Mango Crop: ಚಳಿ ವಾತಾವರಣ, ಒಣಹವೆಯಿಂದ ಈ ವರ್ಷ ಮಾವಿನ ಫಸಲು ಬಂಪರ್; 2 ವರ್ಷಗಳ ನಂತರ ಮಾವು ಪ್ರಿಯರಿಗೆ ಖುಷಿ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Jan 17, 2023 | 9:29 AM

ಕರ್ನಾಟಕದಲ್ಲಿ ವಾಡಿಕೆಯಂತೆ ವರ್ಷಕ್ಕೆ 10ರಿಂದ 14 ಲಕ್ಷ ಟನ್ ಮಾವು ಉತ್ಪಾದನೆಯಾಗುತ್ತದೆ. ಆದರೆ ಕಳೆದ ವರ್ಷ ಕೇವಲ 7ರಿಂದ 8 ಲಕ್ಷ ಟನ್ ಮಾವು ಮಾತ್ರವೇ ಉತ್ಪಾದನೆಯಾಗಿ ಮಾರುಕಟ್ಟೆಗೆ ಬಂದಿತ್ತು.

Mango Crop: ಚಳಿ ವಾತಾವರಣ, ಒಣಹವೆಯಿಂದ ಈ ವರ್ಷ ಮಾವಿನ ಫಸಲು ಬಂಪರ್; 2 ವರ್ಷಗಳ ನಂತರ ಮಾವು ಪ್ರಿಯರಿಗೆ ಖುಷಿ
ಮಾವಿನಹಣ್ಣು (ಸಂಗ್ರಹ ಚಿತ್ರ)
Follow us on

ಬೆಂಗಳೂರು: ಈ ವರ್ಷ ಮಾವು ಪ್ರಿಯರಿಗೆ (Mango Lovers) ಖುಷಿ ಸುದ್ದಿ ಇದೆ. ಕಳೆದ ವರ್ಷಗಳಿಂದ ಮಾವು ಉತ್ಪಾದನೆ ಕುಂಠಿತಗೊಂಡಿತ್ತು. ಇಳುವರಿ ಗಮನಾರ್ಹ ಪ್ರಮಾಣದಲ್ಲಿ ಕಡಿಮೆಯಾಗಿತ್ತು. ಆದರೆ ಈ ವರ್ಷ ತೋಟಗಳಲ್ಲಿ ಮಾವು ನಳನಳಿಸುತ್ತಿದ್ದು, ದಾಖಲೆ ಮಟ್ಟದ ಉತ್ಪಾನದೆಯಾಗಬಹುದು ಎಂಬ ನಿರೀಕ್ಷೆ ಹುಟ್ಟುಹಾಕಿದೆ. ಕೊನೇ ಕ್ಷಣದಲ್ಲಿ ಹವಾಮಾನ ವೈಪರಿತ್ಯವು ಬಾಧಿಸದಿದ್ದರೆ ಉತ್ತಮ ಇಳುವರಿಯಿಂದಾಗಿ ಮಾರುಕಟ್ಟೆಗೆ ದಾಖಲೆ ಮಟ್ಟದ ಫಸಲು ಬಂದು, ಬೆಲೆಯೂ ಕಡಿಮೆಯಾಗಬಹುದು ಎಂದು ಹೇಳಲಾಗಿದೆ. ಮಳೆ ವ್ಯತ್ಯಯ (Erratic Rains) ಮತ್ತು ಮಳೆ ಬೀಳುವ ಅವಧಿಯಲ್ಲಿ ಏರುಪೇರಾಗಿದ್ದು ಹಾಗೂ ಬ್ಲೈಟ್ ರೋಗದ (Blight Disease) ಕಾರಣದಿಂದ ಕಳೆದ ಎರಡು ವರ್ಷಗಳಿಂದ ಮಾವು ಫಸಲು ಪ್ರಮಾಣ ಕಳೆದ 2 ವರ್ಷಗಳಲ್ಲಿ ಭಾರೀ ಪ್ರಮಾಣದಲ್ಲಿ ಕುಸಿದಿತ್ತು.

