ಬೆಂಗಳೂರು, ಮಾರ್ಚ್ 8: ಕೇಂದ್ರ ಸರ್ಕಾರ ಪ್ರಸಕ್ತ ಹಣಕಾಸು ವರ್ಷದಲ್ಲಿ ಎರಡನೇ ಬಾರಿ ಎಲ್ಪಿಜಿ ಸಿಲಿಂಡರ್ (LPG gas price) ದರ ಇಳಿಸಿದೆ. ಆಗಸ್ಟ್ ತಿಂಗಳಲ್ಲಿ ಪಂಚರಾಜ್ಯ ವಿಧಾನಸಭೆಗೆ ಮುನ್ನ 200 ರೂನಷ್ಟು ಬೆಲೆ ಇಳಿಕೆ ಮಾಡಿತ್ತು. ಇದೀಗ ಲೋಕಸಭೆ ಚುನಾವಣೆಗೆ ಮುನ್ನ 100 ರೂನಷ್ಟು ದರ ಇಳಿಸಿದೆ. ಬೆಂಗಳೂರಿನಲ್ಲಿ 905.50 ರೂ ಇದ್ದ 14.2 ಕಿಲೋ ಎಲ್ಪಿಜಿ ಬೆಲೆ ಇದೀಗ 805.50 ರೂಗೆ ಇಳಿದಿದೆ. ದೇಶಾದ್ಯಂತ ಎಲ್ಪಿಜಿ ಬಳಕೆ ಮಾಡುವ 33 ಕೋಟಿ ಕುಟುಂಬಗಳಿಗೆ ಒಂದಷ್ಟು ಹೊರೆ ತಗ್ಗಿದೆ. ಆದರೆ, 19 ಕಿಲೋ ಕಮರ್ಷಿಯಲ್ ಸಿಲಿಂಡರ್ ಬೆಲೆ 23.50 ರೂನಷ್ಟು ಏರಿಕೆ ಆಗಿದೆ. 47.5 ಕಿಲೋ ಕಮರ್ಷಿಯಲ್ ಸಿಲಿಂಡರ್ ಬೆಲೆಯಲ್ಲೂ ಏರಿಕೆ ಆಗಿದೆ. ಆದರೆ, 5 ಕಿಲೋ ಗೃಹಬಳಕೆ ಎಲ್ಪಿಜಿ ಬೆಲೆಯಲ್ಲಿ ವ್ಯತ್ಯಯವಾಗಿಲ್ಲ.
ಭಾರತದಲ್ಲಿ ಮೂರು ಸಂಸ್ಥೆಗಳು ಗೃಹಬಳಕೆಯ ಎಲ್ಪಿಜಿ ಗ್ಯಾಸ್ ಸೇವೆ ನೀಡುತ್ತವೆ. ಇಂಡಿಯನ್ ಆಯಿಲ್ ಕಾರ್ಪೊರೇಶನ್ (ಐಒಸಿಎಲ್), ಭಾರತ್ ಪೆಟ್ರೋಲಿಯಂ (ಬಿಪಿಸಿಎಲ್), ಹಿಂದೂಸ್ತಾನ್ ಪೆಟ್ರೋಲಿಯಂ (ಹೆಚ್ಪಿಸಿಎಲ್) ಈ ಮೂರು ಕೂಡ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಾಗಿವೆ. ಇಂಡೇನ್ ಗ್ಯಾಸ್, ಭಾರತ್ ಗ್ಯಾಸ್ ಮತ್ತು ಹೆಚ್ಪಿ ಗ್ಯಾಸ್ ಅನ್ನು ಸರಬರಾಜು ಮಾಡುತ್ತವೆ. ಈ ಮೂರರಲ್ಲೂ ಬೆಲೆ ವ್ಯತ್ಯಾಸ ಇರುವುದಿಲ್ಲ. ವಿವಿಧ ಎಲ್ಪಿಜಿ ಸಿಲಿಂಡರ್ ದರ ಈ ಮೂರರಲ್ಲೂ ಏಕ ತೆರನಾಗಿರುತ್ತದೆ.
ಇದನ್ನೂ ಓದಿ: ಎಲ್ಪಿಜಿ ಸಿಲಿಂಡರ್ ಬೆಲೆ ಇಳಿಕೆ: ಮಹಿಳಾ ದಿನಾಚರಣೆ ದಿನ ಪ್ರಧಾನಿ ಮೋದಿ ಗಿಫ್ಟ್
ಇದನ್ನೂ ಓದಿ: ಪಿಎಂ ಉಜ್ವಲ ಫಲಾನುಭವಿಗಳಿಗೆ 300 ರೂ ಎಲ್ಪಿಜಿ ಸಬ್ಸಿಡಿ, ಒಂದು ವರ್ಷ ಮುಂದುವರಿಕೆ
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