ಆದರೆ ಹಣಕಾಸು ಸಂಸ್ಥೆಗೆ ಈ ಸಾಲದ ಪುಸ್ತಕದಲ್ಲಿ ಕುಗ್ಗಿರುವುದು ದೊಡ್ಡ ಮಟ್ಟದಲ್ಲಿ ವ್ಯತ್ಯಾಸ ಆಗುವುದಿಲ್ಲ. ಆದರೆ ಚಿನ್ನದ ಸಾಲದ ಮೇಲಿನ ಬೇಡಿಕೆ ಕಡಿಮೆ ಆಗುವ ಸಾಧ್ಯತೆ ಕಡಿಮೆ. ಅದರಲ್ಲೂ ಕೊರೊನಾ ಇರುವ ಸಂದರ್ಭದಲ್ಲಿ ಸಾಲದ ಬೇಡಿಕೆ ಹಾಗೇ ಇರಲಿದೆ. ಆಡಳಿತ ಮಂಡಳಿ ಹೇಳುವ ಪ್ರಕಾರ, ಪೋರ್ಟ್ಫೋಲಿಯೋದಲ್ಲಿ ಕಡಿಮೆ ಆಗುವುದಕ್ಕೆ ಮುಖ್ಯ ಕಾರಣ ಹರಾಜಿನ ಮೊತ್ತ. ವರ್ಷದ ಹಿಂದಿನ ಇದೇ ಅವಧಿಗೆ ಹೋಲಿಕೆ ಮಾಡಿದಲ್ಲಿ ಚಿನ್ನದ ಅಡಮಾನ ಸಾಲದ ಪೋರ್ಟ್ಫೋಲಿಯೋ ಶೇ 12ರಷ್ಟು ಬೆಳವಣಿಗೆ ಕಂಡಿದೆ.
ವಿಶ್ಲೇಷಕರ ಪ್ರಕಾರ, ಚಿನ್ನದ ಹೊರತಾದ ಪೋರ್ಟ್ಫೋಲಿಯೋದಲ್ಲಿ ಮಣಪ್ಪುರಂ ಫೈನಾನ್ಸ್ ಉತ್ತಮ ಬೆಳವಣಿಗೆ ಕಂಡಿದೆ. ಕನ್ಸಾಲಿಡೇಟೆಡ್ ನಿವ್ವಳ ಲಾಭದಲ್ಲಿ ಶೇ 18ರಷ್ಟು ಬೆಳವಣಿಗೆ ಕಂಡಿದೆ. ಕಿರುಸಾಲ ಪೋರ್ಟ್ಫೋಲಿಯೋದಲ್ಲಿ ಕಳೆದ ತ್ರೈಮಾಸಿಕಕ್ಕಿಂತ ಉತ್ತಮವಾದ ಸ್ಥಿತಿಯಲ್ಲಿದೆ. “ಮಧ್ಯಮಾವಧಿಯಲ್ಲಿ ಮಣಪ್ಪುರಂ ಗೋಲ್ಡ್ ಫೈನಾನ್ಸ್ ಲಿಮಿಟೆಡ್ ಶೇ 10ರಿಂದ ಶೇ 15ರಷ್ಟು ಸ್ಥಿರವಾದ ಚಿನ್ನದ ಸಾಲದ ಬೆಳವಣಿಗೆ ದಾಖಲಿಸುವ ನಿರೀಕ್ಷೆ ಇದೆ. ಇತರ ಸೆಗ್ಮೆಂಟ್ನಲ್ಲಿ ಸುಸ್ಪಷ್ಟವಾದ ಬೆಳವಣಿಗೆ ಮತ್ತು ಸಂಗ್ರಹ ಕಂಡುಬರುತ್ತಿದೆ,” ಎಂದು ವಿಶ್ಲೇಷಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಆದರೆ, ಈಗ ಉದ್ಭವಿಸಿರುವ ಪ್ರಶ್ನೆಯೇ ಬೇರೆ. ಅಡವಿಟ್ಟ ಚಿನ್ನದ ಹರಾಜು ಎಂಬುದು ಭಾರತೀಯರ ಮೇಲೆ ಆಗುತ್ತಿರುವ ಆರ್ಥಿಕ ಒತ್ತಡದ ಮುನ್ಸೂಚನೆಯೇ ಎಂಬ ಅನುಮಾನ ಹುಟ್ಟಿಸಿದೆ. ಪ್ರತಿ ತ್ರೈಮಾಸಿಕದಲ್ಲೂ ಸಾಲ ನೀಡುವ ಸಂಸ್ಥೆಗಳು ಚಿನ್ನವನ್ನು ಹರಾಜು ಹಾಕುತ್ತಿರುವ ಪ್ರಮಾಣ ಹೆಚ್ಚಾಗುತ್ತಿದೆ. ಇದು ನಿಜವಾದ ಚಿಂತೆಗೆ ಕಾರಣ ಆಗಿದೆ. ಜನವರಿಯಿಂದ ಮಾರ್ಚ್ಗೆ ಕೊನೆಯಾದ ತ್ರೈಮಾಸಿಕದಲ್ಲಿ ಮಣಪ್ಪುರಂನಿಂದ 404 ಕೋಟಿ ರೂಪಾಯಿಯಷ್ಟು ಚಿನ್ನದ ಹರಾಜು ಹಾಕಲಾಗಿದೆ. ಅದಕ್ಕೂ ಮುಂಚೆ 2020 ಏಪ್ರಿಲ್ನಿಂದ ಡಿಸೆಂಬರ್ವರೆಗೆ ಹರಾಜು ಹಾಕಿದ್ದು ರೂ. 8 ಕೋಟಿ ಮಾತ್ರ.