ಕರ್ನಾಟಕದಲ್ಲಿ ವಾಡಿಕೆಯಂತೆ ವರ್ಷಕ್ಕೆ 10ರಿಂದ 14 ಲಕ್ಷ ಟನ್ ಮಾವು ಉತ್ಪಾದನೆಯಾಗುತ್ತದೆ. ಆದರೆ ಕಳೆದ ವರ್ಷ ಕೇವಲ 7ರಿಂದ 8 ಲಕ್ಷ ಟನ್ ಮಾವು ಮಾತ್ರವೇ ಉತ್ಪಾದನೆಯಾಗಿ ಮಾರುಕಟ್ಟೆಗೆ ಬಂದಿತ್ತು. ಇದರಿಂದಾಗಿ ಸಹಜವಾಗಿಯೇ ಬೆಲೆಏರಿಕೆಯಾಗಿತ್ತು. ಆದರೆ ಅತ್ತ ರೈತರಿಗೆ ಮತ್ತು ಇತ್ತ ಗ್ರಾಹಕರಿಗೆ ಏನೂ ಲಾಭವಾಗಿರಲಿಲ್ಲ. ಏಪ್ರಿಲ್​ವರೆಗೆ ರಾಜ್ಯದಲ್ಲಿ ಮಳೆಯಾಗದಿದ್ದರೆ, ಒಣಹವೆ ಇದೇ ರೀತಿ ಮುಂದುವರಿದರೆ ಈ ವರ್ಷ ಸುಮಾರು 12 ಲಕ್ಷ ಟನ್ ಮಾವು ಉತ್ಪಾದನೆಯಾಗಬಹುದು ಎಂದು ‘ಕರ್ನಾಟಕ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ’ದ (Karnataka State Mango Development and Marketing Corporation Limited – KSMDMCL) ಹಿರಿಯ ಅಧಿಕಾರಿಗಳು ವಿಶ್ಲೇಷಿಸಿದ್ದಾರೆ.

ಇಳುವರಿ ಪ್ರಭಾವಿಸುವ ಅತಿಮುಖ್ಯ ಅಂಶಗಳು

ಮಾವಿನ ಮರಗಳಲ್ಲಿ ಹೂವು ಮತ್ತು ಕಾಯಿ ಕಚ್ಚುವ ಪ್ರಕ್ರಿಯೆಯಲ್ಲಿ ಎರಡು ಅಂಶಗಳು ಹೆಚ್ಚು ಪ್ರಭಾವ ಬೀರುತ್ತವೆ; ಒಂದು ಮಣ್ಣಿನ ತೇವಾಂಶ ಮತ್ತು ರಾತ್ರಿಯ ಉಷ್ಣಾಂಶ. ರಾತ್ರಿಯ ಹೊತ್ತು ತಂಪು ಹವೆ ಇದ್ದಾಗ ಮಾವಿನ ಮರಗಳಲ್ಲಿ ಹೂ ಹೆಚ್ಚಿನ ಪ್ರಮಾಣದಲ್ಲಿ ಕಾಣಿಸಿಕೊಳ್ಳುತ್ತದೆ. ಈ ವರ್ಷ ಈವರೆಗೂ ರಾತ್ರಿಯ ಉಷ್ಣಾಂಶ ಗಮನಾರ್ಹ ಪ್ರಮಾಣದಲ್ಲಿ ಕಡಿಮೆಯಾಗಿದೆ. ಡಿಸೆಂಬರ್ ನಂತರ ಮಳೆಯಾಗಿಲ್ಲ. ಇದೇ ಹವಾಮಾನ ಮುಂದುವರಿದರೆ ಸಹಜವಾಗಿಯೇ ಮಾವಿನ ಇಳುವರಿ ಸುಧಾರಿಸುತ್ತದೆ.