ಕೃಷಿ ಮತ್ತು ಅದರ ಅವಲಂಬಿತ ವೃತ್ತಿಗಳಲ್ಲಿ ಇರುವವರಿಗೆ ತಮ್ಮ ಕೆಲಸಕ್ಕೆ ಬಂಡವಾಳವಾಗಿ (ವರ್ಕಿಂಗ್ ಕ್ಯಾಪಿಟಲ್) ಹಣ ಬೇಕಾದಾಗ ತಕ್ಷಣಕ್ಕೆ ಹೊಳೆಯುವುದು ಚಿನ್ನ ಅಡಮಾನ ಮಾಡಿ, ಸಾಲ ಪಡೆಯಬೇಕೆಂಬುದು. ಸಣ್ಣ ಉದ್ಯಮಗಳ ಪಾಲಿಗೆ ಬಂಡವಾಳ ಹೂಡಿಕೆ ಮೂಲ ಕೂಡ ಇದೇ ಬಗೆಯ ಸಾಲ. ಇನ್ನು ಹಣಕಾಸಿನ ತುರ್ತು ಸಂದರ್ಭದಲ್ಲಿ ನಗದು ಬೇಕು ಎಂದಾಗ ತಕ್ಷಣಕ್ಕೆ ಅಡಮಾನ ಮಾಡಿ ಸಿಕ್ಕುವ ಸಾಲ ಗೋಲ್ಡ್ ಲೋನ್. ಎಸ್ಬಿಐನಂಥ ಬ್ಯಾಂಕ್ಗಳಲ್ಲೂ ತುರ್ತು ಅಗತ್ಯಗಳಿಗೆ ಚಿನ್ನದ ಮೇಲೆ ಸಾಲ ಪಡೆಯುವವರು ಹೆಚ್ಚಾಗಿದೆ. ಈ ಬ್ಯಾಂಕ್ನಲ್ಲಿ ಗೋಲ್ಡ್ ಲೋನ್ 2020- 21ರ ಹಣಕಾಸಿನ ವರ್ಷದಲ್ಲಿ ಶೇ 81ರಷ್ಟು ಹೆಚ್ಚಾಗಿದೆ.
ಸರಿ, ಚಿನ್ನ ಅಡಮಾನ ಮಾಡಿಕೊಂಡು, ಸಾಲ ತೀರಿಸದಿದ್ದಾಗ ಅದನ್ನು ಹರಾಜು ಹಾಕಿ ಹಣ ಬರುತ್ತದಲ್ಲಾ ಸಮಸ್ಯೆ ಏನು ಎಂಬುದು ಹಲವರ ಪ್ರಶ್ನೆ. ನಿಮಗೆ ಗೊತ್ತಿರಲಿ, ಎಷ್ಟೋ ಸಲ ಬರಬೇಕಾದ ಹಣಕ್ಕಿಂತ ಕಡಿಮೆ ಬೆಲೆಗೆ ಚಿನ್ನದ ಹರಾಜಾಗುತ್ತದೆ. ನೆನಪಿಸಿಕೊಳ್ಳಿ, ಈ ಅವಧಿಯಲ್ಲಿ ಚಿನ್ನದ ದರ ಶೇ 10ಕ್ಕಿಂತ ಜಾಸ್ತಿಯೇ ಇಳಿಕೆ ಆಯಿತು. ಆದ್ದರಿಂದ ಯಾವಾಗ ಸಾಲ ಕಟ್ಟುವುದಿಲ್ಲವೋ ಅಡಮಾನ ಮಾಡಿರುವುದನ್ನು ಹರಾಜು ಹಾಕುವುದು ಕೊನೆಯ ಆಯ್ಕೆ ಆಗುತ್ತದೆ. ಮಣಪ್ಪುರಂ ಗೋಲ್ಡ್ ಪಾಲಿಗೆ ಚಿನ್ನದ ಬೆಲೆ ಇಳಿಯುತ್ತಿರುವಾಗಲೂ ಅದು ಕೊನೆ ಆಯ್ಕೆ ಆಗಿತ್ತು. ಇದರಿಂದ ಒತ್ತಡ ಹೆಚ್ಚಾಗಿದೆ.
ಇದನ್ನೂ ಓದಿ: ಆರ್ಥಿಕತೆ ಮೇಲೆ ಕೋವಿಡ್- 19 ಪರಿಣಾಮ ಅಗಾಧ; ಈ ಬಿಕ್ಕಟ್ಟಿನ ನಂತರ ಜಗತ್ತು ಹೀಗಿರುವುದಿಲ್ಲ ಎಂದ ಪಿಎಂ ಮೋದಿ
ಇದನ್ನೂ ಓದಿ: ಕೋವಿಡ್- 19ರ ಎರಡನೇ ಅಲೆ ಎಷ್ಟು ಬೇಗ ತಡೆಯುತ್ತೇವೋ ಅದರ ಮೇಲೆ ಆಧಾರವಾಗಿದೆ ಭಾರತದ ಬೆಳವಣಿಗೆ: ಆರ್ಬಿಐ
(Manappuram Gold Finance Limited auctioned Rs 404 crore worth gold of borrowers in January to March quarter FY 21)
Published On - 4:04 pm, Thu, 27 May 21