ಕರ್ನಾಟಕದಲ್ಲಿ ಕೋಲಾರ ಜಿಲ್ಲೆ ಶ್ರೀನಿವಾಪುರ ತಾಲ್ಲೂಕು ಮಾವು ಬೆಳೆಗೆ ಹೆಸರುವಾಸಿ. ಆದರೆ ವಾಡಿಕೆಯಂತೆ ರಾಮನಗರ ಜಿಲ್ಲೆಯ ಹಣ್ಣು ಮೊದಲು ಮಾರುಕಟ್ಟೆ ಪ್ರವೇಶಿಸುತ್ತದೆ. ಆದರೆ ಡಿಸೆಂಬರ್ ಮೊದಲ ವಾರದಲ್ಲಿ ತುಸು ಮಳೆಯಾಗಿದ್ದರಿಂದ ರಾಮನಗರ ಜಿಲ್ಲೆಯಲ್ಲಿ ಬೆಳೆ ಕುಂಠಿತಗೊಂಡಿತು. ಹೀಗಾಗಿ ಈ ವರ್ಷ ರಾಮನಗರ ಜಿಲ್ಲೆಯ ಮಾವು ಮೇ ತಿಂಗಳಲ್ಲಿ ಮಾರುಕಟ್ಟೆಗೆ ಬರಬಹುದು ಎಂದು ನಿರೀಕ್ಷಿಸಲಾಗಿದೆ. ಏಪ್ರಿಲ್ ಕೊನೆಯ ವಾರದಿಂದ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳ ಮಾವು ಮಾರುಕಟ್ಟೆಗೆ ಬರಬಹುದು. ಸೇಂಧೂರ, ರಸಪುರಿ, ಬಾದಾಮಿ (ಅಲ್​ಫೊನ್​ಸೊ) ತಳಿಗಳು ಆರಂಭದಲ್ಲಿ ಸಿಗಲಿವೆ.

ಉತ್ತಮ ಬೆಳೆ, ಬೆಲೆ ಇಳಿಯುವ ನಿರೀಕ್ಷೆ

ಕರ್ನಾಟಕದಲ್ಲಿ ಸುಮಾರು 1.60 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತಿದೆ. ಈ ಪೈಕಿ ಅರ್ಧದಷ್ಟು ಪ್ರದೇಶ ಕೋಲಾರ ಜಿಲ್ಲೆಯಲ್ಲಿಯೇ ಇದೆ. ಸಾರಿಗೆ ವ್ಯವಸ್ಥೆಯಲ್ಲಿ ಸುಧಾರಣೆಯಾಗಿರುವುದರಿಂದ ಇತ್ತೀಚಿನ ವರ್ಷಗಳಲ್ಲಿ ಉತ್ತರ ಪ್ರದೇಶ, ಮಹಾರಾಷ್ಟ್ರದಂಥ ರಾಜ್ಯಗಳಿಂದಲೂ ಕರ್ನಾಟಕಕ್ಕೆ ಮಾವು ಬರುತ್ತಿದೆ. ಕಳೆದ ವರ್ಷ ಒಂದು ಕೆಜಿ ಮಾವಿನಹಣ್ಣಿಗೆ ₹ 100ರಿಂದ ₹ 200 ಇತ್ತು. ಈ ವರ್ಷ ಉತ್ತಮ ಇಳುವರಿ ಇರುವುದರಿಂದ ಬೆಲೆ ಕಡಿಮೆಯಾಗಬಹುದು ಎಂದು ನಿರೀಕ್ಷಿಸಲಾಗಿದೆ. ಈ ವರ್ಷ ಮಾವು ಮಂಡಳಿಯು ದೊಡ್ಡಮಟ್ಟದಲ್ಲಿ ಲಾಲ್​ಬಾಗ್​ನಲ್ಲಿ ಮಾವು ಮೇಳ ಆಯೋಜಿಸುವ ಯೋಜನೆ ರೂಪಿಸಿದೆ.

ಇದನ್ನೂ ಓದಿ: ಇವು ಮಧುಮೇಹಿಗಳ ಮಾವಿನಹಣ್ಣುಗಳು..; ಮೂರು ವಿಧದ ಸಕ್ಕರೆ ರಹಿತ ಮಾವು ಪರಿಚಯಿಸಿದ ಪಾಕಿಸ್ತಾನ ಕೃಷಿ ತಜ್ಞ

ಮಾವಿನಹಣ್ಣಿಗೆ ಸಂಬಂಧಿಸಿದ ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:29 am, Tue, 17 January 23